ಮಾಜಿ ಸಿಎಂ ಎಸ್ಎಂ ಕೃಷ್ಣ ನಿಧನ – ಪ್ರಧಾನಿ ಮೋದಿ, ರಾಷ್ಟ್ರಪತಿ ಮುರ್ಮುಯಿಂದ ಶೋಕ ಸಂದೇಶ
ದೇಶ ಕಂಡ ಮುತ್ಸದ್ಧಿ ರಾಜಕಾರಣಿ ಮಾಜಿ ಮುಖ್ಯಮಂತ್ರಿಗಳು, ಮಾಜಿ ರಾಜ್ಯಪಾಲರಾಗಿದ್ದ ಎಸ್‌ಎಂ ಕೃಷ್ಣಾರವರು ಸೋಮವಾರ ಮುಂಜಾನೆ ನಿಧನರಾಗಿದ್ದಾರೆ. ಮಂಗಳವಾರ ಮಂಡ್ಯ ಜಿಲ್ಲೆಯ ಮದ್ದೂರು ತಾಲ್ಲೂಕಿನ ಸೋಮನಹಳ್ಳಿಯಲ್ಲಿ ಎಸ್‌ಎಂ ಕೃಷ್ಣಾರ ಅಂತ್ಯಕ್ರಿಯೆ ನಡೆಯಲಿದೆ. ಇದೀಗ ಎಸ್ಎಂ ಕೃಷ್ಣ ಅವರ ಪತ್ನಿ ಪ್ರೇಮ ಕೃಷ್ಣಗೆ ಪ್ರಧಾನಿ ನರೇಂದ್ರ ಮೋದಿ ಹಾಗೂ ರಾಷ್ಟ್ರಪತಿ ದ್ರೌಪದಿ ಮುರ್ಮು ಸಾಂತ್ವನ ಹೇಳಿದ್ದಾರೆ. ಪ್ರೇಮ ಕೃಷ್ಣಗೆ ಮೋದಿ ಹಾಗೂ ಮುರ್ಮು ಶೋಕ ಸಂದೇಶ ಕಳುಹಿಸಿದ್ದಾರೆ.
ಇದನ್ನೂ ಓದಿ: ಚಾಯ್ ವಾಲಾ ಈಗ ಸೆಲೆಬ್ರಿಟಿ – ಈವೆಂಟ್ನಲ್ಲಿ ಭಾಗಿಯಾಗಲು ಟೀ ವ್ಯಾಪಾರಿ ಪಡೆಯುವ ಸಂಭಾವಣೆ ಎಷ್ಟು?
ಪ್ರಧಾನಿ ಮೋದಿ ಪತ್ರದಲ್ಲೇನಿದೆ?
ಶ್ರೀಮತಿ ಪ್ರೇಮ ಕೃಷ್ಣ ಜೀ, ಎಸ್ಎಂ ಕೃಷ್ಣ ನಿಧನದ ಸುದ್ದಿ ಕೇಳಿ ದುಃಖಿತನಾದೆ. ಅವರ ಅಗಲುವಿಕೆಯ ನಷ್ಟವು ನಿರ್ವಾತವನ್ನು ಸೃಷ್ಟಿಸಿದೆ. ಒಬ್ಬ ದೂರದೃಷ್ಟಿಯುಳ್ಳ ಮತ್ತು ಅಸಾಧಾರಣ ನಾಯಕರಾಗಿದ್ದ ಎಸ್‌ಎಂ ಕೃಷ್ಣ ಅವರನ್ನು ರಾಜಕೀಯ ವಲಯದಾದ್ಯಂತ ಎಲ್ಲರೂ ಗೌರವಿಸಿದರು ಮತ್ತು ಮೆಚ್ಚಿದ್ದರು. ಅವರು ಕರ್ನಾಟಕದ ಮುಖ್ಯಮಂತ್ರಿಯಾಗಿದ್ದ ಅವಧಿಯನ್ನು ರಾಜ್ಯದ ಜನತೆ ಸದಾ ಸ್ಮರಿಸುತ್ತಾರೆ. ಅವರು ಹಲವಾರು ಕ್ಷೇತ್ರಗಳ ಜನರ ಕಲ್ಯಾಣಕ್ಕಾಗಿ ಶ್ರಮಿಸಿದರು. ಪ್ರಮುಖವಾಗಿ, ಮೂಲಸೌಕರ್ಯ ಅಭಿವೃದ್ಧಿ ಮತ್ತು ಮಾಹಿತಿ ತಂತ್ರಜ್ಞಾನ ಕ್ಷೇತ್ರದ ವಿಸ್ತರಣೆಗೆ ಅವರ ಕೊಡುಗೆಯು ಬೆಂಗಳೂರನ್ನು ತಂತ್ರಜ್ಞಾನದ ಜಾಗತಿಕ ಕೇಂದ್ರವಾಗಿ ಪರಿವರ್ತಿಸಲು ಸಹಾಯ ಮಾಡಿತು ಎಂದು ಪ್ರಧಾನಿ ಮೋದಿ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಎಸ್ಎಂ ಕೃಷ್ಣ ವಿದೇಶಾಂಗ ವ್ಯವಹಾರಗಳ ಸಚಿವರಾಗಿ ಕಾರ್ಯನಿರ್ವಹಿಸಿದ್ದರೆ ಜತೆ ಜತೆಗೇ ಇತರ ಅನೇಕ ಜವಾಬ್ದಾರಿಗಳನ್ನು ನಿಭಾಯಿಸಿದ್ದರು ಎಂಬುದು ಅವರ ಅಸಾಧಾರಣ ಸಾಮರ್ಥ್ಯಕ್ಕೆ ಹಿಡಿದ ಕನ್ನಡಿಯಾಗಿದೆ. ಅವರೊಬ್ಬ ಅಸಾಮಾನ್ಯ ಓದುಗ ಮತ್ತು ಆಳವಾದ ಚಿಂತಕರಾಗಿದ್ದರು. ಎಸ್ಎಂ ಕೃಷ್ಣ ಅವರೊಂದಿಗೆ ಹಲವಾರು ಬಾರಿ ಸಮಾಲೋಚನೆ ನಡೆಸಿದ್ದೇನೆ. ಆ ನೆನಪು ಸದಾ ಅಮರ ಎಂದು ಮೋದಿ ಉಲ್ಲೇಖಿಸಿದ್ದಾರೆ.
ಎಸ್ಎಂ ಕೃಷ್ಣ ಅವರು ಹುಟ್ಟುಹಾಕಿದ ಮೌಲ್ಯಗಳು ಕುಟುಂಬಕ್ಕೆ ಸ್ಫೂರ್ತಿ ನೀಡಲಿ. ಅವರೊಂದಿಗೆ ಕಳೆದ ಸಮಯದ ನೆನಪುಗಳು ಈ ಕಷ್ಟದ ಸಮಯದಲ್ಲಿ ನಿಮಗೆ ಸಾಂತ್ವನ ಮತ್ತು ಧೈರ್ಯ ನೀಡಲಿವೆ. ಅವರು ಕುಟುಂಬ, ಸ್ನೇಹಿತರು ಮತ್ತು ಹಿತೈಷಿಗಳನ್ನು ಅಗಲಿದ್ದಾರೆ. ಆದರೆ ಯಾವಾಗಲೂ ನಮ್ಮ ಹೃದಯದಲ್ಲಿ ನೆಲೆಸಿರುತ್ತಾರೆ. ಅವರ ನಿಧನಕ್ಕೆ ಹೃತ್ಪೂರ್ವಕ ಸಂತಾಪಗಳು ಮತ್ತು ಕುಟುಂಬದ ಜತೆ ನಾವಿದ್ದೇವೆ. ಅವರ ಅಸಂಖ್ಯಾತ ಅಭಿಮಾನಿಗಳಿಗೆ ಈ ದುಃಖವನ್ನು ಸಹಿಸಿಕೊಳ್ಳುವ ಶಕ್ತಿಯನ್ನು ಭಗವಂತ ಕರುಣಿಸಲಿ. ಓಂ ಶಾಂತಿ ಎಂದು ಎಸ್ಎಂ ಕೃಷ್ಣ ಪತ್ನಿಗೆ ಕಳುಹಿಸಿದ ಶೋಕ ಸಂದೇಶದಲ್ಲಿ ಮೋದಿ ಬರೆದಿದ್ದಾರೆ.
ದ್ರೌಪದಿ ಮುರ್ಮು ಶೋಕ ಸಂದೇಶ
ಎಸ್ಎಂ ಕಷ್ಣ ಅವರು ಅನುಭವಿ ಸಂಸದೀಯ ಪಟು ಮತ್ತು ಜನರ ಕಲ್ಯಾಣಕ್ಕಾಗಿ ಕೆಲಸ ಮಾಡಿದ ಶ್ರೇಷ್ಠ ನಾಯಕರಾಗಿದ್ದರು. ಕರ್ನಾಟಕದ ಮುಖ್ಯಮಂತ್ರಿಯಾಗಿ ಅವರು ರಾಜ್ಯದ ಆರ್ಥಿಕತೆ ಮತ್ತು ಮೂಲಸೌಕರ್ಯವನ್ನು ಹೆಚ್ಚಿಸಲು ಹಲವಾರು ಕ್ರಮಗಳನ್ನು ಕೈಗೊಂಡಿದ್ದರು. ತೆಗೆದುಕೊಂಡರು. ಅವರ ನಿಧನದೊಂದಿಗೆ ದೇಶವು ಸಮರ್ಥ ನಾಯಕರೊಬ್ಬರನ್ನು ಕಳೆದುಕೊಂಡಂತಾಗಿದೆ. ಅವರ ನಿಧನದ ದುಃಖವನ್ನು ಭರಿಸುವ ಶಕ್ತಿಯನ್ನು ನಿಮಗೆ ಭಗವಂತ ಕರುಣಿಸಲಿ ಎಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಶೋಕ ಸಂದೇಶದಲ್ಲಿ ತಿಳಿಸಿದ್ದಾರೆ.