ಅಂದು 80 ರನ್.. ಈಗ 10 ವಿಕೆಟ್! – ನಾಚಿಕೆಯ ಮುದ್ದೆ ಸ್ನೇಹಾ ರಾಣಾ ಜಗತ್ತನ್ನೇ ಗೆದ್ದಿದ್ದು ಹೇಗೆ?

ಅಂದು 80 ರನ್.. ಈಗ 10 ವಿಕೆಟ್! – ನಾಚಿಕೆಯ ಮುದ್ದೆ ಸ್ನೇಹಾ ರಾಣಾ ಜಗತ್ತನ್ನೇ ಗೆದ್ದಿದ್ದು ಹೇಗೆ?

ಸ್ನೇಹಾ ರಾಣಾ.. ದಕ್ಷಿಣ ಆಫ್ರಿಕಾದ ವಿರುದ್ಧದ ಏಕೈಕ ಟೆಸ್ಟ್‌ ಮ್ಯಾಚ್‌ ನಲ್ಲಿ 10 ವಿಕೆಟ್‌ ಕಬಳಿಸಿ, ದೇಶದ ಮಹಿಳಾ ಆಟಗಾರ್ತಿಯರಲ್ಲಿ ಈ ಸಾಧನೆ ಮಾಡಿದ ಎರಡನೇ ಕ್ರಿಕೆಟರ್‌ ಎಂಬ ದಾಖಲೆ ಬರೆದಿದ್ದಾರೆ.. ನಾಚಿಕೆಯ ಮುದ್ದೆಯಂತಿರುವ ಈ ಸ್ನೇಹಾ ರಾಣಾ, ಬೌಲಿಂಗ್‌ ಮೂಲಕ ಎದುರಾಳಿಗಳನ್ನು ಬಲೆಗೆ ಹಾಕುವಲ್ಲಿ ಮಾತ್ರ ನಿಸ್ಸೀಮರಾಗಿದ್ದಾರೆ.. ಹುಡುಗರ ಜೊತೆಗೆ ಕ್ರಿಕೆಟ್‌ ಪ್ರ್ಯಾಕ್ಟೀಸ್‌ ಆರಂಭಿಸಿದ್ದ ಸ್ನೇಹಾ ರಾಣಾ ಅವರ ಕ್ರಿಕೆಟ್‌ ಜರ್ನಿಯೇ ರೋಚಕ.. ತಂಡದಲ್ಲಿ ಭದ್ರ ಸ್ಥಾನಗಳಿಸಲು ಪರದಾಡುತ್ತಿದ್ದ ರಾಣಾ ಈಗ ವಿಕೆಟ್‌ ಬೇಟೆಯಾಡುವ ಸಿಂಹಿಣಿಯಾಗಿದ್ದಾರೆ.. ಸ್ನೇಹಾ ರಾಣಾ ಬಗ್ಗೆ ಇಂಟ್ರೆಸ್ಟಿಂಗ್‌ ಮಾಹಿತಿ ಇಲ್ಲಿದೆ.

ಉತ್ತರಾಖಂಡ್‌ ರಾಜ್ಯದ ಡೆಹ್ರಾಡೂನ್‌ನ ಹೊರವಲಯದ ಸಿನೌಲಾದ ರೈತ ಕುಟುಂಬದಲ್ಲಿ ಜನಿಸಿದ ಪ್ರತಿಭೆ ಸ್ನೇಹಾ ರಾಣಾ.. ಆದ್ರೆ ಇವರ ಅಪ್ಪ ಭಗವಾನ್‌ ಸಿಂಗ್ ರಾಣಾಗೆ ತನ್ನ ಮಗಳು ದೊಡ್ಡ ಕ್ರಿಕೆಟರ್‌ ಆಗಬೇಕು ಎಂಬ ಮಹದಾಸೆಯಿತ್ತು.. ಆದ್ರೆ ಮಗಳೀಗ ದೊಡ್ಡ ಸಾಧನೆ ಮಾಡುವುದನ್ನು ನೋಡಲು ಅಪ್ಪನೇ ಇಲ್ಲ.. ಕಳೆದ ಮೂರು  ವರ್ಷಗಳ ಹಿಂದೆ ಹೃದಯಾಘಾತದಿಂದ  ಭಗವಾನ್ ಸಿಂಗ್ ರಾಣಾ ನಿಧನರಾಗಿದ್ದರು.. ತನ್ನ ಭವಿಷ್ಯ ರೂಪಿಸಲು ಹಗಲಿರುಳು ಕನಸು ಕಂಡಿದ್ದ ಅಪ್ಪ, ಅಂತಾರಾಷ್ಟ್ರೀಯ ಪಂದ್ಯದಲ್ಲಿ ಮಿಂಚುವುದನ್ನು ಕಣ್ತುಂಬಿಸಿಕೊಳ್ಳಲು ಇರಲಿಲ್ಲ ಎಂಬ ನೋವೀಗ ಸ್ನೇಹಾರನ್ನು ಕಾಡುತ್ತಿದೆ.

ಮೂರು ವರ್ಷಗಳ ಹಿಂದೆ ಅಪ್ಪನ ನಿಧನದ ನಂತರ ಸ್ನೇಹಾ ರಾಣಾ ಮಂಕಾಗಿದ್ದರು.. ಆದರೆ ಆ ದುಃಖದಿಂದ ಹೊರಬರಲು ಕ್ರಿಕೆಟ್‌ ಅಭ್ಯಾಸವನ್ನು ಮತ್ತಷ್ಟು ಹೆಚ್ಚು ಮಾಡಿದ್ದರು.. ಅಪ್ಪ ತೀರಿಕೊಂಡ ನೋವಲ್ಲಿದ್ರು.. 2021 ರಲ್ಲಿ ನಡೆದ ಇಂಗ್ಲೆಂಡ್‌ ವಿರುದ್ಧ ನಡೆದ ಮಹಿಳೆಯರ ಏಕೈಕ ಟೆಸ್ಟ್‌ ಮ್ಯಾಚ್ ನಲ್ಲಿ ಸ್ನೇಹ ರಾಣಾ ಅಬ್ಬರಿಸಿದ್ರು..  ಮಹಿಳಾ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡಕ್ಕೆ ಸೋಲು ಬಹುತೇಕ ಖಚಿತ ಎಂದೇ ಎಲ್ಲರು ಭಾವಿಸಿದ್ದರು. ಆದರೆ, ಎಂಟನೇ ಕ್ರಮಾಂಕದಲ್ಲಿ ಕ್ರೀಸ್‌ಗೆ ಬಂದ ಸ್ನೇಹಾ ರಾಣಾ ಮಿಂಚಿನ ಬ್ಯಾಟಿಂಗ್ ಪ್ರದರ್ಶಿಸಿ ಅಜೇಯ 80 ರನ್ ಸಿಡಿಸುವ ಮೂಲಕ ಪಂದ್ಯದ ದಿಕ್ಕನ್ನೇ ಬದಲಾಯಿಸಿದರು ಹಾಗೂ ಭಾರತ ಪಂದ್ಯವನ್ನು ಡ್ರಾ ಮಾಡಿಕೊಳ್ಳುವಲ್ಲಿ ಮಹತ್ತರ ಪಾತ್ರವಹಿಸಿದ್ದರು. ಅಲ್ಲದೆ, ಮಹಿಳಾ ಅಂತಾರಾಷ್ಟ್ರೀಯ ಟೆಸ್ಟ್ ಕ್ರಿಕೆಟ್‌ ಪದಾರ್ಪಣೆ ಪಂದ್ಯದಲ್ಲಿಯೇ ಅರ್ಧಶತಕ ಹಾಗೂ 4 ವಿಕೆಟ್‌ ಸಾಧನೆ ಮಾಡಿದ ಭಾರತದ ಮೊದಲನೇ ಹಾಗೂ ವಿಶ್ವದ ನಾಲ್ಕನೇ ಆಟಗಾರ್ತಿ ಎಂಬ ದಾಖಲೆಯನ್ನು ಸ್ನೇಹಾ ರಾಣಾ ಮಾಡಿದ್ದರು. ಆಡಿದ ಮೊದಲನೇ ಟೆಸ್ಟ್ ಪಂದ್ಯದಲ್ಲಿಯೇ ಸ್ನೇಹಾ ರಾಣಾ ಭಾರತೀಯ ಮಹಿಳಾ ಟೆಸ್ಟ್‌ ಕ್ರಿಕೆಟ್‌ನ ಭವಿಷ್ಯದ ಸ್ಟಾರ್ ಆಟಗಾರ್ತಿ ಎಂಬ ಮುನ್ಸೂಚನೆ ನೀಡಿದ್ದರು. ಸ್ನೇಹಾ ಈ ಸಾಧನೆ ಮಾಡುವ ಹೊತ್ತಿಗೆ, ಆಕೆಯ ಪಾಲಿನ ಆಧಾರಸ್ತಂಭವಾಗಿದ್ದ ಅಪ್ಪ ಇಹಲೋಕ ‘ತ್ಯಜಿಸಿ ಕೇವಲ ಎರಡು ತಿಂಗಳು ಮಾತ್ರ ಆಗಿತ್ತು…‌ ಅಪ್ಪನನ್ನು ಕಳೆದುಕೊಂಡ ಮೇಲೆ ಮನಸ್ಸಿನಲ್ಲಿದ್ದ ನೋವನ್ನು ಮರೆಯಲು ಆಕೆ ಕ್ರಿಕೆಟ್‌ ಕಡೆಗೆ ಹೆಚ್ಚು ಗಮನ ಕೇಂದ್ರೀಕರಿಸಿದ್ದಳು.. ನೋವು ಮರೆಯಲು ಕಠಿಣ ಅಭ್ಯಾಸದಲ್ಲಿ ತೊಡಗಿದ್ದರು.. ಹಾಗೆ ಮಾಡಿದ ಅಭ್ಯಾಸವೇ ಈಗ ಸ್ನೇಹಾಗೆ ನೆರವಾಗಿದೆ.. ಅಲ್ಲದೆ ಇಂತಹ ಸಾಧನೆಗಳೇ ಆಕೆ ಅನುಭವಿಸುತ್ತಿರುವ ನೋವು ಮರೆಯಲು ಮುಲಾಮಿನಂತಾಗಿದೆ ಎಂದು ಸ್ನೇಹಾಳ ಹಿರಿಯ ಸಹೋದರಿ ರುಚಿ ಹೇಳಿಕೊಂಡಿದ್ದರು.

ಇದೀಗ ಈ ಬಾರಿಯ ಮಹಿಳಾ ಟೆಸ್ಟ್ ಮ್ಯಾಚ್ ನಲ್ಲೂ ಆಫ್ರಿಕಾ ವಿರುದ್ಧ ಪಂದ್ಯದಲ್ಲಿ ಸ್ನೇಹಾ ದಾಖಲೆ ಬರ್ದಿದ್ದಾರೆ.. ಮೊದಲ ಇನ್ನಿಂಗ್ಸ್‌ನಲ್ಲಿ 8 ವಿಕೆಟ್‌ ಕಬಳಿಸಿದ್ದ ಸ್ನೇಹಾ, ಎರಡನೇ ಇನ್ನಿಂಗ್ಸ್‌ನಲ್ಲಿ 2 ವಿಕೆಟ್‌ ಪಡೆಯುವ ಮೂಲಕ, ಟೆಸ್ಟ್‌ ಪಂದ್ಯದಲ್ಲಿ ಹತ್ತು ವಿಕೆಟ್‌ ಗಳಿಸಿದ ಸಾಧನೆ ಮಾಡಿದ್ದಾರೆ.. ಆದರೆ 2021ಕ್ಕೂ ಮುಂಚಿತವಾಗಿ ಸ್ನೇಹಾ ಐದು ವರ್ಷಗಳ ಕಾಲ ಭಾರತ ತಂಡದಿಂದ ಹೊರಗುಳಿದಿದ್ದರು. 2021ರ ನಂತರ ಟಿ20, ಏಕದಿನ ಹಾಗೂ ಟೆಸ್ಟ್‌ ಹೀಗೆ ಎಲ್ಲಾ ಮಾದರಿಯಲ್ಲೂ ತಂಡಕ್ಕೆ ಮರಳಿದ್ದಾರೆ. ತನ್ನ 9ನೇ ವಯಸ್ಸಿನಲ್ಲಿಯೇ ಲಿಟ್ಲ್ ಮಾಸ್ಟರ್ ಅಕಾಡೆಮಿಯಲ್ಲಿ ಕ್ರಿಕೆಟ್ ಅಭ್ಯಾಸ ಆರಂಭಿಸಿದ್ದ ಸ್ನೇಹಾ, ತಮ್ಮ ಪ್ರತಿಭೆಯಿಂದಾಗಿ ಅಂದು ಸಿನೌಲಾದಲ್ಲಿ ನಡೆದಿದ್ದ ಟೂರ್ನಿಗೆ ಅವಕಾಶ ಪಡೆದುಕೊಂಡಿದ್ದರು. ಆಗೆಲ್ಲಾ ಸ್ನೇಹಾ ತುಂಬಾ ನಾಚಿಕೆಯ ಸ್ವಭಾದವರಾಗಿದ್ದರಂತೆ.. ಎಲ್ಲರ ಮುಂದೆ ಕ್ರಿಕೆಟ್ ಆಡಲು ಸಂಕೋಚ ಪಡ್ತಿದ್ರಂತೆ ಸ್ನೇಹ ರಾಣಾ..  ಆದರೆ, ಅಕಾಡೆಮಿಯ ಕೋಚ್ ಕಿರಣ್ ಸಾಹ್ ಅವರು ಸ್ನೇಹಾ ರಾಣಾಗೆ  ಬ್ಯಾಟಿಂಗ್ ಗೆ ಸಹಕರಿಸಿದ್ದರು. ಸ್ನೇಹಾ ಪರ್ಫಾಮೆನ್ಸ್ ನೋಡಿ  ನಿಜಕ್ಕೂ ಆಕೆಯದ್ದು ಅಸಾಧಾರಣ ಪ್ರತಿಭೆ ಎಂದು ಆಕೆಯ ಆರಂಭಿಕ ದಿನಗಳ ಕೋಚ್‌ಗಳು ಹೇಳುತ್ತಾರೆ.. ಅಂದಹಾಗೆ ಸ್ನೇಹಾ ರಾಣಾ, ಕ್ರಿಕೆಟ್‌ ಅಕಾಡೆಮಿಯಲ್ಲಿ  ಸಣ್ಣ ವಯಸ್ಸಿನಲ್ಲೇ ಹುಡುಗರ ವೇಗದ ಬೌಲಿಂಗ್ ಅನ್ನು ಎದುರಿಸುತ್ತಿದ್ದರು. ಇದ್ರಿಂದಾಗಿಯೇ ಸ್ನೇಹಾ ಕ್ರಿಕೆಟ್ ನ  ಎಲ್ಲಾ ವಿಭಾಗಗಳಲ್ಲಿ  ಲೀಲಾಜಾಲವಾಗಿ ಆಡಲು ಸಹಾಕಾರಿಯಾಗುತ್ತಿದೆ.. ಆದರೆ ಸ್ನೇಹಾ ಅಂತಾರಾಷ್ಟ್ರೀಯ ಕ್ರಿಕೆಟ್‌  ಹಾದಿ ಅಷ್ಟೊಂದು ಸುಲಭವಾಗಿರಲಿಲ್ಲ. ಗಾಯದ ಸಮಸ್ಯೆ ಹಾಗೂ ಕಳಪೆ ಪ್ರದರ್ಶನದಿಂದ ಅವರು ಆಯ್ಕೆದಾರರ ಗಮನ ಸೆಳೆಯುವಲ್ಲಿ ವಿಫಲರಾಗಿದ್ದರು. 2014ರಲ್ಲಿ ಶ್ರೀಲಂಕಾ ವಿರುದ್ಧ ಅಂತಾರಾಷ್ಟ್ರೀಯ ಕ್ರಿಕೆಟ್‌ ಗೆ ಪದಾರ್ಪಣೆ ಮಾಡಿದ್ದ ಸ್ನೇಹಾ, 2021 ರ ವರೆಗೂ ಭಾರತದ ಪರ ಕೇವಲ 12 ಸೀಮಿತ ಓವರ್‌ಗಳ ಪಂದ್ಯಗಳನ್ನು ಮಾತ್ರ ಆಡಿದ್ದರು.

2016ರಲ್ಲಿ ಆಸ್ಟ್ರೇಲಿಯಾ ಪ್ರವಾಸದಲ್ಲಿ ತಮ್ಮ ಕೊನೆಯ ಪಂದ್ಯವಾಡಿದ್ದ ಸ್ನೇಹಾ ರಾಣಾ  ಅದೇ ವರ್ಷ ಶ್ರೀಲಂಕಾ ವಿರುದ್ಧ ಕೊನೆಯ ಟಿ20 ಪಂದ್ಯವಾಡಿದ್ದರು. ಆದರೂ, ತಮ್ಮ ವಿಶ್ವಾಸ ಕಳೆದುಕೊಳ್ಳದ ಸ್ನೇಹಾ ರಾಣಾ ಅವರು ಅಭಿಮನ್ಯು ಕ್ರಿಕೆಟ್ ಅಕಾಡೆಮಿಗೆ ಸೇರಿಕೊಂಡಿದ್ದರು. ಅಲ್ಲಿಂದ ನಂತರ ಅಭಿಮನ್ಯು ರೀತಿಯಲ್ಲೇ ಮೇಲೆದ್ದು ಬಂದ ಸ್ನೇಹಾ ರಾಣಾ, 2021ರಿಂದ ಟೀಂ ಇಂಡಿಯಾದ ಭಾಗವಾಗಿದ್ದಾರೆ.. ಈಗ ಟೆಸ್ಟ್‌ನ ಎರಡೂ ಇನ್ನಿಂಗ್ಸ್‌ಗಳು ಸೇರಿ 10 ವಿಕೆಟ್‌ಗಳ ಗೊಂಚಲು ಪಡೆದ ಭಾರತದ ಎರಡನೇ  ಮಹಿಳಾ ಬೌಲರ್‌ ಎಂಬ ಖ್ಯಾತಿಗೆ ಭಾಜನರಾಗಿದ್ದಾರೆ..

suddiyaana