ಸೌಜನ್ಯ NOTA ನಡುವೆ ಗೆಲ್ಲೋದ್ಯಾರು? – JDS ಕೈ ತಪ್ಪುತ್ತಾ ಮಂಡ್ಯ, ಹಾಸನ?
ಡಿಕೆ ಬ್ರದರ್ಸ್ ಗೆ ಡಾಕ್ಟರ್ ಡೋಸ್ ಹೇಗಿದೆ?

ಸೌಜನ್ಯ NOTA ನಡುವೆ ಗೆಲ್ಲೋದ್ಯಾರು? – JDS ಕೈ ತಪ್ಪುತ್ತಾ ಮಂಡ್ಯ, ಹಾಸನ?ಡಿಕೆ ಬ್ರದರ್ಸ್ ಗೆ ಡಾಕ್ಟರ್ ಡೋಸ್ ಹೇಗಿದೆ?

ಕರ್ನಾಟಕದ 28 ಲೋಕಸಭಾ ಕ್ಷೇತ್ರಗಳಿಗೆ ಮತದಾನ ಮುಗಿದಿದೆ. ಬಿರು ಬಿಸಿಲಲ್ಲೇ ಪ್ರಚಾರ ನಡೆಸಿದ್ದ ನಾಯಕರು ರಿಲ್ಯಾಕ್ಸ್ ಮೋಡ್​​ಗೆ ಜಾರಿದ್ದಾರೆ. ಜೂನ್ 4ರಂದು ಅಭ್ಯರ್ಥಿಗಳ ಫಲಿತಾಂಶ ಹೊರ ಬೀಳಲಿದ್ದು, ಯಾರು ಸಂಸತ್ ಪ್ರವೇಶ ಮಾಡ್ತಾರೆ ಅನ್ನೋ ಕುತೂಹಲಕ್ಕೆ ತೆರೆ ಬೀಳಲಿದೆ. ಕರ್ನಾಟಕದ 28 ಕ್ಷೇತ್ರಗಳ ಪೈಕಿ ಹೈವೋಲ್ಟೇಜ್ ಕಣಗಳ ಲಿಸ್ಟ್​ನಲ್ಲಿ 5 ಕ್ಷೇತ್ರಗಳಿದ್ದು, ರಾಜ್ಯ ರಾಜಕೀಯದ ದಿಕ್ಕನ್ನೇ ಬದಲಿಸಬಹುದಾಗಿದೆ.  ಅಷ್ಟಕ್ಕೂ ಆ ಕ್ಷೇತ್ರಗಳು ಯಾವುವು..? ಯಾರು ಗೆಲ್ಲುವ ನಿರೀಕ್ಷೆ ಇದೆ..? ರಾಜಕೀಯದ ನಾಯಕರಿಗೆ ಪ್ರತಿಷ್ಠೆಯಾಗಿದ್ದೇಗೆ ಅನ್ನೋ ಬಗ್ಗೆ  ಮಾಹಿತಿ ಇಲ್ಲಿದೆ.

ಇದನ್ನೂ ಓದಿ: ಹೆಚ್ ಡಿ ರೇವಣ್ಣ ಅಮಾನತಿಗೆ ಪಕ್ಷದಲ್ಲಿ ಹೆಚ್ಚಾಯ್ತು ಒತ್ತಡ –  ಗುರುವಾರ ನಿರ್ಧಾರವಾಗಲಿದೆ ರೇವಣ್ಣ ಭವಿಷ್ಯ!

ಪ್ರಜಾಪ್ರಭುತ್ವದ ಅತಿದೊಡ್ಡ ಹಬ್ಬ ಅಂತಾನೇ ಕರೆಸಿಕೊಳ್ಳೋ ಭಾರತದ ಲೋಕಸಭಾ ಚುನಾವಣೆಗೆ 11 ಹಂತಗಳಲ್ಲಿ ಮತದಾನ ನಡೆಯುತ್ತಿದೆ. ಸದ್ಯ ಕರ್ನಾಟಕದ 28 ಕ್ಷೇತ್ರಗಳಿಗೆ 2 ಹಂತಗಳಲ್ಲಿ ವೋಟಿಂಗ್ ಮುಗಿದಿದೆ. 28 ಕ್ಷೇತ್ರಗಳ ಪೈಕಿ ದಕ್ಷಿಣ ಕನ್ನಡ, ಮಂಡ್ಯ, ಹಾಸನ, ಬೆಂಗಳೂರು ಗ್ರಾಮಾಂತರ ಮತ್ತು ಶಿವಮೊಗ್ಗ ಕ್ಷೇತ್ರಗಳು ಹೈವೋಲ್ಟೇಜ್ ಕಣಗಳಾಗಿವೆ. ಈ ಕ್ಷೇತ್ರಗಳ ಸೋಲು ಗೆಲುವು ರಾಜ್ಯ ರಾಜಕೀಯದಲ್ಲಿ ದೊಡ್ಡ ಮಟ್ಟದ ಪರಿಣಾಮ ಬೀರಲಿದೆ. ಮೊದಲನೆಯದಾಗಿ ದಕ್ಷಿಣ ಕನ್ನಡ ಜಿಲ್ಲೆ.

ಸೌಜನ್ಯ ನ್ಯಾಯಕ್ಕಾಗಿ ಸದ್ದು ಮಾಡಿದ ದಕ್ಷಿಣ ಕನ್ನಡ  

ಲೋಕಸಭಾ ಚುನಾವಣೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಈ ಬಾರಿ ಅಭ್ಯರ್ಥಿಗಳಿಗಿಂತ ಹೆಚ್ಚು ಸದ್ದು ಮಾಡಿದ ವಿಚಾರ ಅಂದ್ರೆ ಅದು ಸೌಜನ್ಯ ನೋಟಾ ಅಭಿಯಾನ. 12 ವರ್ಷಗಳಿಂದ ಸೌಜನ್ಯ ಸಾವಿನ ನ್ಯಾಯಕ್ಕಾಗಿ ಹೋರಾಟ ನಡೆಯುತ್ತಿದ್ರೂ ಫಲಿತಾಂಶ ಮಾತ್ರ ಶೂನ್ಯ. ವಿದ್ಯಾರ್ಥಿನಿಯ ಪರ ಯಾವೊಬ್ಬ ರಾಜಕೀಯನ ನಾಯಕನೂ ಗಟ್ಟಿ ಧ್ವನಿಯಾಗಿ ನಿಂತಿಲ್ಲ. ಇದೇ ಕಾರಣಕ್ಕೆ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿ ನೇತೃತ್ವದಲ್ಲಿ ಅಭಿಯಾನ ನಡೆಸಲಾಗಿದೆ. ಯಾವುದೇ ಪಕ್ಷ ಅಥವಾ ಅಭ್ಯರ್ಥಿಗೆ ಮತ ಹಾಕದೇ ನೋಟಕ್ಕಾಗಿ ಮತ ಚಲಾಯಿಸಯವಂತೆ ಮನವಿ ಮಾಡಿದ್ದಾರೆ. ಒಂದು ಅಂದಾಜಿನ ಪ್ರಕಾರ 2 ಲಕ್ಷಕ್ಕೂ ಹೆಚ್ಚು ಮತಗಳು ನೋಟಾಗೆ ಬಿದ್ದಿರುವ ಸಾಧ್ಯತೆ ಇದೆ. ಬಿಜೆಪಿಯ ಭದ್ರಕೋಟೆಯಾಗಿರುವ ಈ ಕ್ಷೇತ್ರದಲ್ಲಿ  ಬಿಜೆಪಿಯಿಂದ ಕ್ಯಾಪ್ಟನ್ ಬ್ರಿಜೇಶ್ ಚೌಟಾ ಹಾಗೂ ಕಾಂಗ್ರೆಸ್​್ನಿಂದ ಆರ್.ಪದ್ಮರಾಜ್ ಕಣದಲ್ಲಿದ್ದಾರೆ. ನೋಟಾ ಮತಗಳು ಈ ಇಬ್ಬರ ಸೋಲು ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಲಿವೆ. ಇನ್ನು ಡಿಕೆ ಬ್ರದರ್ಸ್ ಭದ್ರಕೋಟೆ ಅಂತಾನೇ ಕರೆಸಿಕೊಳ್ಳೋ

ಬೆ.ಗ್ರಾಮಾಂತರದಲ್ಲಿ ಡಾಕ್ಟರ್ Vs ಡಿಕೆ ಬ್ರದರ್ಸ್ ಗುದ್ದಾಟ  

ಡಿಕೆ ಬ್ರದರ್ಸ್ ಭದ್ರಕೋಟೆ ಅಂತಾನೇ ಕರೆಸಿಕೊಳ್ಳೋ ಬೆಂಗಳೂರು ಗ್ರಾಮಾಂತರ ಕ್ಷೇತ್ರ ಈ ಬಾರಿ ತೀವ್ರ ಕುತೂಹಲ ಮೂಡಿಸಿದೆ. ಅದಕ್ಕೆ ಕಾರಣ ಹೃದಯವಂತ ವೈದ್ಯ ಸಿ.ಎನ್ ಮಂಜುನಾಥ್. ಕಾಂಗ್ರೆಸ್​ನಿಂದ ಹಾಲಿ ಸಂಸದ ಡಿಕೆ ಸುರೇಶ್ ಮತ್ತು ಮೈತ್ರಿ ಅಭ್ಯರ್ಥಿಯಾಗಿ ಡಾ. ಸಿಎನ್ ಮಂಜುನಾಥ್ ನಡುವೆ ನೇರ ಪೈಪೋಟಿ ನಡೆಯುತ್ತಿದೆ. 8 ವಿಧಾನಸಭಾ ಕ್ಷೇತ್ರಗಳನ್ನು ಒಳಗೊಂಡಿರೋ ಈ ಕ್ಷೇತ್ರದಲ್ಲಿ ಮಂಜುನಾಥ್ ಪರ ಅಲೆ ಎದ್ದಿದ್ದು ಫಲಿತಾಂಶದತ್ತಲೆ ಎಲ್ಲರ ಚಿತ್ತ ನೆಟ್ಟಿದೆ. ಈಗಾಗ್ಲೇ 3 ಬಾರಿ ಸಂಸದರಾಗಿ ಆಯ್ಕೆ ಆಗಿರುವ ಡಿ.ಕೆ.ಸುರೇಶ್‌ ಈ ಬಾರಿಯೂ ಗೆಲುವು ಸಾಧಿಸಿದರೆ, ಸತತ ನಾಲ್ಕನೇ ಬಾರಿಗೆ ಜಯ ಗಳಿಸಲಿದ್ದಾರೆ. ಹಾಗೇನಾದ್ರೂ ಬಿಜೆಪಿ ಅಭ್ಯರ್ಥಿ ಮಂಜುನಾಥ್ ಗೆದ್ರೆ ಇದೇ ದೊಡ್ಡ ಸಾಧನೆಯಾಗಲಿದೆ.

ಪೆನ್ ಡ್ರೈವ್ ಜ್ವಾಲೆಯಲ್ಲೂ ಗೆಲ್ತಾರಾ ಪ್ರಜ್ವಲ್

ಇನ್ನು ರಾಜ್ಯ ರಾಜಕೀಯದಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡ್ತಿರೋ ಪ್ರಕರಣ ಅಂದ್ರೆ ಅದು ಪ್ರಜ್ವಲ್ ಪೆನ್​ಡ್ರೈವ್ ಕೇಸ್. 2 ಸಾವಿರಕ್ಕೂ ಹೆಚ್ಚು ಮಹಿಳೆಯರ ಜೊತೆ ಹಾಸನ ಸಂಸದ ಪ್ರಜ್ವಲ್ ರೇವಣ್ಣ ರಾಸಲೀಲೆ ನಡೆಸಿದ್ದಾರೆ ಎಂಬ ಸ್ಫೋಟಕ ಆರೋಪ ರಾಷ್ಟ್ರಾದ್ಯಂತ ಬಾರೀ ಸದ್ದು ಮಾಡಿದೆ. ಏಪ್ರಿಲ್ 26ರಂದು ಹಾಸನ ಕ್ಷೇತ್ರಕ್ಕೆ ವೋಟಿಂಗ್ ಆಗಿದ್ದು ಮತದಾನದ ಬಳಿಕ ದೇಶ ಬಿಟ್ಟು ಹಾರಿರುವ ಪ್ರಜ್ವಲ್ ರೇವಣ್ಣ ಈವರೆಗೂ ಭಾರತಕ್ಕೆ ಮರಳಿಲ್ಲ. ಅಲ್ಲದೆ ಮತದಾನಕ್ಕೂ ಮೊದ್ಲೇ ಹಾಸನದಲ್ಲಿ ಅಶ್ಲೀಲ ವಿಡಿಯೋಗಳ ಪೆನ್​ಡ್ರೈವ್ ಹಂಚಿಕೆಯಾಗಿದೆ ಎನ್ನಲಾಗಿದೆ. ಮತ್ತೊಂದೆಡೆ ಕಾಂಗ್ರೆಸ್​ನಿಂದ ಶ್ರೇಯಸ್ ಪಟೇಲ್ ಕಣದಲ್ಲಿದ್ದಾರೆ. ಹೀಗಾಗಿ ಮತದಾರರು ಮೈತ್ರಿ ಅಭ್ಯರ್ಥಿ ಪ್ರಜ್ವಲ್ ಪರ ವೋಟು ಒತ್ತಿದ್ದಾರೋ ಇಲ್ಲ ಶ್ರೇಯಸ್ ಪರ ವಾಲಿದ್ರೋ ಎಂಬ ಕುತೂಹಲ ಮನೆ ಮಾಡಿದೆ.

ಮಗ ಸೋತ ಮಂಡ್ಯದಲ್ಲೇ HDK ಅದೃಷ್ಟ ಪರೀಕ್ಷೆ!  

2019ರ ಲೋಕಸಭಾ ಚುನಾವಣೆಯಲ್ಲಿ ಸುಮಲತಾ ಅಂಬರೀಶ್ ಗೆದ್ದು ಬೀಗಿದ್ದ ಮಂಡ್ಯದಿಂದಲೇ ಈ ಬಾರಿ ಹೆಚ್.ಡಿ ಕುಮಾರಸ್ವಾಮಿ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. ನಿಖಿಲ್ ಕುಮಾರಸ್ವಾಮಿ ಸೋತ ನೆಲದಿಂದಲೇ ಗೆದ್ದು ಸಂಸತ್ ಪ್ರವೇಶ ಮಾಡೋ ನಿರೀಕ್ಷೆಯಲ್ಲಿದ್ದಾರೆ. ಹೀಗಾಗಿ ಕಡೇ ಕ್ಷಣದವರೆಗೂ ಪಟ್ಟು ಬಿಡದೆ ಸುಮಲತಾಗೆ ಬಿಜೆಪಿ ಟಿಕೆಟ್ ತಪ್ಪಿಸಿ ತಾವೇ ಅಭ್ಯರ್ಥಿಯಾಗಿದ್ದಾರೆ. ಮಂಡ್ಯದಿಂದ ಗೆಲ್ಲುವುದು ಕುಮಾರಣ್ಣನಿಗೆ ಪ್ರತಿಷ್ಠೆಯೂ ಆಗಿದೆ. ಮತ್ತೊಂದೆಡೆ ಕಾಂಗ್ರೆಸ್​ನಿಂದ ಸ್ಟಾರ್ ಚಂದ್ರು ಇದೇ ಮೊದಲ ಬಾರಿಗೆ ಲೋಕಸಭಾ ಅಖಾಡಕ್ಕೆ ಧುಮುಕಿದ್ದು, ಗ್ಯಾರಂಟಿ ಯೋಜನೆಗಳ ಬಲದಿಂದ ಗೆಲ್ಲೋ ವಿಶ್ವಾಸದಲ್ಲಿದ್ದಾರೆ.

ಮೂವರ ಸ್ಪರ್ಧೆಯಿಂದ ರಂಗೇರಿದ ಶಿವಮೊಗ್ಗ ಅಖಾಡ!   

ಇನ್ನು ಶಿವಮೊಗ್ಗ ಲೋಕಸಭಾ ಕ್ಷೇತ್ರ ಈ ಬಾರಿ ರಣರಣ ಅಂತಿದೆ. ಅದಕ್ಕೆ ಕಾರಣ ಕೆ.ಎಸ್ ಈಶ್ವರಪ್ಪರ ಪಕ್ಷೇತರ ಸ್ಪರ್ಧೆ. ಪುತ್ರ ಕಾಂತೇಶ್​ಗೆ ಹಾವೇರಿ ಕ್ಷೇತ್ರದ ಟಿಕೆಟ್ ಸಿಗದ ಸಿಟ್ಟಲ್ಲಿ ಬಿಎಸ್​ವೈ ಫ್ಯಾಮಿಲಿ ವಿರುದ್ಧ ಬಂಡಾಯವೆದ್ದು ಕೆ.ಎಸ್ ಈಶ್ವರಪ್ಪ ಪಕ್ಷೇತರ ಅಭ್ಯರ್ಥಿಯಾಗಿ ಕಣದಲ್ಲಿದ್ದಾರೆ. ಹೀಗಾಗಿ ಬಿಜೆಪಿ, ಹಿಂದುಗಳ ಮತಗಳು ಇಬ್ಭಾಗವಾದ್ರೆ ಕಾಂಗ್ರೆಸ್ ಅಭ್ಯರ್ಥಿ ಗೀತಾ ಶಿವರಾಜ್​ಕುಮಾರ್​ಗೆ ಪ್ಲಸ್ ಆಗಲಿದೆ. ಬಿಜೆಪಿಯಿಂದ ಮತ್ತೊಮ್ಮೆ ಸ್ಪರ್ಧೆಗಿಳಿರುವ ಬಿವೈ ರಾಘವೇಂದ್ರ ಮತ್ತೆ ಲೋಕಸಭೆ ಪ್ರವೇಶಿಸೋ ತವಕದಲ್ಲಿದ್ದಾರೆ. ಹೀಗಾಗಿ ಮೂವರ ಸ್ಪರ್ಧೆಯಲ್ಲಿ ಯಾರಿಗೆ ಶಿವಮೊಗ್ಗ ಅನ್ನೋದೇ ಮಿಲಿಯನ್ ಡಾಲರ್ ಪ್ರಶ್ನೆಯಾಗಿದೆ. ಒಟ್ಟಾರೆ ಮತದಾನ ಮುಗಿದಿದ್ದು ಅಭ್ಯರ್ಥಿಗಳು, ರಾಜಕೀಯ ನಾಯಕರು, ಕಾರ್ಯಕರ್ತರೆಲ್ಲಾ ರಿಲ್ಯಾಕ್ಸ್ ಆಗ್ತಿದ್ದಾರೆ. ಮತದಾರರು ಕೂಡ ಫಲಿತಾಂಶದ ದಿನವನ್ನ ಎದುರು ನೋಡುತ್ತಿದ್ದಾರೆ. ಆದ್ರೆ ಈ ಐದು ಕ್ಷೇತ್ರಗಳು ಈ ಸಲ ತುಂಬಾನೇ ಇಂಪಾರ್ಟೆಂಟ್ ಆಗಿದ್ದು, ಯಾರೇ ಗೆದ್ರೂ ಎದುರಾಳಿ ಪಕ್ಷದ ನಾಯಕರಿಗೆ ದೊಡ್ಡ ಹೊಡೆತ ಬೀಳಲಿದೆ.

Shwetha M