ಬಾಹ್ಯಾಕಾಶದಲ್ಲೇ ಟೋಮ್ಯಾಟೋ ಬೀಜ ಬಿತ್ತನೆ – ನಾಸಾ ಸಂಶೋಧಕರಿಂದ ಮತ್ತೊಂದು ಪ್ರಯೋಗ

ಬಾಹ್ಯಾಕಾಶದಲ್ಲೇ ಟೋಮ್ಯಾಟೋ ಬೀಜ ಬಿತ್ತನೆ – ನಾಸಾ ಸಂಶೋಧಕರಿಂದ ಮತ್ತೊಂದು ಪ್ರಯೋಗ

ಜಗತ್ತು ಈಗ ಬಾಹ್ಯಾಕಾಶದ ಮೇಲೆ ಅತೀ ಹೆಚ್ಚು ಹೂಡಿಕೆ ಮಾಡುತ್ತಿದೆ. ಬಾನಂಗಳದಲ್ಲಿ ದೀರ್ಘಕಾಲದವರೆಗೂ ಮಾನವನಿದ್ದು ಬಾಹ್ಯಾಕಾಶದ ಅಧ್ಯಯನ ಮಾಡುವ ಬಗ್ಗೆ ಸಂಶೋಧಕರು ಹೆಚ್ಚಾಗಿ ತೊಡಗಿಸಿಕೊಂಡಿದ್ದಾರೆ. ಈ ನಿಟ್ಟಿನಲ್ಲಿ ದೀರ್ಘ ಕಾಲದ ಸ್ಪೇಸ್ ಮಿಷನ್ ಗಳು ನಡೆಯುತ್ತಿದೆ. ಆದರೆ ಬಾಹ್ಯಾಕಾಶ ಕೇಂದ್ರದಲ್ಲಿ ಸಿಬ್ಬಂದಿ ದೀರ್ಘ ಕಾಲದವರೆಗೂ ಇದ್ದು ಸಂಶೋಧನೆ ಮಾಡಬೇಕಂದರೆ ಅರೋಗ್ಯಕರ ಮತ್ತೂ ಪೋಷಕಾಂಶವುಳ್ಳ ಆಹಾರವು ಅತೀ ಮುಖ್ಯ. ಸದ್ಯ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿರುವ ಸಿಬ್ಬಂದಿಗೆ ಪ್ಯಾಕ್ಡ್ ಆಹಾರವು ಕಾರ್ಗೋ ನೌಕೆ ಮೂಲಕ ತಲುಪುತ್ತಿದೆಯಾದರೂ ಭವಿಷ್ಯದಲ್ಲಿ ದೀರ್ಘಕಾಲದ ಯೋಜನೆಗಳಿಗೆ ಬಾಹ್ಯಾಕಾಶದಲ್ಲೇ ತರಕಾರಿ ಬೆಳೆಸಿ ಅದನ್ನ ಬಳಸುವ ಕುರಿತಾಗಿ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ (ISS) ಗಮನ ಹರಿಸಿದೆ.

ಇದನ್ನೂ ಓದಿ :  78ರ ಹರೆಯದಲ್ಲೂ ಕುಗ್ಗದ ಉತ್ಸಾಹ – 12,300 ಅಡಿ ಎತ್ತರಕ್ಕೆ ತೆರಳಿ ಯೋಗ ತರಭೇತಿ

ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದ ಸಿಬ್ಬಂದಿ Veg-05 ಅನ್ನುವ ಪ್ರಯೋಗದ ಮೂಲಕ ಬಾಹ್ಯಾಕಾಶ ನಿಲ್ದಾಣದಲ್ಲಿ ತರಕಾರಿ ಬೆಳೆಸಲು ಮುಂದಾಗಿದ್ದಾರೆ. ಬಾಹ್ಯಾಕಾಶ ನಿಲ್ದಾಣದ ಸೀಮಿತ ವಾತಾವರಣದಲ್ಲಿ ಕುಬ್ಜ ಟೊಮ್ಯಾಟೋ ಬೀಜಗಳನ್ನ ಬೆಳೆಸಿ ಅದು ಅಲ್ಲಿ ಮಾನವ ಬಳಕೆಗೆ ಯೋಗ್ಯವಾಗಿದೆಯಾ ಎಂದು ತಿಳಿದುಕೊಳ್ಳುವ ಸಲುವಾಗಿ ನಡೆಸುವ ಪ್ರಯೋಗ ಇದಾಗಿದೆ.

ಈ ನಿಟ್ಟಿನಲ್ಲಿ ಸ್ಪೇಸ್ ಎಕ್ಸ್ ನ ದಿ ಡ್ರ್ಯಾಗನ್ ಕಾರ್ಗೋ ಬಾಹ್ಯಾಕಾಶ ನೌಕೆ, ಕುಬ್ಜ ಟೊಮ್ಯಾಟೋ ಬೀಜಗಳೊಂದಿಗೆ ನವೆಂಬರ್ 27 ರಂದು ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಪ್ರಯಾಣ ಮಾಡಿತ್ತು. ಬಾಹ್ಯಾಕಾಶ ಕೇಂದ್ರದಲ್ಲಿ ನಡೆಯುವ ಈ ಪ್ರಯೋಗದ ಜೊತೆ ಜೊತೆಗೆನೇ ಭೂಮಿಯಲ್ಲಿ ಕೂಡಾ ಇದೇ ಸ್ವರೂಪದ ವೈಜ್ಞಾನಿಕ ಮಾದರಿ ತಯಾರು ಮಾಡಿ ಇಲ್ಲಿಯೂ ಆ ಪ್ರಯೋಗವನ್ನ ನಡೆಸಲಾಗುತ್ತದೆ. ಏಕ ಕಾಲದಲ್ಲಿ ನಡೆಯುವ ಈ ಎರಡು ಪ್ರಯೋಗಗಳು ಬೆಳಕಿನ ಪ್ರಭಾವ, ಬೆಳೆ ಇಳುವರಿ, ಪೌಷ್ಟಿಕಾಂಶದ ಸಂಯೋಜನೆ ಮತ್ತೂ ಸೂಕ್ಷ್ಮ ಜೀವಿಗಳ ಪರಿಣಾಮದ ಬಗ್ಗೆ ವಿಶ್ಲೇಷಣೆ ಮಾಡುತ್ತವೆ. ಟೊಮ್ಯಾಟೋಗಳನ್ನ ಬೆಳೆಸಿದ ನಂತರ ಅಲ್ಲಿಯ ಸಿಬ್ಬಂದಿ ಇದನ್ನ ಸೇವಿಸಬೇಕಾಗುತ್ತದೆ. ಮತ್ತು ಅದರೊಂದಿಗೆ ಇದೂ ಸಿಬ್ಬಂದಿಗೆ ಮಾನಸಿಕವಾಗಿ ಯಾವ ರೀತಿ ಪ್ರಭಾವ ಬೀರುತ್ತದೆ ಅನ್ನೋ ಬಗ್ಗೆ ಕೂಡಾ ಸಂಶೋಧಕರು ತಿಳಿದುಕೊಳ್ಳುವ ಉದ್ದೇಶ ಇಟ್ಟುಕೊಂಡಿದ್ದಾರೆ.

ಟೊಮ್ಯಾಟೋ ಬೀಜಗಳನ್ನ ಪ್ಲಾಂಟ್ ಪಿಲ್ಲೋ ಅನ್ನುವ ಗೊಬ್ಬರ ತುಂಬಿರುವಂತಹ ಒಂದು ನಿರ್ದಿಷ್ಟ ಬ್ಯಾಗ್ ನಲ್ಲಿ ಬೆಳೆಸುತ್ತಾರೆ. ಟೊಮ್ಯಾಟೋ ಬೆಳೆಯಲು ಸುಮಾರು ಮೂರು ತಿಂಗಳ ಕಾಲ ತೆಗೆದುಕೊಳ್ಳಲಿದ್ದು ಬಾಹ್ಯಾಕಾಶ ಸಿಬ್ಬಂದಿ ಇದನ್ನ ಪರಿಶೀಲನೆ ಮಾಡುತ್ತಾ ಇದರ ಬೆಳವಣಿಗೆಯ ಚಿತ್ರಗಳನ್ನ  ನಾಸಾ ಸಂಶೋಧಕರ ತಂಡಕ್ಕೆ ಕಳುಹಿಸಲಿದೆ.

ಬಾಹ್ಯಾಕಾಶ ನಿಲ್ದಾಣದಲ್ಲಿ ತರಕಾರಿ ಬೆಳೆಸೋದು ಇದೂ ಮೊದಲನೆಯ ಬಾರಿಯಲ್ಲ. ಈ ಹಿಂದೆ NASA ವೂ Veg-04 ಅನ್ನೋ ಪ್ರಯೋಗದ ಮೂಲಕ ಸಲಾಡ್ ಗೆ ಬಳಸುವ ಕೆಲ ತರಕಾರಿಗಳನ್ನ ಬೆಳೆಸಿದ್ದರು. ಈಗ Veg-05 ಪ್ರಯೋಗ ನಡೆಸುವ ಮೂಲಕ ಬಾಹ್ಯಾಕಾಶ ದಲ್ಲಿ ತರಕಾರಿ ಬೆಳೆಸುವ ಬಗ್ಗೆ ನಾಸಾ ಸಂಶೋಧಕರು ಹೆಚ್ಚಿನ ಮಹತ್ವ ಕೊಟ್ಟಿದ್ದಾರೆ.

suddiyaana