ಮೋದಿ ರಾಮಬಾಣಕ್ಕೆ ಸಿದ್ದು-ಕೇಜ್ರಿ ಪ್ರತ್ಯಾಸ್ತ್ರವೇನು? – ಸಾಫ್ಟ್ ಹಿಂದುತ್ವದ ಮೊರೆ ಹೋದ್ರಾ ನಾಯಕರು?
ಅಯೋಧ್ಯೆಯಲ್ಲಿ ರಾಮಮಂದಿರ ಲೋಕಾರ್ಪಣೆಯಾಗುತ್ತಲೇ, ರಾಮಲಲ್ಲಾನ ಪ್ರಾಣಪ್ರತಿಷ್ಠಾಪನೆಯಾಗುತ್ತಲೇ ರಾಷ್ಟ್ರ ರಾಜಕೀಯ ಈಗ ಸಂಪೂರ್ಣ ಬದಲಾಗ್ತಾ ಇದೆ. ಎಲ್ಲರೂ ರಾಮನಾಮ ಜಪಿಸೋಕೆ ಶುರು ಮಾಡಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯರಿಂದ ಹಿಡಿದು ಅರವಿಂದ್ ಕೇಜ್ರಿವಾಲ್ ತನಕ ವಿಪಕ್ಷ ನಾಯಕರು ಕೂಡ ಜೈಶ್ರೀರಾಮ್ ಅಂತಿದ್ದಾರೆ. ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಪ್ರಧಾನಿ ಮೋದಿಯಿಂದ ಹಿಡಿದು ಕೇಸರಿ ಕಲಿಗಳು ತಮ್ಮತ್ತ ರಾಮಬಾಣ ಬಿಡುವ ಮುನ್ಸೂಚನೆ ಸಿಗುತ್ತಲೇ ವಿಪಕ್ಷ ನಾಯಕರು ಕೂಡ ರಾಮನಾಮ ಜಪ ಶುರು ಮಾಡಿಕೊಂಡಿದ್ದಾರೆ. ಇದ್ರ ಜೊತೆಗೆ ಕಾಂಗ್ರೆಸ್ ನೇತೃತ್ವದ ಇಂಡಿಯಾ ಮೈತ್ರಿಕೂಟ ಈಗ ಪೀಸ್ ಪೀಸ್ ಆಗ್ತಿದ್ದು, ಎಲ್ಲರ ವರಸೆಯೂ ಬದಲಾಗ್ತಿದೆ. ಸಿದ್ಧಾಂತಗಳು, ಚುನಾವಣಾ ರಣತಂತ್ರಗಳೂ ಚೇಂಜ್ ಆಗ್ತಿದೆ. ಇವತ್ತಿನ ಎಪಿಸೋಡ್ನಲ್ಲಿ ರಾಮಮಂದಿರ ಉದ್ಘಾಟನೆ ಬಳಿಕ ರಾಷ್ಟ್ರ ರಾಜಕೀಯ ಯಾವ ರೀತಿ ಬದಲಾಗ್ತಿದೆ. ಪಕ್ಷಗಳು ರಾಮನ ಹೆಸರಲ್ಲಿ ಹೇಗೆಲ್ಲಾ ರಾಜಕೀಯ ಶುರು ಮಾಡಿಕೊಂಡಿವೆ? ರಾಮನ ಹೆಸರಲ್ಲಿ ಸಿದ್ದರಾಮಯ್ಯ, ಕೇಜ್ರಿವಾಲ್ ಸೇರಿದಂತೆ ವಿಪಕ್ಷ ನಾಯಕರ ಕೌಂಟರ್ ಸ್ಟ್ರ್ಯಾಟಜಿ ಹೇಗಿದೆ. ಇವೆಲ್ಲದರ ಬಗ್ಗೆ ವಿವರವಾದ ಮಾಹಿತಿ ಇಲ್ಲಿದೆ.
ಇದನ್ನೂ ಓದಿ: ಅಯೋಧ್ಯೆಯಲ್ಲಿ ರಾಮಮಂದಿರ ಲೋಕಾರ್ಪಣೆ – ಇದು ಭಾವನಾತ್ಮಕ ಕ್ಷಣ ಎಂದ ಮೋದಿ
ಅಯೋಧ್ಯೆಯಲ್ಲಿ ರಾಮಲಲ್ಲಾ ಪ್ರಾಣಪ್ರತಿಷ್ಠಾಪನೆ ವೇಳೆ ಇಂಡಿಯಾ ಮೈತ್ರಿಕೂಟದ ನಾಯಕರು ಯಾರು ಕೂಡ ಕಾರ್ಯಕ್ರಮಕ್ಕೆ ಹೋಗಿರಲಿಲ್ಲ. ಬಹುತೇಕ ವಿಇಪಕ್ಷ ನಾಯಕರು ರಾಜಕೀಯ ಕಾರಣಕ್ಕೋಸ್ಕರವೇ ಅಯೋಧ್ಯೆಗೆ ಹೋಗಿರಲಿಲ್ಲ. ಆದ್ರೆ ರಾಮಮಂದಿರ ಲೋಕಾರ್ಪಣೆಯಾಗುತ್ತಲೇ ದೇಶಾದ್ಯಂತ ಸಂಭ್ರಮ ಮನೆ ಮಾಡಿತ್ತು. ಬಹುತೇಕ ಹಿಂದೂಗಳ ಮನಸ್ಸಲ್ಲಿ ಧನ್ಯತಾ ಭಾವ ಬಂದಿರೋದು ಸುಳ್ಳಲ್ಲ. ಇನ್ನು ರಾಮಲಲ್ಲಾನ ದರ್ಶನಕ್ಕಾಗಿ ನಿತ್ಯವೂ ಲಕ್ಷಾಂತರ ಮಂದಿ ಅಯೋಧ್ಯೆಯತ್ತ ಹೋಗ್ತಾ ಇದ್ದಾರೆ. ಇತ್ತ ಬಿಜೆಪಿಯಂತೂ ರಾಮಮಂದಿರ ನಿರ್ಮಾಣದ ಕ್ರೆಡಿಟ್ನ್ನ ಬಾಚಿಕೊಂಡಿದೆ. ಲೋಕಸಭೆ ಚುನಾವಣೆ ಬರ್ತಿರೋದ್ರಿಂದ ರಾಮಮಂದಿರ ವಿಚಾರದಲ್ಲಿ ವೋಟು ಗಿಟ್ಟಿಸಿಕೊಳ್ಳೋಕೂ ಮಾಸ್ಟರ್ ಪ್ಲ್ಯಾನ್ ಮಾಡಿದೆ. ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ರಾಮ ಅನ್ನೋ ಪದ ರಾಜಕೀಯ ಭವಿಷ್ಯವನ್ನೇ ನಿರ್ಧರಿಸೋದ್ರಲ್ಲಿ ಯಾವುದೇ ಅನುಮಾನ ಇಲ್ಲ. ಇದೇ ಕಾರಣಕ್ಕೆ ಪ್ರತಿಪಕ್ಷಗಳ ನಾಯಕರು ಕೂಡ ಹೋದಲ್ಲೆಲ್ಲಾ ರಾಮನ ಹೆಸರೆತ್ತೋಕೆ ಶುರು ಮಾಡಿದ್ದಾರೆ. ಅದ್ರಲ್ಲೂ ಇಂಡಿಯಾ ಒಕ್ಕೂಟದ ಭಾಗವಾಗಿರೋ ಆಪ್ ಮುಖ್ಯಸ್ಥ ದೆಹಲಿ ಸಿಎಂ ಕೇಜ್ರಿವಾಲ್ ಅಂತೂ ನಾವು ರಾಮರಾಜ್ಯ ನಿರ್ಮಾಣ ಮಾಡೋದಾಗಿ ಹೇಳಿದ್ದಾರೆ. ನಮ್ಮ ಸರ್ಕಾರ ರಾಮ ರಾಜ್ಯದಿಂದ ಇನ್ಸ್ಪೈರ್ ಆಗಿದೆ. ರಾಮರಾಜ್ಯದ 10 ನೀತಿಗಳನ್ನ ನಾವು ಅನುಸರಿಸ್ತಿದ್ದೇವೆ ಅನ್ನುತ್ತಲೇ ತಮ್ಮ ಸರ್ಕಾರ ದೆಹಲಿಯಲ್ಲಿ ಜಾರಿಗೊಳಿಸಿರುವ 10 ಯೋಜನೆಗಳನ್ನ ಪಟ್ಟಿ ಮಾಡಿದ್ದಾರೆ.
ಕೇಜ್ರಿವಾಲ್ ರಾಮರಾಜ್ಯ!
- ನಂ.1: ರಾಮ ರಾಜ್ಯದಲ್ಲಿ ಯಾರೂ ಹಸಿವಿನಿಂದ ಬಳಲೋದಿಲ್ಲ
- ನಂ.2: ರಾಮರಾಜ್ಯದಲ್ಲಿ ಎಲ್ಲರಿಗೂ ಸಮಾನ ಶಿಕ್ಷಣ
- ನಂ.3: ರಾಮರಾಜ್ಯದಲ್ಲಿ ಸಮಾನ ಆರೋಗ್ಯ ಸೇವೆ
- ನಂ.4: ರಾಮರಾಜ್ಯದಲ್ಲಿ ಎಲ್ಲರಿಗೂ ಉಚಿತ ವಿದ್ಯುತ್
- ನಂ.5: ರಾಮರಾಜ್ಯದಲ್ಲಿ ಶುದ್ಧ ಕುಡಿಯುವ ನೀರಿನ ಪೂರೈಕೆ
- ನಂ.6: ರಾಮರಾಜ್ಯದಲ್ಲಿ ವೃದ್ಧ ನಾಗರೀಕರಿಗೆ ಪಿಂಚಣಿ
- ನಂ.7: ರಾಮರಾಜ್ಯದಲ್ಲಿ ಎಲ್ಲರಿಗೂ ಭದ್ರತೆ ಬದುಕು
- ನಂ.8: ರಾಮರಾಜ್ಯದಲ್ಲಿ ಯುವಕರಿಗೆ ಹೆಚ್ಚಿನ ಉದ್ಯೋಗ ಸೃಷ್ಟಿ
- ನಂ.9: ರಾಮರಾಜ್ಯದಲ್ಲಿ ಹಣದುಬ್ಬರವನ್ನ ನಿಯಂತ್ರಣ ಮಾಡೋದು
- ನಂ.10: ಎಲ್ಲಾ ಧರ್ಮ, ಜಾತಿಯ ಜನರನ್ನ ಸಮಾನವಾಗಿ ಕಾಣೋದು
- ಉತ್ತಮ ಶಿಕ್ಷಣ, ಆರೋಗ್ಯ ಸೇವೆ, ಹಿರಿಯ ನಾಗರಿಕರಿಗೆ ಪಿಂಚಣಿ, 24 ಗಂಟೆ ವಿದ್ಯುತ್, ಉಚಿತ ಕರೆಂಟ್
ಹೀಗೆ ಅರವಿಂದ ಕೇಜ್ರಿವಾಲ್ ಕೂಡ ಲೋಕಸಭೆ ಚುನಾವಣೆಯಲ್ಲಿ ಹೊತ್ತಲ್ಲಿ ರಾಮನಾಮದ ಮೊರೆ ಹೋಗಿದ್ದಾರೆ. ಅಷ್ಟೇ ಅಲ್ಲ, ಅಯೋಧ್ಯೆಯಲ್ಲಿ ರಾಮಮಂದಿರ ಲೋಕಾರ್ಪಣೆ ಮಾಡಿರೋದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿರೋ ಕೇಜ್ರಿವಾಲ್, ರಾಮಮಂದಿರ ದೇಶದ ಹೆಮ್ಮೆ ಎಂದಿದ್ದಾರೆ. ಜಗತ್ತಿನಲ್ಲಿ ಭಾರತವನ್ನ ನಂಬರ್.1 ದೇಶವನ್ನಾಘಿ ಮಾಡೋಕೆ ರಾಮನ ಹಾದಿಯನ್ನೇ ಸಾಗಬೇಕು. ರಾಮ ತುಳಿದ ಹಾದಿಯಲ್ಲೇ ನಡೆದ್ರೆ ನಮ್ಮ ದೇಶವನ್ನ ಯಾರಿಂದಲೂ ತಡೆಯೋಕೆ ಸಾಧ್ಯವಿಲ್ಲ ಅಂತಾ ಕೇಜ್ರಿವಾಲ್ ಹೇಳಿದ್ದಾರೆ. ಇದಿಷ್ಟೇ ಅಲ್ಲ, ರಾಮಮಂದಿರವನ್ನ ವೋಟ್ಬ್ಯಾಂಕ್ ಮಾಡಿಕೊಳ್ಳೋದ್ರಲ್ಲಿ ಕೇಜ್ರಿವಾಲ್ ಕೂಡ ರೇಸ್ಗೆ ಬಿದ್ದಿದ್ದಾರೆ. ದೆಹಲಿಯಿಂದ ಅಯೋಧ್ಯೆಗೆ ತೆರಳೋಕೆ ಭಕ್ತರಿಗೆ ನಮ್ಮ ಸರ್ಕಾರ ಪ್ರತ್ಯೇಕ ವ್ಯವಸ್ಥೆ ಮಾಡಲಿದೆ. ಅಯೋಧ್ಯಾ ಯಾತ್ರೆಯನ್ನ ನಾವೇ ಸ್ಪಾನ್ಸರ್ ಮಾಡುತ್ತೇವೆ ಅನ್ನೋ ಭರವಸೆಯನ್ನ ನೀಡಿದ್ದಾರೆ.
ಬಿಜೆಪಿಯಂತೂ ನೇರವಾಗಿ ಹಿಂದೂ ವೋಟ್ಬ್ಯಾಂಕ್ನತ್ತವೇ ಫೋಕಸ್ ಮಾಡಿದೆ. ಈ ವಿಚಾರದಲ್ಲಿ ಅರವಿಂದ್ ಕೇಜ್ರಿವಾಲ್ ಕೂಡ ಹಿಂದೆ ಬಿದ್ದಿಲ್ಲ. ವಿಧಾನಸಭೆಯಾಗಲಿ, ಲೋಕಸಭೆಯಾಗಲಿ ಪ್ರತಿ ಬಾರಿ ಚುನಾವಣೆ ಹತ್ತಿರ ಬರ್ತಿದೆ ಅನ್ನೋವಾಗ ಕೇಜ್ರಿವಾಲ್ ಕೂಡ ಹಿಂದೂಗಳ ಮತ ಗಿಟ್ಟಿಸೋಕೆ ರಣತಂತ್ರಗಳನ್ನ ಹೆಣೀತಾರೆ. ದೇವಾಲಯಗಳಿಗೆ ರೌಂಡ್ಸ್ ಹೊಡಿಯೋಕೆ ಶುರು ಮಾಡ್ತಾರೆ. ತಾವೊಬ್ಬ ಹಿಂದೂವಾದಿ ಅನ್ನೋದನ್ನ ಕೂಡ ಬಿಂಬಿಸ್ತಾರೆ. ಬಿಜೆಪಿಯ ಸ್ಟ್ರ್ಯಾಟಜಿಗಳಿಗೆ ತಕ್ಕಂತೆಯೇ ಕೌಂಟರ್ ಪ್ಲ್ಯಾನ್ ಮಾಡ್ತಾರೆ. ಈಗ ರಾಮಮಂದಿರ ವಿಚಾರದಲ್ಲೂ ಕೇಜ್ರಿವಾಲ್ ಮಾಡ್ತಿರೋದು ಇದನ್ನೇ. ರಾಮಮಂದಿರ ಲೋಕಾರ್ಪಣೆ ಬಗ್ಗೆ ಕೇಜ್ರಿವಾಲ್ ಯಾವತ್ತೂ ನೆಗೆಟಿವ್ ಸ್ಟೇಟ್ಮೆಂಟ್ಗಳನ್ನ ಕೊಟ್ಟಿಲ್ಲ. ಆದ್ರೆ ಕಾಂಗ್ರೆಸ್, ಸಿಪಿಐ ಮತ್ತು ಟಿಎಂಸಿ ಎಡವಟ್ಟುಮಾಡಿಕೊಂಡಿರೋದು ಇಲ್ಲೇ. ರಾಮಲಲ್ಲಾ ಪ್ರಾಣಪ್ರತಿಷ್ಠಾಪನೆಯನ್ನ ಸಂಭ್ರಮಿಸೋ ಬದಲು, ಈ ವಿಚಾರದಲ್ಲಿ ರಾಜಕೀಯ ಮಾಡಲಾಗ್ತಿದೆ ಅಂತಾ ಟೀಕಾಪ್ರಹಾರ ಮಾಡಿವೆ. ಆದ್ರೆ ಅರವಿಂದ್ ಕೇಜ್ರಿವಾಲ್ ಮಾತ್ರ ರಾಮಮಂದಿರ ನಿರ್ಮಾಣವನ್ನ ಹೊಗಳೋದ್ರ ಜೊತೆಗೆ ಇದ್ರಿಂದ ರಾಜಕೀಯ ಲಾಭ ಪಡೆಯೋಕೆ ಬೇಕಾದ ಎಲ್ಲಾ ಪ್ರಯತ್ನಗಳನ್ನೂ ಮಾಡ್ತಿದ್ದಾರೆ. ಈ ಮೂಲಕ ಹಿಂದೂಗಳ ವೋಟ್ ಕೇವಲ ಬಿಜೆಪಿಯತ್ತ ಮಾತ್ರ ಕ್ರೋಢೀಕರಣವಾಗದಂತೆ ನೋಡಿಕೊಳ್ಳೋಕೆ ಮುಂದಾಗಿದ್ದಾರೆ.
ಇಲ್ಲಿ ಇನ್ನೊಂದು ವಿಚಾರ ಕೂಡ ಇದೆ. ರಾಮಲಲ್ಲಾ ಪ್ರಾಣಪ್ರತಿಷ್ಠಾಪನಾ ಕಾರ್ಯಕ್ರಮವನ್ನ ಕಾಂಗ್ರೆಸ್ ಇದೊಂದು ಬಿಜೆಪಿ ಮತ್ತು ಆರ್ಎಸ್ಎಸ್ ಈವೆಂಟ್. ಹೀಗಾಗಿ ಅಯೋಧ್ಯೆಗೆ ಹೋಗದೆ ಇರೋಕೆ ಕೈ ನಾಯಕರು ತೀರ್ಮಾನಿಸಿದ್ರು. ರಾಮಲಲ್ಲಾ ಪ್ರಾಣಪ್ರತಿಷ್ಠಾಪನಾ ಕಾರ್ಯಕ್ರಮದಲ್ಲಿ ರಾಜಕೀಯ ನಡೆದಿರೋದ್ರಲ್ಲಿ ಯಾವುದೇ ಅನುಮಾನ ಇಲ್ಲ. ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ಮಾತ್ರವಲ್ಲ ಆರ್ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಕೂಡ ಇದ್ರು. ಇದು ಸಂಪೂರ್ಣವಾಗಿ ಬಿಜೆಪಿ ಕೇಂದ್ರೀಕೃತ ಕಾರ್ಯಕ್ರಮವೇ ಆಗಿತ್ತು. ಇದೇ ಕಾರಣಕ್ಕೆ ಕೇಜ್ರಿವಾಲ್ ಸೇರಿದಂತೆ ಇತರೆ ವಿಪಕ್ಷ ನಾಯಕರು ಕೂಡ ಅಯೋಧ್ಯೆಗೆ ಹೋಗಿರಲಿಲ್ಲ. ಹಾಗಂತಾ ರಾಮನ ಹೆಸರಲ್ಲಿ ಬಿಜೆಪಿ ರಾಜಕೀಯ ತಂತ್ರಕ್ಕೆ ತಕ್ಕ ಕೌಂಟರ್ ಪ್ಲ್ಯಾನ್ನನ್ನ ಕಾಂಗ್ರೆಸ್ ಕೂಡ ರಾಷ್ಟ್ರ ಮಟ್ಟದಲ್ಲಿ ಮಾಡಲೇಬೇಕಾದ ಅನಿವಾರ್ಯ ಪರಿಸ್ಥಿತಿ ನಿರ್ಮಾಣವಾಗಿದೆ. ಈ ವಿಚಾರದಲ್ಲಿ ಕಾಂಗ್ರೆಸ್ಗೆ ಹೋಲಿಸಿದ್ರೆ ಕೇಜ್ರಿವಾಲ್ ಒಂದು ಹೆಜ್ಜೆ ಮುಂದೆ ಇದ್ದಾರೆ. ಈ ಹಿಂದೆ ದೆಹಲಿ ವಿಧಾನಸಭೆ ಚುನಾವಣೆ ವೇಳೆಇಯೂ ಅಷ್ಟೇ, ಬಿಜೆಪಿಯ ರಣತಂತ್ರಗಳಿಗೆ ತಕ್ಕಂತೆ ಕೌಂಟರ್ ಸ್ಟ್ರ್ಯಾಟಜಿಗಳನ್ನ ಮಾಡಿದ್ರಿಂದಾಗಿಯೇ ಕೇಜ್ರಿವಾಲ್ಗೆ ದೆಹಲಿಯಲ್ಲಿ ಬಿಜೆಪಿಯನ್ನ ಮಟ್ಟ ಹಾಕೋಕೆ ಸಾಧ್ಯವಾಗಿತ್ತು. ಹೀಗಾಗಿ ಕಾಂಗ್ರೆಸ್ ರಾಮಮಂದಿರ ರಾಜಕೀಯ ಅಂತಾ ಟೀಕೆ ಮಾಡೋದನ್ನ ಬಿಟ್ಟು, ಈ ವಿಚಾರದಲ್ಲಿ ತಾನು ಯಾವ ರೀತಿ ಬಿಜೆಪಿಗೆ ಸೆಡ್ಡು ಹೊಡೆಯಬಹುದು ಅನ್ನೋ ಬಗ್ಗೆ ಗಂಭೀರ ಚಿಂತನೆ ನಡೆಸಬೇಕಿದೆ. ಯಾಕಂದ್ರೆ ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ರಾಮ ಅನ್ನೋ ಹೆಸರು ಮುಂಚೂಣಿಯಲ್ಲಿದ್ದೇ ಇರುತ್ತೆ. ಬಿಜೆಪಿಗಂತೂ ಇದುವೇ ಪ್ರಮುಖ ಸಂಗತಿಯಾಗಿರೋ ಕಾರಣ ಈಗ ವಿಪಕ್ಷಗಳು ಕೂಡ ರಾಮರಾಜ್ಯ ನಿರ್ಮಾಣದ ವಿಚಾರವನ್ನ ಕೈಗೆತ್ತಿಕೊಂಡು ಜನರ ಬಳಿಗೆ ಹೋಗಬೇಕಿದೆ. ಹಾಗೆ ನೋಡಿದ್ರೆ ಕಾಂಗ್ರೆಸ್ ರಾಷ್ಟ್ರೀಯ ಮಟ್ಟದ ನಾಯಕರಿಗೆ ಹೋಲಿಸಿದ್ರೆ ಕರ್ನಾಟಕ ಕಾಂಗ್ರೆಸ್ ನಾಯಕರೇ ರಾಮ ರಾಜಕೀಯದಲ್ಲಿ ಬಿಜೆಪಿಗೆ ಸೆಡ್ಡು ಹೊಡೆಯೋಕೆ ತಯಾರಾಗಿರೋದ್ರಲ್ಲಿ ಯಾವುದೇ ಅನುಮಾನ ಇಲ್ಲ. ಯಾಕಂದ್ರೆ, ಜನವರಿ 22ರಂದು ಮೋದಿ ಅಯೋಧ್ಯೆಯಲ್ಲಿ ರಾಮಲಲ್ಲಾನ ಪ್ರಾಣಪ್ರತಿಷ್ಠಾಪನೆ ಮಾಡಿದ್ರೆ, ಇತ್ತ ಸಿಎಂ ಸಿದ್ದರಾಮಯ್ಯ ಬೆಂಗಳೂರಿನ ಮಹದೇವಪುರದಲ್ಲಿ
ಸೀತಾರಾಮ ಲಕ್ಷ್ಮಣ ದೇವಸ್ಥಾನವನ್ನ ಲೋಕಾರ್ಪಣೆಗೊಳಿಸಿದ್ರು. ಜೊತೆಗೆ 33 ಅಡಿ ಎತ್ತರದ ಏಕಶಿಲಾ ಆಂಜನೇಯ ಸ್ವಾಮಿ ವಿಗ್ರಹದ ಶಿಲಾ ಪ್ರತಿಷ್ಠಾಪನಾ ಕಾರ್ಯಕ್ರಮದಲ್ಲೂ ಭಾಗಿಯಾಗಿದ್ರು. ತಮ್ಮ ಭಾಷಣಗಳಲ್ಲಿ ಸಿದ್ದರಾಮಯ್ಯ ಜೈರಾಮ್ ಶ್ರೀರಾಮ್ ಅನ್ನೋ ಘೋಷಣೆಗಳನ್ನ ಕೂಗೋಕೂ ಶುರು ಮಾಡಿದ್ದಾರೆ. ಹಾಗೆಯೇ ರಾಜ್ಯದಲ್ಲಿರೋ ಕಾಂಗ್ರೆಸ್ ಸರ್ಕಾರ ಭಕ್ತರಿಗೆ ಅಯೋಧ್ಯೆಗೆ ತೆರಳೋಕೆ ವ್ಯವಸ್ಥೆ ಮಾಡೋದಾಗಿಯೂ ಘೋಷಣೆ ಮಾಡಿದೆ. ಹಾಗೆಯೇ ಐದು ಗ್ಯಾರಂಟಿ ಯೋಜನೆಗಳನ್ನ ಜಾರಿಗೊಳಿಸಿ ರಾಮರಾಜ್ಯ ನಿರ್ಮಾಣದ ಕನಸನ್ನ ನನಸು ಮಾಡ್ತಿದ್ದೇವೆ ಅಂತಾ ಡಿಸಿಎಂ ಡಿಕೆ ಶಿವಕುಮಾರ್ ಕೂಟ ಟ್ವೀಟ್ ಮಾಡಿದ್ರು. ಹೀಗಾಗಿ ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ರಾಮನ ಹೆಸರಿಲ್ಲದೆ ಗೆಲ್ಲೋದು ಕಷ್ಟ ಅನ್ನೋದನ್ನ ರಾಜ್ಯ ಕಾಂಗ್ರೆಸ್ ನಾಯಕರಂತೂ ಚೆನ್ನಾಗಿಯೇ ಅರ್ಥ ಮಾಡಿಕೊಂಡಿದ್ದಾರೆ.
ಇನ್ನು ಇಂಡಿಯಾ ಮೈತ್ರಿಕೂಟದಿಂದ ಈಗಾಗ್ಲೇ ಒಂದು ಕಾಲು ಹೊರಗಿಟ್ಟಿರೋ ಬಿಹಾರ ಸಿಎಂ ನಿತೀಶ್ ಕುಮಾರ್ ಕೂಡ ಅಷ್ಟೇ, ರಾಮಮಂದಿರ ಲೋಕಾರ್ಪಣೆಯನ್ನ ಕೊಂಡಾಡಿದ್ದಾರೆ. ಕರ್ಪೂರಿ ಠಾಕೂರ್ಗೆ ಭಾರತ ರತ್ನ ಘೋಷಣೆ ಮಾಡಿದ್ದಕ್ಕೆ ಪ್ರಧಾನಿ ಮೋದಿಯನ್ನ ಕೂಡ ಹಾಡಿ ಹೊಗಳಿದ್ದಾರೆ. ಈ ಮೂಲಕ ಮತ್ತೆ ಎನ್ಡಿಎ ತೆಕ್ಕೆಗೆ ಸೇರೋ ಮುನ್ಸೂಚನೆ ಕೊಟ್ಟಿದ್ದಾರೆ. ಹಾಗೆಯೇ ಸಾಫ್ಟ್ ಹಿಂದುತ್ವದ ಕಾರ್ಡ್ನ್ನ ಕೂಡ ಪ್ರಯೋಗಿಸೋಕೆ ಮುಂದಾಗಿದ್ದಾರೆ. ಅಯೋಧ್ಯೆಯಲ್ಲಿ ರಾಮಮಂದಿರ ಲೋಕಾರ್ಪಣೆಗೂ ಹಿಂದಿನ ದಿನ ಅಂದ್ರೆ ಜನವರಿ 21ರಂದು ಬಿಹಾರದ ಸಮಸ್ತಿಪುರ್ ಜಿಲ್ಲೆಯಲ್ಲಿ ಶ್ರೀರಾಮ ಜಾನಕಿ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯನ್ನ ನಿತೀಶ್ ಕುಮಾರ್ ಉದ್ಘಾಟಿಸಿದ್ರು. ಈ ಆಸ್ಪತ್ರೆ ಮತ್ತು ಕಾಲೇಜಿಗೆ ಶ್ರೀರಾಮನ ಕುಟುಂಬದ ಹೆಸರಲ್ಲೇ ಇಡಲಾಗಿದೆ. ಈ ಮೂಲಕ ಹಿಂದೂಗಳ ಓಲೈಕೆ ನಿತೀಶ್ ಪ್ರಯತ್ನ ಮಾಡ್ತಿರೋದ್ರಲ್ಲಿ ಯಾವುದೇ ಅನುಮಾನ ಇಲ್ಲ. ಇಷ್ಟೇ ಅಲ್ಲ, ಆರ್ಜೆಡಿ ನಾಯಕ, ತಮ್ಮ ಸರ್ಕಾರದಲ್ಲಿ ಶಿಕ್ಷಣ ಸಚಿವರಾಗಿದ್ದ ಚಂದ್ರಶೇಖರ್ರನ್ನ ನಿತೀಶ್ ಕುಮಾರ್ ಮಂತ್ರಿಸ್ಥಾನದಿಂದ ವಜಾ ಮಾಡಿದ್ದಾರೆ. ತುಳಸೀದಾಸ್ ಅವರು ಬರೆದ ಹಿಂದೂ ಧಾರ್ಮಿಕ ಪುಸ್ತಕ ರಾಮಚರಿತಮಾನಸವನ್ನ ಆರ್ಜೆಡಿ ನಾಯಕ ಚಂದ್ರಶೇಖರ್ ನಿರಂತರವಾಗಿ ಹೀಯಾಳಿಸ್ತಾನೆ ಇದ್ರು. ಹೀಗಾಗಿ ಅವರ ಶಿಕ್ಷಣ ಸಚಿವ ಸ್ಥಾನದಿಂದಲೇ ಕಿತ್ತು ಹಾಕಿ ನಿತೀಶ್ ಕುಮಾರ್ ಹಿಂದೂಗಳಿಗೆ ಮೆಸೇಜ್ ಪಾಸ್ ಮಾಡಿದ್ದಾರೆ.
ಇತ್ತ ಬಿಜೆಪಿ ಬಗ್ಗೆಯಂತೂ ಕೇಳೋದೇ ಬೇಡ. ರಾಮಮಂದಿರ ಲೋಕಾರ್ಪಣೆ ಬೆನ್ನಲ್ಲೇ ಪ್ರಧಾನಿ ಮೋದಿ ಉತ್ತರಪ್ರದೇಶದಿಂದಲೇ ಲೋಕಸಭೆ ಚುನಾವಣಾ ಱಲಿಯನ್ನ ಆರಂಭಿಸಿದ್ದಾರೆ. ಉತ್ತರಪ್ರದೇಶದಲ್ಲಿ ಒಟ್ಟು 80 ಸ್ಥಾನಗಳಿದ್ದು, ಲೋಕಸಭೆ ಚುನಾವಣೆಯಲ್ಲಿ ಇಲ್ಲಿನ ರಿಸಲ್ಟ್ ಅತ್ಯಂತ ನಿರ್ಣಾಯಕ ಪಾತ್ರವಹಿಸುತ್ತೆ. ಸದ್ಯ ಯುಪಿಯಲ್ಲಿ ಬಿಜೆಪಿ ಸರ್ಕಾರವೇ ಆಡಳಿತದಲ್ಲಿದೆ. ಯೋಗಿ ಆದಿತ್ಯನಾಥ್ ಆಡಳಿತ ಲೋಕಸಭೆಯಲ್ಲೂ ಬಿಜೆಪಿಗೆ ಪ್ಲಸ್ ಪಾಯಿಂಟ್ ಆಗೋದ್ರಲ್ಲಿ ಯಾವುದೇ ಅನುಮಾನ ಇಲ್ಲ. ಇದ್ರ ಜೊತೆಗೆ ಉತ್ತರಪ್ರದೇಶದ ಅಯೋಧ್ಯೆಯಲ್ಲಿ ರಾಮಮಂದಿರ ಲೋಕಾರ್ಪಣೆಯಿಂದ ಬಿಜೆಪಿಗೆ ದೊಡ್ಡ ಮಟ್ಟದ ಬೂಸ್ಟ್ ಸಿಗಲಿದೆ. ಹಾಗೆಯೇ ಯುಪಿಯನ್ನ ದೇಶದ ಪ್ರಮುಖ ಅಧ್ಯಾತ್ಮ ಕೇಂದ್ರವಾಗಿ ಬಿಜೆಪಿ ಬದಲಿಸ್ತಾ ಇದೆ. ಈ ಮೂಲಕ ಹಿಂದೂಗಳ ಮತವನ್ನ ಅದಷ್ಟು ಬುಟ್ಟಿಗೆ ಹಾಕಿಕೊಳ್ಳೋಕೆ ಬಿಜೆಪಿ ಮುಂದಾಗಿದೆ. ಅಂತೂ ಭವಿಷ್ಯದಲ್ಲಿ ರಾಮರಾಜ್ಯ ನಿರ್ಮಾಣವಾಗುತ್ತೋ ಇಲ್ವೋ ಗೊತ್ತಿಲ್ಲ. ಆದ್ರೆ, ಅಯೋಧ್ಯೆಯಲ್ಲಿ ರಾಮಮಂದಿರ ಲೋಕಾರ್ಪಣೆಯಾಗುತ್ತಲೇ ರಾಜಕೀಯ ನಾಯಕರ ಬಾಯಲ್ಲಿ ರಾಮನಾಮ ಜಪ ಜೋರಾಗಿ ಕೇಳ್ತಾ ಇದೆ. ಮುಂದಿನ ದಿನಗಳಲ್ಲಿ ಪ್ರಚಾರದ ವೇಳೆ ರಾಮ ರಾಜಕೀಯ ಮತ್ತೊಂದು ಹಂತ ತಲುಪೋದಂತೂ ಸತ್ಯ. ಜೊತೆಗೆ ಮೋದಿಯ ರಾಮಬಾಣವನ್ನ ವಿಪಕ್ಷಗಳು ಯಾವ ರೀತಿ ಎದುರಿಸುತ್ತವೆ, ಹಿಂದೂಗಳ ಮತ ಪಡೆಯೋಕೆ ಪಕ್ಷಗಳು ಏನೆಲ್ಲಾ ಸರ್ಕಸ್ ಮಾಡಲಿವೆ ಅನ್ನೋದು ತೀವ್ರ ಕುತೂಹಲ ಕೆರಳಿಸಿದೆ.