ದಕ್ಷಿಣ ಭಾರತ ಗಾಂಧಿ ಕುಟುಂಬಕ್ಕೆ ಯಾವಗೆಲ್ಲಾ ಕೈ ಹಿಡಿದಿದೆ ?
ಇಂದಿರಾ, ಸೋನಿಯಾ ‘ಕೈ’ ಹಿಡಿದ ಕರುನಾಡು

ದಕ್ಷಿಣ ಭಾರತ ಗಾಂಧಿ ಕುಟುಂಬಕ್ಕೆ ಯಾವಗೆಲ್ಲಾ ಕೈ ಹಿಡಿದಿದೆ ?ಇಂದಿರಾ, ಸೋನಿಯಾ ‘ಕೈ’ ಹಿಡಿದ ಕರುನಾಡು

ನಮ್ಮ ದಕ್ಷಿಣ ಭಾರತ ಜನರಿದ್ದಾರೆ ನೋಡಿ.. ಅವರಷ್ಟು ಹೃದಯವಂತರು ಯಾರು ಇಲ್ಲ.. ಹೊರನಿಂದ ಬಂದವರಿಗೆ ಪ್ರೀತಿ ಕೊಟ್ಟು ಬೆಳಸಿ ಹಾರೈಸುವ ಗುಣದವರು.. ಒಳ್ಳೆಯ ಮನಸ್ಸಿನ ಮುಗ್ಧ ಜನರು.. ಹೀಗಾಗಿಯೇ ಉತ್ತರದವರು ಹೆಚ್ಚಾಗಿ ಇಲ್ಲಿ ಬಂದು ನೆಲೆ ಕಟ್ಟಿಕೊಂಡಿದ್ದಾರೆ. ವ್ಯಾಪರ ವ್ಯವಹಾರ ಸೇರಿದಂತೆ ರಾಜಕೀಯದಲ್ಲೂ ತಮ್ಮನ್ನ ತೊಡಗಿಸಿಕೊಂಡಿದ್ದಾರೆ. ಅದರಲ್ಲೂ ಗಾಂಧಿ ಕುಟುಂಬಕ್ಕೆ ಸಂಕಷ್ಟ ಬಂದಾಗ ಕೈ ಹಿಡಿದಿದ್ದು ದಕ್ಷಿಣ ಭಾರತ ಅಂದ್ರೆ ತಪ್ಪಿಲ್ಲ.. ಗಾಂಧಿ ಕುಟಂಬಕ್ಕೆ ದಕ್ಷಿಣ ಭಾರತವೇ ಸಂಜೀವಿನಿಯಾಗಿದೆ. ಹಾಗಿದ್ರೆ ದಕ್ಷಿಣ ಭಾರತ ಗಾಂಧಿ ಕುಟುಂಬಕ್ಕೆ ಯಾವಗೆಲ್ಲಾ ಕೈ ಹಿಡಿದಿದೆ ಅನ್ನೋದನ್ನ ನೋಡೋಣ..

ರಾಜಕೀಯದಲ್ಲಿ ಸಂಕಷ್ಟ ಎದುರಾದಾಗಲೆಲ್ಲ ಕಾಂಗ್ರೆಸ್ ನಾಯಕರು ಆಯ್ಕೆ ಮಾಡಿಕೊಂಡಿದ್ದು ದಕ್ಷಿಣ ಭಾರತವನ್ನೇ. ಇಂದಿರಾ ಗಾಂಧಿ, ಸೋನಿಯಾ ಗಾಂಧಿ ಕರ್ನಾಟಕದಿಂದ ರಾಜಕೀಯ ಮರುಜೀವ ಪಡೆದರೆ ರಾಹುಲ್ ಗಾಂಧಿಗೆ ಕೇರಳ ರಾಜಕೀಯದಲ್ಲಿ ಭದ್ರ ಬುನಾದಿ ಹಾಕಿಕೊಟ್ಟಿತು. ಇದೀಗ ಪ್ರಿಯಾಂಕಾ ಗಾಂಧಿ ಕೂಡ ದಕ್ಷಿಣ ಭಾರತದ ರಾಜ್ಯವಾದ ಕೇರಳದಲ್ಲೇ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ. ಭಾರತದ ರಾಜಕೀಯದಲ್ಲಿ ಕಾಂಗ್ರೆಸ್‌ಗೆ ಬಿಕ್ಕಟ್ಟು ಹೆಚ್ಚಾದಾಗಲೆಲ್ಲಾ ಅದಕ್ಕೆ ಪರಿಹಾರ ಸಿಕ್ಕಿದ್ದು ಉತ್ತರ ಭಾರತದಿಂದಲ್ಲ. ಅದರ ಬದಲು ದಕ್ಷಿಣ ಭಾರತದಿಂದ ಕಾಂಗ್ರೆಸ್​ನ ಗಾಂಧಿ ಕುಟುಂಬಕ್ಕೆ ಹಲವು ಬಾರಿ ರಾಜಕೀಯದಲ್ಲಿ ಮರುಜೀವ ಸಿಕ್ಕಿದೆ. ಕಾಂಗ್ರೆಸ್‌ ಇತಿಹಾಸದಲ್ಲಿ ದಕ್ಷಿಣ ಭಾರತ ಬಹಳ ಮುಖ್ಯ ಪಾತ್ರ ವಹಿಸಿದೆ. ರಾಜಕೀಯ ಸಂಕಷ್ಟಕ್ಕೆ ಸಿಲುಕಿದ್ದ ಇಂದಿರಾ ಗಾಂಧಿಯಿಂದ ಹಿಡಿದು ಸೋನಿಯಾ ಗಾಂಧಿ, ರಾಹುಲ್ ಗಾಂಧಿಯವರೆಗೆ ಎಲ್ಲರಿಗೂ ಹೊಸ ಶಕ್ತಿ ನೀಡಿರುವ ದಕ್ಷಿಣ ಭಾರತದ ರಾಜ್ಯಗಳಾದ ಕರ್ನಾಟಕ ಮತ್ತು ಕೇರಳ ಗಾಂಧಿ ಕುಟುಂಬದ ರಾಜಕೀಯ ಪ್ರತಿಷ್ಠೆ ಉಳಿಸುವ ಕೆಲಸ ಮಾಡಿದೆ. ಇದೀಗ ಪ್ರಿಯಾಂಕಾ ಗಾಂಧಿ ಕೂಡ ದಕ್ಷಿಣ ಭಾರತದಿಂದಲೇ ತಮ್ಮ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ.

ಇಂದಿರಾ ಗಾಂಧಿ ಅದೃಷ್ಟ ಬದಲಾಯಿಸಿದ್ದು ನಮ್ಮ ಚಿಕ್ಕಮಗಳೂರು

ತುರ್ತು ಪರಿಸ್ಥಿತಿಯ ನಂತರ ಇಂದಿರಾಗಾಂಧಿ ರಾಯ್ ಬರೇಲಿ ಕ್ಷೇತ್ರದಿಂದ ಗೆಲ್ಲಲು ಕಷ್ಟವಾದಾಗ, ಕರ್ನಾಟಕದ ಚಿಕ್ಕಮಗಳೂರು ಕ್ಷೇತ್ರವು ಅವರ ರಾಜಕೀಯ ಜೀವನಕ್ಕೆ ಜೀವಸೆಲೆಯಾಗಿತ್ತು. ಸ್ವತಃ ಇಂದಿರಾ ಗಾಂಧಿಯವರು ಸಮಾಜವಾದಿ ನಾಯಕ ರಾಜ್ ನಾರಾಯಣ್ ವಿರುದ್ಧ ರಾಯ್ ಬರೇಲಿ ಕ್ಷೇತ್ರದಿಂದ ಸ್ಪರ್ಧಿಸಿ ಸೋತಿದ್ದರು. ಇಂತಹ ಪರಿಸ್ಥಿತಿಯಲ್ಲಿ ಕರ್ನಾಟಕದ ಚಿಕ್ಕಮಗಳೂರು ಕ್ಷೇತ್ರ ಇಂದಿರಾಗಾಂಧಿಯವರಿಗೆ ಮಾತ್ರವಲ್ಲದೆ ಕಾಂಗ್ರೆಸ್ಸಿಗೂ ರಾಜಕೀಯ ಭದ್ರಕೋಟೆಯಾಗಿ ಪರಿಣಮಿಸಿತು.

ಚಿಕ್ಕಮಗಳೂರಿನಿಂದ ಇಂದಿರಾ ಗಾಂಧಿ ಸ್ಪರ್ಧೆ

1978ರಲ್ಲಿ ಇಂದಿರಾ ಗಾಂಧಿ ಕರ್ನಾಟಕದ ಚಿಕ್ಕಮಗಳೂರು ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸಿದ್ರು.  ಚಿಕ್ಕಮಗಳೂರಿನಿಂದ ಹಾಲಿ ಸಂಸದ ಡಿ.ಬಿ.ಗೌಡರ ರಾಜೀನಾಮೆಯಿಂದ ತೆರವಾದ ಸ್ಥಾನಕ್ಕೆ ಇಂದಿರಾಗಾಂಧಿ ಕಾಲಿಟ್ಟಾಗ ಪ್ರತಿಸ್ಪರ್ಧಿಯಾಗಿದ್ದ ಸಿಎಂ ವೀರೇಂದ್ರ ಪಾಟೀಲರನ್ನು ಎದುರಿಸುವುದು ಅವರ ಸವಾಲಾಗಿತ್ತು. ಇಂತಹ ಪರಿಸ್ಥಿತಿಯಲ್ಲಿ ಇಂದಿರಾಗಾಂಧಿ ಅವರು ಬಿರುಸಿನ ಪ್ರಚಾರ ನಡೆಸಿ ಇಡೀ ರಾಜಕೀಯ ವಾತಾವರಣವನ್ನೇ ಬದಲಿಸಿದರು. ಈ ವೇಳೆ ಕಾಂಗ್ರೆಸ್ ಮುಖಂಡ ದೇವರಾಜ್ ಅರಸ್ ಇಂದಿರಾಗಾಂಧಿ ಪರ ಪ್ರಚಾರ ಮಾಡಿ  ಘೋಷಣೆ ಕೂಗಿದರು. ಇದು ಚಿಕ್ಕಮಂಗಳೂರಿನಲ್ಲಿ ಪ್ರತಿಧ್ವನಿಸಿತು. ಇಂದಿರಾಗಾಂಧಿ 77 ಸಾವಿರ ಮತಗಳ ಭಾರೀ ಅಂತರದಿಂದ ಗೆದ್ದರು. 3 ವರ್ಷಗಳ ನಂತರ ಕಾಂಗ್ರೆಸ್ ಭಾರಿ ಬಹುಮತದೊಂದಿಗೆ ಅಧಿಕಾರಕ್ಕೆ ಬಂದಿದ್ದರಿಂದ ಕಾಂಗ್ರೆಸ್‌ನಲ್ಲಿ ಉತ್ತಮ ರಾಜಕೀಯ ವಾತಾವರಣ ನಿರ್ಮಾಣವಾಯಿತು. 1980ರಲ್ಲಿ ಇಂದಿರಾ ಗಾಂಧಿ ಮತ್ತೊಮ್ಮೆ ದೇಶದ ಪ್ರಧಾನಿಯಾದರು. ಇದಾದ ನಂತರ ಇಂದಿರಾ ಗಾಂಧಿಯವರು ದಕ್ಷಿಣ ಭಾರತವನ್ನು ತಮ್ಮ ಕಾರ್ಯಕ್ಷೇತ್ರವನ್ನಾಗಿ ಮಾಡಿಕೊಂಡರು. ಇಂದಿರಾ ಗಾಂಧಿಯವರು 1980ರಲ್ಲಿ ತೆಲಂಗಾಣದ ಮೇದಕ್ ಮತ್ತು ಉತ್ತರ ಪ್ರದೇಶದ ರಾಯ್ ಬರೇಲಿ ಸ್ಥಾನಗಳಿಂದ ಸ್ಪರ್ಧಿಸಿದರು. ಇಂದಿರಾ ಎರಡೂ ಲೋಕಸಭಾ ಸ್ಥಾನಗಳನ್ನು ಗೆದ್ದರು. ಆದರೆ ಅವರು ರಾಯ್ ಬರೇಲಿಗೆ ರಾಜೀನಾಮೆ ನೀಡಿ ಮೇದಕ್ ಸ್ಥಾನವನ್ನು ತಾವೇ ಇಟ್ಟುಕೊಂಡಿದ್ದರು. ಇದರಿಂದ ಇಂದಿರಾಗಾಂಧಿಯವರ ದಕ್ಷಿಣದ ಒಲವು ತಿಳಿಯುತ್ತದೆ. ಇಂದಿರಾ ಗಾಂಧಿಯವರ ಹತ್ಯೆಯ ನಂತರ ರಾಜೀವ್ ಗಾಂಧಿ ಪಕ್ಷದತ್ತ ಮುಖ ಮಾಡಿದರು. ಉತ್ತರದಿಂದ ದಕ್ಷಿಣದವರೆಗೆ ಎಲ್ಲರೂ ಅವರನ್ನು ಬೆಂಬಲಿಸಿದರು. ಆದರೆ 1989ರಲ್ಲಿ ಉತ್ತರ ಭಾರತದಿಂದ ಕಾಂಗ್ರೆಸ್‌ ನಿರ್ನಾಮವಾಯಿತು. ಆದರೆ ದಕ್ಷಿಣ ತನ್ನ ಘನತೆಯನ್ನು ಉಳಿಸಿಕೊಂಡಿದೆ.

ಬಳ್ಳಾರಿಯಿಂದ ಸೋನಿಯಾ ಗಾಂಧಿ ಸ್ಪರ್ಧೆ

1991ರಲ್ಲಿ ರಾಜೀವ್ ಗಾಂಧಿ ಹತ್ಯೆಯ ನಂತರ ಕಾಂಗ್ರೆಸ್ ಸಂಪೂರ್ಣ ನೆಲಕಚ್ಚಿತು. ಕಾಂಗ್ರೆಸ್‌ಗೆ ನಾಯಕತ್ವದ ಕೊರತೆ ಎದುರಾಗಿತ್ತು. ಸೋನಿಯಾ ಗಾಂಧಿ ಆರಂಭದಲ್ಲಿ ಪಕ್ಷದ ನೇತೃತ್ವ ವಹಿಸಲು ನಿರಾಕರಿಸಿದರು. ಆದರೆ, ಎಲ್ಲರ ಒತ್ತಾಯದ ನಂತರ ಪಕ್ಷದ ಅಧ್ಯಕ್ಷರಾದರು. ಆಗ ಬಿಜೆಪಿ ನಾಯಕಿ ಸುಷ್ಮಾ ಸ್ವರಾಜ್ ಇದನ್ನು ಬಹಿರಂಗವಾಗಿಯೇ ವಿರೋಧಿಸಿದ್ದರು. ಆ ನಂತರ ಸೋನಿಯಾ ಗಾಂಧಿ ಅವರಿಗೆ ರಾಜಕೀಯ ಬಲ ಸಿಕ್ಕಿದ್ದು ದಕ್ಷಿಣ ಭಾರತದಿಂದ.

1999ರ ಚುನಾವಣೆಯಲ್ಲಿ ಸೋನಿಯಾ ಗಾಂಧಿ ಕರ್ನಾಟಕದ ಬಳ್ಳಾರಿ ಮತ್ತು ಉತ್ತರ ಪ್ರದೇಶದ ಅಮೇಥಿ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿದ್ದರು. ಬಳ್ಳಾರಿಯಲ್ಲಿ ಅವರ ಎದುರಾಳಿಯಾಗಿದ್ದ ಬಿಜೆಪಿ ನಾಯಕಿ ಸುಷ್ಮಾ ಸ್ವರಾಜ್ ಕೇವಲ 30 ದಿನಗಳಲ್ಲಿ ಕನ್ನಡ ಕಲಿತರು. ಸೋನಿಯಾ ಗಾಂಧಿ ಅವರು ತಮ್ಮ ಸಾರ್ವಜನಿಕ ಸಭೆಗಳಲ್ಲಿ ಹಿಂದಿಯಲ್ಲಿ ಮಾತನಾಡುವಾಗ ಸುಷ್ಮಾ ಸ್ವರಾಜ್ ಕನ್ನಡದಲ್ಲಿ ಮಾತನಾಡಿ ಜನರ ಮನಸು ಗೆದ್ದರು. ಸೋನಿಯಾ ಗಾಂಧಿಗೆ ಇದು ಮೊದಲ ಚುನಾವಣೆಯಾದರೂ ಸುಷ್ಮಾ ಸ್ವರಾಜ್ ಪರವಾದ ಅಲೆ ಕಾಂಗ್ರೆಸ್ಗೆ ಆತಂಕ ಹೆಚ್ಚಿಸಿತು. ಆದರೆ, ಆ ಚುನಾವಣೆಯಲ್ಲಿ ಸುಷ್ಮಾ ಸ್ವರಾಜ್ ವಿರುದ್ಧ ಸೋನಿಯಾ ಗಾಂಧಿ ಗೆಲುವು ಸಾಧಿಸಿದರು. ಬಳ್ಳಾರಿ ಕ್ಷೇತ್ರವು ರಾಷ್ಟ್ರ ರಾಜಕಾರಣದಲ್ಲಿ ಅತ್ಯಂತ ಮಹತ್ವದ್ದಾಗಿದೆ. ಸುಷ್ಮಾ ಸ್ವರಾಜ್ ನಿಮ್ಮ ಮನೆ ಮಗಳು, ಸೋನಿಯಾ ಗಾಂಧಿ ವಿದೇಶಿ ಸೊಸೆ ಎಂದು ಜನರ ಬಳಿ ಹೇಳಿಕೊಂಡು ಬಿಜೆಪಿ ಸಾಕಷ್ಟು ಪ್ರಯತ್ನ ಮಾಡಿದರೂ ಸೋನಿಯಾ ಗಾಂಧಿ ಗೆಲ್ಲುವಲ್ಲಿ ಯಶಸ್ವಿಯಾದರು. ದಕ್ಷಿಣದ ರಾಜಕೀಯ ಕಾಂಗ್ರೆಸ್ ಅನ್ನು ರಾಜಕೀಯ ಎತ್ತರಕ್ಕೆ ಕೊಂಡೊಯ್ದಿತು.

1996ರ ನಂತರ ಸೋನಿಯಾ ಗಾಂಧಿಯವರು 10 ವರ್ಷಗಳ ಕಾಲ ಅಧಿಕಾರದಿಂದ ರಾಜಕೀಯ ವನವಾಸವನ್ನು ಎದುರಿಸಿದ ನಂತರ 2004ರಲ್ಲಿ ಕಾಂಗ್ರೆಸ್ ಅನ್ನು ಮತ್ತೆ ಅಧಿಕಾರಕ್ಕೆ ತಂದರು. ದಕ್ಷಿಣದ ರಾಜ್ಯಗಳು, ವಿಶೇಷವಾಗಿ ಆಂಧ್ರಪ್ರದೇಶ ಕೇಂದ್ರದಲ್ಲಿ ಕಾಂಗ್ರೆಸ್ ಅನ್ನು ಅಧಿಕಾರಕ್ಕೆ ತರುವಲ್ಲಿ ಪ್ರಮುಖ ಪಾತ್ರ ವಹಿಸಿದೆ. ನಂತ್ರ  ನರೇಂದ್ರ ಮೋದಿ ಆಡಳಿತದಲ್ಲಿ ಕಾಂಗ್ರೆಸ್‌ನ ರಾಜಕೀಯ ಪರಿಸ್ಥಿತಿ ಹದಗೆಟ್ಟು,  ಗಾಂಧಿ ಕುಟುಂಬದ ಕೋಟೆಯೂ ಕುಸಿಯಿತು. 2014ರಲ್ಲಿ ಕಾಂಗ್ರೆಸ್ 50 ಸ್ಥಾನಗಳಿಗಿಂತ ಕೆಳಗಿಳಿದಿತ್ತು. ಉತ್ತರ ಭಾರತದ ಹಲವು ರಾಜ್ಯಗಳಲ್ಲಿ ಕಾಂಗ್ರೆಸ್ ತನ್ನ ಖಾತೆ ತೆರೆಯಲೂ ಸಾಧ್ಯವಾಗಿಲ್ಲ. ಇದಾದ ಬಳಿಕ 2019ರಲ್ಲಿ ಉತ್ತರ ಭಾರತದಿಂದ ಕಾಂಗ್ರೆಸ್‌ಗೆ ಮತ್ತೊಂದು ಆಘಾತ ಎದುರಾಗಿತ್ತು. ಅಮೇಥಿ ಚುನಾವಣೆಯಲ್ಲಿ ಬಿಜೆಪಿಯ ಸ್ಮೃತಿ ಇರಾನಿ ವಿರುದ್ಧ ರಾಹುಲ್ ಗಾಂಧಿ ಸೋತಿದ್ದರು.

ಅಮೇಥಿಯಿಂದ ರಾಹುಲ್ ಗಾಂಧಿ ಸೋತರೂ ವಯನಾಡ್ ಅವರನ್ನು ಉಳಿಸಿದ್ದು ಮಾತ್ರವಲ್ಲದೆ ಕಾಂಗ್ರೆಸ್ ಬೆಳೆಯಲು ದಾರಿ ತೋರಿಸಿತು  ಮೋದಿ ಆಡಳಿತದಲ್ಲಿ ಮುಳುಗಿದ್ದ ಕಾಂಗ್ರೆಸ್ ರಾಜಕಾರಣ ವಯನಾಡಿನಿಂದಾಗಿ ಮತ್ತೆ ಮರುಜೀವ ಪಡೆದಿತ್ತು. 2019ರಲ್ಲಿ ಕೇರಳದಲ್ಲಿ ಕಾಂಗ್ರೆಸ್ ಕ್ಲೀನ್ ಸ್ವೀಪ್ ಮಾಡಿತು ಮತ್ತು ಪಕ್ಷದ ಸ್ಥಾನಗಳು 50ರ ಗಡಿ ದಾಟಿತು. ರಾಹುಲ್ ಗಾಂಧಿ 2024 ರಲ್ಲಿ ರಾಯ್ ಬರೇಲಿ ಮತ್ತು ವಯನಾಡ್ನಿಂದ ಸ್ಪರ್ಧಿಸಿ ಗೆದ್ದಿದ್ದರು. 2024ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ 99 ಸಂಸದೀಯ ಸ್ಥಾನಗಳನ್ನು ಗೆದ್ದುಕೊಂಡಿತು, ಇದರಲ್ಲಿ ದಕ್ಷಿಣ ಭಾರತದ ರಾಜ್ಯಗಳು ಪ್ರಮುಖ ಪಾತ್ರ ವಹಿಸಿವೆ. ಕರ್ನಾಟಕ, ಕೇರಳ, ತೆಲಂಗಾಣ ಮತ್ತು ತಮಿಳುನಾಡು ರಾಜ್ಯಗಳಲ್ಲಿ ಕಾಂಗ್ರೆಸ್ ಉತ್ತಮ ಸಾಧನೆ ಮಾಡಿದೆ. ರಾಹುಲ್ ಗಾಂಧಿ 2019 ಮತ್ತು 2024ರ ಚುನಾವಣೆಯಲ್ಲಿ ಕೇರಳದ ವಯನಾಡಿನಿಂದ ಸ್ಪರ್ಧಿಸಿದ್ದು ಕಾಂಗ್ರೆಸ್‌ಗೆ ಲಾಭ ತಂದಿದೆ.

 ವಯನಾಡ್‌ನಿಂದ ಪ್ರಿಯಾಂಕಾ ಗಾಂಧಿ ಅಖಾಡಕ್ಕೆ 

ಇಂತಹ ಪರಿಸ್ಥಿತಿಯಲ್ಲಿ ದಕ್ಷಿಣದಲ್ಲಿ ತನ್ನ ಹಿಡಿತವನ್ನು ಯಾವುದೇ ಸಂದರ್ಭದಲ್ಲೂ ಸಡಿಲಿಸಬಾರದು ಎಂದು ಕಾಂಗ್ರೆಸ್ ಭಾವಿಸಿದೆ. ಅದಕ್ಕಾಗಿಯೇ ರಾಹುಲ್ ಗಾಂಧಿ ವಯನಾಡ್ ಕ್ಷೇತ್ರದಿಂದ ಹಿಂದೆ ಸರಿದ ನಂತರ,  ಪ್ರಿಯಾಂಕಾ ಗಾಂಧಿ ಅವರನ್ನು ಲೋಕಸಭಾ ಉಪಚುನಾವಣೆಯ ಅಭ್ಯರ್ಥಿಯಾಗಿ ಕಣಕ್ಕೆ ಇಳಿಸಲಾಗಿದೆ. ಬಿಜೆಪಿಯ ರಾಜಕೀಯ ಬೇರುಗಳು ಉತ್ತರ ಭಾರತದಲ್ಲಿ ಬಹಳ ಪ್ರಬಲವಾಗಿವೆ. ಆದರೆ ದಕ್ಷಿಣ ಭಾರತ ಕಾಂಗ್ರೆಸ್‌ಗೆ ಸುರಕ್ಷಿತ ಮಾರ್ಗವಾಗಿದೆ. ಈಗ ವಯನಾಡಿನಲ್ಲಿ ಇರೋ ಜನ ಬೆಂಬಲ ನೋಡಿ ಪ್ರಿಯಾಂಕ ಗಾಂಧಿ ಅಲ್ಲಿ ಗೆಲುವು ಸಾಧಿಸೋದು ಪಕ್ಕಾ ಎನ್ನಲಾಗುತ್ತಿದೆ. ಗಾಂಧಿ ಕುಟುಂಬಕ್ಕೆ ದಕ್ಷಿಣ ಭಾರತ ರಾಜಕೀಯ ಮರು ಜೀವ ನೀಡುತ್ತಿದ್ದು, ಕೈ ಪಾಲಿಗೆ ಸಂಜೀವಿನಿಯಾಗಿದೆ.

Kishor KV

Leave a Reply

Your email address will not be published. Required fields are marked *