ಕರ್ನಾಟಕದ ಕ್ರಶ್ ತುಂಟ ಭೀಮ – ರೀಲ್ಸ್ ನಲ್ಲೂ ತಿಂಡಿಪೋತನ ಟ್ರೆಂಡ್
ದಸರಾ ಸ್ಟಾರ್.. ಶಿಬಿರಕ್ಕೆ ಫ್ಯಾನ್ಸ್ ಲಗ್ಗೆ

ಅಂಬಾರಿ ಹೊತ್ತಿದ್ದು ಅಭಿಮನ್ಯು. ಬಟ್ ಹೀರೋ ಆಗಿದ್ದು ಮಾತ್ರ ಭೀಮ. ದಸರಾ ಮುಗಿದು ಎರಡು ವಾರ ಕಳೆದಿದ್ರೂ ಈ ಭೀಮನ ಕ್ರೇಜ್ ಮಾತ್ರ ಕಮ್ಮಿ ಆಗಿಲ್ಲ. ಯಾವ ಸೆಲೆಬ್ರಿಟಿಗೂ ಕಡಿಮೆ ಇಲ್ಲ ಇವನ ಸ್ಟಾರ್ ಡಮ್. ಸೋಶಿಯಲ್ ಮೀಡಿಯಾದಲ್ಲಂತೂ ಈಗ ಈತನೇ ಟ್ರೆಂಡ್. ಆ ರೇಂಜ್ಗೆ ಎಲ್ರನ್ನೂ ಅಟ್ರ್ಯಾಕ್ಟ್ ಮಾಡಿದ್ದಾನೆ. ನಾಡಹಬ್ಬ ಮುಗಿಸಿಕೊಂಡು ವಾಪಸ್ ಶಿಬಿರ ಸೇರಿದ್ರೂ ಕೂಡ ಆತನನ್ನ ಒಂದು ಸಲನಾದ್ರೂ ನೋಡ್ಬೇಕು ಅಂತಾ ಅಭಿಮಾನಿ ಬಳಗ ಮತ್ತಿಗೋಡು ಆನೆ ಶಿಬಿರಕ್ಕೆ ಹುಡುಕಿಕೊಂಡು ಹೋಗ್ತಿದೆ. ಅಷ್ಟಕ್ಕೂ ಭೀಮ ಅಂದ್ರೆ ಯಾಕೆ ಜನ್ರಿಗೆ ಇಷ್ಟೊಂದು ಇಷ್ಟ? ಶಿಬಿರದಲ್ಲಿ ಹೇಗಿರ್ತಾನೆ? ಭೀಮನ ಬೆಸ್ಟ್ ಫ್ರೆಂಡ್ ಯಾರು? ಇಡೀ ಕರ್ನಾಟಕದ ಕ್ರಶ್ ಆಗಿರೋ ಭೀಮ ಆನೆಯ ಬಗೆಗಿನ ಅಚ್ಚರಿಯ ವಿಚಾರ ಇಲ್ಲಿದೆ.
ಇದನ್ನೂ ಓದಿ: ಮಾನಸ ಅತಿರೇಕದ ವರ್ತನೆ.. ಬಿಗ್ ಬಾಸ್ ನಿಂದ OUT? – ತುಕಾಲಿ ಪತ್ನಿ ದೃಷ್ಟಿ ಗೊಂಬೆ
ವಿಶ್ವವಿಖ್ಯಾತ ಮೈಸೂರು ದಸರಾದಲ್ಲಿ ಈ ಸಲ ಸಿಕ್ಕಾಪಟ್ಟೆ ಸೌಂಡ್ ಮಾಡಿದ್ದು ಭೀಮ ಆನೆ. ಅಂಬಾರಿ ಹೊತ್ತು ಮೆರೆದ ಅಭಿಮನ್ಯುಗಿಂತ ಜಾಸ್ತಿ ಫ್ಯಾನ್ಸ್ ಈ ಭೀಮನಿಗೇ ಇದ್ದಾರೆ. ನಾಡಹಬ್ಬಕ್ಕೆ ಬಂದ ಜನ ಕೂಡ ಜೋರಾಗಿ ಭೀಮಾ ಭೀಮಾ ಅಂತಾ ಕೂಗಿ ಸಂಭ್ರಮಿಸಿದ್ದಾರೆ. ಅದಕ್ಕೆ ಕಾರಣ ಈ ತಿಂಡಿಪೋತನ ತುಂಟತನ. ಭೀಮಾ.. ಎಂದು ಕೂಗಿದಾಕ್ಷಣ ನಿಂತು ಅವರತ್ತ ಸೋಂಡಿಲು ಎತ್ತಿ ರೆಸ್ಪಾನ್ಸ್ ಮಾಡುವ ಅವನ ವರ್ತನೆಗೆ ದಸರೆಗೆ ಬಂದವ್ರೆಲ್ಲಾ ಫಿದಾ ಆಗಿದ್ದಾರೆ. ಸೋಶಿಯಲ್ ಮೀಡಿಯಾ ರೀಲ್ಸ್ನಲ್ಲೂ ಕೂಡ ಈಗ ಭೀಮನದ್ದೇ ಹವಾ. ಅವ್ನ ರಿಯಾಕ್ಷನ್ಗೆ ಮನಸೋತು ಒಂದು ಸಲನಾದ್ರೂ ಭೀಮನನ್ನ ನೋಡ್ಬೇಕು ಅಂತಾ ತುಂಬಾ ಜನ ಶಿಬಿರಕ್ಕೆ ಭೇಟಿ ನೀಡ್ತಿದ್ದಾರೆ. ಮತ್ತಿಗೋಡು ಶಿಬಿರಕ್ಕೆ ತೆರಳಿ ಪರ್ಟಿಕ್ಯೂಲರ್ ಆಗಿ ಭೀಮನನ್ನೇ ನೋಡ್ಬೇಕು ಅಂತಾ ಕೇಳಿ ಫೋಟೋಗಳನ್ನ ಕ್ಲಿಕ್ಕಿಸಿಕೊಳ್ತಿದ್ದಾರೆ. ಹೀಗೆ ಜನರ ಫೇವರೆಟ್ ಆಗಿರೋ ಭೀಮನ ಹಿಂದೆ ಒಂದು ರೋಚಕ ಕಥೆಯೇ ಇದೆ. ಬಾಲ ಕಟ್ ಆಗಿದ್ದು, ದಂತವನ್ನೂ ಕೂಡ ಕಟ್ ಮಾಡಲಾಗಿದೆ.
ಸೌಮ್ಯ ಸ್ವಭಾವ.. ಶಿಬಿರದಲ್ಲೇ ಫೇವರೆಟ್ ಈ ಭೀಮ!
ಭೀಮಾ ಎಂದು ಕರೆದಾಕ್ಷಣ ತಿರುಗಿ ನೋಡಿ ರಿಯಾಕ್ಟ್ ಮಾಡುವಂತಹ ಈ ಭೀಮಾ ಆನೆಗೆ ಮಾವುತರು ಹಾಗೂ ಅರಣ್ಯ ಅಧಿಕಾರಿಗಳು ತುಂಟ, ತಿಂಡಿಪೋತ ಅಂತಾನೇ ಕರೀತಾರೆ. ಟೈಮಿಗೆ ಸರಿಯಾಗಿ ತಿಂಡಿಯನ್ನು ಕೊಡ್ಬೇಕು. ಹೊಟ್ಟೆ ತುಂಬಿತೆಂದರೆ ಸಾಕು ತನ್ನೊಂದಿಗಿರುವ ಆನೆಗಳು, ಮಾವುತರು ಯಾರೇ ಇದ್ದರೂ ಅವರೊಂದಿಗೆ ತುಂಟತನವನ್ನು ಆರಂಭಿಸುತ್ತಾನೆ. ಭೀಮಾ ಆನೆ ಸೌಮ್ಯ ಸ್ವಭಾವದವನಾಗಿದ್ದು, ಯಾರೇ ತನ್ನ ಹೆಸರು ಕರೆದರೂ ರಿಯಾಕ್ಟ್ ಮಾಡುತ್ತಾನೆ. ಅವನ ಈ ಗುಣಕ್ಕೆ ಎಲ್ಲ ಮಾವುತರೂ, ಕಾವಾಡಿಗರೂ ಕೂಡ ಭೀಮಾ ಆನೆಯನ್ನು ತುಂಬಾ ಇಷ್ಟಪಡುತ್ತಾರೆ.
ತಾಯಿಯಿಲ್ಲದೆ ಅಲೆಯುತ್ತಿದ್ದ ಭೀಮ ಬದುಕಿದ್ದೇ ಹೆಚ್ಚು!
ಭೀಮಾ ಆನೆಯು 2001ರಲ್ಲಿ ತನ್ನ ತಾಯಿಯನ್ನು ಕಳ್ಕೊಂಡು ಕಾಡಿನಲ್ಲಿ ಅಲೆಯುತ್ತಿದ್ದ. ತನ್ನ ಇಡೀ ಆನೆಯ ಹಿಂಡಿನ ಗುಂಪನ್ನು ಕಳೆದುಕೊಂಡು ಒಬ್ಬಂಟಿಯಾಗಿ ಸುತ್ತಾಡುವಾಗ ನಾಗರಹೊಳೆ – ಮತ್ತಿಗೋಡು ಅರಣ್ಯ ವಲಯದ ಭೀಮನಕಟ್ಟೆಯಲ್ಲಿ ಅರಣ್ಯ ಇಲಾಖೆ ಸಿಬ್ಬಂದಿಯ ಕೈಗೆ ಸಿಗುತ್ತಾನೆ. ಇದೇ ವರ್ಷದಲ್ಲಿ ಒಟ್ಟು ಭೀಮನಕಟ್ಟೆ ಅರಣ್ಯ ವ್ಯಾಪ್ತಿಯಲ್ಲಿ ಭೀಮ ಆನೆಯನ್ನು ಸೇರಿಸಿದಂತೆ ಒಟ್ಟು 5 ಆನೆಮರಿಗಳು ಸಿಗುತ್ತವೆ. ಆದರೆ, ಈ ಪೈಕಿ ನಾಲ್ಕು ಆನೆ ಮರಿಗಳು ತಾಯಿ ಹಾಲು ಇಲ್ಲದೇ ಆರೋಗ್ಯದಲ್ಲಿ ಸಮಸ್ಯೆ ಉಂಟಾಗಿ ಸಾವಿಗೀಡಾಗುತ್ತವೆ. ಆದರೆ, ಅರಣ್ಯ ಸಿಬ್ಬಂದಿಗೆ ಸಿಕ್ಕ ಆನೆ ಮರಿಗಳಲ್ಲಿ ಜೀವಂತವಾಗಿ ಉಳಿದ ಗಟ್ಟಿ ಗುಂಡಿಗೆ ಆನೆ ಎಂದರೆ ಭೀಮ ಆನೆ ಮಾತ್ರ.
ಭೀಮನಿಗಿದೆ ಅಂಬಾರಿ ಹೊರುವ ಎಲ್ಲಾ ಗತ್ತು!
ಸದ್ಯ ಭೀಮ ಆನೆಗೆ 24 ವರ್ಷ ವಯಸ್ಸಾಗಿದೆ. 2.87 ಮೀಟರ್ ಎತ್ತರವಿರುವ ಈ ಭೀಮ 5,000 ಕೆ.ಜಿ. ತೂಕವನ್ನು ಹೊಂದಿದ್ದಾನೆ. ಇನ್ನು ಮುಂದಿನ ದಿನಗಳಲ್ಲಿ ಭೀಮ ಆನೆ ಇದೇ ರೀತಿ ಬಲಿಷ್ಠವಾಗಿ ಬೆಳೆಯುತ್ತಾ ಹೋದಲ್ಲಿ ಮೈಸೂರು ದಸರಾ ಅಂಬಾರಿ ಹೊರುವ ದೇಹದಾರ್ಡ್ಯತೆಯನ್ನು ಪಡೆದುಕೊಳ್ಳುತ್ತಾನೆ. ಜೊತೆಗೆ, ಎಲ್ಲ ಆನೆಗಳೊಂದಿಗೆ, ಕಾವಾಡಿಗಳು ಮತ್ತು ಮಾವುತರೊಂದಿಗೆ ಸೌಮ್ಯವಾಗಿ ನಡೆದುಕೊಂಡು ಪ್ರೀತಿಯನ್ನು ಗಳಿಸಿದ್ದಲ್ಲಿ ದಸರಾ ಅಂಬಾರಿಯನ್ನು ಹೊರಲು ಅಗತ್ಯವಿರುವ ಎಲ್ಲ ಸಾಮರ್ಥ್ಯವನ್ನೂ ಹೊಂದಿದ್ದಾನೆ. ಈಗಾಗಲೇ ಮೈಸೂರಿನ ಜನತೆಯ ಮನಸ್ಸು ಗೆದ್ದಿರುವ ಭೀಮ ಆನೆಗೆ ಅಭಿಮಾನಿಗಳ ಬಳಗವೇ ಹುಟ್ಟಿಕೊಂಡಿವೆ. ಅವರೆಲ್ಲರೂ ಕೂಡ ಭೀಮ ಆನೆ ಶೀಘ್ರವೇ ದಸರಾ ಅಂಬಾರಿ ಹೊರುವುದನ್ನು ನೋಡಬೇಕು ಅಂತಿದ್ದಾರೆ.
ಆಪ್ತ ಸ್ನೇಹಿತ ಕಂಜನ್ ಜೊತೆಗಿದ್ರೆ ಮತ್ತಷ್ಟು ತುಂಟತನ!
ಮೈಸೂರು ದಸರಾ ಸೇರಿದಂತೆ ವಿವಿಧೆಡೆ ಭೀಮನೊಂದಿಗೆ ಸಾಥ್ ಕೊಡುವ ಆನೆ ಎಂದರೆ ಕಂಜನ್. ಈ ಕಂಜನ್ ಕೂಡ ಬಲಿಷ್ಠವಾಗಿದ್ದು, ಸೌಮ್ಯ ಸ್ವಭಾವದವನಾಗಿದ್ದಾನೆ. ಕಂಜನ್ ಕೂಡ ಭೀಮ ಜೊತೆಗಿದ್ದರೆ ಸ್ವಲ್ಪ ತುಂಟತನ ಮಾಡ್ತಾನೆ. ಭೀಮ ಏನೇ ಮಾಡಿದರೂ ಅದನ್ನು ತಾನೂ ಅನುಕರಣೆ ಮಾಡ್ತಾನೆ. ಮೈಸೂರಿನ ದಸರಾ ಮಹೋತ್ಸವದಲ್ಲಿ ಜನರು ಭೀಮ ಆನೆಯನ್ನು ಕೂಗಿದಾಗ ಭೀಮ ನಿಂತು ಸೊಂಡೆಲೆತ್ತಿ ಪ್ರತಿಕ್ರಿಯೆ ನೀಡಿದರೆ, ಈ ಆನೆಯೊಂದಿಗೆ ಕಂಜನ್ ಆನೆ ಕೂಡ ತಾನೂ ಸೊಂಡೆಲೆತ್ತಿ ಜನರಿಗೆ ತೋರಿಸಿ ಪ್ರತಿಕ್ರಿಯೆ ನೀಡುತ್ತಿದ್ದನು.
ಅರಣ್ಯ ಇಲಾಖೆ ಕಾರ್ಯಾಚರಣೆಗಾಗಿ ಭೀಮನ ದಂತ ಕಟ್!
ನೀವು ರಿಯಲ್ಲಾಗಿ ಅಥವಾ ಫೋಟೋ, ವಿಡಿಯೋಗಳಲ್ಲಿ ಗಮನಿಸಿದ್ರೆ ಭೀಮನ ದಂತ ಕಟ್ ಆಗಿರೋದನ್ನ ಗಮನಿಸಿರಬಹುದು. ಅಷ್ಟಕ್ಕೂ ದಂತ ಕಟ್ ಮಾಡಿರೋದು ಅರಣ್ಯ ಇಲಾಖೆ ಸಿಬ್ಬಂದಿಯೇ. ಯಾಕಂದ್ರೆ ಭೀಮಾ ಆನೆಯನ್ನ ಕಾಡಾನೆ, ಹುಲಿ ಸೇರಿದಂತೆ ವನ್ಯಮೃಗಗಳ ಕಾರ್ಯಾಚರಣೆ ವೇಳೆ ಬಳಸಿಕೊಳ್ಳಲಾಗುತ್ತೆ. ಹೀಗಾಗಿ ದಂತಗಳು ಶಾರ್ಪ್ ಆಗಿದ್ರೆ ಎದುರಾಳಿ ಆನೆಗೆ ತಿವಿದು ಗಾಯಗಳಾಗೋ ಸಾಧ್ಯತೆ ಇರುತ್ತೆ. ಹೀಗಾಗಿ ಎರಡೂ ದಂತಗಳನ್ನ ಮುಂದಿನ ಭಾಗದಲ್ಲಿ ಕಟ್ ಮಾಡಲಾಗಿದೆ. ಇನ್ನು ದಸರೆ ಮುಗಿದ ಬಳಿಕ ಭೀಮ ಆನೆಯನ್ನ ನಾಗರಹೊಳೆ ಕಾಡಂಚಿನ ಗ್ರಾಮಗಳ ಬಳಿ ಕಾಡಾನೆಗಳನ್ನ ಕಾಡಿಗಟ್ಟುವ ಕಾರ್ಯಾಚರಣೆಯಲ್ಲಿ ಬಳಸಿಕೊಳ್ಳಲಾಗಿತ್ತು. ಒಟ್ನಲ್ಲಿ ದಿನದಿನಕ್ಕೂ ಭೀಮನ ಕ್ರೇಜ್ ಜೋರಾಗ್ತಾನೇ ಇದೆ. ಸೋ ತುಂಟ, ತಿಂಡಿಪೋತ, ಬಲ ಭೀಮ ತಾಯಿ ಚಾಮುಂಡೇಶ್ವರಿ ವಿಗ್ರಹವನ್ನ ಚಿನ್ನದ ಅಂಬಾರಿಯಲ್ಲಿ ಇಟ್ಟು ಹೊತ್ತು ಸಾಗೋದನ್ನ ನೋಡೋಕೆ ಲಕ್ಷಾಂತರ ಅಭಿಮಾನಿಗಳು ಕಾಯ್ತಿದ್ದಾರೆ.