ಶ್ರೀಶೈಲಂ ಎಡದಂಡೆ ಕಾಲುವೆ ಸುರಂಗದೊಳಗೆ ಇಂದು ಮತ್ತೊಂದು ಮೃತದೇಹ ಪತ್ತೆ
ಉಳಿದವರಿಗಾಗಿ ಶೋಧ

ಶ್ರೀಶೈಲಂ ಎಡದಂಡೆ ಕಾಲುವೆ ಸುರಂಗದೊಳಗೆ ಇಂದು ಮತ್ತೊಂದು ಮೃತದೇಹ ಪತ್ತೆಯಾಗಿದೆ. ಕಾರ್ಮಿಕರು ನಿರ್ವಹಣಾ ಕೆಲಸ ಮಾಡುತ್ತಿದ್ದ ಕನ್ವೇಯರ್ ಬೆಲ್ಟ್‌ನಿಂದ 50 ಮೀಟರ್ ದೂರದಲ್ಲಿ ಶವ ಪತ್ತೆಯಾಗಿದ್ದು, ಯಾರ ಶವ ಅನ್ನೋ ಬಗ್ಗೆ ಪತ್ತೆ ಹಚ್ಚುತ್ತಿದ್ದಾರೆ.
ಕಳೆದ ಫೆಬ್ರವರಿ 22 ರಂದು ಎಂಟು ಕಾರ್ಮಿಕರು ಕೆಲಸ ಮಾಡುತ್ತಿದ್ದ ವೇಳೆ ಸುರಂಗದೊಳಗೆ ಸಿಲುಕಿಹಾಕಿಕೊಂಡಿದ್ದರು. ಅವರಿಗಾಗಿ ಒಂದು ತಿಂಗಳಿಗೂ ಹೆಚ್ಚು ಕಾಲ ಹುಡುಕಾಟ ನಡೆಸಲಾಗಿತ್ತು. ಕಾರ್ಮಿಕರಲ್ಲಿ ಒಬ್ಬರಾದ ಗುರುಪ್ರೀತ್ ಸಿಂಗ್ ಎಂಬುವವರ ಶವವನ್ನು ಮಾರ್ಚ್ 9 ರಂದು ಹೊರತೆಗೆಯಲಾಗಿತ್ತು. ನಂತರ ರಕ್ಷಣಾ ಪ್ರಯತ್ನಗಳು ಮುಂದುವರಿದಿದ್ದರೂ ಉಳಿದ ಆರು ಕಾರ್ಮಿಕರ ಭವಿಷ್ಯ ಅನಿಶ್ಚಿತವಾಗಿದೆ.
ಕಾಣೆಯಾದ ವ್ಯಕ್ತಿಗಳನ್ನು ಪತ್ತೆಹಚ್ಚಲು ತಂಡಗಳು ದಿನ 24 ಕೂಡ ಕೆಲಸ ಮಾಡುತ್ತಿದ್ದು, ರಕ್ಷಣಾ ಕಾರ್ಯಾಚರಣೆಗಳು ಈಗ 32 ನೇ ದಿನಕ್ಕೆ ಕಾಲಿಟ್ಟಿದೆ. ಈಗ ಪತ್ತೆಯಾಗಿರುವ ಮೃತದೇಹವನ್ನು ಗುರುತಿಸುವ ಕಾರ್ಯ ಇನ್ನೂ ನಡೆಯುತ್ತಿದೆ ಎಂದು ಅಧಿಕಾರಿಗಳು ದೃಢಪಡಿಸಿದ್ದು, ಹೆಚ್ಚಿನ ವಿವರಗಳನ್ನು ನೀಡಿಲ್ಲ.
ಮುಂದಿನ ದಿನಗಳಲ್ಲಿ ರಕ್ಷಣಾ ಕಾರ್ಯಾಚರಣೆಯಲ್ಲಿ ಪ್ರಗತಿ ಸಾಧಿಸುವ ಭರವಸೆಯನ್ನು ಅಧಿಕಾರಿಗಳು ಹೊಂದಿದ್ದಾರೆ. ಎನ್ ಡಿಆರ್ ಎಫ್, ಎಸ್ ಡಿಆರ್ ಎಫ್, ಎಸ್ ಸಿಸಿಎಲ್, ಅನ್ವಿ ರೊಬೊಟಿಕ್ಸ್ ಮತ್ತು ಇತರ ತಂಡಗಳು ಸೇರಿದಂತೆ ಬಹು ಸಂಸ್ಥೆಗಳು ರಕ್ಷಣಾ ಕಾರ್ಯಾಚರಣೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿವೆ.