ಜ್ವರದಲ್ಲೂ ಮಂದಾನ ಜ್ವಾಲಾಗ್ನಿ – ಕ್ರಿಕೆಟ್ ಯಾವತ್ತಿದ್ರೂ ಫಸ್ಟ್ ಲವ್!
ಸ್ಮೃತಿ & ಪಾಂಡ್ಯ ಜರ್ನಿಯೇ ಸ್ಪೆಷಲ್

ಯುದ್ಧ ಮಾಡೋಕೆ ಅಂತಾ ನಿಂತ್ಮೇಲೆ ಸೈನಿಕರ ಲೆಕ್ಕ ಹಾಕಬಾರದು. ಹಾಗೇ ಕಪ್ ಗೆಲ್ಲೋಕೆ ಅಂತಾ ನಿಂತ ಮೇಲೆ ಮನಸ್ಸಿನ ಗಾಯಗಳ್ಯಾವು ಘಾಸಿಗೊಳಿಸಬಾರದು. ಪರ್ಸನಲ್ ಲೈಫೇ ಬೇರೆ ಪ್ರೊಫೆಷನಲ್ ಲೈಫೇ ಬೇರೆ ಅನ್ನೋ ಥರ ಗಟ್ಟಿಯಾಗಿ ನಿಂತಿರೋ ಗಟ್ಟಿಗಿತ್ತಿ ಸ್ಮೃತಿ ಮಂದಾನ. ಒಳಗೆ ಜೀವವನ್ನೇ ಹಿಂಡುವಷ್ಟು ಜ್ವರ ಇದ್ರೂ ಮೈದಾನದಲ್ಲಿ ಜ್ವಾಲಾಗ್ನಿಯಂತೆ ಉರಿದು ಬೆಂಗಳೂರು ತಂಡಕ್ಕೆ 2ನೇ ಕಪ್ ಗೆಲ್ಲಿಸಿಕೊಟ್ಟಿದ್ದಾರೆ.
ಇದನ್ನೂ ಓದಿ : ವಿಶ್ವಕಪ್ ನಲ್ಲಿ ಭಾರತೀಯರ ದಂಡು – ಕೆನಡಾ, ಅಮೆರಿಕದಲ್ಲಿ ಇಂಡಿಯಾ ಗತ್ತು!
ಸ್ಮೃತಿ ಮಂದಾನ. ಟೀಂ ಇಂಡಿಯಾದ ಡೈನಮೇಟ್ ಬ್ಯಾಟರ್. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಸ್ಟಾರ್ ಕ್ಯಾಪ್ಟನ್. ಕೋಟ್ಯಂತರ ಹುಡ್ಗರ ಕ್ರಶ್ ಆಗಿರೋ ಸ್ಮೃತಿ ನಿಜಕ್ಕೂ ಗ್ರೇಟ್ ಪ್ಲೇಯರ್. ಸತತ 17 ವರ್ಷಗಳ ಕಾಲ ಕಪ್ಗಾಗಿ ಕಾದಿದ್ದ ಆರ್ಸಿಬಿಗೆ ವುಮೆನ್ಸ್ ಪ್ರೀಮಿಯರ್ ಲೀಗ್ ಮೂಲಕ 2ನೇ ಆವೃತ್ತಿಯಲ್ಲೇ ಚೊಚ್ಚಲ ಕಪ್ ಗೆಲ್ಲಿಸಿಕೊಟ್ಟ ಲೇಡಿ ಸಿಂಗಂ. ಈಗ ನಾಲ್ಕನೇ ಆವೃತ್ತಿಯಲ್ಲಿ ಮತ್ತೊಂದು ಟ್ರೋಫಿ ಗೆದ್ದು ಬೀಗಿದ್ದಾರೆ. ಆದ್ರೆ ಕಳೆದ 2 ತಿಂಗಳಲ್ಲಿ ಸ್ಮೃತಿ ಬದುಕಲ್ಲಿ ಅಲ್ಲೋಲ ಕಲ್ಲೋಲವೇ ಆಗಿದೆ. ಪರ್ಸನಲ್ ಲೈಫ್ನ ಗಾಯ ಪ್ರೊಫೆಷನಲ್ ಜರ್ನಿಗೆ ಅಡ್ಡಿಯಾಗುತ್ತೆ ಅನ್ನೋ ಭಯವೂ ಇತ್ತು. ಆದ್ರೆ ಗಾಯಗೊಂಡಿರುವ ಸಿಂಹದ ಉಸಿರು ಘರ್ಜನೆಗಿಂತ ಭಯಂಕರವಾಗಿರುತ್ತೆ ಅನ್ನೋ ಥರ ಸ್ಮೃತಿ ಹಿಂದೆಂದಿಗಿಂತೂ ಬೆಂಕಿಯುಂಡೆಯಾಗಿದ್ದಾರೆ.
ಜ್ವರದ ನಡುವೆಯೂ ಫೈನಲ್ ನಲ್ಲಿ ಘೀಳಿಟ್ಟ ಮಂದಾನ!
ಗುರುವಾರ ವಡೋದರಾದ ಕೋಟಂಬಿ ಮೈದಾನದಲ್ಲಿ ಬೆಂಗಳೂರು ಮತ್ತು ಡೆಲ್ಲಿ ನಡುವೆ ಡಬ್ಲ್ಯೂಪಿಎಲ್ 4ನೇ ಆವೃತ್ತಿಯ ಫೈನಲ್ ಪಂದ್ಯ ಫಿಕ್ಸ್ ಆಗಿತ್ತು. ಶಾಕಿಂಗ್ ವಿಚಾರ ಅಂದ್ರೆ ಫೈನಲ್ ಪಂದ್ಯಕ್ಕೂ ಒಂದು ದಿನದ ಹಿಂದೆ ಸ್ಮೃತಿ ಮಂದಾನಗೆ ಹೈಫೀವರ್ ಇತ್ತು. 103 ಡಿಗ್ರಿ ಜ್ವರದಿಂದ ನರಳಿದ್ದಾರೆ. ಅವ್ರ ಹೆಲ್ತ್ ಖಂಡೀಷನ್ ನೋಡ್ದಾಗ ಫೈನಲ್ ಪಂದ್ಯ ಆಡಲ್ಲ ಅನ್ನೋ ಥರನೇ ಇತ್ತು. ಆದ್ರೆ ಜ್ವರವನ್ನೇ ಜ್ವಾಲಾಗ್ನಿ ಮಾಡ್ಕೊಂಡು ಮೈದಾನಕ್ಕಿಳಿದ ಸ್ಮೃತಿ ಬ್ಯಾಟಿಂಗ್ನಲ್ಲಂತೂ ಬೆಂಕಿಚೆಂಡಿನಂತೆ ಉರಿದ್ರು. ಗೆದ್ದೇ ಗೆಲ್ಲಬೇಕು ಆರ್ಸಿಬಿಗೆ 2ನೇ ಕಪ್ ಗೆಲ್ಲಿಸ್ಬೇಕು ಅಂತಾ ಜ್ವರವನ್ನೂ ಮರೆತು ಬ್ಯಾಟಿಂಗ್ ಮಾಡಿದ್ರು. 41 ಎಸೆತಗಳಲ್ಲೇ 87 ರನ್ ಬಾರಿಸಿ ಮ್ಯಾಚ್ ವಿನ್ನರ್ ಆದ್ರು. ಪಂದ್ಯದ ಬಳಿಕ ಮಾತನಾಡಿದ ತಂಡದ ಹೆಡ್ ಕೋಚ್ ಮಲಲೋನ್ ರಂಗರಾಜನ್ ಇದನ್ನ ಹೇಳಿದ್ದಾರೆ. ಜ್ವರದಿಂದ ಸ್ಮೃತಿ ತುಂಬಾನೇ ಆಯಾಸಗೊಂಡಿದ್ರು. ಬ್ಯಾಟಿಂಗ್ ಹಾಗೂ ಆಟದ ಮೇಲಿನ ಪ್ರೀತಿಯಿಂದ ಅದು ಯಾರಿಗೂ ಗೊತ್ತಾಗ್ಲಿಲ್ಲ. ಪಂದ್ಯದಲ್ಲಿ ಒಂದು ಕ್ಷಣ ಕೂಡ ನನಗೆ ಜ್ವರ ಇದೆ ಎನ್ನುವಂತೆ ತೋರಿಸಲಿಲ್ಲ. ಸ್ಮೃತಿ ಏನು ಸಾಧಿಸಬೇಕೆಂದು ಅಂದುಕೊಂಡಿದ್ದಳು ಅದನು ಸಾಧಿಸಿಯೇ ಬಿಟ್ಟಳು ಎಂದು ಸ್ಮೃತಿ ಒಡಲೊಳಗಿನ ಕಿಚ್ಚು ಎಂಥಾದ್ದು ಅನ್ನೋದನ್ನ ಹೇಳಿದ್ದಾರೆ.
ಪರ್ಸನಲ್ ಬೇರೆ ಪ್ರೊಫೆಷನಲ್ ಬೇರೆ ಎಂದು ತೋರಿಸಿದ ಸ್ಮೃತಿ!
ಕಳೆದ ಎರಡು ತಿಂಗಳಿಂದ ಅತೀ ಹೆಚ್ಚು ಸುದ್ದಿಯಾದ ಕ್ರಿಕೆಟರ್ ಅಂತಾ ಇದ್ರೆ ಅದು ಸ್ಮೃತಿ ಮಂದಾನ. ಅದೂ ಕೂಡ ಪರ್ಸನಲ್ ಲೈಫ್ನಿಂದಾಗಿ. ನವೆಂಬರ್ ತಿಂಗಳ 2ರಂದು ಭಾರತೀಯ ಮಹಿಳಾ ತಂಡ ಚೊಚ್ಚಲ ಬಾರಿಗೆ ವಿಶ್ವಕಪ್ ಗೆಲ್ಲುತ್ತೆ. ಐಸಿಸಿ ಟೂರ್ನಿಯಲ್ಲಿ ಅದ್ಭುತ ಪ್ರದರ್ಶನ ನೀಡಿದ್ದ ಸ್ಮೃತಿ ಅದೇ ತಿಂಗಳ 23ಕ್ಕೆ ಕಳೆದ 6 ವರ್ಷದಿಂದ ಮೆಚ್ಚಿಕೊಂಡು ಪ್ರಾಣಕ್ಕಿಂತ ಜಾಸ್ತಿ ಹಚ್ಚಿಕೊಂಡಿದ್ದ ಪಲಾಶ್ ಮುಚ್ಚಲ್ ಜೊತೆ ಸಪ್ತಪದಿ ತುಳೀಬೇಕಿತ್ತು. ಮಂಟಪವೂ ರೆಡಿಯಾಗಿತ್ತು. ಆದ್ರೆ ಮದುವೆಗೆ ಕೆಲ ಗಂಟೆಗಳಷ್ಟೇ ಬಾಕಿ ಇರುವಾಗ ತಮ್ಮ ಶುದ್ಧ ಪ್ರೀತಿಯಲ್ಲಿ ಮೋಸ ಹೋಗಿದ್ದು ಗೊತ್ತಾಗುತ್ತೆ. ಮದುವೆ ಮುರಿದು ಬೀಳುತ್ತೆ. ಬಹುಶಃ ಸ್ಮೃತಿ ಜಾಗದಲ್ಲಿ ಬೇರೆ ಯಾರೇ ಇದ್ರೂ ಅಕ್ಷರಶಃ ಕುಸಿದು ಹೋಗ್ತಿದ್ರು. ಮತ್ತೆ ಮೈದಾನಕ್ಕೆ ಕಾಲಿಡೋಕೆ ತಿಂಗಳುಗಳೇ ಬೇಕಾಗ್ತಿತ್ತು. ಆದ್ರೆ ತಮ್ಮ ಪರ್ಸನಲ್ ಲೈಫ್ಗೆ ಪ್ರೊಫೆಷನಲ್ ಜರ್ನಿನ ಲಿಂಕ್ ಮಾಡ್ಲಿಲ್ಲ. ನನ್ನ ಮೊದಲ ಪ್ರೀತಿ ಯಾವತ್ತಿದ್ರೂ ಕ್ರಿಕೆಟ್ ಅಂತಾ ಹೇಳಿದ ಸ್ಮೃತಿ ಡಿಸೆಂಬರ್ ತಿಂಗಳಲ್ಲೇ ಮತ್ತೆ ಮೈದಾನಕ್ಕಿಳೀತಾರೆ. ಶ್ರೀಲಂಕಾ ವಿರುದ್ಧದ ಐದು ಪಂದ್ಯಗಳ ಟಿ-20ಐ ಸರಣಿಯಲ್ಲಿ ಐದೂ ಪಂದ್ಯಗಳನ್ನ ಭಾರತ ಗೆದ್ದು ಕ್ಲೀನ್ ಸ್ವೀಪ್ ಮಾಡುತ್ತೆ. ಮೊದಲ 3 ಪಂದ್ಯಗಳಲ್ಲಿ ಡಲ್ ಅನ್ಸಿದ್ರೂ 4ನೇ ಮ್ಯಾಚಲ್ಲಿ 80 ರನ್ ಸಿಡಿಸಿ ಕಂ ಬ್ಯಾಕ್ ಮಾಡ್ತಾರೆ. ಅಲ್ಲಿಂದ ಹಿಂತಿರುಗಿ ನೋಡಿದ್ದೇ ಇಲ್ಲ. ಡಬ್ಲ್ಯೂಪಿಎಲ್ನಲ್ಲಿ ಅತೀ ಹೆಚ್ಚು ರನ್ ಸಿಡಿಸಿ ಬೆಂಗಳೂರು ತಂಡಕ್ಕೆ 2ನೇ ಕಪ್ ಗೆಲ್ಲಿಸಿಕೊಟ್ಟಿದ್ದಾರೆ. ಪ್ರೊಫೆಷನಲ್ ಜರ್ನಿಯ ಗ್ರಾಫ್ ಮೇಲೆ ಕಿಂಚಿತ್ತೂ ಎಫೆಕ್ಟ್ ಆಗದಂತೆ ಅಬ್ಬರಿಸಿದ್ದಾರೆ. ಗೇಮ್ ಅಂತಾ ಬಂದಾಗ ಐಌಮ್ ಪ್ರೊಫೆಷನಲ್ ಅಂತಾ ತೋರಿಸಿಕೊಟ್ಟಿದ್ದಾರೆ. ಆಕ್ಚುಲಿ 2024ರ ಟಿ-20 ವಿಶ್ವಕಪ್ ಟೈಮಲ್ಲೂ ಹಾರ್ದಿಕ್ ಪಾಂಡ್ಯ ಸೇಮ್ ಸಿಚುಯೇಷನ್ನಲ್ಲಿದ್ರು.
ಪರ್ಸನಲ್ ಪ್ರಾಬ್ಲಮ್ಸ್ ಕ್ರಿಕೆಟ್ ಗೆ ತರದ ಹಾರ್ದಿಕ್ ಪಾಂಡ್ಯ!
ಟೀಂ ಇಂಡಿಯಾದ ಸ್ಟಾರ್ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಕೂಡ 2024ರ ಟಿ-20 ವಿಶ್ವಕಪ್ನಲ್ಲಿ ಇಂಥದ್ದೇ ಸಿಚುಯೇಷನ್ನಲ್ಲಿದ್ರು. ನತಾಶ ಜೊತೆಗಿನ ದಾಂಪತ್ಯ ಮುರಿದು ಬಿದ್ದಿತ್ತು. ಹೀಗಿದ್ರೂ ವಿಶ್ವಕಪ್ನಲ್ಲಿ ಭಾರತದ ಪರ ಮ್ಯಾಚ್ ವಿನ್ನಿಂಗ್ ಪರ್ಫಾಮೆನ್ಸ್ ನೀಡಿ ಫೈನಲ್ ಮ್ಯಾಚಲ್ಲಿ ಟ್ರೋಫಿ ಗೆಲುವಿನ ರೂವಾರಿಯಾಗಿದ್ರು. ಕಪ್ ಗೆದ್ದು ಖುಷಿಯಲ್ಲಿದ್ದ ಆಟಗಾರರೆಲ್ಲಾ ತಮ್ಮ ಫ್ಯಾಮಿಲಿ ಜೊತೆ ಸೆಲೆಬ್ರೇಟ್ ಮಾಡ್ತಿದ್ರೆ ಪಾಂಡ್ಯ ಮಾತ್ರ ಭಾರತದ ಫ್ಲ್ಯಾಗ್ ಹಿಡಿದು ಕಣ್ಣೀರಿಡ್ತಿದ್ರು. ಆ ದೃಶ್ಯಗಳು ಇಂದಿಗೂ ಭಾರತೀಯರ ಕಣ್ಣಿಗೆ ಕಟ್ಟಿದಂತಿದೆ. ಸೋ ಇದನ್ನೆಲ್ಲಾ ನೋಡ್ದಾಗ ಪರ್ಸನಲ್ ನಲ್ಲಿ ಎಷ್ಟೇ ಪ್ರಾಬ್ಲಮ್ಸ್ ಇದ್ರೂ ಕೆರಿಯರ್ಗೆ ಅಡ್ಡಿಯಾಗಬಾರದು ಅನ್ನೋದನ್ನ ತೋರಿಸಿಕೊಟ್ಟಿದ್ದಾರೆ. ಇವ್ರಿಬ್ಬರು ನಿಜಕ್ಕೂ ಭಾರತೀಯ ಕ್ರಿಕೆಟ್ ನಲ್ಲಿರೋದಕ್ಕೆ ನಾವು ಕೂಡ ಲಕ್ಕಿ.

ನೋಡಿರಿ

