ಯುದ್ಧಕ್ಕೂ ಮೊದಲೇ ಸೋನಿಯಾ ಗಾಂಧಿ ಶಸ್ತ್ರತ್ಯಾಗ? – ಸೋಲಿನ ಭಯಕ್ಕೆ ರಾಜ್ಯಸಭೆ ಪ್ರವೇಶಕ್ಕೆ ನಿರ್ಧಾರ ಮಾಡಿದ್ರಾ?
ಸೋನಿಯಾ ಗಾಂಧಿ.. ಕಾಂಗ್ರೆಸ್ ಪಕ್ಷದ ಅಧಿನಾಯಕಿ. ಸತತ ಎರಡೂವರೆ ದಶಕದಿಂದ ಲೋಕಸಭೆಯ ಸದಸ್ಯರಾಗಿರುವ ಸೋನಿಯಾಗಾಂಧಿ ಇನ್ಮುಂದೆ ರಾಜ್ಯಸಭಾ ಸದಸ್ಯರಾಗಿ ರಾಜಕೀಯದಲ್ಲಿ ಮುಂದುವರಿಯಲಿದ್ದಾರೆ. ಬುಧವಾರ ಕಾಂಗ್ರೆಸ್ ಪ್ರಕಟಿಸಿರುವ ರಾಜ್ಯಸಭಾ ಚುನಾವಣೆ ಅಭ್ಯರ್ಥಿಗಳ ಪಟ್ಟಿಯಲ್ಲಿ ಸೋನಿಯಾಗಾಂಧಿಯವರ ಹೆಸರೂ ಇದೆ. ರಾಜಸ್ಥಾನದಿಂದ ರಾಜ್ಯಸಭೆ ಸದಸ್ಯರಾಗಲಿದ್ದು, ಜೈಪುರದಲ್ಲಿ ನಾಮಪತ್ರವನ್ನು ಕೂಡ ಸಲ್ಲಿಸಿದ್ದಾರೆ. ನಾಮಪತ್ರ ಸಲ್ಲಿಕೆ ವೇಳೆ ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ವಾದ್ರಾ ತಾಯಿಗೆ ಸಾಥ್ ನೀಡಿದ್ದರು. ಕಳೆದ ಐದಾರು ವರ್ಷಗಳಿಂದಲೇ ಸೋನಿಯಾ ರಾಜಕೀಯದಲ್ಲಿದ್ದರೂ ಸಕ್ರಿಯವಾಗಿಲ್ಲ. ಕಾಂಗ್ರೆಸ್‌ನ ಉಸ್ತುವಾರಿಯನ್ನು ರಾಹುಲ್ ಗಾಂಧಿ ಅವರಿಗೆ ಬಿಟ್ಟುಕೊಟ್ಟಿದ್ದರು. ತಾವು ಪ್ರತಿನಿಧಿಸುವ ಉತ್ತರ ಪ್ರದೇಶದ ರಾಯ್ ಬರೇಲಿ ಕ್ಷೇತ್ರದಿಂದಲೂ ಇನ್ಮುಂದೆ ಸ್ಪರ್ಧಿಸುವುದಿಲ್ಲ.
ಇದನ್ನೂ ಓದಿ:ರೈತರ ಪ್ರತಿಭಟನೆಯತ್ತ ಹೊರಟ ರಾಹುಲ್ ಗಾಂಧಿ – 2ನೇ ಹಂತದ ‘ಭಾರತ ಜೋಡೋ ನ್ಯಾಯ ಯಾತ್ರೆ’ ಸ್ಥಗಿತ!
15 ರಾಜ್ಯಗಳ ಒಟ್ಟು 56 ರಾಜ್ಯಸಭಾ ಸದಸ್ಯರು ಏಪ್ರಿಲ್‌ನಲ್ಲಿ ನಿವೃತ್ತರಾಗುತ್ತಿದ್ದು, ಫೆಬ್ರವರಿ 27 ರಂದು ಸ್ಥಾನಗಳಿಗೆ ಚುನಾವಣೆ ನಡೆಯಲಿದೆ. ನಾಮಪತ್ರ ಸಲ್ಲಿಸಲು ಫೆಬ್ರವರಿ 15 ಕೊನೆಯ ದಿನಾಂಕವಾಗಿದೆ. ರಾಜಸ್ಥಾನದಿಂದ ಚುನಾವಣೆ ನಡೆಯಲಿರುವ ಮೂರು ರಾಜ್ಯಸಭಾ ಸ್ಥಾನಗಳಲ್ಲಿ ಒಂದನ್ನು ಗೆಲ್ಲಲು ಕಾಂಗ್ರೆಸ್ ಅನುಕೂಲಕರವಾಗಿದೆ. ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರ ಆರು ವರ್ಷಗಳ ಅಧಿಕಾರಾವಧಿಯನ್ನು ಏಪ್ರಿಲ್‌ನಲ್ಲಿ ಪೂರ್ಣಗೊಳಿಸಲಿದ್ದು, ನಂತರ ಸ್ಥಾನ ತೆರವಾಗಲಿದೆ. ಸಿಂಗ್ ಅವರ ಈ ಸ್ಥಾನವನ್ನು ಸೋನಿಯಾಗಾಂಧಿ ತುಂಬಲಿದ್ದಾರೆ. ಮನಮೋಹನ್ ಸಿಂಗ್ ಅವರಿಗೂ ಅನಾರೋಗ್ಯ ಕಾಡ್ತಿದ್ದು, ಐದು ದಶಕಗಳ ಸುದೀರ್ಘ ರಾಜಕೀಯ ಜೀವನದ ನಂತರ ಅವರು ನಿವೃತ್ತರಾಗಲಿದ್ದಾರೆ. ಐದು ಬಾರಿ ಲೋಕಸಭೆ ಸಂಸದರಾಗಿ ಸೇವೆ ಸಲ್ಲಿಸಿದ ಸೋನಿಯಾ ಮೊದಲ ಬಾರಿಗೆ ರಾಜ್ಯಸಭೆಗೆ ಪ್ರವೇಶಿಸಲಿದ್ದಾರೆ.
ಅಷ್ಟಕ್ಕೂ ರಾಜ್ಯಸಭಾ ಚುನಾವಣೆ ಲೋಕಸಭೆ ಹಾಗೂ ವಿಧಾನಸಭೆ ಚುನಾವಣೆಗಿಂತ ಭಿನ್ನವಾಗಿರುತ್ತದೆ. ಸಾರ್ವಜನಿಕರು ರಾಜ್ಯಸಭಾ ಚುನಾವಣೆಯಲ್ಲಿ ಭಾಗವಹಿಸುವುದಿಲ್ಲ. ಬದಲಿಗೆ ಜನರಿಂದ ಚುನಾಯಿತರಾದ ಶಾಸಕರು ಅದರಲ್ಲಿ ಭಾಗವಹಿಸುತ್ತಾರೆ. ಆದ್ದರಿಂದಲೇ ಈ ಚುನಾವಣೆಯನ್ನು ಪರೋಕ್ಷ ಚುನಾವಣೆ ಎಂದೂ ಕರೆಯಲಾಗುತ್ತೆ. ರಾಜ್ಯಸಭೆಯು ಶಾಶ್ವತ ಸದನವಾಗಿದ್ದು, ವಿಸರ್ಜನೆ ಮಾಡಲು ಸಾಧ್ಯವಿಲ್ಲ. ಮೇಲ್ಮನೆಯ ಸದಸ್ಯರು ಆರು ವರ್ಷಗಳ ಕಾಲ ಚುನಾಯಿತರಾಗುತ್ತಾರೆ. ಪ್ರತಿ ಎರಡು ವರ್ಷಗಳಿಗೊಮ್ಮೆ ಮೂರನೇ ಒಂದು ಭಾಗದಷ್ಟು ಸದಸ್ಯರ ಅಧಿಕಾರಾವಧಿ ಪೂರ್ಣಗೊಳ್ಳುತ್ತದೆ. ಅವರ ಸ್ಥಾನಕ್ಕೆ ಹೊಸಬರ ಆಯ್ಕೆಗೆ ಚುನಾವಣೆಗಳು ನಡೆಯುತ್ತವೆ. ಸದ್ಯ ರಾಜ್ಯಸಭೆಗೆ ಕಾಲಿಡ್ತಿರೋ ಸೋನಿಯಾರ ರಾಜಕೀಯ ಹಾದಿ ಹೇಗಿತ್ತು ಅನ್ನೋದನ್ನೂ ನೋಡೋಣ.
ಸೋನಿಯಾ ರಾಜಕೀಯ ಹಾದಿ!
ಸೋನಿಯಾಗಾಂಧಿ ಅವರು ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರ ಪತ್ನಿ ಹಾಗೂ ಇಂದಿರಾಗಾಂಧಿ ಅವರ ಸೊಸೆ. 1991ರಲ್ಲಿ ರಾಜೀವ್ ಗಾಂಧಿ ನಿಧನದ ನಂತರವೂ ಸೋನಿಯಾ ಸಕ್ರಿಯ ರಾಜಕೀಯಕ್ಕೆ ಬಂದಿರಲಿಲ್ಲ. 1999 ಮೊದಲ ಬಾರಿಗೆ ಚುನಾವಣಾ ರಾಜಕೀಯಕ್ಕೆ ಕಾಲಿಟ್ಟರು. ಮೊದಲ ಬಾರಿಗೆ ಉತ್ತರ ಪ್ರದೇಶದ ಅಮೇಥಿ ಮತ್ತು ಕರ್ನಾಟಕದ ಬಳ್ಳಾರಿ ಕ್ಷೇತ್ರದಿಂದಲೂ ಕಣಕ್ಕಿಳಿದಿದ್ದರು. ಎರಡೂ ಕಡೆಯೂ ಗೆದ್ದು ಆನಂತರ ಬಳ್ಳಾರಿ ಕ್ಷೇತ್ರಕ್ಕೆ ರಾಜೀನಾಮೆ ನೀಡಿ ಮೂಲ ಕ್ಷೇತ್ರ ಅಮೇಥಿಯನ್ನು ಉಳಿಸಿಕೊಂಡಿದ್ದರು. ಬಳಿಕ ರಾಯ್ ಬರೇಲಿಗೆ ಸ್ಥಳಾಂತರಗೊಂಡ ಸೋನಿಯಾ ಅಲ್ಲಿಂದ ಸತತವಾಗಿ ಗೆಲ್ಲುತ್ತಲೇ ಬಂದಿದ್ದಾರೆ. 2019ರ ಚುನಾವಣೆಯಲ್ಲೂ ಗೆಲುವು ಸಾಧಿಸಿದ್ದರು. 1998 ಮತ್ತು 2022 ರ ನಡುವೆ ಸುಮಾರು 24 ವರ್ಷಗಳ ಕಾಲ ಕಾಂಗ್ರೆಸ್ ಅಧ್ಯಕ್ಷರಾಗಿದ್ದ ಸೋನಿಯಾ ಗಾಂಧಿ ಅವರು ಐದು ಬಾರಿ ಲೋಕಸಭಾ ಸಂಸದರಾಗಿದ್ದಾರೆ.
ಇನ್ನು ಸೋನಿಯಾ ಗಾಂಧಿ ರಾಜ್ಯಸಭೆ ಪ್ರವೇಶ ಹಿನ್ನೆಲೆಯಲ್ಲಿ ಪ್ರಿಯಾಂಕಾ ವಾದ್ರಾ ರಾಯ್ ಬರೇಲಿಯಿಂದ ಲೋಕಸಭಾ ಚುನಾವಣೆಗೆ ಸ್ಪರ್ಧಿಸಬಹುದು ಎನ್ನಲಾಗಿದೆ. 2019 ರಲ್ಲಿ ಚುನಾವಣಾ ಕಣದಿಂದ ಪ್ರಿಯಾಂಕಾ ಹೊರಗುಳಿಯಲು ಬಯಸಿದ್ದರು. ಆದ್ರೆ 2024 ರ ಚುನಾವಣೆಗೆ ಅವ್ರನ್ನ ಕಣಕ್ಕಿಳಿಸೋಕೆ ಎಲ್ಲಾ ತಯಾರಿ ಮಾಡಿಕೊಳ್ಳಲಾಗ್ತಿದೆ. ಕಾಂಗ್ರೆಸ್ ಮಾಹಿತಿ ಪ್ರಕಾರ ಸೋನಿಯಾರಿಗೆ ಅನಾರೋಗ್ಯ ಸಮಸ್ಯೆ ಇದೆ. ಹೀಗಾಗಿ ಲೋಕಸಭೆಗೆ ಸ್ಪರ್ಧೆ ಬೇಡ ಅನ್ನೋ ನಿರ್ಧಾರಕ್ಕೆ ಬರಲಾಗಿದೆ. ಆದ್ರೆ ಸೋಲಿನ ಭಯದಿಂದ ಚುನಾವಣೆಯಿಂದ ಹಿಂದೆ ಸರಿದಿದ್ದಾರೆ ಎಂಬ ಬಗ್ಗೆಯೂ ಚರ್ಚೆಯಾಗ್ತಿದೆ.