ಓಂ ಪರ್ವತ ನೋಡಿ ಆಘಾತ – ನೆತ್ತಿ ಮೇಲೆ ಹಿಮ ಖಾಲಿ ಖಾಲಿ
ದೇವಭೂಮಿಗೆ ಇದೆಂಥಾ ಹೀನ ಸ್ಥಿತಿ?

ಓಂ ಪರ್ವತ ನೋಡಿ ಆಘಾತ – ನೆತ್ತಿ ಮೇಲೆ ಹಿಮ ಖಾಲಿ ಖಾಲಿದೇವಭೂಮಿಗೆ ಇದೆಂಥಾ ಹೀನ ಸ್ಥಿತಿ?

ಉತ್ತರಾಖಂಡ್ ರಾಜ್ಯವೆಂದರೇ ದೇವಭೂಮಿ ಅಂತಾನೇ ಪ್ರಖ್ಯಾತಿ ಪಡೆದಿದೆ. ಅಲ್ಲಿರುವ ಒಂದೊಂದು ದೇವಾಲಯವೂ, ಒಂದೊಂದು ಹಿಮ ಪರ್ವತವೂ ಈ ದೇಶದ ಪರಂಪರೆಯ, ಸಂಸ್ಕೃತಿಯ ಕಥೆಯನ್ನು ಹೇಳುತ್ತವೆ. ಅದರಲ್ಲೂ ಪಿತ್ತೋರ್​ಗಢ ಜಿಲ್ಲೆಯಲ್ಲಿರುವ ಓಂ ಪರ್ವತ ಪ್ರವಾಸಿಗರ ನೆಚ್ಚಿನ ತಾಣ. ಪ್ರತಿಕಾಲದಲ್ಲಿಯೂ ತನ್ನ ನೆತ್ತಿಯ ಮೇಲೆ ಹಿಮ ಹೊದ್ದುಕೊಂಡೇ ಇರುತ್ತೆ ಓಂ ಪರ್ವತ. ಆದ್ರೆ, ಇತ್ತೀಚಿಗೆ ಓಂ ಪರ್ವತಕ್ಕೆ ಪ್ರವಾಸಕ್ಕೆ ಹೋದವರು ಶಾಕ್ ಗೊಳಗಾಗಿದ್ದಾರೆ. ಆಘಾತದಿಂದ ಇದೆಂಥಾ ಗತಿ ಬಂತಪ್ಪಾ ಅಂತಿದ್ದಾರೆ. ಹಾಗಾದ್ರ ಓಂ ಪರ್ವತದಲ್ಲಿ ಕಂಡಿರೋ ಅಂಥಾ ದೃಶ್ಯವಾದರೂ ಏನು? ದೇವಭೂಮಿಗೆ ಬಂದಿರೋ ದುಸ್ಥಿತಿಯೇನು ಎಂಬ ಬಗ್ಗೆ ಮಾಹಿತಿ ಇಲ್ಲಿದೆ.

ಇದನ್ನೂ ಓದಿ: ಬಾಹ್ಯಾಕಾಶದಲ್ಲೇ ಬಾಕಿಯಾದ ಸುನಿತಾ! – ಭೂಮಿಗೆ ವಾಪಾಸಾಗಲಿದೆ ಸ್ಟಾರ್‌ಲೈನರ್‌ ಬಾಹ್ಯಾಕಾಶ ನೌಕೆ

ವ್ಯಾಸ ಕಣಿವೆಯಲ್ಲಿರುವ ಜನಪ್ರಿಯ ಪ್ರವಾಸಿ ತಾಣವೇ ಓಂ ಪರ್ವತ. ಈ ಪರ್ವತ ಸುಮಾರು 14,000 ಅಡಿ ಎತ್ತರದಲ್ಲಿದೆ. ಪರ್ವತದ ತುತ್ತ ತುದಿಯಲ್ಲಿ ಸಂಗ್ರಹಗೊಳ್ಳುವ ಹಿಮವು ಹಿಂದಿ ಅಕ್ಷರ ಓಂ ಅನ್ನು ಹೋಲುವಂತೆ ಕಾಣುತ್ತದೆ. ಹೀಗಾಗಿಯೇ ಈ ಪರ್ವತಕ್ಕೆ ಓಂ ಪರ್ವತ ಎಂಬ ಹೆಸರು ಬಂದಿದೆ. ಆದರೆ, ಈಗ ಇದೇ ಪರ್ವತದಲ್ಲಿ ಇತಿಹಾಸದಲ್ಲಿಯೇ ಮೊದಲ ಬಾರಿ ಹಿಮ ಖಾಲಿಯಾಗಿದೆ. ನಂಬಿದ್ರೆ ನಂಬಿ.. ಓಂ ಪರ್ವತದಿಂದ ಮಂಜು ಕಾಣೆಯಾಗಿದೆ. ಪರ್ವತದ ಮೇಲೆ ನಿಚ್ಚಳವಾಗಿ ಕಾಣುತ್ತಿದ್ದ ಹಿಂದಿಯ ಓಂಕಾರ ಬರಹ ಕಾಣಿಸದೆ ಪ್ರವಾಸಿಗರು ಕಂಗಾಲಾಗಿದ್ದಾರೆ.

ಹವಾಮಾನ ತಜ್ಞರು ಹೇಳುವ ಪ್ರಕಾರ. ಕಳೆದ ಐದು ವರ್ಷಗಳಲ್ಲಿ ಹಿಮಾಲಯದ ಮೇಲೆ ಬಿದ್ದ ಕಡಿಮೆ ಮಳೆ ಬೆಟ್ಟಗಳ ಮೇಲೆ ಬೀಳುವ ಹಿಮವನ್ನು ಚದುರಿಸಿಕೊಂಡು ಹೋಗಿದೆ, ಇದೇ ಕಾರಣದಿಂದಾಗಿ ಈ ಬಾರಿ ಮೊದಲ ಬಾರಿಗೆ ಓಂ ಪರ್ವತದಲ್ಲಿ ಹಿಮ ಬಿದ್ದಿಲ್ಲ. ಅದು ಮಾತ್ರವಲ್ಲ, ಸದ್ಯ ವಾಹನಗಳಿಂದ ಹಾಗೂ ಇತರೇ ಮೂಲಗಳಿಂದ ಆಗುತ್ತಿರುವ ವಾಯುಮಾಲಿನ್ಯ ಹಾಗೂ ಜಾಗತಿಕ ತಾಪಮಾನವೂ ಕೂಡ ಇದಕ್ಕೆ ಕಾರಣ ಎನ್ನುತ್ತಿದ್ದಾರೆ. ಒಂದು ವೇಳೆ ಓಂ ಪರ್ವತ ಹೀಗೆ ಹಿಮರಹಿತವಾಗಿ, ಬೋಳು ಬೋಳಾಗಿಯೇ ಉಳಿದುಕೊಂಡ್ರೆ ಪ್ರವಾಸೋದ್ಯಮದ ಮೇಲೆ ದೊಡ್ಡ ಪರಿಣಾಮ ಬೀರಲಿದೆ ಎಂದು ಹೇಳಲಾಗುತ್ತಿದೆ.

ಓಂ ಪರ್ವತ ಉತ್ತರಾಖಂಡ್​​ನ ಅತ್ಯಂತ ಜನಪ್ರಿಯ ಪ್ರವಾಸಿ ತಾಣ. ಚಾರಣಿಗರ ಅಚ್ಚುಮೆಚ್ಚಿನ ಜಾಗ. ಸಮುದ್ರಮಟ್ಟದಿಂದ 14 ಸಾವಿರ ಅಡಿ ಎತ್ತರದಲ್ಲಿರುವ ಈ ಓಂ ಪರ್ವತ ಮೇಲೆ ಪ್ರಕೃತಿ ಎರಚುತ್ತಿದ್ದ ಹಿಮ ಹಿಂದಿಯ ಓಂ ಅಕ್ಷರವನ್ನು ತೋರಿಸುತ್ತಿತ್ತು. ಅದನ್ನು ನೋಡಲೆಂದೇ ಲಕ್ಷ ಲಕ್ಷ ಪ್ರವಾಸಿಗರು ಇಲ್ಲಿಗೆ ಭೇಟಿ ನೀಡುತ್ತಿದ್ದರು. ಆದ್ರೆ ಈ ಬಾರಿ ಪ್ರವಾಸಕ್ಕೆ ಬಂದವರು ಹಿಮ ಗೀಚುವ ಓಂಕಾರ ಕಾಣದೇ ನಿರಾಶೆಯಿಂದ ತೆರಳುತ್ತಿದ್ದಾರೆ. ಸದಾ ಹಿಮದಿಂದ ಕೂಡಿದ ಶ್ವೇತವರ್ಣದಿಂದ ಕಂಗೊಳಿಸುತ್ತಿದ್ದ ಪರ್ವತವು ಈಗ ಬೋಳು ಬೋಳಾಗಿ ಕಾಣಿಸುತ್ತಿದೆ.

ಕಳೆದ 22 ವರ್ಷಗಳಿಂದ ಆದಿಕೈಲಾಸ ಪರ್ವತದ ಬೇಸ್​ಕ್ಯಾಂಪ್​ನಲ್ಲಿ ಕಾರ್ಯನಿರ್ವಹಿಸುತ್ತಿರುವ ಧನ್ ಸಿಂಗ್ ಬಿಸ್ಟಾ ಎಂಬವರು ಒಂದು ಮಾತು ಹೇಳಿದ್ದಾರೆ. ಕಳೆದ 22 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಹಿಮರಹಿತ ಓಂ ಪರ್ವತವನ್ನು ನಾನು ನೋಡುತ್ತಿದ್ದೇನೆ ಎಂದಿದ್ದಾರೆ.

ಓಂ ಪರ್ವತದಲ್ಲಿ ವಾರ್ಷಿಕವಾಗಿ ಹಿಮ ಕರಗುವ ಪ್ರಮಾಣ ಈ ಹಿಂದೆ 95-99% ದಷ್ಟಿತ್ತು. ಆದರೆ ಈ ವರ್ಷ ಸಂಪೂರ್ಣ ಹಿಮ ಕರಗಿ ಸಂಪೂರ್ಣ ಪರ್ವತ ಬೋಳಾಗಿದೆ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ. ಆದರೆ, ಕಳೆದ ಕೆಲ ದಿನಗಳ ಹಿಂದೆ ಒಮ್ಮೆ ಹಿಮಪಾತವಾಗಿತ್ತು. ಆದರೆ, ಓಂ ಪರ್ವತ ಮತ್ತೆ ಮೊದಲಿನಿಂತೆ ಹಿಮದಿಂದ ಕಂಗೊಳಿಸಲು ಸಮಯಬೇಕು. ಕಳೆದ ಐದು ವರ್ಷಗಳಲ್ಲಿ ಹಿಮಾಲಯದ ಮೇಲಿನ ಪ್ರದೇಶದಲ್ಲಿ ಅಲ್ಪ ಪ್ರಮಾಣದ ಮಳೆ ಮತ್ತು ಚದುರಿದ ಹಿಮಪಾತವು ಓಂ ಪರ್ವತದಿಂದ ಈ ವರ್ಷ ಹಿಮವು ಸಂಪೂರ್ಣವಾಗಿ ಕಣ್ಮರೆಯಾಗಲು ಕಾರಣವಾಗಿರಬಹುದು ಎನ್ನಲಾಗ್ತಿದೆ.

ಓಂ ಪರ್ವತಕ್ಕೆ ಹಿಮ ಇದ್ದರೇನೇ ಕಳೆ. ಇದನ್ನ ನೋಡಿದರೆ ಮಾತ್ರ ಪ್ರವಾಸಿಗರಿಗೂ ಇಷ್ಟು ದೂರ ಬಂದಿದ್ದಕ್ಕೆ ಸಾರ್ಥಕ ಭಾವ ಮೂಡುವುದು. ಆದರೆ, ಪ್ರಕೃತಿ ಹೀಗೆ ಇರುತ್ತೆ ಅಂತಾ ಹೇಳೋದಕ್ಕೆ ಬರೋದಿಲ್ಲ. ವಾಹನಗಳ ಅತಿಯಾದ ಬಳಕೆ, ವಾಯುಮಾಲಿನ್ಯ, ಕಡಿಮೆಯಾಗುವ ಮಳೆ ಪ್ರಮಾಣ ಇದೆಲ್ಲಾ ಕೂಡಾ ದೇವಭೂಮಿಯ ಮೇಲೆ ಪರಿಣಾಮ ಬೀರಿದೆ. ಮಾನವ. ನಿನ್ನಿಂದಲೇ ಪೃಕೃತಿಗೂ ಸಂಕಷ್ ಅನ್ನೋದನ್ನ ತೋರಿಸಿಕೊಡ್ತಿದೆ ಈ ಓಂ ಪರ್ವತ.

Shwetha M