S. L ಭೈರಪ್ಪ ಬದುಕಿನ ಪರ್ವ ಅಂತ್ಯ – ಬದುಕಿನ ಪುಟದಲ್ಲಿ ನೋವಿದ್ದರೂ ಸಾಹಿತ್ಯ ಪ್ರಿಯರಿಗೆ ಇಷ್ಟವಾದ ಅಕ್ಷರ ಮಾಂತ್ರಿಕ

S. L ಭೈರಪ್ಪ ಬದುಕಿನ ಪರ್ವ ಅಂತ್ಯ – ಬದುಕಿನ ಪುಟದಲ್ಲಿ ನೋವಿದ್ದರೂ ಸಾಹಿತ್ಯ ಪ್ರಿಯರಿಗೆ ಇಷ್ಟವಾದ ಅಕ್ಷರ ಮಾಂತ್ರಿಕ

ಕನ್ನಡ ಸಾಹಿತ್ಯಲೋಕದ ದಿಗ್ಗಜ ಕೊಂಡಿಯೊಂದು ಕಳಚಿಬಿದ್ದಿದೆ. ಎಸ್.ಎಲ್ ಭೈರಪ್ಪನವರ ಪರ್ವ ಅಂತ್ಯವಾಗಿದೆ. ಹೌದು. ಹಿರಿಯ ಸಾಹಿತಿ ಎಸ್‌ಎಲ್‌ ಭೈರಪ್ಪ ವಿಧಿವಶರಾಗಿದ್ದಾರೆ. 94 ವರ್ಷದ ಭೈರಪ್ಪನವರು ಬೇರೆ ಸಾಹಿತಿಗಳಿಗಿಂತ ಭಿನ್ನವಾಗಿದ್ದವರು. ತನ್ನ ಬರವಣಿಗೆಯನ್ನು ಮಾತ್ರ ನಂಬಿದ್ದ ಧೀಮಂತ ಸಾಹಿತಿ. 

ಇದನ್ನೂ ಓದಿ:ಸಾಹಿತಿ ಎಸ್‌.ಎಲ್ ಭೈರಪ್ಪರಿಗೆ ಬಂದಿರೋ ಪ್ರಶಸ್ತಿಗಳು ಯಾವೆಲ್ಲಾ? – ಇಲ್ಲಿದೆ ಲಿಸ್ಟ್

ಡಾ.ಎಸ್.ಎಲ್. ಭೈರಪ್ಪ. ಕರ್ನಾಟಕದಲ್ಲಿ ಮಾತ್ರವಲ್ಲದೆ ಭಾರತಾದ್ಯಂತ ಸಾಹಿತ್ಯಾಸಕ್ತರಿಗೆ ಚಿರಪರಿಚಿತ ಹೆಸರು. ಕನ್ನಡ ಕಾದಂಬರಿ ಸಾಹಿತ್ಯವನ್ನು ರಾಷ್ಟ್ರೀಯ ಮಟ್ಟದಲ್ಲಿ ಪ್ರತಿನಿಧಿಸಿದ ಕೀರ್ತಿ ಇವರಿಗೆ ಸಲ್ಲುತ್ತದೆ. 94 ವರ್ಷದ ಹಿರಿಯ ಸಾಹಿತಿ ಎಸ್​ ಎಲ್​ ಭೈರಪ್ಪ ಕನ್ನಡ ಕಾದಂಬರಿಕಾರ, ತತ್ವಜ್ಞಾನಿ, ಚಿಂತಕ, ಮತ್ತು ಲೇಖಕರು ಹೌದು. ಗೃಹಭಂಗ, ವಂಶವೃಕ್ಷ, ತಬ್ಬಲಿಯು ನೀನಾದೆ ಮಗನೆ, ದಾಟು, ಸೇರಿದಂತೆ ಅನೇಕ ಪ್ರಸಿದ್ಧ ಕಾದಂಬರಿಗಳನ್ನು ರಚಿಸಿ ಜನಮನ ಗೆದ್ದಿದ್ದರು. ಇವರ ಪರ್ವ ಕಾದಂಬರಿ ಸಿಕ್ಕಾಪಟ್ಟೆ ಸುದ್ದಿಮಾಡಿತ್ತು. ಗೃಹ ಭಂಗ ಧಾರಾವಾಹಿಯಂತೂ ಈಗಲೂ ಜನ ಮೆಚ್ಚಿಕೊಂಡು ನೋಡುತ್ತಿದ್ದಾರೆ.

ಇನ್ನು ಎಸ್.ಎಲ್ ಭೈರಪ್ಪನವರ ಬದುಕಿನ ಪುಟ ತೆರೆದುನೋಡಿದಾಗ ನಲಿವಿಗಿಂತ ನೋವೇ ಜಾಸ್ತಿ. ಭೈರಪ್ಪ ಅವರು ಅವರು 1931 ಆಗಸ್ಟ್ 20 ರಂದು ಹಾಸನ ಜಿಲ್ಲೆಯ ಚೆನ್ನರಾಯಪಟ್ಟಣದ ಸಂತೇಶಿವರ ಗ್ರಾಮದಲ್ಲಿ ಜನಿಸಿದ್ದರು. ಎಸ್.ಎಲ್. ಭೈರಪ್ಪನವರು ಲಿಂಗಣ್ಣಯ್ಯ ಮತ್ತು ಗೌರಮ್ಮ ದಂಪತಿಗಳ ಪುತ್ರ. ಬಾಲ್ಯದಲ್ಲಿಯೇ ತಾಯಿಯನ್ನು ಕಳೆದುಕೊಂಡರು. ಕಿತ್ತು ತಿನ್ನುವ ಬಡತನ, ಬೇಜವಬ್ದಾರಿ ತಂದೆ, ಪ್ಲೇಗ್ ಮಾರಿಯಿಂದ ತತ್ತರಿಸಿದ ಹಳ್ಳಿಯಲ್ಲೇ ಬದುಕು ಕಟ್ಟಿಕೊಳ್ಳಬೇಕಾದ ಅನಿವಾರ್ಯತೆ. ಈ ಎಲ್ಲಾ ಸಮಸ್ಯೆಗಳನ್ನು ಮೆಟ್ಟಿನಿಂತವರು ಎಸ್. ಎಲ್ ಭೈರಪ್ಪ. ಭೈರಪ್ಪ ಅವರು ಅವರು 1931 ಆಗಸ್ಟ್ 20 ರಂದು ಹಾಸನ ಜಿಲ್ಲೆಯ ಚೆನ್ನರಾಯಪಟ್ಟಣದ ಸಂತೇಶಿವರ ಗ್ರಾಮದಲ್ಲಿ ಜನಿಸಿದ್ದರು. ಎಸ್.ಎಲ್. ಭೈರಪ್ಪನವರು ಲಿಂಗಣ್ಣಯ್ಯ ಮತ್ತು ಗೌರಮ್ಮ ದಂಪತಿಗಳ ಪುತ್ರ. ನಂತರ ಬರವಣಿಗೆಯ ವಿಚಾರಕ್ಕೆ ಬಂದರೆ, ಇವರು ಏಕಲವ್ಯನಂತೆ. ಗುರುವಿಲ್ಲ. ಬರೆಯುವ ಗುರಿಯಿತ್ತು. ಹೀಗಾಗಿ ಯಾವುದೇ ವೈಚಾರಿಕ ವಿಶ್ಲೇಷಣೆಗಳ ಹಂಗಿಲ್ಲದೆ, ಬದುಕನ್ನು ಕೇವಲ ಬದುಕಾಗಿ ನೋಡುವ ಸಾಕ್ಷಿಪ್ರಜ್ಞೆಯ ಸಾಹಿತಿ ಎಸ್. ಎಲ್ ಭೈರಪ್ಪ. ನೀವೆಲ್ಲಾ ಇತ್ತೀಚೆಗೆ ಮತ್ತೊಮ್ಮೆ ಸದ್ದು ಮಾಡಿದ ಗೃಹಭಂಗ ಧಾರಾವಾಹಿಯನ್ನು ನೋಡಿರ್ತೀರಿ. ಅನೇಕ ವೀಕ್ಷಕರಿಗೆ ಈ ಧಾರಾವಾಹಿಯ ಕೆಲವೊಂದು ದೃಶ್ಯ ನಮ್ಮ ಬದುಕಲ್ಲೂ ಹೀಗಾಗಿತ್ತು ಅಂತಾ ಅನಿಸಿದ್ದು ಇದೇ. ಭೈರಪ್ಪನವರ ಬರವಣಿಗೆಯೇ ಹಾಗೆ. ವ್ಯಕ್ತಿಯ ಚಿತ್ರಣ ಮಾಡಬೇಕು ಅಂದರೆ, ಆ ವ್ಯಕ್ತಿಯ ಹೊಳಹೊಕ್ಕು ಬರೆಯುತ್ತಿದ್ದರು. ಇದರಿಂದಾಗಿ ಇವರ ಕೃತಿಗಳು ಜನಸಾಮನ್ಯರ ಜೀವನಕ್ಕೆ ಹತ್ತಿರವಾಗುತ್ತಿತ್ತು.

ಭೈರಪ್ಪ ಅವರು ಕಾದಂಬರಿಗಳಲ್ಲದೆ ಸೌಂದರ್ಯಮೀಮಾಂಸೆ, ತತ್ವಶಾಸ್ತ್ರದ ಕುರಿತು ಅನೇಕ ಗ್ರಂಥಗಳನ್ನು ರಚಿಸಿದ್ದಾರೆ. ಅವರ ಪ್ರಮುಖ ಕೃತಿಗಳಲ್ಲಿ ವಂಶವೃಕ್ಷ, ದಾಟು, ಪರ್ವ, ನಾಯಿನೆರಳು, ಧರ್ಮಶ್ರೀ, ಮತದಾನ, ಉತ್ತರಕಾಂಡ ಮುಂತಾದವುಗಳನ್ನು ಸಾಹಿತ್ಯ ಪ್ರಿಯರು ಇಷ್ಟಪಟ್ಟಿದ್ದರು. ಭೈರಪ್ಪ ಅವರಿಗೆ ಸರಸ್ವತಿ ಸಮ್ಮಾನ್, ಪದ್ಮಶ್ರೀ, ಮತ್ತುಪದ್ಮಭೂಷಣ ಪ್ರಶಸ್ತಿಗಳು ಲಭಿಸಿವೆ. ಎಸ್. ಎಲ್ ಭೈರಪ್ಪನವರ ಪುಸ್ತಕಗಳಿಗೆ ಪುಸ್ತಕ ಬಿಡುಗಡೆ ಸಮಾರಂಭ ಇರಲಿಲ್ಲ. ತಮ್ಮ ಸಾಹಿತ್ಯದ ಗಟ್ಟಿತನದಿಂದಲೇ, ಓದುಗರು ಕೊಟ್ಟ ಪ್ರೋತ್ಸಾಹದಿಂದಲೇ ಎಸ್. ಎಲ್ ಭೈರಪ್ಪನವರ ಬರಹ ಜೀವಂತವಾಗಿರುತ್ತದೆ. ಬದುಕಿನ ಯಾನ ಮುಗಿದರೂ ಕೂಡಾ ಕೃತಿಗಳಲ್ಲಿ ಎಸ್. ಎಲ್ ಭೈರಪ್ಪನವರು ಅಮರ.. ಅಜರಾಮರ.

Sulekha