ಚೆಂಡು ತೆಗೆಯಲು ಹೋಗಿ ಬಾವಿಗೆ ಬಿದ್ದ ತಮ್ಮ – ಜೀವದ ಹಂಗು ತೊರೆದು ರಕ್ಷಿಸಿದಳು 8 ವರ್ಷದ ಅಕ್ಕ

ಚೆಂಡು ತೆಗೆಯಲು ಹೋಗಿ ಬಾವಿಗೆ ಬಿದ್ದ ತಮ್ಮ – ಜೀವದ ಹಂಗು ತೊರೆದು ರಕ್ಷಿಸಿದಳು 8 ವರ್ಷದ ಅಕ್ಕ

ಅಕ್ಕ ಎಂದರೆ ಎರಡನೇ ಅಮ್ಮ ಎನ್ನುತ್ತಾರೆ. ಈ ಮಾತು ಇಲ್ಲಿ ಅಕ್ಷರಶಃ ಸತ್ಯವಾಗಿದೆ. ತನ್ನ ಜೀವವನ್ನ ಪಣಕ್ಕಿಟ್ಟು ಪುಟಾಣಿ ತಮ್ಮನನ್ನ ರಕ್ಷಣೆ ಮಾಡಿ ಮರುಜನ್ಮ ನೀಡಿದ್ದಾಳೆ. ತುಮಕೂರಿನ ಕುಚ್ಚಂಗಿಯಲ್ಲಿ ನಡೆದಿರುವ ಈ ಘಟನೆ ಎಲ್ಲರನ್ನೂ ಅಚ್ಚರಿಗೊಳಿಸಿದೆ.

8 ವರ್ಷದ ಬಾಲಕಿಯೊಬ್ಬಳು ತನ್ನ ಜೀವದ ಹಂಗು ತೊರೆದು ತನ್ನ ತಮ್ಮನಿಗೆ ಮರುಜನ್ಮ ನೀಡಿದ್ದಾಳೆ.  ತುಮಕೂರು (Tumakuru) ತಾಲೂಕಿನ ಕುಚ್ಚಂಗಿಯಲ್ಲಿ ಇಂಥಾದ್ದೊಂದು ಅಚ್ಚರಿಯ ಘಟನೆ ನಡೆದಿದೆ. ಬಾವಿಗೆ (Well) ಬಿದ್ದಿದ್ದ ತಮ್ಮ ಹಿಮಾಂಶುನನ್ನು ಸಹೋದರಿ ಶಾಲೂ ರಕ್ಷಿಸಿದ್ದಾಳೆ. ಉತ್ತರ ಪ್ರದೇಶ ಮೂಲದ ಜೀತೇಂದ್ರ, ರಾಜಕುಮಾರಿ ದಂಪತಿ ಕುಚ್ಚಂಗಿಯಲ್ಲಿನ ತೋಟದ ಮನೆಯಲ್ಲಿ ಕೆಲಸಕ್ಕೆ ಇದ್ದಾರೆ. ದಂಪತಿಗೆ ಶಾಲೂ(8), ಹಿಮಾಂಶು(7), ರಾಶಿ(3), ಹಾಗೂ ಕಪಿಲ್(2) ಸೇರಿ ಒಟ್ಟು ನಾಲ್ವರು ಮಕ್ಕಳಿದ್ದಾರೆ.

ಇದನ್ನೂ ಓದಿ : ಪ್ರವಾಹ ಪರಿಸ್ಥಿತಿ ಅವಲೋಕಿಸಲು ಬಂದ ಶಾಸಕರು – ಆಕ್ರೋಶಗೊಂಡ ಮಹಿಳೆಯಿಂದ ಶಾಸಕರಿಗೆ ಕಪಾಳಮೋಕ್ಷ..!

ಜುಲೈ 30ರಂದು ಹಿಮಾಂಶು ಹಾಗೂ ರಾಶಿ ತೋಟದಲ್ಲಿ ಆಟವಾಡುತ್ತಿದ್ದರು. ಈ ವೇಳೆ ಬಾವಿಗೆ ಬಿದ್ದ ಚೆಂಡು ತೆಗೆಯಲು‌ ಹೋಗಿ ಹಿಮಾಂಶು ಬಾವಿಯಲ್ಲಿ ಬಿದ್ದು ಜೀವನ್ಮರಣ ಹೋರಾಟ ನಡೆಸುತ್ತಿದ್ದನು. ಇದನ್ನು ಕಂಡು ಶಾಲೂ ಲೈಫ್ ಜಾಕೆಟ್ ಧರಿಸಿ ಬಾವಿಗೆ ಜಿಗಿದಿದ್ದಾಳೆ. ಇದೇ ವೇಳೆ ಶಾಲೂ ಸಹಾಯಕ್ಕೆ ಅಕ್ಕಪಕ್ಕದ ಜನರು ಆಗಮಿಸಿದ್ದಾರೆ. ನಂತರ ಸ್ಥಳೀಯರು ಬಾವಿಯಿಂದ ಇಬ್ಬರನ್ನು ಮೇಲಕ್ಕೆ ಎತ್ತಿದ್ದಾರೆ. ಶಾಲೂ ಕಳೆದ ಮೂರ್ನಾಲ್ಕು ತಿಂಗಳಿನಿಂದ ಮನೆ ಮಾಲೀಕ ಧನಂಜಯ್ಯ ಬಳಿ ಈಜು ಕಲಿಯುತ್ತಿದ್ದಳು. ಈಜು ಕಲಿಯುವ ವೇಳೆ ಲೈಫ್ ಜಾಕೆಟ್ ಧರಿಸುತ್ತಿದ್ದಳು. ಇದೀಗ 8 ವರ್ಷದ ಬಾಲಕಿ ಶಾಲೂ ಸಾಹಸವನ್ನು ಗ್ರಾಮಸ್ಥರು ಕೊಂಡಾಡಿದ್ದಾರೆ.

suddiyaana