ಸೇವೆಗೆ ಸಿಗಂದೂರು ಸೇತುವೆ ಸಿದ್ಧ.. ಸಿಎಂನೇ ಬಿಟ್ಟು ಉದ್ಘಾಟನೆ ಯಾಕೆ? – ದ್ವೀಪದ ಜನರಿಗೆ ಹೊಸ ಬದುಕು 

ಸೇವೆಗೆ ಸಿಗಂದೂರು ಸೇತುವೆ ಸಿದ್ಧ.. ಸಿಎಂನೇ ಬಿಟ್ಟು ಉದ್ಘಾಟನೆ ಯಾಕೆ? – ದ್ವೀಪದ ಜನರಿಗೆ ಹೊಸ ಬದುಕು 

ಒಂದು ದಡದಿಂದ ಇನ್ನೊಂದು ದಡಕ್ಕೆ ಸಾಗಲು ಲಾಂಚ್​ಗಳೇ ಆಧಾರವಾಗಿದ್ವು.  ನಾಡಿಗೆ ಬೆಳಕು ನೀಡುವ ಸಲುವಾಗಿ ತಮ್ಮದೆನ್ನುವ ಸರ್ವಸ್ವವನ್ನೂ ಕಳೆದುಕೊಂಡಿದ್ರು ಈ ಭಾಗದ ಜನ..  ರಸ್ತೆ ಸಂಪರ್ಕವನ್ನೂ ಕಡಿದುಕೊಂಡು ಶಿಕ್ಷಣ, ಕೆಲಸ, ಆರೋಗ್ಯ ಮುಂತಾದ ಮೂಲಸೌಕರ್ಯಗಳಿಂದ ವಂಚಿತರಾಗಿದ್ರು. ಶರಾವತಿ ಹಿನ್ನೀರು ಈ ಭಾಗದ ಜನರ ಜೀವನವನ್ನೇ ಹಿಂಡಿ ಹಿಪ್ಪೆ ಮಾಡಿತ್ತು. ದೀಪದ ಕೆಳಗೆ ಕತ್ತಲೆ ಎಂಬಂತೆ ಕನಿಷ್ಠ ವಿದ್ಯುತ್ ಸಂಪರ್ಕ ಇಲ್ಲದೆಯೂ ಬದುಕು ಸಾಗಿಸಿದವರು ಇದ್ದರು. ತೆಪ್ಪದ ಮೂಲಕವೇ ಇವರ ಪ್ರಯಾಣ ಆರಂಭವಾಯಿತು. ನೀರಿನ ಮೇಲೆ ಗುಳ್ಳೆಯಂತೆ, ಯಾವಾಗ ಏನ್ ಆಗುತ್ತೋ ಅನ್ನೋ ಭಯದಲ್ಲೇ ತೆಪ್ಪದ ಮೇವೆ  ಪ್ರಯಾಣ ಮಾಡುತ್ತಿದ್ದರು ಸಿಗಂದೂರು ಮತ್ತು ಸುತ್ತಮತ್ತಿನಲ್ಲಿನ ಜನ.. ಬೆಳಿಗ್ಗೆಯಿಂದ ಸಂಜೆವರೆಗಷ್ಟೇ ಲಭ್ಯವಿದ್ದ ಈ ಲಾಂಚ್​ಗೆ ಗಂಟೆಗಟ್ಟಲೆ ಕಾಯುವುದು ಅನಿವಾರ್ಯವಾಗಿತ್ತು.  ಪ್ರಸಿದ್ಧ ಸಿಗಂದೂರು ಚೌಡೇಶ್ವರಿ ದೇವಸ್ಥಾನಕ್ಕೆ ಬರುವ ಸಾವಿರಾರು ಭಕ್ತರು ಕೂಡ ಲಾಂಚ್‌ಗಾಗಿ ಸಾಲುಗಟ್ಟಿ ನಿಲ್ಲಬೇಕಾದ ಪರಿಸ್ಥಿತಿ ಇತ್ತು. ಈ ಎಲ್ಲಾ ಸಂಕಷ್ಟಗಳಿಗೆ, ಕಾಯುವಿಕೆಗೆ ಈಗ ತೆರೆ ಬಿದ್ದಿದೆ.  ಹೊಸ ಯುಗಕ್ಕೆ ನಾಂದಿ ಹಾಡಲಾಗಿದೆ.

ಇದನ್ನೂ ಓದಿ: ಅಭಿನವ ಸರಸ್ವತಿಯ ಬದುಕಿನಲ್ಲಿ ನೋವುಗಳ ಸರಮಾಲೆ – ಅಮ್ಮನಿಗೆ ಕೊಟ್ಟ ಮಾತನ್ನು ಕೊನೆತನಕ ಉಳಿಸಿಕೊಂಡಿದ್ದರು ಸರೋಜಾದೇವಿ

1960ರಲ್ಲಿ ಶರಾವತಿ ನದಿಗೆ ಲಿಂಗನಮಕ್ಕಿ ಬಳಿ ಜಲಾಶಯ ನಿರ್ಮಿಸಲಾಯಿತು. ಪರಿಣಾಮ ಫಲವತ್ತಾದ ಗದ್ದೆ, ಅಡಕೆ ತೋಟ, ಮನೆಗಳು ಹಿನ್ನೀರಿನಲ್ಲಿ ಮುಳುಗಡೆಯಾದ್ವು.. ನೂರಾರು ವರ್ಷಗಳಿಂದ ವಾಸವಾಗಿದ್ದ ಜನ ನೆಲೆ ಕಳೆದುಕೊಂಡು ಬೀದಿಗೆ ಬಿದ್ರು. ಅಂದಿನ ಕರ್ನಾಟಕ ವಿದ್ಯುತ್ ನಿಗಮ ರಾತ್ರೋರಾತ್ರಿ ಲಾರಿಯಲ್ಲಿ ಅಲ್ಲಿದ್ದ ಜನರನ್ನು ತುಂಬಿಕೊಂಡು ವಿವಿಧೆಡೆ ಬಿಟ್ಟುಹೋಗಿದ್ದು ಈಗ ಇತಿಹಾಸ.. ಸಿಗಂದೂರು ಸುತ್ತಮುತ್ತನ ಹಳ್ಳಿಗಳು ದ್ವೀಪದಂತೆ ಆದ್ವು.. ನಗರ ಪ್ರದೇಶಕ್ಕೆ ಹೋಗಬೇಕಾದ್ರೂ ನೂರಾರು ಮೈಲಿ ಸುತ್ತಿಕೊಂಡೇ ಹೋಗಬೇಕಿತ್ತು.. ಇಲ್ಲವಾದ್ರೆ ಜೀವದ ಹಂಗು ತೊರೆದು ದೋಣಿ, ತೆಪ್ಪದಲ್ಲಿ ಹಿನ್ನಿರು ದಾಟಬೇಕಾಯ್ತು.  ಒಂದೊಮ್ಮೆ  ಸಮಾರಂಭವೊಂದಕ್ಕೆ ತೆಪ್ಪದಲ್ಲಿ ತೆರಳುತ್ತಿದ್ದಾಗ 20ಕ್ಕೂ ಹೆಚ್ಚು ಮಂದಿ ಹಿನ್ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದನ್ನು ಇಂದಿಗೂ ಇಲ್ಲಿನ ವೃದ್ಧರು ನೆನಪಿಸಿಕೊಳ್ಳುವುದುಂಟು. ಆ ನಂತರ ಒಳನಾಡು ಸಾರಿಗೆಯಿಂದ ಲಾಂಚ್ ವ್ಯವಸ್ಥೆ ಮಾಡಲಾಗಿತ್ತು. ಒಂದು ಲಾಂಚ್ ಬಂದಾಗ ಸಾಕಷ್ಟು ಹೊರೆಯಾಗಿತ್ತು. ನಂತರ ಅದು ನಾಲ್ಕಕ್ಕೆ ಏರಿಕೆಯಾಯಿತು. ಆದರೂ ಸ್ಥಳೀಯರ ಸಮಸ್ಯೆಗೆ ಮುಕ್ತಿ ಸಿಗಲಿಲ್ಲ. ಪ್ರವಾಸಿಗರು ಹಾಗೂ ಸ್ಥಳೀಯರೊಂದಿಗೆ ಲಾಂಚ್ ಪ್ರಯಾಣದಲ್ಲಿ ಸಂಘರ್ಷ ಉಂಟಾಗುತ್ತಿತ್ತು. ಲಾಂಚ್‌ನೊಳಗೆ ವಾಹನಗಳನ್ನು ನಿಲ್ಲಿಸುವ ಸಂದರ್ಭದಲ್ಲಿ ವಾಹನಗಳು ಡಿಕ್ಕಿಯಾದ ಉದಾಹರಣೆಗಳೂ ಅವೆಷ್ಟೋ. ಬೆಳಗ್ಗೆಯಿಂದ ಸಂಜೆಯವರೆಗೆ ಮಾತ್ರ ಲಾಂಚ್ ಸಂಚಾರ. ಸಂಜೆ ಬಳಿಕ ಸಂಚಾರವಿರಲಿಲ್ಲ. ಹೀಗಾಗಿ ಕತ್ತಲಾದ ಬಳಿಕ ಯಾರಿಗಾದರೂ ಅನಾರೋಗ್ಯ ಕಾಡಿದರೆ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲು ವಿಳಂಬವಾಗುತ್ತಿತ್ತು. ಇದರಿಂದ ಇದುವರೆಗೆ ನೂರಾರು ಮಂದಿ ಪ್ರಾಣ ಕಳೆದುಕೊಂಡಿದ್ದೂ ಆಗಿದೆ. ಈಗ ಇಂತಹ ಸಮಸ್ಯೆಗಳಿಗೆಲ್ಲ ಮುಕ್ತಿ ಸಿಕ್ಕಿದೆ.. ಸಿಗಂದೂರು ಸೇತುವೆ ಲೋಕಾಪರ್ಣೆಯಾಗಿದೆ..

ಸಾಗರ ತಾಲೂಕಿ ಕಳಸವಳ್ಳಿ ಹಾಗೂ ಅಂಬಾರಗೋಡ್ಲು ನಡುವೆ ಶರಾವತಿ ನದಿಗೆ ಅಡ್ಡಲಾಗಿ ಕಟ್ಟಲಾದ ಈ ಸೇತುವೆಯಿಂದ ಸಾಕಷ್ಟು ಪ್ರಯೋಜಗಳಿವೆ. ಈ ಹೊಸ ಸೇತುವೆಯು ಉತ್ತರ ಕರ್ನಾಟಕ, ಮಲೆನಾಡು ಹಾಗೂ ಕರಾವಳಿಗೆ ಸಂಪರ್ಕ ಕೊಂಡಿಯಾಗಲಿದೆ. ಇದ್ರಿಂದ  ಸಾಗರ ಮತ್ತು ಸಿಗಂದೂರು ನಡುವಿನ ಪ್ರಯಾಣದ ಅವಧಿಯನ್ನು ಸುಮಾರು 2 ಗಂಟೆಗಷ್ಟು ಕಡಿಮೆಯಾಗುತ್ತೆ. ಸಿಗಂದೂರು ಚೌಡೇಶ್ವರಿ ದೇವಸ್ಥಾನಕ್ಕೆ ಭಕ್ತರು ಈಗ ಯಾವುದೇ ಭಯವಿಲ್ಲ, ಕಡಿಮೆ ಅವದಿಯಲ್ಲಿ ದೇವಸ್ಥಾನಕ್ಕೆ ಹೋಗಬಹುದು.. ಇದ್ರಿಂದ  ಪ್ರವಾಸೋದ್ಯಮ ಮತ್ತು ವಾಣಿಜ್ಯ ವ್ಯವಹಾರ ಬೆಳೆಯುತ್ತೆ. ಈ ಸೇತುವೆಯು ಕರ್ನಾಟಕದ ಎರಡು ಪ್ರಸಿದ್ಧ ಧಾರ್ಮಿಕ ಕ್ಷೇತ್ರಗಳಾದ ಕೊಲ್ಲೂರು ಮತ್ತು ಸಿಗಂದೂರು ದೇವಸ್ಥಾನಗಳನ್ನು ಸಂಪರ್ಕಿಸುವ ನಿಟ್ಟಿನಲ್ಲಿ ಮಹತ್ವದ ಪಾತ್ರ ವಹಿಸುತ್ತೆ. ಎಲ್ಲದ್ದಕ್ಕಿಂತ ಹೆಚ್ಚಾಗಿ  ಆರು ದಶಕಗಳಿಂದ ಸಂಚಾರದ ಮೂಲಭೂತ ಸೌಕರ್ಯಗಳನ್ನೇ ಕಾಣದೆ ಬದುಕುತ್ತಿದ್ದ ಶರಾವತಿ ಹಿನ್ನೀರು ಭಾಗದ 40ಕ್ಕೂ ಹೆಚ್ಚು ಗ್ರಾಮಗಳ ಜನರಿಗೆ ಇತರ ಊರುಗಳನ್ನು ಸಂಪರ್ಕಿಸುವ ಬಹು ದೊಡ್ಡ ಕೊಂಡಿಯಾಗಿದೆ. ಇದ್ರಿಂದ ಇವರಿಗೆ ಹೊಸ ಜೀವನವೇ ಸಿಕ್ಕಿದಂತೆ ಆಗಿದೆ.

ಇನ್ನು 2010ರಲ್ಲಿ ಶರಾವತಿ ಹಿನ್ನೀರಿಗೆ ಸೇತುವೆ ನಿರ್ಮಾಣಕ್ಕೆ ಪ್ರಯತ್ನ ನಡೆಸಲಾಗಿತ್ತು. ಅಲ್ಲದೆ ಇದು ಗ್ರಾಮೀಣ ರಸ್ತೆಯಾಗಿತ್ತು. ಜತೆಗೆ ವನ್ಯಜೀವಿ ಅರಣ್ಯ ಪ್ರದೇಶವಾಗಿದ್ದ ಕಾರಣ ಸೇತುವೆ ನಿರ್ಮಾಣಕ್ಕೆ ಅನುಮತಿ ಸಿಕ್ಕಿರಲಿಲ್ಲ. ಈ ರಸ್ತೆಯ ಮೂಲಕ ಸಿಗಂದೂರು ಹಾಗೂ ಕೊಲ್ಲೂರಿಗೆ ಸಂಪರ್ಕ ಕಲ್ಪಿಸುವ ಸಲುವಾಗಿ ಗ್ರಾಮೀಣ ರಸ್ತೆಯನ್ನು ರಾಷ್ಟ್ರೀಯ ಹೆದ್ದಾರಿಯನ್ನಾಗಿ ಮೇಲ್ದರ್ಜೆಗೇರಿಸಿ, ನಂತರ ಕೇಂದ್ರದ ವನ್ಯಜೀವಿ ವಿಭಾಗ ದಿಂದ ರಸ್ತೆ ನಿರ್ಮಾಣಕ್ಕೆ ಅನುಮತಿ ಪಡೆದು ಸೇತುವೆ ನಿರ್ಮಾಣ ಮಾಡಲಾಗಿದೆ. ಇದ್ರಲ್ಲಿ ಬಿಎಸ್‌ ಯಡಿಯೂರಪ್ಪ ರವರ ಪಾತ್ರ ಸಾಕಷ್ಟದಿದೆ.

ಸಿಗಂಧೂರು ಸೇತುವೆ ವಿಶೇಷತೆಗಳೇನು?

ಸಿಗಂಧೂರು ಸೇತುವೆ ವಿಶೇಷತೆಗಳು ಈ ಸೇತುವೆಯ ವಿಶೇಷತೆ ಏನು ಅನ್ನೋದನ್ನ ನೋಡೋದಾದ್ರೆ, ಈ ಕೇಬಲ್ ಬ್ರಿಡ್ಜ್ ಬರೊಬ್ಬರಿ 473 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣಗೊಂಡಿದೆ. 2019 ಡಿಸೆಂಬರ್ 12ರಂದು ಸೇತುವೆ ಕಾಮಗಾರಿ ಆರಂಭಗೊಂಡಿದ್ದು, 2025ರ ಜುಲೈ 14ರಂದು ಕಾಮಗಾರಿ ಮುಕ್ತಾಯ ಕಂಡಿದೆ.   ಇನ್ನು, ಈ ಸೇತುವೆ ಬರೊಬ್ಬರಿ 2,125 ಮೀಟರ್​ನಷ್ಟು ಉದ್ದವಿದ್ದು 16 ಮೀಟರ್ ಅಗಲವಿದೆ.. ಇನ್ನು, ಉಕ್ಕಿನ ಕೇಬಲ್ ಉದ್ದ 470 ಮೀಟರ್ ಹೊಂದಿದೆ. ಅಲ್ಲದೇ ಇದರ ಉದ್ದ 38.50 ಮೀಟರ್​ನಷ್ಟಿದೆ. ನೀರಿನ ಮೇಲೆ ಬಲಿಷ್ಠವಾಗಿ ನಿಂತಿದೆ.

ಸಿಎಂ ಮತ್ತು ಡಿಸಿಎಂ ಇಲ್ಲದೇ ಸಿಗಂದೂರು ಸೇತುವೆಯನ್ನ  ಕೇಂದ್ರ ಸಚಿವ ನಿತಿನ್ ಗಡ್ಕರಿ ಉದ್ಘಾಟನೆಯಾಗಿದೆ. ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ, ಸಂಸದ ಬಿವೈ ರಾಘವೇಂದ್ರಐತಹಾಸಕ ಕ್ಷಣದಲ್ಲಿ ಭಾಗಿಯಾದ್ರು.

ಒಟ್ನಲ್ಲಿ ಇವರದ್ದು ಏನೇ ರಾಜಕೀಯ ಇದ್ದರು ಜನರಿಗೆ ಸೇತುವೆ ನಿರ್ಮಾಣ ಆಗಿದೆ. ಜನರ ದುಡ್ಡಿಂದ ಜನರಿಗಾಗಿ ಸೇತುವೆ ನಿರ್ಮಾಣ ಆಗಿದೆ ಅನ್ನೋದು ಮಾತ್ರ ಸತ್ಯ.. ಇದೆಲ್ಲರ ನಡುವೆ ಹೊಸ ಸೇತುವೆಯನ್ನ ದಿಟ್ಟಿಸಿ ನೋಡುತ್ತಾ ನಿಂತಿದ್ದ ಲಾಂಚ್‌ಗಳನ್ನ ನೋಡಿದ್ರೆ ಬೆೇಸರ ಆಗುತಿತ್ತು.. ಇಷ್ಟು ದಿನ ಲಕ್ಷಾಂತರ ಜನರ ಹೊತ್ತು ದಡ ಸೇರಿಸಿದ್ದ ನನ್ನನ್ನ ಮೂಲೆ ಗುಂಪು ಮಾಡಿ ಬಿಟ್ಯಾ ಅನ್ನೋ ರೀತಿಯಲ್ಲಿ ಹೊಸ ಸೇತುವೆಯನ್ನ ಕೇಳುವಂತಿತ್ತು.. ಆದ್ರೆ ಹೊಸದು ಬರಬೇಕಾದ್ರೆ ಹಳೆಯದ್ದನ್ನ  ಬಿಡಲೇ ಬೇಕು.. ಇದೆ ವಾಸ್ತಾವ..

Shwetha M