ಸೈಲೆಂಟ್ ಸುನಿಲ್ ಗೆ ಬಿಜೆಪಿ ಸೇರ್ಪಡೆಯಾಗಲು ಅವಕಾಶವಿಲ್ಲ -ನಳೀನ್ ಕುಮಾರ್ ಕಟೀಲ್
ಮೂವತ್ತಕ್ಕೂ ಹೆಚ್ಚು ಕೇಸ್‍ಗಳಲ್ಲಿ ಭಾಗಿಯಾಗಿರುವ ರೌಡಿ ಶೀಟರ್ ಸೈಲೆಂಟ್ ಸುನಿಲ್ ಬಿಜೆಪಿ ಮುಖಂಡರ ಜೊತೆ ವೇದಿಕೆ ಹಂಚಿಕೊಂಡಿರುವುದಕ್ಕೆ ಇದೀಗ ಬಿಜೆಪಿ ಮುಜುಗರ ಪಡುವಂತಾಗಿದೆ. ವಿರೋಧಪಕ್ಷಗಳಿಂದ ಹಿಡಿದು ಎಲ್ಲೆಡೆ ಟೀಕೆ ಕೇಳಿ ಬಂದ ನಂತರ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್, ಸೈಲೆಂಟ್ ಸುನಿಲ್ ಗೆ ಬಿಜೆಪಿ ಸೇರ್ಪಡೆಯಾಗಲು ಅವಕಾಶವಿಲ್ಲ ಎಂದಿದ್ದಾರೆ. ಆದರೆ, ನವದೆಹಲಿಯಲ್ಲಿ ಮಾತನಾಡಿರುವ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ, ಬಿಜೆಪಿ ಮುಖಂಡರ ಜೊತೆ ಸೈಲೆಂಟ್ ಸುನಿಲ್ ವೇದಿಕೆ ಹಂಚಿಕೊಂಡಿದನ್ನು ಸಮರ್ಥಿಸಿಕೊಂಡಿದ್ದಾರೆ.
ಇದನ್ನೂ ಓದಿ : ಭಾರತೀಯ ಒಲಿಂಪಿಕ್ಸ್ ಸಂಸ್ಥೆಯ ಅಧ್ಯಕ್ಷರಾಗಿ ಪಿ.ಟಿ.ಉಷಾ ಆಯ್ಕೆ ಬಹುತೇಕ ಖಚಿತ
ನಗರದಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಸೈಲೆಂಟ್ ಸುನಿಲ್ , ಪಕ್ಷದ ಕೆಲವು ಪ್ರಮುಖರ ಜೊತೆ ವೇದಿಕೆ ಹಂಚಿಕೊಂಡಿದ್ದರ ಬಗ್ಗೆ ಮಾಹಿತಿ ಪಡೆಯುತ್ತಿದ್ದೇನೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಹೇಳಿದ್ದಾರೆ. ಪಕ್ಷದ ಪ್ರಮುಖರು ಮುಂದಿನ ದಿನಗಳಲ್ಲಿ ಇಂಥ ಘಟನೆಗಳು ಆಗದಂತೆ ನೋಡಿಕೊಳ್ಳಬೇಕು. ಎಲ್ಲ ವಿಚಾರಗಳನ್ನು ಪಕ್ಷದ ಗಮನಕ್ಕೆ ತರಬೇಕು ಎಂದು ನಳೀನ್ ಕುಮಾರ್ ಕಟೀಲ್ ಅವರು ಸೂಚಿಸಿದ್ದಾರೆ.
ಇನ್ನು ನವದೆಹಲಿಯಲ್ಲಿ ಮಾತನಾಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕಾಂಗ್ರೆಸ್‌ನಲ್ಲಿ ಎಷ್ಟು ಜನ ರೌಡಿಶೀಟರ್‌ಗಳಿದ್ದಾರೆ ಅಂತ ಮೊದಲು ಲೆಕ್ಕ ಹಾಕಲಿ, ಬಳಿಕ ಬಿಜೆಪಿ ಬಗ್ಗೆ ಮಾತನಾಡಲಿ ಎಂದು ಕಾಂಗ್ರೆಸ್‌ಗೆ ತಿರುಗೇಟು ನೀಡಿದ್ದಾರೆ. ಜೊತೆಗೆ ರೌಡಿಶೀಟರ್ ಸೈಲೆಂಟ್ ಸುನಿಲ್ ಜೊತೆಗೆ ಬಿಜೆಪಿ ನಾಯಕರು ವೇದಿಕೆ ಹಂಚಿಕೊಂಡಿದ್ದನ್ನು ಸಮರ್ಥಿಸಿಕೊಂಡರು.
ಕೆಲದಿನಗಳ ಹಿಂದೆ ಬೆಂಗಳೂರಿನ 80ಕ್ಕೂ ಹೆಚ್ಚು ರೌಡಿಶೀಟರ್‌ಗಳ ಮನೆ ಮೇಲೆ ಪೊಲೀಸರು ದಾಳಿ ಮಾಡಿದ್ದರು. ಈ ವೇಳೆ 23 ಪುಡಿರೌಡಿಗಳನ್ನು ವಶಕ್ಕೆ ಪಡೆದು ವಾರ್ನ್ ಮಾಡಿದ್ದರು. ಸೈಲೆಂಟ್ ಸುನಿಲ್ ದಾಳಿ ವೇಳೆ ಪರಾರಿಯಾಗಿದ್ದರು ಎಂದು ಸಿಸಿಬಿ ಪೊಲೀಸರು ಹೇಳಿದ್ದರು. ಆದರೆ ನಿನ್ನೆ ರಾಜಕಾರಣಿಗಳ ಸಭೆಯಲ್ಲಿ ಸೈಲೆಂಟ್ ಸುನಿಲ್ ಪ್ರತ್ಯಕ್ಷನಾಗಿದ್ದಾನೆ. ಈ ಕಾರ್ಯಕ್ರಮದಲ್ಲಿ ರಾಜಕಾರಣಿಗಳ ಜೊತೆ ಪೊಲೀಸರು ಇದ್ದರು ಆದರೂ ಸುನಿಲ್ ರಾಜಾರೋಷವಾಗಿ ಮೆರೆದಾಡಿದ್ದು ಹತ್ತು ಹಲವು ಅನುಮಾನಕ್ಕೂ ಎಡೆ ಮಾಡಿಕೊಟ್ಟಿತ್ತು.