ಶ್ರೀಲಂಕಾ ಕ್ರಿಕೆಟ್ ತಂಡಕ್ಕೆ ಮತ್ತೊಂದು ಆಘಾತ – ಶ್ರೀಲಂಕಾ ಕ್ರಿಕೆಟ್ ಸದಸ್ಯತ್ವ ರದ್ದು ಪಡಿಸಿದ ಐಸಿಸಿ

ಶ್ರೀಲಂಕಾ ಕ್ರಿಕೆಟ್ ತಂಡಕ್ಕೆ ಮತ್ತೊಂದು ಆಘಾತ – ಶ್ರೀಲಂಕಾ ಕ್ರಿಕೆಟ್ ಸದಸ್ಯತ್ವ ರದ್ದು ಪಡಿಸಿದ ಐಸಿಸಿ

ವಿಶ್ವಕಪ್‌ ಟೂರ್ನಿಯಲ್ಲಿ ಸೆಮಿಫೈನಲ್​ಗೆ ಅರ್ಹತೆ ಪಡೆಯಲು ವಿಫಲವಾದ ಶ್ರೀಲಂಕಾ ಕ್ರಿಕೆಟ್ ತಂಡಕ್ಕೆ ಮತ್ತೊಂದು ಆಘಾತವಾಗಿದೆ. ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ ಶ್ರೀಲಂಕಾ ಕ್ರಿಕೆಟ್​ ಮಂಡಳಿಯ ಸದಸ್ಯತ್ವವನ್ನು ತಕ್ಷಣದಿಂದ ಜಾರಿಗೆ ಬರುವಂತೆ ಅಮಾನತುಗೊಳಿಸಿದೆ. ಶ್ರೀಲಂಕಾ ಸರ್ಕಾರ ಹಸ್ತಕ್ಷೇಪ ನಡೆಸುತ್ತಿರುವ ಹಿನ್ನೆಲೆಯಲ್ಲಿ ಐಸಿಸಿ ಈ ನಿರ್ಧಾರ ಕೈಗೊಂಡಿರುವುದಾಗಿ ತಿಳಿಸಿದೆ.

ಇದನ್ನೂ ಓದಿ: ಭಾರತ ವಿರುದ್ಧ ಸೋತಿದ್ದಕ್ಕೆ ಸಿಟ್ಟಿಗೆದ್ದ ಲಂಕಾ ಸರ್ಕಾರ – ಶ್ರೀಲಂಕಾ ಕ್ರಿಕೆಟ್ ಮಂಡಳಿಯ ಎಲ್ಲಾ ಸದಸ್ಯರು ವಜಾ

ಏಕದಿನ ವಿಶ್ವಕಪ್ ನಡುವೆಯೇ ಐಸಿಸಿ ಮಹತ್ವದ ನಿರ್ಧಾರ ಕೈಗೊಂಡಿದ್ದು, ಶ್ರೀಲಂಕಾದ ಕ್ರಿಕೆಟ್ ಸದಸ್ಯತ್ವವನ್ನು ರದ್ದುಗೊಳಿಸಿದೆ. ಇದರಿಂದಾಗಿ ಶ್ರೀಲಂಕಾ ತಂಡಕ್ಕೆ ಇನ್ನು ಮುಂದೆ ಒಂದೇ ಒಂದು ಅಂತಾರಾಷ್ಟ್ರೀಯ ಪಂದ್ಯವನ್ನಾಡಲು ಸಾಧ್ಯವಾಗುವುದಿಲ್ಲ. ಐಸಿಸಿ ನಿಯಮಗಳನ್ನು ಉಲ್ಲಂಘಿಸಿದ ಕಾರಣ ಶುಕ್ರವಾರ ಶ್ರೀಲಂಕಾ ಕ್ರಿಕೆಟ್‌ನ ಸದಸ್ಯತ್ವವನ್ನು ರದ್ದುಗೊಳಿಸಲಾಗಿದೆ. ಶ್ರೀಲಂಕಾ ಸರ್ಕಾರ, ಕ್ರಿಕೆಟ್ ಮಂಡಳಿಯಲ್ಲಿ ಹಸ್ತಕ್ಷೇಪ ಮಾಡುತ್ತಿರುವುದು ಐಸಿಸಿ ಸಭೆಯಲ್ಲಿ ಕಂಡುಬಂದಿದೆ. ಇದು ಐಸಿಸಿ ನಿಯಮಗಳಿಗೆ ವಿರುದ್ಧವಾಗಿದ್ದು, ಇಂತಹ ಪರಿಸ್ಥಿತಿಯಲ್ಲಿ ಐಸಿಸಿ ಈ ದೊಡ್ಡ ನಿರ್ಧಾರ ಕೈಗೊಂಡಿದೆ. ಈ ಬಾರಿಯ ವಿಶ್ವಕಪ್‌ನಲ್ಲಿ ಶ್ರೀಲಂಕಾ ತಂಡ, ಭಾರತದ ವಿರುದ್ಧ 302 ರನ್‌ಗಳಿಂದ ಹೀನಾಯ ಸೋಲು ಕಂಡಿತ್ತು. ಆ ಬಳಿಕ ಶ್ರೀಲಂಕಾ ಸರ್ಕಾರವು ಇಡೀ ಮಂಡಳಿಯನ್ನು ವಜಾಗೊಳಿಸಿತು. ಕ್ರೀಡಾ ಸಚಿವ ರೋಷನ್ ರಣಸಿಂಗ್ ಅವರು ಈ ನಿರ್ಧಾರ ಕೈಗೊಂಡಿದ್ದರು. ಲಂಕಾ ಸರ್ಕಾರದ ಈ ಹಸ್ತಕ್ಷೇಪ ಐಸಿಸಿ ನಿಯಮಗಳಿಗೆ ವಿರುದ್ಧವಾಗಿದ್ದು, ಶ್ರೀಲಂಕಾ ಕ್ರಿಕೆಟ್ ಮಂಡಳಿಯನ್ನು ಅಮಾನತುಗೊಳಿಸುವ ನಿರ್ಧಾರಕ್ಕೆ ಬರಲಾಗಿದೆ. ಈ ಬಗ್ಗೆ ಸಭೆ ನಡೆಸಿದ ಐಸಿಸಿ, ಶ್ರೀಲಂಕಾ ಕ್ರಿಕೆಟ್ ಮಂಡಳಿ ಐಸಿಸಿಯ ನಿಯಮವನ್ನು ಉಲ್ಲಂಘಿಸಿದೆ ಎಂಬ ನಿರ್ಧಾರಕ್ಕೆ ಬಂದಿದೆ. ಅಲ್ಲದೆ ಲಂಕಾ ಮಂಡಳಿಯು ತನ್ನ ವ್ಯವಹಾರಗಳಲ್ಲಿ ಶ್ರೀಲಂಕಾ ಸರ್ಕಾರದ ಹಸ್ತಕ್ಷೇಪವನ್ನು ತಡೆಯುವಲ್ಲಿ ವಿಫಲವಾಗಿದೆ. ಹೀಗಾಗಿ ಲಂಕಾ ಮಂಡಳಿಯನ್ನು ಅಮಾನತುಗೊಳಿಸಲಾಗಿದೆ ಎಂದು ಹೇಳಿದೆ.

ವರದಿಗಳ ಪ್ರಕಾರ, ಐಸಿಸಿ ಈಗಾಗಲೇ ತನ್ನ ನಿರ್ಧಾರದ ಬಗ್ಗೆ ಶ್ರೀಲಂಕಾ ಕ್ರಿಕೆಟ್‌ಗೆ ತಿಳಿಸಿದ್ದು, ನವೆಂಬರ್ 21 ರಂದು ನಡೆಯುವ ಸಭೆಯಲ್ಲಿ ಮುಂದಿನ ಕ್ರಮವನ್ನು ತೆಗೆದುಕೊಳ್ಳಲು ನಿರ್ಧರಿಸಿದೆ. ಶ್ರೀಲಂಕಾ ತನ್ನ ಅಮಾನತು ಅವಧಿಯಲ್ಲಿ ಯಾವುದೇ ಐಸಿಸಿ ಪಂದ್ಯಾವಳಿಗಳಲ್ಲಿ ಭಾಗವಹಿಸಲು ಮತ್ತು ದ್ವಿಪಕ್ಷೀಯ ಸರಣಿಗಳನ್ನು ಆಡಲು ಸಾಧ್ಯವಾಗುವುದಿಲ್ಲ. ವಾಸ್ತವವಾಗಿ ಶ್ರೀಲಂಕಾ,  ಮುಂದಿನ ಜನವರಿ ಮತ್ತು ಫೆಬ್ರವರಿಯಲ್ಲಿ 2024 ರ ಐಸಿಸಿ ಅಂಡರ್-19 ವಿಶ್ವಕಪ್ ಪಂದ್ಯಾವಳಿಯನ್ನು ಆಯೋಜಿಸಬೇಕಾಗಿದೆ. ಆದ್ದರಿಂದ ಐಸಿಸಿ ಮಂಡಳಿಯು ತನ್ನ ಮುಂದಿನ ಸಭೆಯಲ್ಲಿ ಈ ಬಗ್ಗೆ ಯಾವ ನಿರ್ಧಾರ ತೆಗೆದುಕೊಳ್ಳುತ್ತದೆ ಎಂಬುದನ್ನು ಕಾದುನೋಡಬೇಕಾಗಿದೆ..

Sulekha