334ಕ್ಕೂ ಹೆಚ್ಚು ಮಂದಿಯನ್ನು ಬಲಿ ಪಡೆದ ದಿತ್ವಾ ಚಂಡಮಾರುತ! –  370 ಕ್ಕೂ ಹೆಚ್ಚು ನಾಪತ್ತೆ

334ಕ್ಕೂ ಹೆಚ್ಚು ಮಂದಿಯನ್ನು ಬಲಿ ಪಡೆದ ದಿತ್ವಾ ಚಂಡಮಾರುತ! –  370 ಕ್ಕೂ ಹೆಚ್ಚು ನಾಪತ್ತೆ

ದಿತ್ವಾ ಚಂಡಮಾರುತದ ಅಬ್ಬರ ಕ್ಷಣ ಕ್ಷಣಕ್ಕೂ ತೀವ್ರಗೊಳ್ಳುತ್ತಿದೆ.. ಶ್ರೀಲಂಕಾದಲ್ಲಿ 334ಕ್ಕೂ ಹೆಚ್ಚು ಮಂದಿಯನ್ನ ದಿತ್ವಾ ಬಲಿಪಡೆದುಕೊಂಡಿದೆ. ತಮಿಳುನಾಡಿನಲ್ಲೂ ಮೂವರು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.

ಇದನ್ನೂ ಓದಿ: RO-KO ಅಬ್ಬರದ ಜೊತೆಯಾಟ ಗೆದ್ದ ಟೀಮ್ ಇಂಡಿಯಾ – ರಾಂಚಿಯಲ್ಲಿ ಕ್ರಿಕೆಟ್ ರಾಜನ 52ನೇ ಶತಕ

ಚಂಡಮಾರುದಿಂದ ಶ್ರೀಲಂಕಾ ಅಕ್ಷರಶ: ತತ್ತರಿಸಿಹೋಗಿದ್ದು, ಕಲಾನಿ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. ಚಂಡಮಾರುತಕ್ಕೆ ಶ್ರೀಲಂಕಾ ನಲುಗಿ ಹೋಗಿದ್ದು, 334ಕ್ಕೂ ಹೆಚ್ಚು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಸುಮಾರು 370 ಕ್ಕೂ ಹೆಚ್ಚು ಮಂದಿ ನಾಪತ್ತೆಯಾಗಿದ್ದಾರೆ. ಲಂಕಾದಲ್ಲಿ ರಕ್ಷಣಾ ಕಾರ್ಯಾಚರಣೆ ಮುಂದುವರಿದಿದ್ದು, ಭಾರತೀಯ ವಾಯುಪಡೆ ಓರ್ವ ಪಾಕ್ ಪ್ರಜೆ ಸೇರಿ 455 ಜನರನ್ನು  ರಕ್ಷಿಸಿದೆ. ಇನ್ನೂ 2,66,114 ಕುಟುಂಬಗಳ 9,68,304 ಜನರು ಸಂಕಷ್ಟಕ್ಕೆ ಸಿಲುಕಿದ್ದು, ಸಂತ್ರಸ್ತರ ನೆರವಿಗಾಗಿ 919 ಪುನರ್ವಸತಿ ಕೇಂದ್ರ ಸ್ಥಾಪಿಸಲಾಗಿದೆ.

ಇನ್ನು ಭಾರತ ಶ್ರೀಲಂಕಾಕ್ಕೆ ನೆರವಿನ ಹಸ್ತ ಮುಂದುವರಿಸಿದೆ. ಆಪರೇಷನ್ ಸಾಗರ ಬಂಧು  ಅಡಿಯಲ್ಲಿ 80 ಸಿಬ್ಬಂದಿ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿಕೊಂಡಿದ್ದಾರೆ. ಜೊತೆಗೆ ಸಂತ್ರಸ್ತರಿಗೆ ಆಹಾರ, ಔಷಧ ಸೇರಿ ಅಗತ್ಯ ವಸ್ತುಗಳನ್ನು ತಲುಪಿಸಲಾಗಿದೆ. ಭಾರತೀಯ ವಾಯುಪಡೆಯ Mi-17 ಹೆಲಿಕಾಪ್ಟರ್ ನೆರವಿನಿಂದ ಶ್ರೀಲಂಕಾದಲ್ಲಿ ಸಿಲುಕಿದ್ದ 400 ಭಾರತೀಯರನ್ನು ರಕ್ಷಿಸಿ ಸ್ವದೇಶಕ್ಕೆ ಕಳಿಸಲಾಗಿದ್ದು, ಓರ್ವ ಪಾಕ್ ಪ್ರಜೆಯನ್ನು ರಕ್ಷಿಸಲಾಗಿದೆ. ಅಲ್ಲದೇ ಪೋಲೆಂಡ್ 3, ಬೆಲಾರಸ್ 6, ಇರಾನ್ 5, ಆಸ್ಟ್ರೇಲಿಯಾ 1, ಬಾಂಗ್ಲಾದೇಶ 1, ಜರ್ಮನಿ 2, ದಕ್ಷಿಣ ಆಫ್ರಿಕಾ 4, ಸ್ಲೊವೇನಿಯಾ 2 ಮತ್ತು ಯುನೈಟೆಡ್ ಕಿಂಗ್‌ಡಮ್‌ನ 2 ನಾಗರಿಕರು ಸೇರಿದಂತೆ ಒಟ್ಟು 55 ಜನರನ್ನು ರಕ್ಷಣೆ ಮಾಡಿದೆ.

ಇನ್ನು ತಮಿಳುನಾಡಿನಲ್ಲೂ ದಿತ್ವಾ ಚಂಡಮಾರುತದ ಅಬ್ಬರ ಜೋರಾಗಿದೆ. ಮೂವರು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ. ತಮಿಳುನಾಡಿನ ತೂತುಕುಡಿ ಮತ್ತು ತಂಜಾವೂರಿನಲ್ಲಿ ಗೋಡೆ ಕುಸಿದು ಇಬ್ಬರು ಸಾವನ್ನಪ್ಪಿದರೆ, ಮೈಲಾಡುತುರೈನಲ್ಲಿ 20 ವರ್ಷದ ಯುವಕ ವಿದ್ಯುತ್ ಸ್ಪರ್ಶದಿಂದ ಪ್ರಾಣಕಳೆದುಕೊಂಡಿದ್ದಾರೆ. ಡೆಲ್ಟಾ ಜಿಲ್ಲೆಗಳಲ್ಲಿ 149 ಜಾನುವಾರುಗಳು ಸಾವನ್ನಪ್ಪಿದ್ದು, 57,000 ಹೆಕ್ಟೇರ್ ಕೃಷಿಭೂಮಿಗೆ ಹಾನಿಯಾಗಿದೆ. ಸುಮಾರು 234 ಗುಡಿಸಲುಗಳು ಹಾನಿಗೊಳಗಾಗಿದೆ. ಸಂತ್ರಸ್ತರ ನೆರವಿಗಾಗಿ 28 ವಿಪತ್ತು ನಿರ್ವಹಣಾ ತಂಡಗಳನ್ನು ನಿಯೋಜಿಸಲಾಗಿದೆ. ಇತರ ರಾಜ್ಯಗಳಿಂದಲೂ 10 ತಂಡಗಳು ರಕ್ಷಣಾ ಕಾರ್ಯಕ್ಕಾಗಿ ಧಾವಿಸಿವೆ.

Shwetha M