ಮಸಣಕ್ಕೆ ಹೋದ ಮದುವೆ ದಿಬ್ಬಣ- ವರ ಸೇರಿ 8 ಮಂದಿ ಅಪಘಾತಕ್ಕೆ ಬಲಿ

ಮದುವೆ ದಿಬ್ಬಣಕ್ಕೆ ಹೊರಟಿದ್ದ ಕಾರು ಭೀಕರ ಆ್ಯಕ್ಸಿಡೆಂಟ್ ಆದ ಘಟನೆ ಉತ್ತರ ಪ್ರದೇಶದ ಸಂಭಾಲ್ ಜಿಲ್ಲೆಯಲ್ಲಿ ನಡೆದಿದೆ. ಈ ಘಟನೆಯಲ್ಲಿ ಮದುಮಗ ಸೇರಿದಂತೆ 8 ಮಂದಿ ಪ್ರಾಣ ಕಳೆದುಕೊಂಡಿದೆ. ಬೊಲೆರೊ ಎಸ್‌ಯುವಿ ಕಾರು ಕಾಲೇಜಿನ ಗೋಡೆಗೆ ಡಿಕ್ಕಿ ಹೊಡೆದ ಪರಿಣಾಮ 24 ವರ್ಷದ ವರ ಸೇರಿದಂತೆ ಒಂದೇ ಕುಟುಂಬದ ಎಂಟು ಸದಸ್ಯರು ಸಾವನ್ನಪ್ಪಿದ್ದಾರೆ. ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಬೆಳಗ್ಗೆ 6:30 ರ ಸುಮಾರಿಗೆ ಜೇವಾನೈ ಗ್ರಾಮದಲ್ಲಿರೋ ಜನತಾ ಇಂಟರ್ ಕಾಲೇಜು ಬಳಿ ಚಾಲಕನ ನಿಯಂತ್ರಣ ತಪ್ಪಿ ಈ ಘಟನೆ ನಡೆದಿದೆ. ಅತೀ ವೇಗದ ಚಾಲನೆಯೇ ಈ ಘಟನೆಗೆ ಕಾರಣವಾಗಿದ್ದು, ಡಿಕ್ಕಿ ಹೊಡೆದು ನಂತರ ಪಲ್ಟಿಯಾಗಿದೆ.
ಸಂಭಾಲ್‌ನ ಹರ್ ಗೋವಿಂದಪುರ ಗ್ರಾಮದಿಂದ ನೆರೆಯ ಬುಡೌನ್ ಜಿಲ್ಲೆಯ ಸಿರ್ತೌಲ್‌ನಲ್ಲಿರುವ ವಧುವಿನ ಗ್ರಾಮಕ್ಕೆ ಪ್ರಯಾಣಿಸುತ್ತಿದ್ದರು.. ಈ ವೇಳೆ ಈ ಭೀಕರ ಘಟನೆ ನಡೆದಿದೆ. ಅಪಘಾತದ ತೀವ್ರತೆಗೆ ಐವರು ಸ್ಥಳದಲ್ಲೇ ಸಾವನ್ನಪ್ಪಿದ್ರೆ, ಗಂಭೀರ ಗಾಯಗೊಂಡಿದ್ದ ಇತರ ಮೂವರು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾರೆ. ಬದುಕುಳಿದ ಇಬ್ಬರು ಗಂಭೀರ ಸ್ಥಿತಿಯಲ್ಲಿದ್ದಾರೆ. ಅವರನ್ನು ಅಲಿಘರ್‌ನ ಉನ್ನತ ವೈದ್ಯಕೀಯ ಕೇಂದ್ರಕ್ಕೆ ರವಾನಿಸಲಾಗಿದೆ. ಮೃತಪಟ್ಟವರನ್ನ ಸೂರಜ್ (24), ವರನ ಅತ್ತಿಗೆ ಆಶಾ (26), ಆಶಾ ಅವರ ಮಗಳು ಐಶ್ವರ್ಯ (2), ವಿಷ್ಣು (6), ಮತ್ತು ವರನ ಚಿಕ್ಕಮ್ಮ ಸೇರಿ ಒಟ್ಟು 8 ಮಂದಿ ಮೃತಪಟ್ಟಿದ್ದಾರೆ.

ನೋಡಿರಿ

