27 ವರ್ಷಗಳ ಬಳಿಕ ಐಸಿಸಿ ಟ್ರೋಫಿ ಗೆಲ್ಲುತ್ತಾ ಸೌತ್ ಆಫ್ರಿಕಾ – ಚೋಕರ್ಸ್ ಹಣೆಪಟ್ಟಿ ಕಳಚುತ್ತಾ?

2023ರ ಫೈನಲ್ ಪಂದ್ಯದಲ್ಲಿ ಭಾರತವನ್ನು ಸೋಲಿಸಿ ಚಾಂಪಿಯನ್ ಆಗಿ ಮೆರೆದಿದ್ದ ಆಸ್ಟ್ರೇಲಿಯಾ ತಂಡವು ಇದೀಗ ಎರಡನೇ ಬಾರಿಗೆ ಟೈಟಲ್ ಮೇಲೆ ಕಣ್ಣಿಟ್ಟಿದೆ. ಮತ್ತೊಂದೆಡೆ 27 ವರ್ಷಗಳ ಬಳಿಕ ಐಸಿಸಿ ಟ್ರೋಫಿಯನ್ನ ಎತ್ತಿ ಹಿಡಿಯೋಕೆ ಹರಿಣಗಳ ಪಡೆ ಎದುರು ನೋಡ್ತಿದೆ.
ಕ್ರಿಕೆಟ್ ಜಗತ್ತಿನಲ್ಲಿ ಸೌತ್ ಆಫ್ರಿಕಾ ಬಲಿಷ್ಠ ತಂಡ. 1992 ರಲ್ಲಿ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ಕಾಲಿಟ್ಟ ಈ ಟೀಮ್ನಲ್ಲಿ ಜಗದ್ವಿಖ್ಯಾತ ಪ್ಲೇಯರ್ಸ್ ಆಡಿದ್ದಾರೆ. ಅಲನ್ ಡೊನಾಲ್ಡ್, ಲ್ಯಾನ್ಸ್ ಕ್ಲೂಸ್ನರ್, ಎಬಿ ಡಿವಿಲಿಯರ್ಸ್, ಜಾಕ್ವೆಸ್ ಕಾಲಿಸ್ ಮತ್ತು ಡೇಲ್ ಸ್ಟೇನ್ ಅವರಂತಹ ಲೆಜೆಂಡರಿ ಪ್ಲೇಯರ್ಸ್ನ ಕ್ರಿಕೆಟ್ ಜಗತ್ತಿಗೆ ನೀಡಿದೆ. ಆದ್ರೆ ಐಸಿಸಿ ಟ್ರೋಫಿ ಅಂತಾ ಬಂದಾಗ ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ. ಹೀಗಾಗೇ ಸೌತ್ ಆಫ್ರಿಕಾಗೆ ಚೋಕರ್ಸ್ ಅನ್ನೋ ಟ್ಯಾಗ್ಲೈನ್ ಅಂಟಿಕೊಂಡಿದೆ. ಸೌತ್ ಆಫ್ರಿಕಾ ತಂಡವು ಕೊನೆಯ ಬಾರಿ ಅದೂ ಕೂಡ ಏಕಕ ಬಾರಿ ಐಸಿಸಿ ಟ್ರೋಫಿ ಗೆದ್ದಿರುವುದು 1998 ರಲ್ಲಿ. ಢಾಕಾದಲ್ಲಿ ನಡೆದ ಐಸಿಸಿ ನಾಕೌಟ್ ಟೂರ್ನಿಯ ಅಂದ್ರೆ ಈಗಿನ ಈಗಿನ ಚಾಂಪಿಯನ್ಸ್ ಟ್ರೋಫಿ ಫೈನಲ್ ಪಂದ್ಯದಲ್ಲಿ ಗೆದ್ದಿತ್ತು. ವೆಸ್ಟ್ ಇಂಡೀಸ್ ತಂಡವನ್ನ ಮಣಿಸಿ ಟ್ರೋಫಿಯನ್ನ ಮುಡಿಗೇರಿಸಿಕೊಂಡಿತ್ತು. ಇದಾದ ಬಳಿಕ ಆಫ್ರಿಕಾ ಪಡೆಗೆ ಐಸಿಸಿ ಕಪ್ ಎಂಬುದು ಮರೀಚಿಕೆಯಾಗಿಯೇ ಉಳಿಯಿತು. ಅದ್ರಲ್ಲೂ ನಾಕೌಟ್ ಹಂತಗಳಲ್ಲೇ ಅದೆಷ್ಟು ಸಲ ಎಡವಿದೆ ಅನ್ನೋದನ್ನ ನೋಡಿದ್ರೆ ನಿಜಕ್ಕೂ ಅಚ್ಚರಿಯಾಗುತ್ತೆ.
ಚೋಕರ್ಸ್ ಸೌತ್ ಆಫ್ರಿಕಾ!
1992 ರ ವಿಶ್ವಕಪ್ – ಸೆಮಿಫೈನಲ್ ನಿಂದ ನಿರ್ಗಮನ
1999ರ ವಿಶ್ವಕಪ್ – ಸೆಮಿಫೈನಲ್ ನಿರ್ಗಮನ
2011ರ ವಿಶ್ವಕಪ್ – ಕ್ವಾರ್ಟರ್ ಫೈನಲ್ ನಿರ್ಗಮನ
2015ರ ವಿಶ್ವಕಪ್ – ಸೆಮಿಫೈನಲ್ ನಿರ್ಗಮನ
2023ರ ವಿಶ್ವಕಪ್ – ಸೆಮಿಫೈನಲ್ ನಿರ್ಗಮನ
2024ರ ಟಿ20 ವಿಶ್ವಕಪ್ – ಫೈನಲ್ ನಲ್ಲಿ ಸೋಲು
2025ರ ಚಾಂಪಿಯನ್ಸ್ ಟ್ರೋಫಿ – ಸೆಮಿಫೈನಲ್ ನಿರ್ಗಮನ
ಸದ್ಯ 27 ವರ್ಷಗಳಿಂದ ಐಸಿಸಿ ಟ್ರೋಫಿಗಾಗಿ ಚಾತಕ ಪಕ್ಷಿಯಂತೆ ಕಾಯ್ತಿರೋ ಸೌತ್ ಆಫ್ರಿಕಾ ಪಡೆ ಡಬ್ಲ್ಯೂಟಿಸಿ ಫೈನಲ್ ಅಖಾಡದಲ್ಲಿದೆ. ಬಲಿಷ್ಠ ಆಸ್ಟ್ರೇಲಿಯಾ ತಂಡದ ವಿರುದ್ಧ ಸೆಣಸಾಟ ನಡೆಸಬೇಕಿದೆ. ಈ ಪಂದ್ಯದಲ್ಲಿ ಸೌತ್ ಆಫ್ರಿಕಾ ಗೆದ್ದರೆ 27 ವರ್ಷಗಳ ಕಾಯುವಿಕೆ ಅಂತ್ಯಗೊಳ್ಳಲಿದೆ. ಇತ್ತ ಕ್ರಿಕೆಟ್ ಇತಿಹಾಸದಲ್ಲಿ ಹೈಯೆಸ್ಟ್ ಐಸಿಸಿ ಟ್ರೋಫಿಗಳನ್ನ ಬೇಟೆಯಾಡಿರೋ ಆಸ್ಟ್ರೇಲಿಯಾ ಸತತ ಎರಡನೇ ಬಾರಿಗೆ ಡಬ್ಲ್ಯೂಟಿಸಿ ಟ್ರೋಫಿ ಗೆಲ್ಲೋ ತವಕದಲ್ಲಿದೆ.