ಐತಿಹಾಸಿಕ ಕ್ಷಣಕ್ಕೆ ಸಜ್ಜಾದ ಸಿಲಿಕಾನ್ ಸಿಟಿ – ಅರಮನೆ ಮೈದಾನದಲ್ಲಿ ಕಂಬಳದ ಕೆರೆ ಪೂಜೆ
ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಕರಾವಳಿಯ ಜನಪದ ಕ್ರೀಡೆ ಕಂಬಳವನ್ನು ಆಯೋಜಿಸಲಾಗಿದೆ. ತುಳುಕೂಟಕ್ಕೆ 50 ವರ್ಷದ ಸಂಭ್ರಮ ಹಿನ್ನೆಲೆಯಲ್ಲಿ ಉದ್ಯಾನನಗರಿ ಅರಮನೆ ಮೈದಾನದಲ್ಲಿ ನವೆಂಬರ್ 25, 26 ರಂದು ಕಂಬಳ ನಡೆಯಲಿದೆ. ಈಗಾಗಲೇ ಕಂಬಳಕ್ಕೆ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ. ಬುಧವಾರ ಅರಮನೆ ಮೈದಾನಲ್ಲಿ ಕಂಬಳದ ಕೆರೆ ಪೂಜೆ ನಡೆಸಲಾಗಿದೆ.
ಅರಮನೆ ಮೈದಾನದಲ್ಲಿ ಕಂಬಳದ ಕರೆ ಪೂಜೆ (ಭೂಮಿ ಪೂಜೆ) ನೆರವೇರಿಸಲಾಯಿತು. ಕರೆ ಪೂಜೆಯಲ್ಲಿ ಡಿಸಿಎಂ ಡಿಕೆಶಿ, ಮಾಜಿ ಸಿಎಂ ಸದಾನಂದ ಗೌಡ ಹಾಗೂ ಅಶ್ವತ್ ನಾರಾಯಣ್, ಸಂಗೀತ ನಿರ್ದೇಶನ ಗುರುಕಿರಣ್, ತುಳುಕೂಟದ ಅಧ್ಯಕ್ಷ ಸುಂದರ್ ರಾಜ್ ರೈ ಭಾಗಿಯಾಗಿದ್ದಾರೆ. ಇದೇ ವೇಳೆ ನಮ್ಮ ಕಂಬಳ- ಬೆಂಗಳೂರು ಕಂಬಳ ಲಾಂಛನ ಬಿಡುಗಡೆ ಮಾಡಲಾಯಿತು.
ಇದನ್ನೂ ಓದಿ: ಬೆಂಗಳೂರು ಕಂಬಳದಲ್ಲಿ ಭಾಗವಹಿಸಲಿವೆ 125ಕ್ಕೂ ಅಧಿಕ ಜತೆ ಕೋಣಗಳು – ಮಂಗಳೂರಿಂದಲೇ ಬರುತ್ತೆ ಕೋಣಗಳಿಗೆ ಕುಡಿಯುವ ನೀರು!
ಲಾಂಛನ ಬಿಡುಗಡೆ ಮಾಡಿದ ಬಳಿಕ ಮಾತನಾಡಿದ ಡಿಕೆಶಿ, ಕಂಬಳಕ್ಕೆ ಈಗಾಗಲೇ ವಿಶೇಷ ಅನುದಾನ ನೀಡಲಾಗಿದೆ. ಆದರೆ ಇದೇ ಮೊದಲ ಬಾರಿಗೆ ಬೆಂಗಳೂರಿನಲ್ಲಿ ಕಂಬಳ ನಡೆಯುತ್ತಿದೆ. ಈಗಾಗಲೇ ಸಿಎಂ ಸಿದ್ದರಾಮಯ್ಯ, ಕನ್ನಡ ಸಂಸ್ಕೃತಿ ಇಲಾಖೆ, ಕ್ರೀಡಾ ಇಲಾಖೆಯೊಂದಿಗೆ ಮಾತನಾಡಿದ್ದು, ಈ ಐತಿಹಾಸಿಕ ಕಾರ್ಯಕ್ರಮಕ್ಕೆ ಸಾಧ್ಯವಾದಷ್ಟು ಸಹಕಾರ ನೀಡಲು ಬದ್ಧನಾಗಿದ್ದೇನೆ ಎಂದು ಹೇಳಿದರು.
ಇನ್ನು ಆರ್.ಆರ್.ನಗರ ವಿಧಾನಸಭಾ ಕ್ಷೇತ್ರಕ್ಕೆ ಅನುದಾನ ಕೈಬಿಟ್ಟಿರುವ ಹಿನ್ನೆಲೆಯಲ್ಲಿ ಅನುದಾನ ಬಿಡುಗಡೆಗೆ ಆಗ್ರಹಿಸಿ ಬಿಜೆಪಿ ಶಾಸಕ ಮುನಿರತ್ನ ಅವರು ವಿಧಾನಸೌಧದ ಗಾಂಧಿ ಪ್ರತಿಮೆ ಬಳಿ ಪ್ರತಿಭಟನೆ ಮಾಡುತ್ತಿದ್ದಾರೆ. ಇದೇ ವಿಚಾರವಾಗಿ ಮಾತನಾಡಿದ್ದ ಮುನಿರತ್ನ, ಅನುದಾನ ಪಡೆದುಕೊಳ್ಳುವ ನಿಟ್ಟಿನಲ್ಲಿ ಡಿಸಿಎಂ ಡಿಕೆ ಶಿವಕುಮಾರ್ ಅವರ ಕಾಲಿಗೂ ಬೀಳಲು ಸಿದ್ದನಿದ್ದೇನೆ. ಮೌನ ಪ್ರತಿಭಟನೆಯ ಬಳಿಕ ನಾನು ಡಿಕೆಶಿ ಎಲ್ಲಿದ್ದಾರೋ ಅಲ್ಲಿಗೆ ಹೋಗಿ ಅವರ ಕಾಲು ಹಿಡಯುತ್ತೇನೆ ಎಂದಿದ್ದರು. ಇದಾದ ನಂತರ ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆಯುತ್ತಿದ್ದ ಕರಾವಳಿಗರ ಕಂಬಳ ಉತ್ಸವ ಕಾರ್ಯಕ್ರಮದ ಕರೆ ಪೂಜಾ ಕಾರ್ಯಕ್ರಮಕ್ಕೆ ತೆರಳಿದ್ದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಇರುವಲ್ಲಿಗೆ ತೆರಳಿದ ಶಾಸಕ ಮುನಿರತ್ನ ಅವರು ಡಿಸಿಎಂ ಕಾಲಿಗೆ ಬಿದ್ದು ಮನವಿ ಪತ್ರವನ್ನು ಸಲ್ಲಿಕೆ ಮಾಡಿದ್ದಾರೆ.