ಬಹುಕಾಲದ ಗೆಳತಿ ಜೊತೆ ಗಾಯಕ ವಾಸುಕಿ ವೈಭವ್ ಮದುವೆ – ಚಿತ್ರರಂಗದ ಗಣ್ಯರಿಂದ ನವದಂಪತಿಗೆ ಶುಭಾಶಯ

ಬಹುಕಾಲದ ಗೆಳತಿ ಜೊತೆ ಗಾಯಕ ವಾಸುಕಿ ವೈಭವ್ ಮದುವೆ – ಚಿತ್ರರಂಗದ ಗಣ್ಯರಿಂದ ನವದಂಪತಿಗೆ ಶುಭಾಶಯ

ಕನ್ನಡದ ಯುವ ಸಂಗೀತ ನಿರ್ದೇಶಕ, ಗಾಯಕ ವಾಸುಕಿ ವೈಭವ್ ನವೆಂಬರ್ 16ರಂದು ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಬಹುಕಾಲದ ಗೆಳತಿ, ರಂಗಭೂಮಿ ಕಲಾವಿದೆ ಬೃಂದಾ ಜೊತೆ ಸಪ್ತಪದಿ ತುಳಿದಿದ್ದಾರೆ. ನಟ ಸಿಹಿ ಕಹಿ ಸೇರಿದಂತೆ ಹಲವು ಕಲಾವಿದರು, ಎರಡು ಕುಟುಂಬದ ಸದಸ್ಯರು ಮತ್ತು ಆಪ್ತರು ಮಾತ್ರ ಮದುವೆಯಲ್ಲಿ ಭಾಗಿಯಾಗಿದ್ದಾರೆ.

ಇದನ್ನೂ ಓದಿ: ‘ಟೈಗರ್ 3’ ಭರ್ಜರಿ ಕಲೆಕ್ಷನ್ – ಬಾಕ್ಸ್ಆಫೀಸ್‌ನಲ್ಲಿ ಧೂಳೆಬ್ಬಿಸಿದ ಬಾಲಿವುಡ್ ಬ್ಯಾಡ್‌ಬಾಯ್ ಸಲ್ಮಾನ್ ಖಾನ್

ಗಾಯಕ, ಸಂಗೀತ ನಿರ್ದೇಶಕ, ನಟ ವಾಸುಕಿ ವೈಭವ್ ಬದುಕಿನಲ್ಲಿ ಬೃಂದಾ ಗಾಯನ ಶುರುವಾಗಿದೆ. ನವೆಂಬರ್ 16ರಂದು ವಾಸುಕಿ ಮತ್ತು ಬೃಂದಾ ಜೋಡಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಕುಟುಂಬದವರು, ಆಪ್ತರು ಮತ್ತು ಸ್ನೇಹಿತರ ಸಮ್ಮುಖದಲ್ಲಿ ಸರಳವಾಗಿ ಮದುವೆ ಕಾರ್ಯಗಳು ನಡೆದವು. ಹೆಚ್ಚು ಆಡಂಬರ ಇಲ್ಲದೇ, ಸಂಪ್ರದಾಯ ಬದ್ಧವಾಗಿ ವಾಸುಕಿ ವೈಭವ್ ಮತ್ತು ಬೃಂದಾ ವಿಕ್ರಮ್ ಅವರು ಹಸೆಮಣೆಯೇರಿದರು.

ವಾಸುಕಿ ವೈಭವ್ ಮತ್ತು ಬೃಂದಾ ವಿಕ್ರಮ್ ಅವರು ಹಲವು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು. ಬೃಂದಾ ವಿಕ್ರಮ್ ಅವರು ರಂಗಭೂಮಿ ಹಿನ್ನೆಲೆ ಹೊಂದಿದ್ದಾರೆ. ಶಿಕ್ಷಕಿ ಆಗಿಯೂ ಅವರು ಕೆಲಸ ಮಾಡುತ್ತಿದ್ದಾರೆ. ವಾಸುಕಿ ಮತ್ತು ಬೃಂದಾ ಅವರು ತಮ್ಮ ಪ್ರೀತಿಯ ಬಗ್ಗೆ ಸಾರ್ವಜನಿಕವಾಗಿ ಹೆಚ್ಚೇನೂ ಹೇಳಿಕೊಂಡಿರಲಿಲ್ಲ. ಚಿತ್ರರಂಗದಲ್ಲಿ ಬ್ಯುಸಿ ಆಗಿರುವ ವಾಸುಕಿ ವೈಭವ್ ಅವರು ವೈವಾಹಿಕ ಜೀವನಕ್ಕೆ ಕಾಲಿಟ್ಟುರುವ ಶುಭ ಸಮಾಚಾರವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ‘ಹೊಸ ಪಯಣ ಆರಂಭ ಆಗಿದೆ. ನಿಮ್ಮೆಲ್ಲರ ಆಶೀರ್ವಾದ ಮತ್ತು ಹಾರೈಕೆ ಬೇಕು’ ಎಂದು ವಾಸುಕಿ ವೈಭವ್ ಅವರು ಇನ್ಸ್ಟಾಗ್ರಾಮ್ ಸ್ಟೇಟಸ್ನಲ್ಲಿ ಬರೆದುಕೊಂಡಿದ್ದಾರೆ.

ಕಳೆದ ವಾರ ವಾಸುಕಿ ವೈಭವ್ ಅವರ ಕುಟುಂಬದಲ್ಲಿ ಚಪ್ಪರ ಪೂಜೆ ಆರಂಭ ಆಗಿತ್ತು. ಮದುವೆ ಬಳಿಕ ತಾವು ಆರತಕ್ಷತೆ ಅಥವಾ ಯಾವುದೇ ದೊಡ್ಡ ಇವೆಂಟ್ ಆಯೋಜಿಸುವುದಿಲ್ಲ ಎಂದು ವಾಸುಕಿ ವೈಭವ್ ಹೇಳಿಕೊಂಡಿದ್ದರು. ವಾಸುಕಿ ವೈಭವ್, ಇತ್ತೀಚೆಗೆ ರಿಲೀಸ್ ಆದ ‘ಟಗರು ಪಲ್ಯ’ ಸಿನಿಮಾಗೆ ಸಂಗೀತ ನಿರ್ದೇಶನ ಮಾಡುವುದರ ಜೊತೆಗೆ ಒಂದು ಮುಖ್ಯವಾದ ಪಾತ್ರಕ್ಕೂ ಅವರು ಬಣ್ಣ ಹಚ್ಚಿದ್ದಾರೆ. ಮದುವೆ ಸಲುವಾಗಿ ಅವರು ಸಣ್ಣ ಬ್ರೇಕ್ ಪಡೆದುಕೊಂಡಿದ್ದಾರೆ.

Sulekha