ಪಿಂಚಣಿ ಪಡೆಯಲು ತಾಯಿಯ ಶವವನ್ನು 6 ವರ್ಷ ಇಟ್ಟುಕೊಂಡಿದ್ದ ಭೂಪ! – ಆಮೇಲೆ ಏನಾಯ್ತು ಗೊತ್ತಾ?
ಸರ್ಕಾರದಿಂದ ಬರುವ ಪಿಂಚಣಿಯನ್ನು ಪಡೆಯಲು ಜನರು ಹರಸಾಹಸ ಪಡುತ್ತಾರೆ. ವರ್ಷಾನುಗಟ್ಟಲೆ ಸರ್ಕಾರಿ ಕಚೇರಿಗಳಿಗೆ ಅಲೆಯುವುದನ್ನು ನೋಡಿರುತ್ತೇವೆ. ಇಲ್ಲೊಬ್ಬ ವ್ಯಕ್ತಿ ಸರ್ಕಾರದಿಂದ ಸಿಗುವ ಪಿಂಚಣಿಯ ಸಲುವಾಗಿ ತಾಯಿಯ ಶವವನ್ನು 6 ವರ್ಷಗಳ ಕಾಲ ಮನೆಯಲ್ಲಿಯೇ ಇಟ್ಟುಕೊಂಡಿದ್ದಾನೆ!
ಇದನ್ನೂ ಓದಿ: ‘ತಾವು ಗೆದ್ದ ಪದಕಗಳನ್ನ ಗಂಗಾ ನದಿಯಲ್ಲಿ ಬಿಡುತ್ತೇವೆ’ – ನ್ಯಾಯ ಸಿಗದೆ ಕುಸ್ತಿಪಟುಗಳ ನೋವಿನ ನಿರ್ಧಾರ!
ಈ ಘಟನೆ ನಡೆದಿದ್ದು ಇಟಲಿಯಲ್ಲಿ. ಹೆಲ್ಗಾ ಮಾರಿಯಾ ಹೆಂಗ್‌ಬಾರ್ತ್ ಎಂಬಾಕೆ ಸರ್ಕಾರದಿಂದ ಪಿಂಚಣಿ ಪಡೆಯುತ್ತಿದ್ದಳು. ಆಕೆ 86ನೇ ವಯಸ್ಸಿನಲ್ಲಿ ನಿಧನಳಾಗಿದ್ದಾಳೆ. ಆದರೆ ಆಕೆಯ ಮಗ ಆಕೆಗೆ ಸರ್ಕಾರದಿಂದ ಬರುತ್ತಿದ್ದ ಪಿಂಚಣಿಯ ಸಲುವಾಗಿ ಆರು ವರ್ಷಗಳ ಕಾಲ ಆಕೆಯ ಮೃತದೇಹವನ್ನು ತನ್ನ ಬಳಿಯೇ ಸಂರಕ್ಷಿಸಿ ಇಟ್ಟಿದ್ದ. ಸುಮಾರು ಆರು ವರ್ಷಗಳಿಂದ ಆತ ಯಾರಿಗೂ ಅನುಮಾನ ಬಾರದಂತೆ ನಡೆದುಕೊಳ್ಳುತ್ತಿದ್ದ. ಅಕ್ಕಪಕ್ಕದ ಮನೆಯವರು ಹೆಲ್ಗಾ ಎಲ್ಲಿ ಎಂದು ಕೇಳಿದಾಗ, ಆಕೆ ಜರ್ಮನಿಗೆ ತೆರಳಿದ್ದಾಳೆ ಎಂದು ನಂಬಿಸಿದ್ದಾನೆ. ಅಷ್ಟೇ ಅಲ್ಲದೇ ಈತನು ಕೂಡ ಆಗಾಗ ಜರ್ಮನಿಗೆ ಹೋಗಿ ಬರುತ್ತಿದ್ದ. ಮೇ 25 ರಂದು ಕೂಡ ಆತ ಜರ್ಮನಿಗೆ ತೆರಳಿದ್ದಾನೆ. ಈ ವೇಳೆ ಆತನ ಬಣ್ಣ ಬಯಲಾಗಿದೆ.
ಆಕೆ ಕಳೆದ ಹಲವು ವರ್ಷಗಳಿಂದ ಯಾವುದೇ ಆರೋಗ್ಯ ವಿಮೆಗಳನ್ನು ಕ್ಲೈಮ್ ಮಾಡಿರಲಿಲ್ಲ. ಹೀಗಾಗಿ ಅಧಿಕಾರಿಗಳು ಮನೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಮನೆಯಲ್ಲಿ ಕೊಳೆತ ಶವದಿಂದ ವಾಸನೆ ಬರಲಾರಂಭಿಸಿತ್ತು. ಶವದ ವಾಸನೆ ಬರುತ್ತಿದ್ದಂತೆ ಮನೆಯಲ್ಲಿ ಶೋಧ ನಡೆಸಿದ್ದಾರೆ. ಈ ವೇಳೆ ಬೆಡ್ ಮೇಲಿದ್ದ ಬ್ಯಾಗ್ ನಲ್ಲಿ ಆಕೆಯ ಶವ ಪತ್ತೆಯಾಗಿದೆ.
ನಂತರ ಸುದ್ದಿ ತಿಳಿದ ಮಗ ತಾನಾಗಿಯೇ ಬಂದು ಪೊಲೀಸರಿಗೆ ಶರಣಾಗಿದ್ದಾನೆ. ಸುಮಾರು ಆರು ವರ್ಷಗಳ ಅವಧಿಯಲ್ಲಿ, ತಾಯಿಯ ಬದಲು ಆತ ಬರೋಬ್ಬರಿ 12,25,725 ರೂಪಾಯಿ ಸರ್ಕಾರದಿಂದ ಪಡೆದಿದ್ದಾನೆ ಎಂದು ವಿಚಾರಣೆ ವೇಳೆ ಬಾಯಿಬಿಟ್ಟಿದ್ದಾನೆ.