SKY ಕ್ಯಾಚ್ ಮೋಸ.. ಪಂತ್ ನಾಟಕ? – ವಿಶ್ವ ಗೆದ್ದವರ ಮೇಲೆ ಯಾಕಿಷ್ಟು ಉರಿ?
ರವಿಶಾಸ್ತ್ರಿ ಸ್ಮಾರ್ಟ್ ವರ್ಕ್ ಮಾತಿನ ಕಿಚ್ಚು

ಟೀಂ ಇಂಡಿಯಾ ಟಿ-20 ವಿಶ್ವಕಪ್ ಗೆದ್ದಾಗಿದೆ. ಐತಿಹಾಸಿಕ ಕ್ಷಣವನ್ನ ಭಾರತೀಯರು ಸಂಭ್ರಮಿಸಿದ್ದೂ ಆಗಿದೆ. ಇನ್ನೇನು ಕೈ ತಪ್ಪಿ ಹೋಯ್ತು ಅನ್ಕೊಂಡಿದ್ದ ಪಂದ್ಯವನ್ನ ರಣರೋಚಕ ರೀತಿಯಲ್ಲಿ ಗೆದ್ದ ರೋಹಿತ್ ಪಡೆಗೆ ಇಡೀ ಕ್ರಿಕೆಟ್ ಜಗತ್ತೇ ಶಹಬ್ಬಾಸ್ ಹೇಳ್ತಿದೆ. ಆದ್ರೆ ಭಾರತದ ಗೆಲುವು, ಭಾರತೀಯರ ಖುಷಿ ಕೆಲವರ ಹೊಟ್ಟೆಗೆ ಬೆಂಕಿ ಇಟ್ಟಂತಾಗಿದೆ. ಮೊಸರಲ್ಲೂ ಕಲ್ಲು ಹುಡುಕೋದು ಅಂತಾರಲ್ಲ ಹಂಗೆ ಗೆದ್ದ ಪಂದ್ಯದಲ್ಲೂ ಮೋಸದ ಕಥೆ ಕಟ್ಟುತ್ತಿದ್ದಾರೆ. ಅದೊಂದು ಕ್ಯಾಚ್ ಹಾಗೇ ಇಂಜುರಿಯ ವಿಚಾರಕ್ಕೆ ರೆಕ್ಕೆ ಪುಕ್ಕ ಕಟ್ಟಿ ಟೀಂ ಇಂಡಿಯಾ ನ್ಯಾಯಯುತವಾಗಿ ಗೆದ್ದಿಲ್ಲ ಅಂತೆಲ್ಲಾ ಪುಕಾರು ಹಬ್ಬಿಸುತ್ತಿದ್ದಾರೆ. ಹಾಗಾದ್ರೆ ವಿಶ್ವಗೆದ್ದ ಭಾರತದ ವಿರುದ್ಧ ಕೇಳಿ ಬರ್ತಿರೋ ಆರೋಪಗಳೇನು? ರವಿಶಾಸ್ತ್ರಿ ಹೇಳಿದ್ದ ಮಾತು ಕಿಚ್ಚು ಹಚ್ಚಿದ್ದೇಗೆ? ಕ್ಯಾಚ್ ಮತ್ತು ಇಂಜುರಿ ಹಿಂದಿನ ಕಹಾನಿ ಏನು ಅನ್ನೋ ಬಗ್ಗೆ ಮಾಹಿತಿ ಇಲ್ಲಿದೆ.
ಇದನ್ನೂ ಓದಿ: ಕಮ್‌ಬ್ಯಾಕ್, ಗೋಬ್ಯಾಕ್ ಬುಮ್ರಾ – ಬಾಲ್ಯದ ನೋವು, ಗಾಯದ ಭೂತ
ದಶಕದಿಂದಲೂ ಟೀಂ ಇಂಡಿಯಾ ಪಾಲಿಗೆ ಗಗನಕುಸುಮವಾಗಿದ್ದ ಐಸಿಸಿ ವಿಶ್ವಕಪ್ ಈ ಬಾರಿ ಭಾರತದ ಮುಡಿಗೇರಿದೆ. ಭಾರತ ತಂಡ 2007ರ ಬಳಿಕ ಮತ್ತೆ ಟಿ20 ಕ್ರಿಕೆಟ್‌ನಲ್ಲಿ ವಿಶ್ವ ಚಾಂಪಿಯನ್ಸ್ ಎನಿಸಿಕೊಂಡಿತು. ಜೊತೆಗೆ 2013ರ ಬಳಿಕ ಅನುಭವಿಸಿದ್ದ ಐಸಿಸಿ ಟ್ರೋಫಿ ಗೆಲುವಿನ ಬರವನ್ನೂ ನೀಗಿಸಿಕೊಂಡಿತು. 2024ರ ಚುಟುಕು ಸಮರದ ಸರದಾರನಾಗಿ ಮೆರೆಯುತ್ತಿರೋ ಭಾರತೀಯ ಆಟಗಾರರ ಸಂಭ್ರಮಕ್ಕಂತೂ ಪಾರವೇ ಇಲ್ಲ. ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ, ರಾಹುಲ್ ದ್ರಾವಿಡ್ರಂಥ ವಿಶ್ವಶ್ರೇಷ್ಠ ಆಟಗಾರರಿಗೆ ಅವಿಸ್ಮರಣೀಯ ವಿದಾಯವೂ ಸಿಕ್ಕಿದೆ. ಆದ್ರೆ ಈ ಸಂಭ್ರಮದ ನಡುವೆಯೂ ಮೋಸದಾಟದ ಬಣ್ಣ ಹಚ್ಚಿ ಕೆಲ ವಿಕೃತ ಮನಸ್ಸುಗಳು ಖುಷಿ ಪಡ್ತಿವೆ. ಕ್ಯಾಚ್ನಲ್ಲಿ ಮೋಸ ಮಾಡಿದ್ರು, ಇಂಜುರಿ ಸಮಸ್ಯೆ ನಾಟಕವಾಡಿ ಗೆದ್ರು ಅಂತೆಲ್ಲಾ ಕಥೆ ಕಟ್ಟುತ್ತಿದ್ದಾರೆ. ಅದ್ರಲ್ಲೂ ಭಾರತದ ಗೆಲುವಿಂದ ಉರ್ಕೊಳ್ತಿರೋ ಪಾಕಿಸ್ತಾನಿಗಳಂತೂ ಇಂಡಿಯಾ ಚೀಟಿಂಗ್ ಅಂತಾ ಬಾಯಿ ಬಡ್ಕೊಳ್ತಿದ್ದಾರೆ. ಅಷ್ಟಕ್ಕೂ ಈ ಕಿಡಿಗೇಡಿಗಳು ಹೀಗೆ ಆಡ್ತಿರೋದು ಸೂರ್ಯಕುಮಾರ್ ಹಿಡಿದ ಒಂದು ಕ್ಯಾಚ್ ಹಾಗೇ ರಿಷಬ್ ಪಂತ್ ಇಂಜುರಿಗೆ ತುತ್ತಾಗಿದ್ದರ ಬಗ್ಗೆ. ಮೊದಲನೆಯದಾಗಿ ಪಂತ್ ಬಗ್ಗೆ ಹೇಳ್ತೇನೆ ನೋಡಿ.
ಪಂತ್ ಮಂಡಿನೋವಿನ ವಿವಾದ!
ಟಿ-20 ವಿಶ್ವಕಪ್ನ ಫೈನಲ್ ಪಂದ್ಯವನ್ನ ನೋಡಿದ ಬಹುತೇಕರು ದಕ್ಷಿಣ ಆಫ್ರಿಕಾನೇ ವಿನ್ ಆಗುತ್ತೆ ಅನ್ಕೊಂಡಿದ್ರು. ಅಷ್ಟೇ ಯಾಕೆ ಟೀಂ ಇಂಡಿಯಾ ಪ್ಲೇಯರ್ಸ್ ಕೂಡ ಮೈದಾನದಲ್ಲಿ ಮಂಕಾಗಿದ್ದನ್ನ ನಾವೆಲ್ಲಾ ನೋಡೇ ಇದ್ದೇವೆ. ಗೆಲುವಿನತ್ತ ದಾಪುಗಾಲು ಇಟ್ಟಿದ್ದ ಹರಿಣಪಡೆಗೆ ಕೊನೇ 24 ಎಸೆತಗಳಲ್ಲಿ ಗೆಲುವಿಗೆ ಕೇವಲ 26 ರನ್ ಮಾತ್ರ ಬೇಕಿತ್ತು. ಇನ್ನೂ 6 ವಿಕೆಟ್ಗಳು ಕೈಯಲ್ಲಿದ್ವು. ಹೆನ್ರಿಚ್ ಕ್ಲಾಸೆನ್ 52 ರನ್ ಸಿಡಿಸಿ ಸೆಟಲ್ ಆಗಿದ್ರೆ ಡೇವಿಡ್ ಮಿಲ್ಲರ್ ಸ್ಪೋಟಕ ಬ್ಯಾಟಿಂಗ್ ಮೂಲಕ 21 ರನ್ ಕಲೆ ಹಾಕಿದ್ದರು. ಹೀಗಾಗಿ ಒಂದೆರಡು ಓವರ್ನಲ್ಲೇ ಮ್ಯಾಚ್ ಮುಗೀತು ಅಂತಾ ಎಲ್ರೂ ಫಿಕ್ಸ್ ಆಗಿದ್ರು. ಆದ್ರೆ 17ನೇ ಓವರ್ ಆರಂಭಕ್ಕೂ ಮುನ್ನ ವಿಕೆಟ್ ಕೀಪರ್ ರಿಷಭ್ ಪಂತ್ ಮಂಡಿ ನೋವಿನ ಸಮಸ್ಯೆ ಅಂತೇಳಿ ಅಲ್ಪ ವಿರಾಮ ತೆಗೆದುಕೊಳ್ತಾರೆ. ಅದೂ ಕೂಡ ನಾಯಕ ರೋಹಿತ್ ಶರ್ಮಾ ನೀಡಿದ ಸುಳಿವಿನಿಂದ ಅನ್ನೋದು ಕೆಲವರ ಆರೋಪ. ಇದೇ ಬ್ರೇಕ್ನಿಂದಲೇ ದಕ್ಷಿಣ ಆಫ್ರಿಕಾದ ಬ್ಯಾಟರ್‌ಗಳ ಮೊಮೆಂಟಮ್‌ಗೆ ಬ್ರೇಕ್ ಹಾಕಲಾಗಿದೆ ಎಂಬ ಮಾತು ಕೇಳಿ ಬರ್ತಿದೆ. ಅಲ್ದೇ ಕಾಮೆಂಟರಿ ವೇಳೆ ಭಾರತದ ಮಾಜಿ ಮುಖ್ಯ ಕೋಚ್ ರವಿ ಶಾಸ್ತ್ರಿ ಕೂಡ ಭಾರತ ಗೆಲ್ಲಬೇಕಾದರೆ ಇಲ್ಲಿ ಮೊಮೆಂಟಮ್ ಬ್ರೇಕ್ ಆಗಬೇಕು ಎಂದೇ ಹೇಳಿದ್ದರು. ರಿಷಭ್ ಪಂತ್ ಅವರ ಗಾಯದ ಸಮಸ್ಯೆಗೆ ಟೀಮ್ ಇಂಡಿಯಾ ಫಿಸಿಯೋ ಅಂಗಣಕ್ಕೆ ಬಂದು ಚಿಕಿತ್ಸೆ ನೀಡಿದ್ದರು. ಇದಾದ ಕೆಲ ಹೊತ್ತಲ್ಲೇ 17ನೇ ಓವರ್‌ನ ಆರಂಭದಲ್ಲೇ ವೇಗಿ ಹಾರ್ದಿಕ್ ಪಾಂಡ್ಯಗೆ ಹೆನ್ರಿಚ್ ಕ್ಲಾಸೆನ್ ವಿಕೆಟ್ ಒಪ್ಪಿಸಿದ್ರು. ಭಾರತ ತಂಡದಲ್ಲಿ ಗೆಲುವಿನ ಆಸೆ ಮತ್ತೆ ಚಿಗುರಿತ್ತು. ಪಂತ್ ಚಿಕಿತ್ಸೆಯಿಂದ ಸಿಕ್ಕ ಅಲ್ಪ ವಿರಾಮದಿಂದ ಟೀಮ್ ಇಂಡಿಯಾ ತನ್ನ ಸ್ಟ್ರಾಟಜಿ ಚೇಂಜ್ ಮಾಡಿಕೊಳ್ಳೋಕೆ ಸಾಧ್ಯವಾಯ್ತು.ಇಲ್ಲಿ ಆಟವನ್ನು ಸ್ಲೋ ಮಾಡುವ ಅಗತ್ಯವಿತ್ತು. ಹೀಗಾಗಿ ಮೊಮೆಂಟಮ್ ತೆಗೆಯಲು ವಿರಾಮ ತೆಗೆದುಕೊಳ್ಳಲಾಗಿದೆ. ಇದರಿಂದ ಬ್ಯಾಟರ್‌ಗಳ ಅಬ್ಬರ ತಗ್ಗುತ್ತದೆ ಎಂದು ಕಾಮೆಂಟರಿ ವೇಳೆ ರವಿ ಶಾಸ್ತ್ರಿ ಹೇಳಿದ್ದರು. ಇದೇ ಈಗ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ಭಾರತ ತಂಡ ಬೇಕಂತಲೇ ಸುಳ್ಳು ನೆಪ ಹೇಳಿ ರಿಷಭ್ ಪಂತ್ ನಾಟಕವಾಡಿದ್ದಾರೆ ಅಂತೆಲ್ಲಾ ಕೆಲವರು ಆಕ್ರೋಶ ಹೊರ ಹಾಕುತ್ತಿದ್ದಾರೆ.
ಹೀಗೆ ಒಂದ್ಕಡೆ ರಿಷಭ್ ಪಂತ್ ಮಂಡಿ ನೋವಿನ ಬಗ್ಗೆ ಟೀಕೆ ಮಾಡ್ತಿದ್ರೆ ಮತ್ತೊಂದ್ಕಡೆ ಸೂರ್ಯಕುಮಾರ್ ಯಾದವ್ ಹಿಡಿದ ಸೂಪರ್ ಮ್ಯಾನ್ ಕ್ಯಾಚ್ ಬಗ್ಗೆ ಕಾಂಟ್ರವರ್ಸಿ ಕ್ರಿಯೇಟ್ ಮಾಡಿದ್ದಾರೆ. ಸೂರ್ಯಕುಮಾರ್ ಯಾದವ್ ಬೌಂಡರಿ-ರೋಪ್ ಕ್ಯಾಚ್ ಪಡೆಯುವ ಮೂಲಕ ಡೇವಿಡ್ ಮಿಲ್ಲರ್‌ಗೆ ಪೆವಿಲಿಯನ್ ಹಾದಿ ತೋರಿದರು. ಡೇವಿಡ್ ಮಿಲ್ಲರ್ ಔಟಾಗುವ ವೇಳೆಗೆ ದಕ್ಷಿಣ ಆಫ್ರಿಕಾದ ಅಗ್ರ ಕ್ರಮಾಂಕದ ಬ್ಯಾಟರ್‌ಗಳು ನೆಲ ಕಚ್ಚಿದ್ದರು. ಹಾಗಾಗಿ ಈ ಒಂದು ಕ್ಯಾಚ್ ಭಾರತದ ವಿಶ್ವಕಪ್ ಗೆಲುವಿಗೆ ಕಾರಣವಾಯಿತು. ಆದ್ರೆ ಸೂರ್ಯಕುಮಾರ್ ಹಿಡಿದ ಇದೇ ಕ್ಯಾಚ್ ವಿವಾದಕ್ಕೆ ಕಾರಣವಾಗಿದೆ. ಆಫ್ರಿಕನ್ನರು ಹಾಗೇ ಪಾಕಿಸ್ತಾನಿಗಳು ಕ್ಯಾತೆ ತೆಗೆದಿದ್ದಾರೆ.
ಸೂರ್ಯ ಕ್ಯಾಚ್ ಕಾಂಟ್ರವರ್ಸಿ!
ದಕ್ಷಿಣ ಆಫ್ರಿಕಾ ಗೆಲುವಿಗೆ ಕೊನೇ ಓವರ್ನಲ್ಲಿ ಅಂದ್ರೆ 6 ಎಸೆತಗಳಲ್ಲಿ 16 ರನ್ ಗಳಿಸಬೇಕಿತ್ತು. ಹಾರ್ದಿಕ್ ಪಾಂಡ್ಯ ಪಂದ್ಯದ ಕೊನೆಯ ಓವರ್ ಬೌಲಿಂಗ್ಗೆ ಫೀಲ್ಡಿಗಿಳಿದಿದ್ರು. ಈ ಓವರ್‌ನ ಮೊದಲ ಎಸೆತದಲ್ಲಿ ಡೇವಿಡ್ ಮಿಲ್ಲರ್ ಲಾಂಗ್‌ಆಫ್‌ನಲ್ಲಿ ಲಾಂಗ್ ಶಾಟ್ ಹೊಡೆದರು. ಬೌಂಡರಿ ಗೆರೆ ದಾಟಿ ಸಿಕ್ಸರ್ ಆಗ್ಬೇಕಿದ್ದ ಬಾಲ್ನ ಸೂರ್ಯಕುಮಾರ್ ಯಾದವ್ ರಣರೋಚಕವಾಗಿ ಹಿಡಿದಿದ್ರು. ಹಾರಿ ಕ್ಯಾಚ್ ಹಿಡಿದ ಸೂರ್ಯ ಬೌಂಡರಿ ಲೈನ್ ಟಚ್ ಆಗುವ ಆತಂಕದಲ್ಲಿ ಬಾಲ್ನ ಗ್ರೌಂಡ್ ಒಳಗೆ ಗಾಳಿಯಲ್ಲಿ ಎಸೆದು ಬೌಂಡರಿ ಲೈನ್ ದಾಟಿ ಮತ್ತೆ ರೋಪ್ನಿಂದ ಒಳಬಂದು ಕ್ಯಾಚ್ ಹಿಡಿದು ಕಂಪ್ಲೀಟ್ ಮಾಡಿದ್ರು. ಆದ್ರೆ ಕೂಡಲೇ ಔಟ್ ಕೊಡದ ಮೈದಾನದಲ್ಲಿನ ಅಂಪೈರ್‌ಗಳು ಮಿಲ್ಲರ್‌ಗೆ ಔಟ್ ನೀಡುವ ಮೊದಲು ಸೂರ್ಯಕುಮಾರ್ ಯಾದವ್ ಅವರ ಕ್ಯಾಚ್ ಅನ್ನು ಮತ್ತೆ ಪರಿಶೀಲಿಸಿದರು. ಇದಕ್ಕಾಗಿ ಥರ್ಡ್ ಅಂಪೈರ್ ಬಳಿಯೂ ಹೋಗಲಾಯ್ತು. ಮೂರನೇ ಅಂಪೈರ್ ಬಹಳಷ್ಟು ಬಾರಿ ಇದನ್ನು ಸೂಕ್ಷ್ಮವಾಗಿ ಪರಿಶೀಲಿಸಿ ಬಳಿಕವೇ ಡೇವಿಡ್ ಮಿಲ್ಲರ್ ಅವರನ್ನು ಔಟ್ ಎಂದು ಘೋಷಿಸಿದರು. ಹೀಗಾಗಿ ಇಲ್ಲಿ ಮೋಸ ಮಾಡಲಾಗಿದೆ ಎನ್ನಲು ಅವಕಾಶವೇ ಇಲ್ಲ. ಆದರೆ ಪಾಕಿಸ್ತಾನಿಗಳಿಗೆ ಮಾತ್ರ ಇದು ನುಂಗಲಾರದ ತುತ್ತಾಗಿದೆ. ಸೂರ್ಯ ಹಿಡಿದ ಕ್ಯಾಚ್ ಸರಿಯಾಗಿಲ್ಲ ಎಂದು ಸಾಬೀತುಪಡಿಸಲು ಪ್ರಯತ್ನಿಸುತ್ತಿದ್ದಾರೆ.
ಒಟ್ನಲ್ಲಿ ಟೂರ್ನಿಯೇ ಮುಗಿದು ಭಾರತ ಚಾಂಪಿಯನ್ ಆಗಿದ್ರೂ ಗೆಲುವಿನಲ್ಲೂ ಮೋಸದ ಕಥೆ ಕಥೆ ಕಟ್ಟುತ್ತಿದ್ದಾರೆ. ರಿಷಭ್ ಪಂತ್ ಇಂಜುರಿ ಬಗ್ಗೆ ವಿವಾದ ಎದ್ದಿದ್ರೆ ಸೂರ್ಯಕುಮಾರ್ ಯಾದವ್ ಹಿಡಿದ ಕ್ಯಾಚ್ ಬಗ್ಗೆಯೂ ಕೆಲವರು ಆಕ್ಷೇಪ ಎತ್ತಿದ್ದಾರೆ. ಗೆಲುವನ್ನ ಸಹಿಸಿಕೊಳ್ಳೋಕೆ ಆಗದೆ ಕುಂಟು ನೆಪ ಹೇಳ್ತಿದ್ದಾರೆ. ಆದ್ರೆ ಭಾರತ ಎಂಥಾ ತಂಡ ಅನ್ನೋದು ಇಡೀ ಜಗತ್ತಿಗೇ ಗೊತ್ತಿದೆ. ಫೈನಲ್ ಪಂದ್ಯವನ್ನ ಇಡೀ ವಿಶ್ವವೇ ಕಣ್ತುಂಬಿಕೊಂಡಿದೆ ಅನ್ನೋದೇ ಸತ್ಯ.