ಎಸ್‌. ಎಲ್‌ ಭೈರಪ್ಪ ನಿಧನಕ್ಕೆ ಸಿಎಂ, ಡಿಸಿಎಂ, ಹೆಚ್‌ಡಿಕೆ ಸೇರಿ ಗಣ್ಯರಿಂದ ಸಂತಾಪ

ಎಸ್‌. ಎಲ್‌ ಭೈರಪ್ಪ ನಿಧನಕ್ಕೆ ಸಿಎಂ, ಡಿಸಿಎಂ, ಹೆಚ್‌ಡಿಕೆ ಸೇರಿ ಗಣ್ಯರಿಂದ ಸಂತಾಪ

ಕನ್ನಡ ಸಾಹಿತ್ಯ ಲೋಕದ ಮತ್ತೊಂದು ಧೃವತಾರೆ ಮರೆಯಾಗಿದೆ. ಕನ್ನಡದ ಸರಸ್ವತಿ ಪುತ್ರ, ಪದ್ಮ ಭೂಷಣ ಪುರಸ್ಕೃತ ಎಸ್‌.ಎಲ್‌ ಭೈರಪ್ಪನವರು ಇಂದು ವಿಧಿವಶರಾಗಿದ್ದಾರೆ. ಅಲ್ಪಕಾಲದ ಅಸೌಖ್ಯದಿಂದ ಬಳಲುತ್ತಿದ್ದ ಅವರು ಬೆಂಗಳೂರಿನ ರಾಷ್ಟ್ರೋತ್ಥಾನ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಎಸ್‌ ಎಲ್‌ ಬೈರಪ್ಪನವರು ನಿಧನಕ್ಕೆ ಸಿಎಂ ಸಿದ್ಧರಾಮಯ್ಯ, ಮಾಜಿ ಸಿಎಂಗಳಾದ ಬಿ.ಎಸ್‌.ಯಡಿಯೂರಪ್ಪ, ಹೆಚ್‌.ಡಿ.ಕುಮಾರಸ್ವಾಮಿ ಸೇರಿದಂತೆ ಅನೇಕ ಗಣ್ಯರು ಸಂತಾಪ ಸೂಚಿಸಿದ್ದಾರೆ.

ಇದನ್ನೂ ಓದಿ: ಶುಕ್ರವಾರ ಎಸ್‌.ಎಲ್‌.ಭೈರಪ್ಪ ಅಂತ್ಯ ಸಂಸ್ಕಾರ – ಅಂತಿಮ ದರ್ಶನಕ್ಕೆ ರವೀಂದ್ರ ಕಲಾಕ್ಷೇತ್ರದಲ್ಲಿ ವ್ಯವಸ್ಥೆ

ಎಸ್‌.ಎಲ್‌ ಭೈರಪ್ಪ ನಿಧನಕ್ಕೆ ಸಿಎಂ ಸಿದ್ಧರಾಮಯ್ಯ ಸಂತಾಪ ಸೂಚಿಸಿದ್ದಾರೆ. ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿರುವ ಸಿಎಂ ಸಿದ್ಧರಾಮಯ್ಯ, ಕನ್ನಡ ಸಾರಸ್ವತ ಲೋಕದ ಹಿರಿಯ ಬರಹಗಾರರಾದ ಎಸ್.ಎಲ್.ಭೈರಪ್ಪನವರ ನಿಧನವಾರ್ತೆ ನೋವು ತಂದಿದೆ. ಭೈರಪ್ಪನವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಪ್ರಾರ್ಥಿಸುತ್ತೇನೆ. ತಮ್ಮ‌ ಆಪ್ತವೆನಿಸುವ ಬರಹ ಶೈಲಿಯಿಂದಾಗಿ ಅಪಾರ ಓದುಗರನ್ನು ಹೊಂದಿದ್ದ ಭೈರಪ್ಪನವರ ನಿಧನದಿಂದ ಸಾಹಿತ್ಯಲೋಕ ಬಡವಾಗಿದೆ. ಅವರ ಕುಟುಂಬವರ್ಗ ಮತ್ತು ಓದುಗ ಬಳಗಕ್ಕೆ ನನ್ನ ಸಂತಾಪಗಳು ಎಂದಿದ್ದಾರೆ.

ಇನ್ನು ಮಾಜಿ ಸಿಎಂ ಯಡಿಯೂರಪ್ಪ ಕೂಡ ಎಸ್‌ಎಲ್‌ ಭೈರಪ್ಪ ಅವರ ನಿಧನಕ್ಕೆ ಸಂತಾಪ  ಸೂಚಿಸಿದ್ದಾರೆ.ನಾಡಿನ ಸಾಕ್ಷಿ ಪ್ರಜ್ಞೆಯಂತಿದ್ದ ಅದ್ವಿತೀಯ ಸಾಹಿತಿ, ಕನ್ನಡ ಸಾರಸ್ವತ ಲೋಕಕ್ಕೆ ‘ಸರಸ್ವತಿ ಸಮ್ಮಾನ್’ ಗೌರವವನ್ನು ತಂದುಕೊಟ್ಟ, ಪದ್ಮಭೂಷಣ ಡಾ|| ಎಸ್.ಎಲ್.ಭೈರಪ್ಪನವರು ವಿಧಿವಶರಾದ ಸುದ್ದಿ ತಿಳಿದು ಅತ್ಯಂತ ಆಘಾತವಾಗಿದೆ. ಕನ್ನಡ ಸಾಹಿತ್ಯವನ್ನು ರಾಷ್ಟ್ರೀಯ ಮಟ್ಟದಲ್ಲಿ ಮೆರೆಸಿದ, ದೇಶ ವಿದೇಶಗಳ ಸಾಹಿತ್ಯಾಸಕ್ತರ ನೆಚ್ಚಿನ ಸಾಹಿತಿಗಳಾಗಿದ್ದ, ಆ ಹಿರಿಯ ಸಾಹಿತಿಯನ್ನು ಕಳೆದುಕೊಂಡು ಕನ್ನಡ ನಾಡು, ನುಡಿ ಅನಾಥವಾದಂತಾಗಿದೆ, ಒಬ್ಬ ದಿಗ್ಗಜ ಸಾಹಿತಿಯನ್ನು, ಸಾಧಕ ಶ್ರೇಷ್ಠರನ್ನು ನಾವು ಕಳೆದುಕೊಂಡಿದ್ದೇವೆ. ಆ ದಿವ್ಯ, ಸಾರಸ್ವತ ಚೇತನಕ್ಕೆ ದೇವರು ಸದ್ಗತಿಯನ್ನು ಕರುಣಿಸಲಿ ಎಂದು ಪ್ರಾರ್ಥಿಸುತ್ತೇನೆ. ಡಾ.ಭೈರಪ್ಪನವರು ತಮ್ಮ ಅಗಾಧ ಪಾಂಡಿತ್ಯಪೂರ್ಣ ಕಾದಂಬರಿಗಳ ಮೂಲಕ ಭಾರತೀಯ ಸಂಸ್ಕೃತಿ, ಇತಿಹಾಸ, ತತ್ವಶಾಸ್ತ್ರ ಮತ್ತು ಮಾನವ ಸಂಬಂಧಗಳನ್ನು ಅತ್ಯಂತ ಆಳವಾಗಿ ವಿಶ್ಲೇಷಿಸುವ ಅಪೂರ್ವ ಕೃತಿಗಳನ್ನು ರಚಿಸಿ, ನಾಡಿನ ಸಾರಸ್ವತ ಪ್ರಪಂಚವನ್ನು ಶ್ರೀಮಂತಗೊಳಿಸಿದ್ದಾರೆ. ಅವರ ವಂಶವೃಕ್ಷ, ಪರ್ವ, ಸಾರ್ಥ, ಆವರಣದಂತಹ ಕೃತಿಗಳು ಕನ್ನಡ ಸಾಹಿತ್ಯಕ್ಕೆ ಒಂದು ಹೊಸ ದಿಕ್ಕನ್ನೇ ನೀಡಿವೆ. ಅಗಲಿದ ಮಹಾನ್ ಚೇತನಕ್ಕೆ ಅಶ್ರುಪೂರ್ಣ ಶ್ರದ್ಧಾಂಜಲಿಗಳನ್ನು ಸಲ್ಲಿಸುತ್ತಾ, ಅವರ ಕುಟುಂಬದವರಿಗೆ, ಅಪಾರ ಅಭಿಮಾನಿಗಳಿಗೆ ಆ ಮೇರು ವ್ಯಕ್ತಿತ್ವದ ಅಗಲಿಕೆಯ ದುಃಖವನ್ನು ಭರಿಸುವ ಶಕ್ತಿಯನ್ನು ದೇವರು ನೀಡಲಿ ಎಂದು ಕೋರುತ್ತೇನೆ. ಓಂ ಶಾಂತಿ ಎಂದು ಎಕ್ಸ್‌ನಲ್ಲಿ ಪೋಸ್ಟ್ ಹಾಕಿದ್ದಾರೆ.

‘ಪರ್ವ’ ಮತ್ತು ‘ಉತ್ತರಕಾಂಡ’ ಕಾದಂಬರಿಗಳ ಮೂಲಕ ಮಹಾಭಾರತ ಹಾಗೂ ರಾಮಾಯಣವನ್ನು ನೋಡುವ ಮತ್ತು ಓದುವ ಕ್ರಮವನ್ನೇ ಬದಲಿಸಿದ ಅಭಿಜಾತ ಕಾದಂಬರಿಕಾರ ಪದ್ಮಭೂಷಣ ಎಸ್.ಎಲ್. ಭೈರಪ್ಪನವರು ನಿಧನರಾದರೆಂಬ ಸುದ್ದಿ ಕೇಳಿ ತೀವ್ರ ಆಘಾತ ಉಂಟಾಯಿತು. ಶ್ರೀ ಭೈರಪ್ಪನವರ ಕಾದಂಬರಿಗಳನ್ನು ನಾನು ನಿಕಟವಾಗಿ ಓದಿದ್ದೇನೆ. ಅವರ ಕಥನ ಶೈಲಿ, ಪಾತ್ರ ಸೃಷ್ಟಿಯ ಪ್ರತಿಭೆಗೆ ಮಾರು ಹೋಗಿದ್ದೇನೆ. ಅವರು ಕನ್ನಡ ನೆಲದಲ್ಲಿ ಹುಟ್ಟಿ ಕನ್ನಡದಲ್ಲೇ ಬರೆದ ಅಪ್ಪಟ ಭಾರತೀಯ ಕಾದಂಬರಿಕಾರರು. ಮೇಲಾಗಿ ಹಾಸನ ಜಿಲ್ಲೆಯಲ್ಲಿ ಹುಟ್ಟಿದ್ದ ‘ಅಮರ ಪ್ರತಿಭೆ’ ಎಂಬ ಹೆಮ್ಮೆ ನನ್ನದು. ಶ್ರೀಯುತರ ನಿಧನ ವೈಯಕ್ತಿಕವಾಗಿ ನನಗೆ ಬಹಳ ದುಃಖ ಉಂಟು ಮಾಡಿದೆ. ಅವರ ಆತ್ಮಕ್ಕೆ ಚಿರಶಾಂತಿ ಸಿಗಲಿ ಹಾಗೂ ಅವರ ಕುಟುಂಬಸ್ಥರು, ಅಭಿಮಾನಿಗಳಿಗೆ ದುಃಖ ಭರಿಸುವ ಶಕ್ತಿಯನ್ನು ಭಗವಂತ ನೀಡಲಿ ಎಂದು ಪ್ರಾರ್ಥಿಸುತ್ತೇನೆ. ಓಂ ಶಾಂತಿ ಎಂದು ಕೇಂದ್ರ ಸಚಿವ ಹೆಚ್‌.ಡಿ.ಕುಮಾರಸ್ವಾಮಿ ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿದ್ದಾರೆ.

ಇಹದ “ಯಾನ” ಅಂತ್ಯ.. ಕನ್ನಡದ ಶ್ರೇಷ್ಠ ಕಾದಂಬರಿಕಾರ, ಪದ್ಮಭೂಷಣ ಪುರಸ್ಕೃತ, ಕನ್ನಡ ಸಾರಸ್ವತ ಲೋಕಕ್ಕೆ ಮೊದಲ ಸರಸ್ವತಿ ಸಮ್ಮಾನ್ ಪ್ರಶಸ್ತಿಯ ಗೌರವವನ್ನು ತಂದುಕೊಟ್ಟ ಡಾ. ಎಸ್.ಎಲ್.‌ ಭೈರಪ್ಪನವರು ಇಂದು ವಿಧಿವಶರಾಗಿದ್ದು ಬಹಳ ನೋವು ತಂದಿದೆ. ಸಾಹಿತ್ಯಾಭಿಮಾನಿಗಳು ಹಾಗೂ ಅವರ ಕುಟುಂಬಸ್ಥರಿಗೆ ಈ ದುಃಖವನ್ನು ಭರಿಸುವ ಶಕ್ತಿ ಭಗವಂತ ನೀಡಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್‌ ವಿಷಾದ ವ್ಯಕ್ತಪಡಿಸಿದ್ದಾರೆ.

ಕನ್ನಡದ ಸುಪ್ರಸಿದ್ಧ ಕಾದಂಬರಿಕಾರರು, ಪದ್ಮವಿಭೂಷಣ ಪುರಸ್ಕೃತ, ಸರಸ್ವತಿ ಸಮ್ಮಾನ್ ಡಾ. ಎಸ್.ಎಲ್ ಭೈರಪ್ಪ (94) ಅವರು ಧೈವಾಧೀನರಾದರು ಎಂಬ ಸುದ್ದಿ ತಿಳಿದು ಮನಸ್ಸು ಭಾರವಾಗಿದೆ. ಶ್ರೀಯುತರು ತಮ್ಮ ಕೊನೆಯ ದಿನಗಳವರೆಗೂ ಸಾಹಿತ್ಯ ಕೃಷಿಯಲ್ಲಿ ತೊಡಗಿಕೊಂಡಿದ್ದರು. ಅವರು ಬರೆದ ವಂಶವೃಕ್ಷ, ಗೃಹಭಂಗ, ಆವರಣ, ನಾಯಿ ನೆರಳು, ಸಾಕ್ಷಿ, ಅನ್ವೇಷಣೆ ಸೇರಿದಂತೆ ಹತ್ತಾರು ಕಾದಂಬರಿಗಳು ಈಗಲೂ ಜನಪ್ರಿಯವಾಗಿದ್ದು ಯುವ ಸಮುದಾಯದಲ್ಲಿ ರಾಷ್ಟ್ರೀಯ ಪ್ರಜ್ಞೆಯನ್ನು ಜಾಗೃತಿಗೊಳಿಸುತ್ತಿವೆ. 2019ರಲ್ಲಿ ನಾನು ಮೈಸೂರು ಜಿಲ್ಲೆಯ ಉಸ್ತುವಾರಿ ಸಚಿವರಾಗಿದ್ದ ವೇಳೆ ಮೈಸೂರು ದಸರಾವನ್ನು ಶ್ರೀಯುತರಿಂದ ಉದ್ಘಾಟಿಸುವ ಸೌಭಾಗ್ಯ ನನ್ನದಾಗಿತ್ತು. ಇವರ ನಿಧನದೊಂದಿಗೆ ಕನ್ನಡ ಸಾರಸ್ವತ ಲೋಕ ಅಪೂರ್ವ ಸಾಹಿತಿಯನ್ನು ಕಳೆದುಕೊಂಡಂತಾಗಿದೆ. ಭಗವಂತ ಶ್ರೀಯುತರ ಆತ್ಮಕ್ಕೆ ಸದ್ಗತಿ ಕರುಣಿಸಲಿ, ಅವರ ಕುಟುಂಬವರ್ಗ, ಶಿಷ್ಯವರ್ಗ ಹಾಗೂ ಅಪಾರ ಓದುಗ ಬಂಧುಗಳಲ್ಲಿ ದುಃಖ ಭರಿಸುವ ಶಕ್ತಿಯನ್ನು ನೀಡಲಿ ಎಂದು ಪ್ರಾರ್ಥಿಸುತ್ತೇನೆ. ಓಂ ಶಾಂತಿ ಎಂದು ಕೇಂದ್ರ ಸಚಿವ ವಿ.ಸೋಮಣ್ಣ ಅವರು ಸಂತಾಪ ವ್ಯಕ್ತಪಡಿಸಿದ್ದಾರೆ.

Shwetha M