ಸೇತುವೆ ಮೇಲಿಂದ ಬಿದ್ದ ಬಸ್ – 45 ಪ್ರಯಾಣಿಕರು ಸ್ಥಳದಲ್ಲೇ ಸಾವು

ದಕ್ಷಿಣ ಆಫ್ರಿಕಾದ ಲಿಂಪೊಪೊ ಪ್ರಾಂತ್ಯದಲ್ಲಿ ಭೀಕರ ಅಪಘಾತ ಸಂಭವಿಸಿದೆ. ಈಸ್ಟರ್ ಸಮ್ಮೇಳನಕ್ಕೆ ತೆರಳುತ್ತಿದ್ದ ಬಸ್ ಸೇತುವೆ ಮೇಲಿನಿಂದ ಬಿದ್ದಿದೆ. ಈ ಅವಘಡದಲ್ಲಿ ಸುಮಾರು 45 ಮಂದಿ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.
ಮೊಕೊಪಾನೆ ಮತ್ತು ಮಾರ್ಕೆನ್ ನಡುವಿನ ಮಮತ್ಲಕಲಾ ಪರ್ವತದ ಹಾದಿಯಲ್ಲಿ ಅಪಘಾತ ಸಂಭವಿಸಿದೆ. ಬಸ್ ಬಿದ್ದ ನಂತರ ಬೆಂಕಿ ಹೊತ್ತಿಕೊಂಡಿದೆ. ಪರಿಣಾಮ 45 ಮಂದಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಎಂಟು ವರ್ಷದ ಬಾಲಕಿ ಮಾತ್ರ ಬದುಕುಳಿದಿದ್ದಾಳೆ. ಆಕೆಯನ್ನು ಆಸ್ಪತ್ರೆಗೆ ಏರ್ಲಿಫ್ಟ್ ಮಾಡಲಾಗಿದೆ ಎಂದು ಎಸ್ಎಬಿಸಿ ಹೇಳಿದೆ.
ಇದನ್ನೂ ಓದಿ: ಅಮೇಜಾನ್ ಮಳೆಕಾಡಿನಲ್ಲಿ ಪತ್ತೆಯಾಗಿದ್ದ ವಿಶ್ವದ ದೈತ್ಯ ಹಾವು ಕೆಲವೇ ವಾರಗಳಲ್ಲಿ ಸಾವು!
ಮೃತರೆಲ್ಲರೂ ನೆರೆಯ ರಾಷ್ಟ್ರವಾದ ಬೋಟ್ಸ್ವಾನಾದ ರಾಜಧಾನಿ ಗ್ಯಾಬೊರೊನ್ನಿಂದ ಈಸ್ಟರ್ ಸಮ್ಮೇಳನಕ್ಕಾಗಿ ಚರ್ಚ್ಗೆ ಪ್ರಯಾಣಿಸುತ್ತಿದ್ದ ಯಾತ್ರಾರ್ಥಿಗಳು ಎಂದು ಎಸ್ಎಬಿಸಿ ತಿಳಿಸಿದೆ. ಅಪಘಾತಕ್ಕೆ ಕಾರಣ ಏನು ಎಂಬ ಬಗ್ಗೆ ತನಿಖೆ ನಡೆಯುತ್ತಿದೆ. ಚಾಲಕನ ನಿಯಂತ್ರಣ ತಪ್ಪಿ ಅಪಘಾತವಾಗಿರಬಹುದು. ಬಸ್ ಸೇತುವೆಯ ಕೆಳಗೆ ಸುಮಾರು 50 ಮೀಟರ್ ಆಳದಷ್ಟು ಕಂದಕಕ್ಕೆ ಬಿದ್ದ ಕೂಡಲೇ ಬೆಂಕಿ ಹೊತ್ತು ಕೊಂಡಿದೆ ಎಂದು ಪ್ರಾಂತ್ಯದ ಸಾರಿಗೆ ಇಲಾಖೆ ಮಾಹಿತಿ ನೀಡಿದೆ.
ಮೃತ ಪ್ರಯಾಣಿಕರ ಶವಗಳನ್ನು ಹೊರ ತೆಗೆಯುವ ಕಾರ್ಯಾಚರಣೆ ನಡೆಯುತ್ತಿದೆ. ಕೆಲ ದೇಹಗಳು ಗುರುತಿಸಲು ಸಾಧ್ಯವಾಗದಷ್ಟು ಸುಟ್ಟುಹೋಗಿವೆ. ದಕ್ಷಿಣ ಆಫ್ರಿಕಾದ ಸಾರಿಗೆ ಸಚಿವ ಸಿಂಡಿಸಿವೆ ಚಿಕುಂಗಾ ಅವರು, ಮೃತದೇಹಗಳನ್ನು ಬೋಟ್ಸ್ವಾನಾಗೆ ಹಿಂದಿರುಗಿಸಲಿದ್ದಾರೆ ಎಂದು ವರದಿಯಾಗಿದೆ.