ವಿಶ್ವಕಪ್ ಟೂರ್ನಿಯಲ್ಲಿ ಸೌತ್ಆಫ್ರಿಕಾ ಬೊಂಬಾಟ್ ಆಟ – ಸ್ಟ್ರಾಂಗ್ ಟೀಮ್‌ನ ಟಾರ್ಗೆಟ್ ಏನು?

ಈ ಬಾರಿಯ ವರ್ಲ್ಡ್ಕಪ್ನಲ್ಲಿ ಸೌತ್ ಆಫ್ರಿಕಾ ಟೀಂ ಚೆನ್ನಾಗಿಯೇ ಆಡುತ್ತಿದೆ. ಮೊದಲು ಬ್ಯಾಟಿಂಗ್ ಮಾಡಿದರೆ, ಆಫ್ರಿಕನ್ನರಿಗೆ 300ಕ್ಕಿಂತ ಹೆಚ್ಚು ಸ್ಕೋರ್ ಮಾಡದೆ ಇದ್ದರೆ ನಿದ್ರೆ ಬರುವುದೇ ಇಲ್ವೇನೋ. ಈ ಹಿಂದಿನ ವಿಶ್ವಕಪ್ ಟೂರ್ನಿಗಳಲ್ಲೂ ದಕ್ಷಿಣ ಆಫ್ರಿಕಾ ಉತ್ತಮ ಪ್ರದರ್ಶನ ನೀಡುತ್ತಲೇ ಬಂದಿದೆ. ಆದರೆ, ಸೆಮಿಫೈನಲ್ ನಲ್ಲಿ ಎಡವಿದ್ದೇ ಹೆಚ್ಚು. ಇದುವರೆಗೂ ಒಂದೇ ಒಂದು ಬಾರಿ ದಕ್ಷಿಣ ಆಫ್ರಿಕಾ ವರ್ಲ್ಡ್ಕಪ್ ಗೆದ್ದಿಲ್ಲ. ಹೀಗಾಗಿಯೇ ಚೋಕರ್ಸ್ ಅನ್ನೋ ಹಣೆಪಟ್ಟಿಯನ್ನ ಕಟ್ಟಿಕೊಂಡಿದ್ದಾರೆ. ಆದ್ರೆ ಈ ಬಾರಿ ದಕ್ಷಿಣ ಆಫ್ರಿಕಾ ಕ್ಯಾಪ್ಟನ್ ಟೆಂಬ ಬವುಮಾ ಚೋಕರ್ಸ್ ಪಟ್ಟಿಯನ್ನ ಕಳಚಲೇಬೇಕು ಅನ್ನೋ ನಿರ್ಧಾರಕ್ಕೆ ಬಂದಂತಿದೆ.
ಇದನ್ನೂ ಓದಿ: ಟೀಮ್ ಇಂಡಿಯಾ ಫೀಲ್ಡಿಂಗ್‌ನಲ್ಲೂ ಸಖತ್ ಪವರ್ – ಮ್ಯಾಚ್‌ನ ಬೆಸ್ಟ್ ಫೀಲ್ಡರ್‌ಗೆ ಗೋಲ್ಡ್ ಮೆಡಲ್
ಈ ಬಾರಿಯ ವರ್ಲ್ಡ್ಕಪ್ನಲ್ಲಿ ಇದುವರೆಗೆ ದಕ್ಷಿಣ ಆಫ್ರಿಕಾ ಆಡಿರುವ 7 ಮ್ಯಾಚ್ಗಳ ಪೈಕಿ 6 ಪಂದ್ಯಗಳನ್ನ ಗೆದ್ದುಕೊಂಡಿದೆ. ಬ್ಯಾಟಿಂಗ್, ಬೌಲಿಂಗ್, ಫೀಲ್ಡಿಂಗ್ನಲ್ಲಂತೂ ಕೇಳೋದೆ ಬೇಡ. ಸೌತ್ ಆಫ್ರಿಕನ್ನರು ಯಾವತ್ತಿಗೂ ಟಾಪ್ ಕ್ಲಾಸ್. ಬೇರೆಲ್ಲಾ ತಂಡಗಳಿಗೆ ಕಂಪೇರ್ ಮಾಡಿದ್ರೆ ಸದ್ಯ ಟೀಂ ಇಂಡಿಯಾಗೆ ದೊಡ್ಡ ಮಟ್ಟದ ಚಾಲೆಂಜ್ ಆಗಿರೋದು ಅಂದ್ರೆ ದಕ್ಷಿಣ ಆಫ್ರಿಕಾವೇ. ಆಸ್ಟ್ರೇಲಿಯಾವನ್ನ ಸೋಲಿಸಿದ್ದಾಯ್ತು, ನ್ಯೂಜಿಲ್ಯಾಂಡ್ನ್ನ ಕೂಡ ಮಣಿಸಿದ್ದಾಯ್ತು.. ಬಾಕಿ ಇರೋ ಸ್ಟ್ರಾಂಗ್ ಟೀಂ ಅಂದ್ರೆ ದಕ್ಷಿಣ ಆಫ್ರಿಕಾವೇ. ಈ ಬಾರಿಯ ವರ್ಲ್ಡ್ಕಪ್ನಲ್ಲಿ ಒಂದು ತಂಡವಾಗಿ ಸೌತ್ ಆಫ್ರಿಕಾ ತುಂಬಾನೆ ಸ್ಟ್ರಾಂಗ್ ಆಗಿ ಕಾಣ್ತಿದೆ. ಅದ್ರಲ್ಲೂ ವಿಕೆಟ್ ಕೀಪರ್ ಬ್ಯಾಟ್ಸ್ಮನ್ ಕ್ವಿಂಟನ್ ಡಿಕಾಕ್ ಅಂತಾ ನಾಲ್ಕು ಸೆಂಚೂರಿ ಹೊಡೆದಿದ್ದಾರೆ. ದಕ್ಷಿಣ ಆಫ್ರಿಕಾದ ಮಿಡ್ಲ್ ಆರ್ಡರ್ ಬ್ಯಾಟ್ಸ್ಮನ್ಗಳಂತೂ ಪ್ರತಿ ಮ್ಯಾಚ್ನಲ್ಲೂ ಸ್ಕೋರ್ ಮಾಡ್ತಿದ್ದಾರೆ. ಏಡೆನ್ ಮಾರ್ಕ್ರಮ್, ಹ್ರೆನ್ರಿಚ್ ಕ್ಲಾಸೆನ್ ಮತ್ತು ಡೇವಿಡ್ ಮಿಲ್ಲರ್ ದಕ್ಷಿಣ ಆಫ್ರಿಕಾ ಸ್ಕೋರ್ನ್ನ ಪ್ರತಿ ಬಾರಿಯೂ 300 ಮೇಲೆ ಕ್ರಾಸ್ ಮಾಡಿಸ್ತಿದ್ದಾರೆ. ದಾಖಲೆಗಳ ಮೇಲೆ ದಾಖಲೆಗಳನ್ನ ಸೃಷ್ಟಿಸ್ತಿದ್ದಾರೆ.
ಅತೀ ಹೆಚ್ಚು ಸಿಕ್ಸರ್ ಸಿಡಿಸಿದ ಟೀಂ ದಕ್ಷಿಣ ಆಫ್ರಿಕಾ!
ದಕ್ಷಿಣ ಆಫ್ರಿಕಾದ ದಾಂಡಿಗರು ಬ್ಯಾಟ್ ಬೀಸಿದ್ರೆ ಸಾಕು ಬಾಲ್ ಸ್ಟ್ಯಾಂಡ್ ಮೇಲೆ ಹೋಗಿ ಬಿದ್ದಿರುತ್ತೆ. ಈ ವರ್ಲ್ಡ್ಕಪ್ನಲ್ಲಿ 7 ಮ್ಯಾಚ್ಗಳಲ್ಲಿ ಸೌತ್ ಆಫ್ರಿಕಾ ಬ್ಯಾಟ್ಸ್ಮನ್ಗಳು ಒಟ್ಟು 82 ಸಿಕ್ಸರ್ಗಳನ್ನ ಹೊಡೆದಿದ್ದಾರೆ. ಈ ವಿಶ್ವಕಪ್ನಲ್ಲಿ ದಕ್ಷಿಣ ಆಫ್ರಿಕನ್ನರು ಸಿಕ್ಸರ್ಗಳದ್ದೇ ಸೆಂಚೂರಿ ಬಾರಿಸಿದ್ರೂ ಆಶ್ಚರ್ಯ ಇಲ್ಲ. 2019ರಲ್ಲಿ ಇಂಗ್ಲೆಂಡ್ ವರ್ಲ್ಡ್ಕಪ್ನಲ್ಲಿ 11 ಮ್ಯಾಚ್ಗಳಲ್ಲಿ ಒಟ್ಟು 76 ಸಿಕ್ಸರ್ಗಳನ್ನ ಸಿಡಿಸಿತ್ತು. 2015ರಲ್ಲಿ ವೆಸ್ಟ್ಇಂಡೀಸ್ 68 ಸಿಕ್ಸರ್ಗಳನ್ನ ಹೊಡೆದಿತ್ತು. ಇನ್ನು 2007ರಲ್ಲಿ ಆಸ್ಟ್ರೇಲಿಯಾ ಒಟ್ಟು 67 ಸಿಕ್ಸರ್ಗಳನ್ನ ಬಾರಿಸಿತ್ತು. ಈ ಎಲ್ಲಾ ದಾಖಲೆಗಳನ್ನ ಈ ಎಲ್ಲಾ ದಾಖಲೆಗಳನ್ನ ಈಗ ದಕ್ಷಿಣ ಆಫ್ರಿಕಾ ಉಡೀಸ್ ಮಾಡಿದೆ.
ದ.ಆಫ್ರಿಕಾ ಬೌಲರ್ಗೆ ಪವರ್ ಪ್ಲೇನಲ್ಲಿ ಅತೀ ಹೆಚ್ಚು ವಿಕೆಟ್!
ಒಂದೆಡೆ ಬ್ಯಾಟ್ಸ್ಮನ್ಗಳು ಸಿಕ್ಸರ್ಗಳ ಸುರಿಮಳೆಗೆರೆಯುತ್ತಿದ್ರೆ ಮತ್ತೊಂದೆಡೆ ದಕ್ಷಿಣ ಆಫ್ರಿಕಾ ಬೌಲರ್ಸ್ ಪವರ್ ಪ್ಲೇನಲ್ಲೇ ವಿಕೆಟ್ಗಳನ್ನ ಉರುಳಿಸೋ ಮೂಲಕ ರೆಕಾರ್ಡ್ ಮಾಡ್ತಿದ್ದಾರೆ. 7 ಮ್ಯಾಚ್ಗಳಲ್ಲಿ ಪವರ್ಪ್ಲೇನಲ್ಲಿ ದಕ್ಷಿಣ ಆಫ್ರಿಕಾದ ಆಲ್ರೌಂಡರ್ ಮಾರ್ಕೊ ಜೇನ್ಸನ್ ಒಟ್ಟು 12 ವಿಕೆಟ್ಗಳನ್ನ ಪಡೆದಿದ್ದಾರೆ. ಇದುವರೆಗೂ ವರ್ಲ್ಡ್ಕಪ್ನಲ್ಲಿ ಪವರ್ಪ್ಲೇನಲ್ಲಿ ಇಷ್ಟೊಂದು ವಿಕೆಟ್ಗಳನ್ನ ಯಾವೊಬ್ಬ ಬೌಲರ್ ಕೂಡ ಪಡೆದಿಲ್ಲ.
ಕ್ವಿಂಟನ್ ಡಿಕಾಕ್ ಸೆಂಚೂರಿ ರೆಕಾರ್ಡ್!
ದಕ್ಷಿಣ ಆಫ್ರಿಕಾ ಓಪನರ್ ಕ್ವಿಂಟನ್ ಡಿಕಾಕ್ ಅಂತೂ ತಮ್ಮ ಕೆರಿಯರ್ನ ಬೆಸ್ಟ್ ಫಾರ್ಮ್ನಲ್ಲಿದ್ದಾರೆ. ಅದು ಕೂಡ ವರ್ಲ್ಡ್ಕಪ್ ಟೈಮ್ನಲ್ಲೇ. ವಿಶ್ವಕಪ್ನ ಮೊದಲ ಎರಡು ಮ್ಯಾಚ್ಗಳಲ್ಲೂ ಶ್ರೀಲಂಕಾ ಮತ್ತು ಆಸ್ಟ್ರೇಲಿಯಾ ವಿರುದ್ಧ ಡಿಕಾಕ್ ಬ್ಯಾಕ್ ಟು ಬ್ಯಾಕ್ ಸೆಂಚೂರಿ ಹೊಡೆದಿದ್ರು. ಆಡಿರುವ 7 ಮ್ಯಾಚ್ಗಳಲ್ಲಿ ಒಟ್ಟು 4 ಶತಗಳನ್ನ ಬಾರಿಸಿದ್ದಾರೆ. ಇನ್ನೆರಡು ಸೆಂಚೂರಿ ಬಾರಿಸಿದ್ರೆ ಟೀಂ ಇಂಡಿಯಾ ಕ್ಯಾಪ್ಟನ್ ರೋಹಿತ್ ಶರ್ಮಾ ರೆಕಾರ್ಡ್ ಬ್ರೇಕ್ ಆಗುತ್ತೆ. ರೋಹಿತ್ ಶರ್ಮಾ 2019ರ ವರ್ಲ್ಡ್ಕಪ್ನಲ್ಲಿ ಒಟ್ಟು 5 ಸೆಂಚೂರಿ ಹೊಡೆದಿದ್ರು. ದಕ್ಷಿಣ ಆಫ್ರಿಕಾ ಕೂಡ ಆಲ್ಮೋಸ್ಟ್ ಸೆಮಿಫೈನಲ್ಗೆ ಎಂಟ್ರಿಯಾಗಿದೆ. ಹೀಗಾಗಿ ಕ್ವಿಂಟನ್ ಡಿಕಾಕ್ ಹೊಸ ದಾಖಲೆ ಸೃಷ್ಟಿಸೋಕೆ ಗೋಲ್ಡನ್ ಅಪಾರ್ಚ್ಯುನಿಟಿ ಕೂಡ ಇದೆ.
ಇನ್ನು ಈ ಬಾರಿಯ ವರ್ಲ್ಡ್ಕಪ್ನಲ್ಲಿ ಅತೀ ಹೆಚ್ಚು ಸೆಂಚೂರಿಗಳನ್ನ ಹೊಡೆದಿರುವ ತಂಡ ಕೂಡ ದಕ್ಷಿಣ ಆಫ್ರಿಕಾವೇ. ಸೌತ್ ಆಫ್ರಿಕಾ ಬ್ಯಾಟ್ಸ್ಮನ್ಗಳು ಒಟ್ಟು 6 ಶತಕಗಳನ್ನ ಹೊಡೆದಿದ್ದಾರೆ. ಈ ಪೈಕಿ 4 ಸೆಂಚೂರಿ ಈಗಾಗ್ಲೇ ಹೇಳಿದ ಹಾಗೆ ಕ್ವಿಂಟನ್ ಡಿಕಾಕ್ರಿಂದಲೇ ಬಂದಿದೆ. ಇನ್ನು ವ್ಯಾನ್ಡರ್ ಡಸ್ಸೆನ್ ಕೂಡ 2 ಶತಕಗಳನ್ನ ಹೊಡೆದಿದ್ದಾರೆ. ಆದ್ರೆ ಆಲ್ಟೈಮ್ ವರ್ಲ್ಡ್ ರೆಕಾರ್ಡ್ ಮಾತ್ರ ಸದ್ಯಕ್ಕೆ ಶ್ರೀಲಂಕಾದ ಹೆಸರಲ್ಲಿದೆ. 2015ರ ವಿಶ್ವಕಪ್ನಲ್ಲಿ ಶ್ರೀಲಂಕಾದ ಬ್ಯಾಟ್ಸ್ಮನ್ಗಳು ಒಟ್ಟು 8 ಸೆಂಚೂರಿ ಹೊಡೆದಿದ್ರು.
ಸೌತ್ ಆಫ್ರಿಕಾ ಟೀಂನ ರೆಕಾರ್ಡ್ ಲಿಸ್ಟ್ ಇಷ್ಟಕ್ಕೆ ಮುಗಿಯೋದಿಲ್ಲ. ಬ್ಯಾಟಿಂಗ್ ಪಾಟ್ನರ್ಶಿಪ್ಗಳಲ್ಲೂ ದಕ್ಷಿಣ ಆಫ್ರಿಕಾ ಪ್ಲೇಯರ್ಸ್ ದಾಖಲೆಗಳನ್ನ ಬರೀತಿದ್ದಾರೆ. ಕ್ವಿಂಟನ್ ಡಿಕಾಕ್ ಮತ್ತು ವ್ಯಾನ್ಡರ್ ಡಸ್ಸೆನ್ ಪಾಟ್ನರ್ಶಿಪ್ನಲ್ಲಿ ಈ ಬಾರಿಯ ವರ್ಲ್ಡ್ಕಪ್ನಲ್ಲಿ ಎರಡು ಬಾರಿ 200ಕ್ಕೂ ಹೆಚ್ಚು ರನ್ ಬಂದಿದೆ. 2011ರಲ್ಲಿ ಶ್ರೀಲಂಕಾದ ತಿಲಕರತ್ನೆ ದಿಲ್ಷಾನ್ ಮತ್ತು ಉಪುಲ್ ತರಂಗಾ ಮಧ್ಯೆ ಎರಡು ಬಾರಿ 200ಕ್ಕೂ ಹೆಚ್ಚು ರನ್ ಪಾಟ್ನರ್ಶಿಪ್ ಬಂದಿತ್ತು.
ಟೋಟಲ್ ಸ್ಕೋರ್ನಲ್ಲೂ ದಕ್ಷಿಣ ಆಫ್ರಿಕಾ ರೆಕಾರ್ಡ್!
ಈ ವರ್ಲ್ಡ್ಕಪ್ನಲ್ಲಿ ಸೌತ್ ಆಫ್ರಿಕಾ ಫಸ್ಟ್ ಬ್ಯಾಟಿಂಗ್ ಮಾಡಿದಾಗಲೆಲ್ಲಾ 300ಕ್ಕಿಂತ ಕಡಿಮೆ ಸ್ಕೋರ್ ಮಾಡುವ ಪ್ರಶ್ನೆಯೇ ಇಲ್ಲ ಅನ್ಸುತ್ತೆ. ಒಟ್ಟು 4 ಬಾರಿ ದಕ್ಷಿಣ ಆಫ್ರಿಕಾ ತಂಡ 350+ ಸ್ಕೋರ್ ಮಾಡಿದೆ. 300 ಕುಡ ಅಲ್ಲ.. 350+.. ಶ್ರೀಲಂಕಾ, ಇಂಗ್ಲೆಂಡ್, ಬಾಂಗ್ಲಾದೇಶ ಮತ್ತು ನ್ಯೂಜಿಲ್ಯಾಂಡ್ ವಿರುದ್ಧ ಸೌತ್ ಆಫ್ರಿಕಾ 350+ ಟೋಟಲ್ ಸ್ಕೋರ್ ಮಾಡಿದೆ. ಇದುವರೆಗೆ ಆಡಿರುವ ಎಲ್ಲಾ ವರ್ಲ್ಡ್ಕಪ್ನಲ್ಲೂ ದಕ್ಷಿಣ ಆಫ್ರಿಕಾ 9 ಬಾರಿ 350+ ಸ್ಕೋರ್ ಮಾಡಿದೆ.
ಇಂಥಾ ಬಲಿಷ್ಠ ದಕ್ಷಿಣ ಆಫ್ರಿಕಾ ತಂಡವನ್ನ ಅಕ್ಟೋಬರ್ 15ರಂದು ಟೀಂ ಇಂಡಿಯಾ ಕೊಲ್ಕತ್ತಾದಲ್ಲಿ ಎದುರಿಸ್ತಿದೆ. ಇದು ನಿಜಕ್ಕೂ ಈ ಬಾರಿಯ ವರ್ಲ್ಡ್ಕಪ್ನ ಮತ್ತೊಂದು ಹೈವೋಲ್ಟೇಜ್ ಮ್ಯಾಚ್ ಆಗಲಿದೆ. ಟೀಂ ಇಂಡಿಯಾ ಇದುವರೆಗೂ ಒಂದೇ ಒಂದು ಪಂದ್ಯವನ್ನ ಸೋತಿಲ್ಲ. ಹೀಗಾಗಿ ಪಾಯಿಂಟ್ಸ್ ಟೇಬಲ್ನಲ್ಲಿ ಸೆಕೆಂಡ್ ಪ್ಲೇಸ್ನಲ್ಲಿರುವ ದಕ್ಷಿಣ ಆಫ್ರಿಕಾ ವಿರುದ್ಧವೂ ಗೆದ್ರೆ ರೋಹಿತ್ ಪಡೆ ಅಕ್ಷರಶ: ಅನ್ಸ್ಟಾಪೆಬಲ್ ಆಗಲಿದೆ. ಟೀಂ ಇಂಡಿಯಾವೇನೊ ಟಾಪ್ ಕ್ಲಾಸ್ ಪರ್ಫಾಮೆನ್ಸ್ ನೀಡ್ತಿದೆ. ಆದ್ರೆ ಅತ್ತ ಸೌತ್ ಆಫ್ರಿಕಾ ಕೂಡ ಈ ವರ್ಲ್ಡ್ಕಪ್ನಲ್ಲಿ ಹೈ ಸ್ಟ್ಯಾಂಡರ್ಡ್ ಕ್ರಿಕೆಟ್ ಆಡ್ತಿದೆ. ಕ್ಯಾಪ್ಟನ್ ಟೆಂಬ ಬವುಮಾ ಅಂತೂ ದಕ್ಷಿಣ ಆಫ್ರಿಕಾಗೆ ಅಂಟಿರುವ ಚೋಕರ್ಸ್ ಅನ್ನೋ ಲೇಬಲ್ನ್ನ ಈ ಬಾರಿಯಾದ್ರೂ ಕಳಚಲೇಬೇಕು ಅನ್ನೋ ಹಠಕ್ಕೆ ಬಿದ್ದಿರೋದಂತೂ ಸುಳ್ಳಲ್ಲ. ಕೇವಲ ಕ್ಯಾಪ್ಟನ್ ಅಷ್ಟೇ ಅಲ್ಲ, ದಕ್ಷಿಣ ಆಫ್ರಿಕಾದ ಎಲ್ಲಾ ಪ್ಲೇಯರ್ಸ್ಗಳು ಕೂಡ ಈ ಟಾರ್ಗೆಟ್ ಇಟ್ಟುಕೊಂಡೇ ಆಡ್ತಿದ್ದಾರೆ.