ಕಳ್ಳತನಕ್ಕೆಂದು ಮನೆಗೆ ನುಗ್ಗಿದ – ಗೊರಕೆ ಸೌಂಡ್‌ಗೆ ಖತರ್ನಾಗ್‌ ಕಳ್ಳ ಸಿಕ್ಕಾಕ್ಕೊಂಡ!

ಕಳ್ಳತನಕ್ಕೆಂದು ಮನೆಗೆ ನುಗ್ಗಿದ – ಗೊರಕೆ ಸೌಂಡ್‌ಗೆ ಖತರ್ನಾಗ್‌ ಕಳ್ಳ ಸಿಕ್ಕಾಕ್ಕೊಂಡ!

ಏನಾದ್ರೂ ಒಂದು ವಸ್ತು ಕಳ್ಳರ ಕಣ್ಣಿಗೆ ಬಿದ್ರೆ ಸಾಕು. ಅದನ್ನ ಕದಿಯೋವರೆಗೂ ಸುಮ್ನೆ ಕೂರಲ್ಲ. ಹೇಗಾದ್ರೂ ಮಾಡಿ ಲಪಟಾಯಿಸಿಕೊಂಡು ಹೋಗುತ್ತಾರೆ. ಇನ್ನು ಕದೀಮರು ಮನೆಗೆ ನುಗ್ಗಿದ್ರೂ ಹಾಗೇ ಯಾರಿಗೂ ಗೊತ್ತಾಗದ ಹಾಗೆ ಬಂದು ಕ್ಷಣಾರ್ಧದಲ್ಲೇ ಕೈಗೆ ಸಿಕ್ಕಿದ್ದನ್ನೆಲ್ಲಾ ಬಾಚಿಕೊಂಡು ಎಸ್ಕೇಪ್‌ ಆಗುತ್ತಾರೆ. ಆದ್ರೆ ಇಲ್ಲೊಬ್ಬ ಮನೆ ಕಳ್ಳತನಕ್ಕೆಂದು ಬಂದು ಅಲ್ಲೇ ನಿದ್ರೆಗೆ ಜಾರಿದ್ದಾನೆ.

ಹೌದು ಈ ಘಟನೆ ಚೀನಾದಲ್ಲಿ ನಡೆದಿದೆ. ವ್ಕತಿಯೊಬ್ಬ ಕಳ್ಳತನಕ್ಕೆಂದು ಮನೆಯೊಂದಕ್ಕೆ ನುಗ್ಗಿದ್ದಾನೆ. ಮನೆಯವರು ಮಲಗಲಿ.. ಆಮೇಲೆ ಕದ್ದರೆ ಆಯ್ತು ಅಂತಾ ಕಾದಿದ್ದಾನೆ. ಆದ್ರೆ ಆತ ಕದಿಯೋದು ಬಿಟ್ಟು ಅಲ್ಲೇ ಗೊರಕೆ ಹೊಡೆದಿದ್ದಾನೆ. ಇದೀಗ ಆತ ಸಿಕ್ಕಿಬಿದ್ದಿದ್ದು, ಆತನನ್ನು ಪೊಲೀಸರು ಬಂಧಿಸಿದ್ದಾರೆ.

ಇದನ್ನೂ ಓದಿ:50 ಒತ್ತೆಯಾಳುಗಳ ಬಿಡುಗಡೆಗೆ ಹಮಾಸ್ ಒಪ್ಪಿಗೆ‌ – 4 ದಿನ ಕದನ ವಿರಾಮ ಘೋಷಿಸಿದ ಇಸ್ರೇಲ್!

ಅಷ್ಟಕ್ಕೂ ಆಗಿದ್ದೇನು?

ಕಳ್ಳನೊಬ್ಬ ಕಳ್ಳತನ ಮಾಡುವ ಉದ್ದೇಶದಿಂದ ಮನೆಗೆ ನುಗ್ಗಿದ್ದನಾದರೂ ಆ ವೇಳೆ ಮನೆಯವರು ಎಚ್ಚರಗೊಂಡಿದ್ದರು. ಅವರು ತಮ್ಮತಮ್ಮಲ್ಲೇ ಮಾತನಾಡಿಕೊಳ್ಳುತ್ತಿದ್ದರು. ಆದ್ದರಿಂದ ಮನೆಯವರು ಮಲಗುವ ವರೆಗೆ ಕಾಯಬೇಕು ಎಂದು ಒಂದು ಕೋಣೆಯಲ್ಲಿ ಕೆಲ ಹೊತ್ತಿನ ವರೆಗೆ ಕಾಯುತ್ತಾ ಕೂತಿದ್ದಾನೆ. ಇದಲ್ಲದೇ ನಿದ್ದೆ ಬಾರದಿರಲು ಸಿಗರೇಟ್ ಸೇದುತ್ತಾ ಮನೆಯವರು ಮಲಗುವ ವರೆಗೆ ಕಾಯುತ್ತಾ ಕುಳಿತ್ತಿದ್ದಾನೆ. ಆದರೆ ತಮಾಷೆಯ ಸಂಗತಿಯೆಂದರೆ ಮನೆಯವರು ಮಲಗುವ ಮುನ್ನವೇ ಈತ ನಿದ್ದೆಗೆ ಜಾರಿದ್ದಾನೆ. ಇದಲ್ಲದೇ ಗೊರಕೆ ಹೊಡೆಯಲು ಪ್ರಾರಂಭಿಸಿದ್ದಾನೆ. ಈತನ ಗೊರಕೆಯ ಸದ್ದು ಕೇಳಿದ ಕುಟುಂಬಸ್ಥರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಮತ್ತೊಂದು ತಮಾಷೆಯ ಸಂಗತಿಯೆಂದರೆ ಪೊಲೀಸರು ಬರುವವರೆಗೂ ಕಳ್ಳ ಗಾಢ ನಿದ್ರೆಯಲ್ಲಿಯೇ ಇದ್ದ.

ವರದಿಗಳ ಪ್ರಕಾರ, ಕಳ್ಳ ಮಲಗಿದ್ದಾಗ ಜೋರಾಗಿ ಗೊರಕೆ ಹೊಡೆಯಲು ಪ್ರಾರಂಭಿಸಿದ್ದಾನೆ. ಇಷ್ಟೊಂದು ಜೋರಾಗಿ ಎಲ್ಲಿಂದ ಗೊರಕೆ ಸದ್ದು ಬರುತ್ತಿದೆ ಎಂದು ಮನೆಯವರು ಹುಡುಕಲು ಪ್ರಾರಂಭಿಸಿದ್ದಾರೆ. ಮೊದಮೊದಲು ಗೊರಕೆಯ ಸದ್ದು ನೆರೆಮನೆಯವರದ್ದಾಗಿರಬಹುದು ಎಂದು ಮನೆಯ ಯಜಮಾನಿ ಯೋಚಿಸಿ ತನ್ನ ಕೋಣೆಯಲ್ಲಿ ಹೋಗಿ ಮಲಗಿದ್ದಾಳೆ. ಸುಮಾರು ಅರ್ಧ ಘಂಟೆಯ ನಂತರ ಮಗುವಿಗೆ ಹಾಲು ಬಾಟಲಿಯನ್ನು ತರಲು ಬಂದಾಗ ಗೊರಕೆ ಸದ್ದು ಮನೆಯಲ್ಲೇ ಎಲ್ಲಿಂದಲೋ ಬರುತ್ತಿದೆ ಎಂದು ತಿಳಿದುಬಂದಿದೆ.

ಕೆಲ ಹೊತ್ತಿನ ಬಳಿಕ ಮನೆಯ ಮತ್ತೊಂದು ಕೋಣೆಯ ಬಾಗಿಲು ತೆರೆದು ನೋಡಿದಾಗ ಅಪರಿಚಿತ ವ್ಯಕ್ತಿಯೊಬ್ಬ ತಮ್ಮ ಮನೆಯೊಳಗೆ ಮಲಗಿರುವುದು ತಿಳಿದುಬಂದಿದೆ. ತಕ್ಷಣ ಕುಟುಂಬಸ್ಥರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೋಲಿಸರ ವರದಿಯ ಪ್ರಕಾರ ಈತ ವೃತ್ತಿಪರ ಕಳ್ಳನಾಗಿದ್ದು, ಈ ಹಿಂದೆ ಕಳ್ಳತನ ಮಾಡಿ ಜೈಲಿಗೆ ಹೋಗಿದ್ದ ಎಂದು ತಿಳಿದುಬಂದಿದೆ.

Shwetha M