ದಕ್ಷಿಣ ಕೊರಿಯಾದ ವಿಪಕ್ಷ ನಾಯಕನ ಮೇಲೆ ಮಾರಣಾಂತಿಕ ಹಲ್ಲೆ – ಕುತ್ತಿಗೆಗೆ ಚಾಕುವಿನಿಂದ ಇರಿದ ದುಷ್ಕರ್ಮಿ!
ದಕ್ಷಿಣ ಕೊರಿಯಾದ ವಿರೋಧ ಪಕ್ಷ ನಾಯಕ ಲೀ ಜೇ-ಮ್ಯುಂಗ್ ಅವರ ಮೇಲೆ ಮಾರಣಾಂತಿಕ ಹಲ್ಲೆ ನಡೆದಿದೆ. ಗಂಭೀರ ಗಾಯಗೊಂಡಿರುವ ಲೀ ಜೇ-ಮ್ಯುಂಗ್ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಲೀ ಜೇ-ಮ್ಯುಂಗ್ ಅವರು ಹೊಸ ವಿಮಾನ ನಿಲ್ದಾಣದ ಸ್ಥಳಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಅವರ ಮೇಲೆ ದಾಳಿ ನಡೆದಿದೆ. ಪತ್ರಕರ್ತರ ಗುಂಪಿನಲ್ಲಿ ಮಾತನಾಡುತ್ತಾ ನಡೆದುಕೊಂಡು ಹೋಗುತ್ತಿದ್ದರು. ಈ ವೇಳೆ ವ್ಯಕ್ತಿಯೊಬ್ಬ ಅವರ ಕುತ್ತಿಗೆಗೆ ಚಾಕುವಿನಿಂದ ಇರಿದಿದ್ದಾನೆ ಎಂದು ದಕ್ಷಿಣ ಕೊರಿಯಾ ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ: ಮಣಿಪುರದಲ್ಲಿ ಮತ್ತೆ ಭುಗಿಲೆದ್ದ ಹಿಂಸಾಚಾರ – ದುಷ್ಕರ್ಮಿಗಳ ಗುಂಡೇಟಿಗೆ ನಾಲ್ವರು ಬಲಿ
ಹಲ್ಲೆ ನಡೆಸಿರುವ ದೃಶ್ಯದ ವೀಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಜನರು ವಿಪಕ್ಷ ನಾಯಕರ ಸಹಾಯಕ್ಕೆ ಧಾವಿಸುತ್ತಿದ್ದಂತೆ ನೆಲಕ್ಕೆ ಕುಸಿದು ಬೀಳುತ್ತಿರುವುದು ವೀಡಿಯೋದಲ್ಲಿ ಕಂಡುಬಂದಿದೆ. ಹಲ್ಲೆಗೊಳಗಾಗಿ ಕುಸಿದು ಬಿದ್ದ ವಿಪಕ್ಷ ನಾಯಕನ ಕುತ್ತಿಗೆಯ ಮೇಲೆ ಕರವಸ್ತ್ರ ಒತ್ತಿ ರಕ್ತ ಸೋರುವುದಕ್ಕೆ ತಡೆಗಟ್ಟಲು ಪ್ರಯತ್ನಿಸಿದ್ದಾರೆ. ತಕ್ಷಣ ಮ್ಯುಂಗ್ ಅವರನ್ನು ಅಂಬುಲೆನ್ಸ್‌ನಲ್ಲಿ ಆಸ್ಪತ್ರೆಗೆ ಸಾಗಿಸಲಾಗಿದೆ. ಅವರನ್ನು ಪುಸಾನ್ ನ್ಯಾಷನಲ್ ಯೂನಿವರ್ಸಿಟಿ ಆಸ್ಪತ್ರೆಗೆ ಸಾಗಿಸಿದಾಗ ಅವರು ಪ್ರಜ್ಞೆ ಹೊಂದಿದ್ದರು ಎಂದು ಸಂಸ್ಥೆ ಹೇಳಿದೆ. ಪೊಲೀಸ್ ಅಧಿಕಾರಿಗಳು ದಾಳಿ ಕೋರನನ್ನು ವಶಕ್ಕೆ ಪಡೆದಿದ್ದಾರೆ.
ಇದು ಲೀ ವಿರುದ್ಧದ ಭಯೋತ್ಪಾದಕ ಕೃತ್ಯವಾಗಿದೆ. ಇಂತಹ ಘಟನೆಗಳು ಮರುಕಳಿಸದಂತೆ ನೋಡಿಕೊಳ್ಳಬೇಕು. ಪ್ರಜಾಪ್ರಭುತ್ವಕ್ಕೆ ಗಂಭೀರ ಬೆದರಿಕೆಯಾಗಿದೆ ಎಂದು ಲೀ ಅವರ ಡೆಮಾಕ್ರಟಿಕ್ ಪಕ್ಷದ ಸಂಸದ ಕ್ವಾನ್ ಚಿಲ್-ಸಿಯುಂಗ್ ಹೇಳಿದ್ದಾರೆ.