ಬೆಂಗಳೂರು ಬೌಲಿಂಗ್ ಗೆ ಡೆಲ್ಲಿ ಢಮಾರ್ – ಬ್ಯಾಟ್ ನಲ್ಲೇ ಬೆಂಡೆತ್ತಿದ ಸ್ಮೃತಿ ಮಂದಾನ  

ಬೆಂಗಳೂರು ಬೌಲಿಂಗ್ ಗೆ ಡೆಲ್ಲಿ ಢಮಾರ್ – ಬ್ಯಾಟ್ ನಲ್ಲೇ ಬೆಂಡೆತ್ತಿದ ಸ್ಮೃತಿ ಮಂದಾನ  

2024ರ ವುಮೆನ್ಸ್ ಪ್ರೀಮಿಯರ್ ಲೀಗ್​ನ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ಆಟಗಾರ್ತಿಯರು ವಿಜಯಯಾತ್ರೆ ಕಂಟಿನ್ಯೂ ಆಗಿದೆ. ಮೊದಲ ಪಂದ್ಯದಲ್ಲೇ ಚರಿತ್ರೆ ಸೃಷ್ಟಿಸಿ ಗೆದ್ದಿದ್ದ ಗರ್ಲ್ಸ್ ಇದೀಗ ತಮ್ಮ ಎರಡನೇ ಪಂದ್ಯದಲ್ಲಿ ಎದುರಾಳಿಗಳನ್ನ ಉಸಿರೆತ್ತೋಕೂ ಬಿಡ್ದೇ ಮಣ್ಣು ಮುಕ್ಕಿಸಿದ್ದಾರೆ. ಬೌಲಿಂಗ್ ಮತ್ತು ಬ್ಯಾಟಿಂಗ್ ಎರಡರಲ್ಲೂ ಪ್ರಾಬಲ್ಯ ಸಾಧಿಸಿ 8 ವಿಕೆಟ್​​ಗಳ ಭರ್ಜರಿ ಗೆಲುವು ದಾಖಲಿಸಿದ್ದಾರೆ.

ಇದನ್ನೂ ಓದಿ :  ಡೆಲ್ಲಿ ಬೇಟೆಗೆ RCB ರೆಡಿ – ಗೆದ್ದವರ ಗುದ್ದಾಟದಲ್ಲಿ ಸೋಲೋದ್ಯಾರು?

ಸೋಮವಾರದ ಪಂದ್ಯದಲ್ಲಿ ಆರ್​ಸಿಬಿ ನಾಯಕಿ ಸ್ಮೃತಿ ಮಂಧಾನ ಟಾಸ್ ಗೆದ್ದು ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿದರು. ಅದ್ರಂತೆ ಡೆಲ್ಲಿ ತಂಡ ಬ್ಯಾಟಿಂಗ್​ಗೆ ಎಂಟ್ರಿ ಕೊಡ್ತು. ಆದ್ರೆ ಡಿಸಿ ಆಟಗಾರ್ತಿಯರು ಕ್ರೀಸ್​​ನಲ್ಲಿ ಸೆಟಲ್ ಆಗೋಕೆ ಬಿಡ್ದೇ ಕಾಡಿದ ಬೆಂಗಳೂರು ಗರ್ಲ್ಸ್ ಬ್ಯಾಕ್ ಟು ಬ್ಯಾಕ್ ಶಾಕ್ ಕೊಟ್ರು. ಡಿಸಿ ಪರ ಓಪನರ್ ಆಗಿ ಕಣಕ್ಕಿಳಿದಿದ್ದ ಶೆಫಾಲಿ ವರ್ಮಾರನ್ನ ಮೊದಲ ಓವರ್​ನಲ್ಲೇ ರೇಣುಕಾಸಿಂಗ್ ಪೆವಿಲಿಯನ್ ಸೇರಿಸಿದ್ರು. ಅದೂ ಕೂಡ ಡಕ್​ಔಟ್ ಮಾಡೋ ಮೂಲಕ. ಇನ್ನು ಕ್ಯಾಪ್ಟನ್ ಮೆಗ್ ಲ್ಯಾನಿಂಗ್ 17 ರನ್ ಗಳಿಸಿವಷ್ಟ್ರರಲ್ಲೇ ಕಿಮ್ ಗ್ರಾತ್​ಗೆ ವಿಕೆಟ್ ಒಪ್ಪಿಸಿದ್ರು. ಜೆಮಿಮಾ ರೋಡ್ರಿಗಸ್ ಜವಾಬ್ದಾರಿಯುತವಾಗಿ ಆಡಿದ್ರೂ 34 ರನ್​ಗಳಿಗೆ ಆಟ ಮುಗಿಸಿದ್ರು. ಆ ಬಳಿಕ ಯಾವ ಬ್ಯಾಟರ್ಸ್ ಕೂಡ ಹೇಳಿಕೊಳ್ಳುವಂತ ಪ್ರದರ್ಶನ ನೀಡ್ಲಿಲ್ಲ. ಪರಿಣಾಮ ಡೆಲ್ಲಿ ತಂಡ 19.3 ಓವರ್​ಗಳಲ್ಲೇ 141 ರನ್​ಗಳಿಗೆ ಆಲ್​​ಔಟ್ ಆಯ್ತು.

ಮೊದಲನೇ ಪಂದ್ಯದಲ್ಲಿ 202 ರನ್​ಗಳ ಟಾರ್ಗೆಟ್ಟನ್ನ ಲೀಲಾಜಾಲವಾಗಿ ಚೇಸ್ ಮಾಡಿದ್ದ ಬೆಂಗಳೂರು ತಂಡಕ್ಕೆ 142 ರನ್​ಗಳ ಗುರಿ ತಲುಪೋದು ಕಷ್ಟ ಅನ್ನಿಸಲೇ ಇಲ್ಲ. ಓಪನರ್ಸ್ ಆಗಿ ಬಂದ ಸ್ಮೃತಿ ಮಂದಾನ ಹಾಗೇ ಡ್ಯಾನಿ ವ್ಯಾಟ್ ಹೊಡ್ಜೆ ಡೆಲ್ಲಿ ಬೌಲರ್ಸ್​​ ಬೆವರಿಳಿಸಿದ್ರು. 10.5 ಓವರ್​ಗಳಲ್ಲಿ 107ರನ್​ಗಳ ಜೊತೆಯಾಟ ನೀಡಿದರು. ಅವ್ರಿಬ್ರು ಇದ್ದಿದ್ದ ಫಾರ್ಮ್ ನೋಡಿದ್ರೆ ವಿಕೆಟ್ ಇಲ್ಲದೆಯೇ ಟಾರ್ಗೆಟ್ ರೀಚ್ ಆಗ್ತಾರೆ ಎನ್ನುವಂತಿತ್ತು. ಆದ್ರೆ ಡ್ಯಾನಿ 42 ರನ್ ಬಾರಿಸಿದ್ದಾಗ ಅರುಂಧತಿ ರೆಡ್ಡಿ ಬೌಲಿಂಗ್​ನಲ್ಲಿ ಕ್ಯಾಚ್ ಔಟ್ ಆದ್ರು. ಆ ಬಳಿಕ ಸ್ಮೃತಿಗೆ ಎಲ್ಲಿಸ್ ಪೆರ್ರಿ ಜೊತೆಯಾದ್ರು. ಇನ್ನೇನು ವಿನ್ನಿಂಗ್ ಮೂಮೆಂಟ್ ಟೈಮಲ್ಲಿ ಸ್ಮೃತಿ ಕೂಡ ವಿಕೆಟ್ ಒಪ್ಪಿಸಿದ್ರು. 47 ಬಾಲ್​ಗಳಲ್ಲೇ  10 ಫೋರ್, 3 ಸಿಕ್ಸ್​ಗಳಿಂದ 81 ರನ್ ಗಳಿಸಿ ಕ್ಯಾಚ್ ಕೊಟ್ರು. ಈ ವೇಳೆ ಕಳೆದ ಮ್ಯಾಚ್​ನಲ್ಲಿ ಧೂಳೆಬ್ಬಿಸಿದ್ದ ರಿಚಾ ಘೋಷ್ ಎಂಟ್ರಿ ಕೊಟ್ರು. ಇಲ್ಲೂ ಕೂಡ ಸಿಕ್ಸ್ ಬಾರಿಸೋ ಮೂಲಕ ಮ್ಯಾಚ್ ಫಿನಿಶ್ ಮಾಡಿದ್ರು. ಈ ಮೂಲಕ 142 ರನ್​ಗಳ ಸಾಧಾರಣ ಗುರಿಯನ್ನ 16.2 ಓವರ್​ಗಳಲ್ಲಿ 2 ವಿಕೆಟ್ ಕಳೆದುಕೊಂಡು ತಲುಪಿತು.

ಡೆಲ್ಲಿ ವಿರುದ್ಧದ ಪಂದ್ಯದಲ್ಲೂ ಬೆಂಗಳೂರು ತಂಡ ದಾಖಲೆ ಬರೆದಿದೆ. ವುಮೆನ್ಸ್ ಪ್ರೀಮಿಯರ್ ಲೀಗ್​ ಇತಿಹಾಸದಲ್ಲೇ ಎದುರಾಳಿ ತಂಡವನ್ನು ಅತ್ಯಧಿಕ ಬಾರಿ ಆಲೌಟ್​ ಮಾಡಿದ ದಾಖಲೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪಾಲಾಗಿದೆ. ಅದು ಸಹ ಬಲಿಷ್ಠ ಮುಂಬೈ ಇಂಡಿಯನ್ಸ್ ತಂಡದ ರೆಕಾರ್ಡ್ ಬ್ರೇಕ್ ಮಾಡೋ ಮೂಲಕ. ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು 19.3 ಓವರ್​ಗಳಲ್ಲಿ 141 ರನ್​ಗಳಿಗೆ ಆಲೌಟ್ ಮಾಡಿತ್ತು. ಈ ಆಲೌಟ್​ನೊಂದಿಗೆ ವುಮೆನ್ಸ್ ಪ್ರೀಮಿಯರ್ ಲೀಗ್​ನಲ್ಲಿ ಅತೀ ಹೆಚ್ಚು ಬಾರಿ ಎದುರಾಳಿ ಪಡೆಯನ್ನು ಸರ್ವಪತನಗೊಳಿಸಿದೆ. ಮುಂಬೈ ಇಂಡಿಯನ್ಸ್ ತಂಡ ಹಾಗೆಯೇ ಯುಪಿ ವಾರಿಯರ್ಸ್ 18 ಮ್ಯಾಚ್​ಗಳ ಪೈಕಿ 3 ಬಾರಿ ಈ ಸಾಧನೆ ಮಾಡಿದೆ. ಇದೀಗ ಆರ್​ಸಿಬಿ ತಂಡವು 20 ಪಂದ್ಯಗಳಿಂದ ಒಟ್ಟು 4 ಬಾರಿ ಎದುರಾಳಿ ತಂಡವನ್ನು ಆಲೌಟ್ ಮಾಡಿ ಹೊಸ ದಾಖಲೆ ಬರೆಯುವಲ್ಲಿ ಯಶಸ್ವಿಯಾಗಿದೆ.

Shantha Kumari

Leave a Reply

Your email address will not be published. Required fields are marked *