ಈ ದೇಶದ ಜನರ ವಯಸ್ಸು ದಿಢೀರ್‌ ಇಳಿಕೆ! – 1 ರಿಂದ 2 ವರ್ಷ ಚಿಕ್ಕವರಾದ ನಿವಾಸಿಗಳು!

ಈ ದೇಶದ ಜನರ ವಯಸ್ಸು ದಿಢೀರ್‌ ಇಳಿಕೆ! – 1 ರಿಂದ 2 ವರ್ಷ ಚಿಕ್ಕವರಾದ ನಿವಾಸಿಗಳು!

ಪ್ರತಿವರ್ಷ ಜನ್ಮ ದಿನ ಬಂತೆಂದರೆ ನಾವು ಅಯ್ಯೋ ನಮಗೆ ವಯಸ್ಸು ಆಯ್ತಲ್ಲಾ.. ವಯಸ್ಸು ಹೆಚ್ಚಾಗಿದ್ದು ಗೊತ್ತೇ ಆಗಿಲ್ಲ.. ಇನ್ನು ಚಿಕ್ಕವರಾಗಿದ್ರೆ ಎಷ್ಟು ಚೆನ್ನಾಗಿ ಇರುತ್ತಿತ್ತು ಅಂತಾ ಗೊಣಗುತ್ತಿರುತ್ತೇವೆ. ಚಿಕ್ಕವರಾಗಲು ಸಾಧ್ಯವಿಲ್ಲ ಎಂದು ಮತ್ತೆ ಪೆಚ್ಚು ಮೋರೆ ಹಾಕುತ್ತೇವೆ. ಆದರೆ ಇಲ್ಲೊಂದು ರಾಷ್ಟ್ರದಲ್ಲಿ ಜನರ ವಯಸ್ಸಿನಲ್ಲಿ ಇಳಿಕೆಯಾಗಿದೆ!

ಸಾಮಾನ್ಯವಾಗಿ ನಮ್ಮ ವಯಸ್ಸಿನ ಸಂಖ್ಯೆ ಹೆಚ್ಚಾಗುತ್ತಾ ಹೋಗುತ್ತದೆ. ನಮಗಿಂತ ಕಿರಿಯರನ್ನು ನೋಡಿದಾಗ ಕಡೇ ಪಕ್ಷ ನಾವು ಒಂದರಿಂದ ಎರಡು ವರ್ಷ ಸಣ್ಣವರಾಗಿ ಇರಬೇಕಿತ್ತು ಅಂತಾ ಅನ್ನಿಸಿ ಬಿಡುತ್ತದೆ. ಇದೀಗ ದಕ್ಷಿಣ ಕೊರಿಯಾದ ಜನರು ಒಂದು ಅಥವಾ ಎರಡು ವರ್ಷಗಳಷ್ಟು ವಯಸ್ಸು ಇಳಿಕೆಯಾಗಲಿದೆ. ಅಧಿಕೃತವಾಗಿಯೇ ಒಂದರಿಂದ  ವರ್ಷ ಚಿಕ್ಕವರಾಗುವ ಸದಾವಕಾಶವನ್ನು ಅಲ್ಲಿನ ಸರ್ಕಾರ ನೀಡಿದೆ.

ಇದನ್ನೂ ಓದಿ: ಸಾವನ್ನಪ್ಪಿದವರಿಗೆ ಮರುಜೀವ ನೀಡಲು ದೇಹಗಳ ಸಂರಕ್ಷಣೆ – ವಿಜ್ಞಾನಲೋಕದಲ್ಲಿ ನಡೆಯುತ್ತಾ ವಿಸ್ಮಯ..!?

ಸಾಮಾನ್ಯವಾಗಿ ಮಗು ಜನಿಸಿದ ದಿನವನ್ನು ಅದರ ಹುಟ್ಟಿದ ದಿನ ಎಂದು ಗುರುತಿಸಲಾಗುತ್ತದೆ. ಆದರೆ ದಕ್ಷಿಣ ಕೊರಿಯಾದ ಒಂದು ಸಾಂಪ್ರದಾಯಿಕ ವಿಧಾನದಲ್ಲಿ ತಾಯಿಯ ಗರ್ಭದಲ್ಲಿ ಇರುವಾಗಲೇ ಮಗುವಿನ ವಯಸ್ಸನ್ನು ಲೆಕ್ಕಕ್ಕೆ ತೆಗೆದುಕೊಳ್ಳಲಾಗುತ್ತದೆ. ಇದರ ಪ್ರಕಾರ ಮಗು ಜನಿಸುವಾಗಲೇ ಅದಕ್ಕೆ ಒಂದು ವರ್ಷ ಎಂದು ಪರಿಗಣಿಸಲಾಗುತ್ತದೆ. ಈ ಪುರಾತನ ಪದ್ಧತಿಯನ್ನು ದಕ್ಷಿಣ ಕೊರಿಯಾ ರದ್ದುಗೊಳಿಸಿದೆ.

ದಕ್ಷಿಣ ಕೊರಿಯಾದ ಜನರು ಒಂದು ಅಥವಾ ಎರಡು ವರ್ಷಗಳಷ್ಟು ವಯಸ್ಸು ಇಳಿಸಿಕೊಳ್ಳುತ್ತಿದ್ದಾರೆ. ದೇಶದ ಎರಡು ಸಾಂಪ್ರದಾಯಿಕ ವಯೋ- ಲೆಕ್ಕಾಚಾರದ ವಿಧಾನಗಳನ್ನು ಅಂತಾರಾಷ್ಟ್ರೀಯ ಮಾನದಂಡಗಳ ಜತೆಗೆ ಸೇರಿಸುವ ಹೊಸ ಕಾನೂನನ್ನು ದಕ್ಷಿಣ ಕೊರಿಯಾ ಅಳವಡಿಸಿದೆ. ಇದರ ಅನ್ವಯ ದಕ್ಷಿಣ ಕೊರಿಯಾ ಜನರ ವಯಸ್ಸು ಒಂದೆರಡು ವರ್ಷ ಕಡಿಮೆಯಾಗುತ್ತಿದೆ.

ಮತ್ತೊಂದು ಪದ್ಧತಿಯಲ್ಲಿ, ಜನರು ಹುಟ್ಟಿದ ದಿನದ ಬದಲು ಜನವರಿ ತಿಂಗಳ ಮೊದಲ ದಿನವೇ ಅವರ ಜನ್ಮದಿನ ಎಂಬ ಲೆಕ್ಕಾಚಾರದಲ್ಲಿ ಎಲ್ಲರ ವಯಸ್ಸನ್ನು ಲೆಕ್ಕ ಹಾಕಲಾಗುತ್ತದೆ. ಜಗತ್ತಿನ ಬಹುತೇಕ ಕಡೆ ಮಗು ಜನಿಸಿದ ದಿನದಿಂದ ಅದರ ಜನ್ಮದಿನಾಂಕವನ್ನು ಪರಿಗಣಿಸಲಾಗುತ್ತಿದೆ. ಈಗ ದಕ್ಷಿಣ ಕೊರಿಯಾ ಕೂಡ ಅದೇ ಅಂತಾರಾಷ್ಟ್ರೀಯ ಮಾನದಂಡವನ್ನು ಅಳವಡಿಸಿಕೊಂಡಿದೆ.

ಸಾಂಪ್ರದಾಯಿಕ ಪದ್ಧತಿಯಿಂದ ಹಲವು ಸಮಸ್ಯೆ ಸಮಸ್ಯೆಗಳಾಗುತ್ತಿವೆ. ಹೀಗಾಗಿ  ಕಳೆದ ವರ್ಷ ಅಧ್ಯಕ್ಷೀಯ ಚುನಾವಣೆಗೆ ಸ್ಪರ್ಧಿಸಿದ್ದ ಸಂದರ್ಭದಲ್ಲಿ ಅಧ್ಯಕ್ಷ ಯೂನ್ ಸುಕ್ ಎಯೋಲ್ ಅವರು ವಯೋಮಾನ ನಿರ್ಧಾರದ ವಿಧಾನದ ಬದಲಾವಣೆಗೆ ಬಲವಾಗಿ ಪ್ರತಿಪಾದಿಸಿದ್ದರು. ಸಾಂಪ್ರದಾಯಿಕ ವಯಸ್ಸು ಲೆಕ್ಕ ಹಾಕುವ ವಿಧಾನವು ಅನಗತ್ಯವಾದ ಸಾಮಾಜಿಕ ಮತ್ತು ಆರ್ಥಿಕ ಹೊರೆಗೆ ಕಾರಣವಾಗುತ್ತಿದೆ ಎಂದು ಅವರು ಹೇಳಿದ್ದರು. ವಿಮಾ ಹಣ ವಿತರಣೆಯಲ್ಲಿ, ಸರ್ಕಾರಿ ನೆರವು ಯೋಜನೆಗಳಿಗೆ ಅರ್ಹತೆ ನಿರ್ಧರಿಸುವುದು ಮುಂತಾದ ಸಂದರ್ಭಗಳಲ್ಲಿ ವಿವಾದಗಳು ಸೃಷ್ಟಿಯಾಗಿದ್ದವು. ಹೀಗಾಗಿ ದಕ್ಷಿಣ ಕೊರಿಯಾ ಸಾಂಪ್ರದಾಯಿಕ ಪದ್ಧತಿಯನ್ನು ಕೈ ಬಿಟ್ಟಿದೆ.

ಈ ಮುಂಚೆ ಶತಮಾನಗಳಷ್ಟು ಹಳೆಯದಾದ ‘ಕೊರಿಯನ್ ಏಜ್’ ಪದ್ಧತಿಯನ್ನು ಕೊರಿಯಾದಲ್ಲಿ ವ್ಯಾಪಕವಾಗಿ ಬಳಸಲಾಗುತ್ತಿತ್ತು. ಇದರಲ್ಲಿ ಮಗು ಹುಟ್ಟುವಾಗಲೇ ಒಂದು ವರ್ಷದ್ದಾಗಿದ್ದರೆ, ಜನವರಿ 1ರಂದು ಮತ್ತೆ ಒಂದು ವರ್ಷ ಹೆಚ್ಚಿಸಿಕೊಳ್ಳುತ್ತಿತ್ತು. ಇದು ಎಷ್ಟು ವಿಚಿತ್ರ ಹಾಗೂ ಗೊಂದಲಕಾರಿಯಾಗಿತ್ತು ಎಂದರೆ, ಮಗುವೊಂದು ಡಿಸೆಂಬರ್ 31ರಂದು ಜನಿಸುವಾಗ ಅದಕ್ಕೆ ಒಂದು ವರ್ಷವಾಗಿರುತ್ತದೆ. ಹಾಗೆಯೇ ಮರುದಿನವೇ, ಅಂದರೆ ಜನವರಿ 1ರಂದು ಅದು ಎರಡು ವರ್ಷಕ್ಕೆ ತಿರುಗುತ್ತದೆ. ಎರಡು ದಿನದ ಹಸುಗೂಸಿಗೆ ಕೊರಿಯಾ ಲೆಕ್ಕಾಚಾರದ ಪ್ರಕಾರ ಎರಡು ವರ್ಷವಾಗುತ್ತದೆ! ಮತ್ತೊಂದು ಪ್ರತ್ಯೇಕ ‘ವಯಸ್ಸಿನ ಲೆಕ್ಕ’ ನಿಗದಿ ಪದ್ಧತಿ ಕೂಡ ದೇಶದಲ್ಲಿ ಸಾಂಪ್ರದಾಯಿಕವಾಗಿ ಬಳಕೆಯಲ್ಲಿದೆ. ಇದು ಮಗು ಜನಿಸುವಾಗ ಅದರ ವಯಸ್ಸು ಶೂನ್ಯ. ಜನವರಿ 1ರಂದು ಅದಕ್ಕೆ ಒಂದು ವರ್ಷ ತುಂಬುತ್ತದೆ. ಈ ಲೆಕ್ಕಾಚಾರದಲ್ಲಿ, ಅಂತಾರಾಷ್ಟ್ರೀಯ ಪದ್ಧತಿಯಲ್ಲಿ 2003ರ ಜೂನ್ 29ರಂದು ಜನಿಸಿದ ವ್ಯಕ್ತಿಗೆ 2023ರ ಜೂನ್ 28ಕ್ಕೆ 19 ವರ್ಷ ಕಳೆದರೆ, ವಯಸ್ಸಿನ ಲೆಕ್ಕ ಪದ್ಧತಿಯಲ್ಲಿ ಆ ವ್ಯಕ್ತಿಗೆ 20 ವರ್ಷ ಹಾಗೆಯೇ, ಕೊರಿಯಾ ವಯೋಮಾನ ಪದ್ಧತಿ ಅಡಿ 21 ವರ್ಷ ವಯಸ್ಸು. ಸಾಂಪ್ರದಾಯಿಕ ವಯಸ್ಸಿನ ಲೆಕ್ಕಾಚಾರದ ವಿಧಾನಗಳ ವಿರುದ್ಧ ಕಳೆದ ಡಿಸೆಂಬರ್‌ನಲ್ಲಿ ಸಂಸದರು ಮತ ಚಲಾಯಿಸಿದ್ದರು.

ಈ ನಡೆಯ ಹೊರತಾಗಿಯೂ ‘ವಯಸ್ಸಿನ ಲೆಕ್ಕ’ದ ಆಧಾರದಲ್ಲಿ ವ್ಯಕ್ತಿಯ ವಯಸ್ಸನ್ನು ಅಂದಾಜಿಸುವ ಹಾಲಿ ಕ್ಯಾಲೆಂಡರ್ ವರ್ಷ ಪದ್ಧತಿ ಅಸ್ತಿತ್ವದಲ್ಲಿ ಇರಲಿದೆ. ಉದಾಹರಣೆಗೆ, ದಕ್ಷಿಣ ಕೊರಿಯಾದ ವ್ಯಕ್ತಿಗಳು ಅಂತಾರಾಷ್ಟ್ರೀಯ ಲೆಕ್ಕಾಚಾರದಲ್ಲಿ 19 ವರ್ಷಕ್ಕೆ ತಲುಪಿದ ದಿನದಂದು ಸಿಗರೇಟ್ ಮತ್ತು ಆಲ್ಕೋಹಾಲ್ ಖರೀದಿಸುವ ಅರ್ಹತೆ ಪಡೆಯುವುದಿಲ್ಲ. ಅದು ಆ ಕ್ಯಾಲೆಂಡರ್ ವರ್ಷದಿಂದ ಅನ್ವಯವಾಗುವಂತೆ ಅರ್ಹತೆ ಪಡೆಯಲಿದ್ದಾರೆ. ಸಾಂಪ್ರದಾಯಿಕ ವಯಸ್ಸು ನಿಗದಿ ವಿಧಾನಗಳು ಪೂರ್ವ ಏಷ್ಯಾದ ಇತರೆ ದೇಶಗಳಲ್ಲಿಯೂ ಬಳಕೆಯಲ್ಲಿದ್ದವು. ಆದರೆ ಬಹುತೇಕ ದೇಶಗಳು ಅವುಗಳನ್ನು ಕೈಬಿಟ್ಟಿದ್ದವು. ಜಪಾನ್ 1950ರಲ್ಲಿ ಅಂತಾರಾಷ್ಟ್ರೀಯ ಮಾನದಂಡವನ್ನು ಆರಂಭಿಸಿತ್ತು. ಉತ್ತರ ಕೊರಿಯಾ ಕೂಡ 1980ರ ದಶಕದಲ್ಲಿ ತನ್ನ ಸಾಂಪ್ರದಾಯಿಕ ಪದ್ಧತಿಯನ್ನು ರದ್ದುಗೊಳಿಸಿತ್ತು.

suddiyaana