ಕೊಂಚ ತಣ್ಣಗಾಗಿದ್ದ ಮಣಿಪುರದಲ್ಲಿ ಮತ್ತೆ ರಕ್ತಪಾತ – ಜನಾಂಗೀಯ ದಾಳಿಯಲ್ಲಿ ಬುಡಕಟ್ಟು ಗೀತರಚನೆಕಾರ ಸೇರಿ ಎಂಟು ಮಂದಿ ಸಾವು
ಮಣಿಪುರದಲ್ಲಿ ಹಿಂಸಾಚಾರ ಮತ್ತೆ ಭುಗಿಲೆದ್ದಿದೆ. ಕಳೆದ ಎರಡು ದಿನಗಳಿಂದ ಕುಕಿ ಪ್ರಾಬಲ್ಯದ ಚುರಾಚಂದ್ಪುರ ಮತ್ತು ಮೈತಿ ಪ್ರಾಬಲ್ಯದ ಬಿಷ್ಣುಪುರ್ ಜಿಲ್ಲೆಗಳ ಗಡಿಯಲ್ಲಿ ಭಾರಿ ಹಿಂಸಾಚಾರ ನಡೆಯುತ್ತಿದೆ. ಈ ಹಿಂಸಾಚಾರದಲ್ಲಿ ಖ್ಯಾತ ಆದಿವಾಸಿ ಗೀತ ರಚನೆಗಾರ- ಸಂಗೀತ ಸಂಯೋಜಕ ಸೇರಿದಂತೆ ಎಂಟು ಮಂದಿ ಬಲಿಯಾಗಿದ್ದಾರೆ. ಈ ಘಟನೆಯಲ್ಲಿ 20ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.
ಇದನ್ನೂ ಓದಿ: ಭಾರತದಲ್ಲಿ 2 ದಿನ ಜಿ20 ಶೃಂಗಸಭೆ – ಯುವಕರಿಗೆ ಕೋತಿಯಂತೆ ವರ್ತಿಸಲು ಟ್ರೈನಿಂಗ್.. ರಸ್ತೆಗಳಲ್ಲಿ ಮುಸಿಯಾಗಳ ಕಟೌಟ್!
ಬುಧವಾರದಿಂದ ಚುರಾಚಂದ್ಪುರ ಮತ್ತು ಬಿಷ್ಣುಪುರ್ ಜಿಲ್ಲೆಗಳ ಗಡಿಯಲ್ಲಿ ಈ ಗುಂಡಿನ ದಾಳಿ, ಸ್ಫೋಟಗಳು ಸಂಭವಿಸುತ್ತಿದೆ. ಈ ಹಿಂಸಾಚಾರದಲ್ಲಿ ಆದಿವಾಸಿ ಗೀತೆ “ಐ ಗಾಮ್ ಹಿಲೋ ಹಮ್” ರಚಿಸಿದ್ದ ಎಲ್.ಎಸ್.ಮಂಗ್ಬೋಯ್ ಲುಂಗ್ಡಿಮ್ (42) ಎಂಬ ಗೀತರಚನೆಕಾರ ಮೃತಪಟ್ಟಿದ್ದಾರೆ. ಈ ಮೂಲಕ ಕೆಲ ಸಮಯದ ವರೆಗೆ ಶಾಂತಿಯುತವಾಗಿದ್ದ ರಾಜ್ಯದಲ್ಲಿ ಮತ್ತೆ ರಕ್ತಪಾತ ಶುರುವಾಗಿದೆ.
ಮಣಿಪುರದಲ್ಲಿ ಮೇ 3ರಿಂದ ಹಿಂಸಾತ್ಮಕ ಕೃತ್ಯಗಳು ನಡೆಯುತ್ತಲೇ ಇವೆ. ಇಲ್ಲಿಯವರೆಗೆ ಮಣಿಪುರ ಹಿಂಸಾಚಾರದಲ್ಲಿ 190ಕ್ಕಿಂತ ಹೆಚ್ಚು ಜನರು ಸಾವಿಗೀಡಾಗಿದ್ದಾರೆ. ನೂರಾರು ಮಂದಿ ಗಾಯಗೊಂಡಿದ್ದಾರೆ.