ಸೆಲ್ಫಿ ಕಿರಿಕ್​.. ಸೋನು ನಿಗಮ್ & ತಂಡದವರ ಮೇಲೆ ಅಟ್ಯಾಕ್ – ಬೆಚ್ಚಿ ಬೀಳಿಸುವ ವಿಡಿಯೋ ವೈರಲ್!

ಸೆಲ್ಫಿ ಕಿರಿಕ್​.. ಸೋನು ನಿಗಮ್ & ತಂಡದವರ ಮೇಲೆ ಅಟ್ಯಾಕ್ – ಬೆಚ್ಚಿ ಬೀಳಿಸುವ ವಿಡಿಯೋ ವೈರಲ್!

ಸೆಲೆಬ್ರಿಟಿಗಳ ಜೊತೆ ಫೋಟೋ ತೆಗೆಸಿಕೊಳ್ಳೋಕೆ ಅಭಿಮಾನಿಗಳು ಮುಗಿ ಬೀಳೋದು ಸರ್ವೇ ಸಾಮಾನ್ಯ. ಕೆಲವೊಮ್ಮೆ ಫ್ಯಾನ್ಸ್ ಜೊತೆ ಸ್ಟಾರ್ಸ್ ಫೋಟೋಗೆ ಪೋಸ್ ಕೊಟ್ರೆ ಇನ್ನೂ ಕೆಲವು ಬಾರಿ ನಿರಾಕರಿಸುತ್ತಾರೆ. ಸದ್ಯ ಸೆಲ್ಫಿಗೆ ನಿರಾಕರಿಸಿದ್ರು ಅನ್ನೋ ಕಾರಣಕ್ಕೆ ಖ್ಯಾತ ಗಾಯಕ ಸೋನು ನಿಗಮ್ ಹಾಗೂ ಅವರ ತಂಡದ ಮೇಲೆ ಹಲ್ಲೆ ನಡೆಸಲಾಗಿದೆ.

ಇದನ್ನೂ ಓದಿ : ಶಾಲಾ ಬಿಸಿಯೂಟದಲ್ಲಿ ಚಿಕನ್ ಲೆಗ್ ಪೀಸ್ ಇಲ್ಲದಿದ್ದಕ್ಕೆ ಶಿಕ್ಷಕರನ್ನೇ ಕೂಡಿ ಹಾಕಿದ ಪೋಷಕರು..!

ಮಹಾರಾಷ್ಟ್ರದಲ್ಲಿ ಖ್ಯಾತ ಗಾಯಕ ಸೋನು ನಿಗಮ್ ಮತ್ತು ಅವರ ತಂಡದವರ ಮೇಲೆ ಸೋಮವಾರ ರಾತ್ರಿ ಹಲ್ಲೆ ನಡೆಸಲಾಗಿದೆ. ಮುಂಬೈನ ಚೆಂಬೂರು ಎಂಬಲ್ಲಿ ಸಂಗೀತ ಕಾರ್ಯಕ್ರಮವೊಂದರ ಸಂದರ್ಭದಲ್ಲಿ ಈ ಘಟನೆ ನಡೆದಿದೆ. ವ್ಯಕ್ತಿಯೊಬ್ಬ ಸೋನು ನಿಗಮ್ ಮತ್ತು ತಂಡದವರ ಮೇಲೆ ಹಲ್ಲೆ ಮಾಡಿ ಅವರನ್ನು ವೇದಿಕೆಯಿಂದ ತಳ್ಳುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ವಿಡಿಯೋದ ಸತ್ಯಾಸತ್ಯತೆ ಬಗ್ಗೆ ಇನ್ನಷ್ಟೇ ದೃಢಪಡಬೇಕಿದ್ದು, ಪೊಲೀಸರು ನಿಗಮ್ ಅವರಿಂದ ಹೆಚ್ಚಿನ ಮಾಹಿತಿ ಪಡೆಯುತ್ತಿದ್ದಾರೆ. ಶಿವಸೇನಾದ ಉದ್ಧವ್ ಠಾಕ್ರೆ ಬಣದ ಶಾಸಕ ಪ್ರಕಾಶ್​ ಫರ್ತೆಪೇಕರ್ ಬೆಂಬಲಿಗರು ಹಲ್ಲೆ ನಡೆಸಿದ್ದಾರೆ ಎಂದು ಕೆಲವು ಮಾಧ್ಯಮಗಳು ವರದಿ ಮಾಡಿವೆ. ಘಟನೆ ಸಂಬಂಧ ಮುಂಬೈಯ ಚೆಂಬೂರು ಪೊಲೀಸ್ ಠಾಣೆಯಲ್ಲಿ ಪ್ರಕರಣದ ದಾಖಲಾಗಿದೆ.

ಚೆಂಬೂರು ಉತ್ಸವದಲ್ಲಿ ಸೋನು ನಿಗಮ್ ಸಂಗೀತ ಕಾರ್ಯಕ್ರಮ ನಡೆಯುತ್ತಿತ್ತು. ಈ ವೇಳೆ ಅವರ ಜತೆ ಸೆಲ್ಫಿ ತೆಗೆಸಿಕೊಳ್ಳಲು ಅಭಿಮಾನಿಗಳು ಮುಗಿಬಿದ್ದಿದ್ದು ನೂಕುನುಗ್ಗಲು ಉಂಟಾಗಿದೆ. ಈ ವೇಳೆ ಶಾಸಕರ ಭೇಟಿಗೆ ಅವಕಾಶ ನೀಡದಿದ್ದಕ್ಕೆ ಬೆಂಬಲಿಗರು ಗಲಾಟೆ ನಡೆಸಿದ್ದಾರೆ. ಸೋನು ನಿಗಮ್ ಭದ್ರತಾ ಸಿಬ್ಬಂದಿ, ಶಾಸಕರ ಬೆಂಬಲಿಗರ ಮಧ್ಯೆ ಗಲಾಟೆ ನಡೆದಿದೆ. ಗಲಾಟೆ ವೇಳೆ ಸೋನು ನಿಗಮ್ ಸೇರಿ ಹಲವರ ಮೇಲೆ ಹಲ್ಲೆ ನಡೆಸಲಾಗಿದೆ ಎಂಬ ಆರೋಪ ಕೇಳಿಬಂದಿದೆ. ಶಾಸಕ ಪ್ರಕಾಶ್​ ಫರ್ತೆಪೇಕರ್ ಮಗ ಸ್ವಪ್ನಿಲ್ ಹಲ್ಲೆ ನಡೆಸಿದ್ದಾನೆ ಎಂದು ಸೋನು ನಿಗಮ್ ದೂರು ನೀಡಿದ್ದು, ಸ್ವಪ್ನಿಲ್ ವಿರುದ್ಧ ಪ್ರಕರಣ ದಾಖಲಾಗಿದೆ.

ಈ ಮಧ್ಯೆ, ಶಾಸಕ ಪ್ರಕಾಶ್​ ಫರ್ತೆಪೇಕರ್ ಘಟನೆ ಬಗ್ಗೆ ಪ್ರತಿಕ್ರಿಯಿಸಿದ್ದು, ಸೋನು ನಿಗಮ್ ವೇದಿಕೆಯಿಂದ ಕೆಳಗಿಳಿಯುತ್ತಿದ್ದಾಗ ಕೆಲವರು ಸೆಲ್ಫಿ ತೆಗೆದುಕೊಳ್ಳಲು ಮುಗಿಬಿದ್ದರು. ಆ ಸಮಯದಲ್ಲಿ ಅವರ ಅಂಗರಕ್ಷಕರು ಆ ಜನರನ್ನು ದೂರ ತಳ್ಳಲು ಪ್ರಯತ್ನಿಸುತ್ತಿದ್ದರು. ಆ ಸಂದರ್ಭ ಸೋನು ನಿಗಮ್ ತಂಡದ ಒಬ್ಬ ವ್ಯಕ್ತಿಯನ್ನು ತಪ್ಪಾಗಿ ತಳ್ಳಲಾಯಿತು. ಸೋನು ನಿಗಮ್‌ಗೆ ಏನೂ ಆಗಿಲ್ಲ ಎಂದು ಹೇಳಿದ್ದಾರೆ.

ಪ್ರಕಾಶ್​ ಫರ್ತೆಪೇಕರ್ ಮಗ ವೇದಿಕೆಯಿಂದ ಹೊರಹೋಗುವಂತೆ ಸೋನು ನಿಗಮ್ ಮ್ಯಾನೇಜರ್​ಗೆ ಸೂಚಿಸಿದ್ದಲ್ಲದೆ ಅನುಚಿತವಾಗಿ ವರ್ತಿಸಿದ್ದಾರೆ ಎಂದು ನಿಗಮ್ ತಂಡದವರು ದೂರಿದ್ದಾರೆ. ಸೋನು ನಿಗಮ್ ಕಾರ್ಯಕ್ರಮ ಮುಗಿಸಿ ವೇದಿಕೆಯಿಂದ ಕೆಳಗೆ ಬರುತ್ತಿದ್ದಾಗ ಶಾಸಕರ ಪುತ್ರ ಮೊದಲು ಸೋನು ಅಂಗರಕ್ಷಕ ಹರಿ ಅವರನ್ನು ತಳ್ಳಿ ನಂತರ ಸೋನು ಅವರನ್ನು ತಳ್ಳಿದ್ದಾರೆ. ಈ ಸಮಾರಂಭದಲ್ಲಿ ಸೋನು ನಿಗಮ್ ಅವರ ಪುತ್ರ ರಬ್ಬಾನಿ ಖಾನ್ ಕೂಡ ಉಪಸ್ಥಿತರಿದ್ದರು.

suddiyaana