ನಾಲ್ಕೇ ದಿನಕ್ಕೆ ಕೈ ಕೊಟ್ಟ ಸ್ಪೀಡ್ ಡಿಟೆಕ್ಟರ್ – ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇನಲ್ಲಿ ಮತ್ತೊಂದು ಯಡವಟ್ಟು..!

ನಾಲ್ಕೇ ದಿನಕ್ಕೆ ಕೈ ಕೊಟ್ಟ ಸ್ಪೀಡ್ ಡಿಟೆಕ್ಟರ್ – ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇನಲ್ಲಿ ಮತ್ತೊಂದು ಯಡವಟ್ಟು..!

ಬೆಂಗಳೂರು – ಮೈಸೂರು ದಶಪಥ ರಸ್ತೆಯಲ್ಲಿ ಅಪಘಾತಗಳಿಗೆ ಕಡಿವಾಣ ಹಾಕಲು ಸ್ಪೀಡ್ ಡಿಟೆಕ್ಟರ್‌ಗಳನ್ನು ಅಳವಡಿಸಲಾಗಿತ್ತು. ಆದರೆ, ಕೇವಲ ನಾಲ್ಕೇ ದಿನಗಳ ಹಿಂದಷ್ಟೇ ಅಳವಡಿಸಲಾಗಿದ್ದ ಸ್ಪೀಡ್ ಡಿಟೆಕ್ಟರ್‌ಗಳು ಕೈಕೊಟ್ಟಿವೆ. ಎಕ್ಸ್‌ಪ್ರೆಸ್ ವೇನಲ್ಲಿ ಹೆಚ್ಚುತ್ತಿರುವ ಅಪಘಾತಗಳನ್ನು ತಡೆಯುವ ಉದ್ದೇಶದಿಂದ ಸ್ಪೀಡ್ ಲಿಮಿಟ್ ಜಾರಿ ಮಾಡಲಾಗಿದೆ. ಇದನ್ನು ನಿಯಂತ್ರಿಸುವ ಸಲುವಾಗಿ ಮಂಡ್ಯದ ಉಮ್ಮಡಹಳ್ಳಿ ಗೇಟ್ ಬಳಿ ಸೋಲಾರ್‌ನಿಂದ ಕಾರ್ಯ ನಿರ್ವಹಿಸುವ ಸ್ಪೀಡ್ ಡಿಟೆಕ್ಟರ್ ಹಾಗೂ ಕ್ಯಾಮೆರಾಗಳನ್ನು ಅಳವಡಿಸಲಾಗಿತ್ತು. ಆದರೆ ಈ ಕ್ಯಾಮೆರಾಗಳು ನಾಲ್ಕೇ ದಿನಕ್ಕೆ ಹಾಳಾಗಿವೆ.

ಇದನ್ನೂ ಓದಿ:ಬೆಂಗಳೂರು – ಮೈಸೂರು ಎಕ್ಸ್ ಪ್ರೆಸ್ ವೇಯಲ್ಲಿ ಕೆಎಸ್‌ಆರ್‌ಟಿಸಿ ಬಸ್‌ಗಳಿಗೂ ವೇಗ ಮಿತಿ!

ಜುಲೈ 29 ರಿಂದ ಎಐ ಕ್ಯಾಮೆರಾಗಳ ಜೊತೆ ಸ್ಪೀಡ್ ಡಿಟೆಕ್ಟರ್‌ಗಳು ಕಾರ್ಯನಿರ್ವಹಿಸುತ್ತಿದ್ದವು. ಈ ಡಿಟೆಕ್ಟರ್‌ಗಳನ್ನು ಸಿಎಂ ಸಿದ್ದರಾಮಯ್ಯ ಅವರು ನಾಲ್ಕು ದಿನಗಳ ಹಿಂದಷ್ಟೇ ಉದ್ಘಾಟಿಸಿದ್ದರು. ಈ ಯೋಜನೆಗೆ ಲಕ್ಷಾಂತರ ರೂಪಾಯಿ ವಿನಿಯೋಗಿಸಲಾಗಿದೆ. ರಾಜ್ಯ ರಸ್ತೆ ಸುರಕ್ಷತಾ ಎಡಿಜಿಪಿ ಅಲೋಕ್ ಕುಮಾರ್ ಆದೇಶದ ಮೇರೆಗೆ ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್ ವೇನಲ್ಲಿ ಸ್ವಯಂಚಾಲಿತ ನಂಬರ್ ಪ್ಲೇಟ್ ಗುರುತಿಸುವ ಕ್ಯಾಮೆರಾವನ್ನು ಅಳವಡಿಕೆ ಮಾಡಲಾಗಿತ್ತು. ವೇಗದ ಮಿತಿ ಮೀರಿದರೆ ವಾಹನದ ನಂಬರ್‌ನಿಂದ ಆರ್‌ಟಿಒ ಸಂಪರ್ಕ ಪಡೆದು ಮೊಬೈಲಿಗೆ ದಂಡ ಪಾವತಿಸುವಂತೆ ನೋಟಿಸ್ ಬರುವಂತೆ ತಂತ್ರಜ್ಞಾನ ರೂಪಿಸಲಾಗಿತ್ತು. ಈ ಸಂಬಂಧ ಟ್ವೀಟ್ ಮಾಡಿದ್ದ ಅಲೋಕ್ ಕುಮಾರ್, ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಕೃತಕ ಬುದ್ಧಿಮತ್ತೆ ಆಧಾರಿತ ಕ್ಯಾಮೆರಾಗಳನ್ನು ಪ್ರಾಯೋಗಿಕವಾಗಿ ಅಳವಡಿಕೆ ಮಾಡಲಾಗಿದೆ. ಅಪಘಾತಗಳು ಮತ್ತು ಸಾವುನೋವುಗಳ ಸಂಖ್ಯೆಗಳನ್ನು ಕಡಿಮೆ ಮಾಡಲು ಇದು ಸಹಾಯವಾಗಲಿದೆ. ಅಲ್ಲದೇ ಭಾರತದ ರಸ್ತೆಯಲ್ಲಿ ಅತಿವೇಗವೇ ಪ್ರಮುಖ ಕೊಲೆಗಾರ ಎಂದು ಬರೆದುಕೊಂಡಿದ್ದರು. ಆದರೆ, ಕೇವಲ ನಾಲ್ಕೇ ನಾಲ್ಕು ದಿನಗಳಲ್ಲಿ ಸ್ಪೀಡ್ ಡಿಟೆಕ್ಟರ್ ಹಾಳಾಗಿ ಹೋಗಿದೆ.

suddiyaana