ಸಿದ್ದು-ಡಿಕೆಶಿ ಸಿಎಂ ಗದ್ದುಗೆ ಗುದ್ದಾಟ – ರಾಜಸ್ಥಾನದಂತೆಯೇ ಆಗುತ್ತಾ ಕರ್ನಾಟಕದ ಪರಿಸ್ಥಿತಿ..?

ಸಿದ್ದು-ಡಿಕೆಶಿ ಸಿಎಂ ಗದ್ದುಗೆ ಗುದ್ದಾಟ – ರಾಜಸ್ಥಾನದಂತೆಯೇ ಆಗುತ್ತಾ ಕರ್ನಾಟಕದ ಪರಿಸ್ಥಿತಿ..?

ಕರ್ನಾಟಕದಲ್ಲಿ ಸಿಕ್ಕ ಅಧಿಕಾರವನ್ನ ಕಾಪಾಡಿಕೊಳ್ಳಬೇಕು. ರಾಜಸ್ಥಾನದಲ್ಲಿ ಮತ್ತೊಮ್ಮೆ ಗೆಲ್ಲಬೇಕು. ಹೀಗಾಗಿ ಎರಡು ರಾಜ್ಯಗಳಲ್ಲಿ ಪಕ್ಷದ ಆಧಾರಸ್ತಂಭವಾಗಿರುವ ನಾಯಕರ ನಡುವೆ ಹೊಂದಾಣಿಕೆ ತರಬೇಕಾದ ಅನಿವಾರ್ಯತೆ ಕಾಂಗ್ರೆಸ್ ಹೈಕಮಾಂಡ್ ಗಿದೆ. ಅದ್ರಲ್ಲೂ ರಾಜಸ್ಥಾನದಲ್ಲಿ ಭ್ರಷ್ಟಾಚಾರ ಹೆಸರಿನಲ್ಲಿ ಅಶೋಕ್ ಗೆಹ್ಲೋಟ್ ವಿರುದ್ಧದ ಸಚಿನ್ ಪೈಲಟ್ ಹೋರಾಟ ಮತ್ತಷ್ಟು ಜೋರಾಗಿದೆ. ಜನ ಸಂಘರ್ಷ ಯಾತ್ರೆ ಹೆಸರಿನಲ್ಲಿ ಸಚಿನ್ ಪೈಲಟ್ ಕಳೆದ ನಾಲ್ಕು ದಿನಗಳಿಂದ ಪಾದಯಾತ್ರೆ ನಡೆಸ್ತಿದ್ದಾರೆ.

ಇದನ್ನೂ ಓದಿ : ಸಿಎಂ ಪಟ್ಟಕ್ಕೇರಲು ಸಿದ್ದು, ಡಿಕೆಶಿ ಪಟ್ಟು – ಇಬ್ಬರ ಕಿತ್ತಾಟದಲ್ಲಿ ಮೂರನೆಯವರ ಪಾಲಾಗುತ್ತಾ ಗದ್ದುಗೆ?

ಈ ಹಿಂದಿನ ಬಿಜೆಪಿ ಸರ್ಕಾರದ ಮೇಲಿರುವ ಭ್ರಷ್ಟಾಚಾರದ ಆರೋಪದ ಬಗ್ಗೆ ತನಿಖೆಗೆ ಆಗ್ರಹಿಸಿ ಪೈಲಟ್ ಹೋರಾಟ ನಡೆಸುತ್ತಿದ್ದಾರೆ. ದಿನಕಳೆದಂತೆ ಪೈಲಟ್ ಪಾದಯಾತ್ರೆಗೆ ವ್ಯಾಪಕ ಬೆಂಬಲ ವ್ಯಕ್ತವಾಗುತ್ತಿದೆ. ಹೆಚ್ಚಿನ ಸಂಖ್ಯೆಯಲ್ಲಿ ಜನರು ಸಚಿನ್ ಪೈಲಟ್ ಜೊತೆ ಹೆಜ್ಜೆ ಹಾಕುತ್ತಿದ್ದಾರೆ. ಅಸಲಿಗೆ ಇಲ್ಲಿ ಪೈಲಟ್ ಹೋರಾಟದ ಉದ್ದೇಶ ಬಿಜೆಪಿ ಸರ್ಕಾರದ ಮೇಲಿನ ಭ್ರಷ್ಟಾಚಾರ ತನಿಖೆಗಿಂತಲೂ ಹೆಚ್ಚಾಗಿ, ಇದು ಸಿಎಂ ಅಶೋಕ್ ಗೆಹ್ಲೋಟ್ ವಿರುದ್ಧ ಪೈಲಟ್ ನಡೆಸ್ತಿರುವ ಹೋರಾಟ. ಮುಖ್ಯಮಂತ್ರಿ ಸ್ಥಾನದಿಂದ ಗೆಹ್ಲೋಟ್ ಅವರನ್ನು ಬದಲಾಯಿಸಬೇಕು ಅನ್ನೋದೆ ಪೈಲಟ್ ನಿಜವಾದ ಒತ್ತಾಯ. 5 ವರ್ಷಗಳ ಹಿಂದೆ ರಾಜಸ್ಥಾನದಲ್ಲಿ ಕಾಂಗ್ರೆಸ್ ಗೆದ್ದಾಗಲೇ ಸಚಿನ್ ಪೈಲಟ್ ಸಿಎಂ ಸ್ಥಾನದ ಆಕಾಂಕ್ಷಿಯಾಗಿದ್ರು. ಕರ್ನಾಟಕ ಕಾಂಗ್ರೆಸ್ ಜೊತೆಗೆ ಹೋಲಿಕೆ ಮಾಡೋದಾದ್ರೆ, ನಮ್ಮಲ್ಲಿ ಹೇಗೆ ಸಿದ್ದರಾಮಯ್ಯರೋ ಅದೇ ರೀತಿ ರಾಜಸ್ಥಾನದಲ್ಲಿ ಅಶೋಕ್ ಗೆಹ್ಲೋಟ್. ನಮ್ಮಲ್ಲಿ ಹೇಗೆ ಡಿಕೆ ಶಿವಕುಮಾರ್ ಅವರಿದ್ದಾರೋ ಅದೇ ರೀತಿ ರಾಜಸ್ಥಾನ ಕಾಂಗ್ರೆಸ್ ನಲ್ಲಿ ಸಚಿನ್ ಪೈಲಟ್. ಈ ಬಾರಿ ಕರ್ನಾಟಕದಲ್ಲಿ ಕಾಂಗ್ರೆಸ್ ಗೆಲುವಿನಲ್ಲಿ ಯಾವ ರೀತಿ ಡಿಕೆಶಿ ಪ್ರಮುಖ ಪಾತ್ರ ವಹಿಸಿದ್ರೋ ಅದೇ ರೀತಿ ರಾಜಸ್ಥಾನದಲ್ಲಿ ಕಾಂಗ್ರೆಸ್ ಅಧಿಕಾರಕ್ಕೇರುವಲ್ಲಿ ಸಚಿನ್ ಪೈಲಟ್ ಸಾಕಷ್ಟು ಕೊಡುಗೆ ನೀಡಿದ್ರು. ಆದ್ರೆ ಯಾವ ರೀತಿ ನಮ್ಮಲ್ಲಿ ಸಿದ್ದರಾಮಯ್ಯರಿಗೆ ಶಾಸಕರ ಬೆಂಬಲವಿದೆಯೋ, ಅದೇ ರೀತಿ ರಾಜಸ್ಥಾನದಲ್ಲಿ ಬಹುತೇಕ ಶಾಸಕರು ಗೆಹ್ಲೋಟ್ ಬೆನ್ನಿಗೆ ನಿಂತಿದ್ದಾರೆ. ಸಿಎಂ ಸ್ಥಾನ ಸಿಗದೇ ಇದ್ದಿದ್ದಕ್ಕೆ ಸರ್ಕಾರ ರಚನೆಯಾದಾಗಿನಿಂದಲೂ ಸಚಿನ್ ಪೈಲಟ್ ಬಂಡಾಯದ ಬಾವುಟ ಹಾರಿಸುತ್ತಲೇ ಬಂದಿದ್ರು. ಹೀಗಾಗಿ ಡಿಸಿಎಂ ಮತ್ತು ಕಾಂಗ್ರೆಸ್ ರಾಜ್ಯಾಧ್ಯಕ್ಷ ಸ್ಥಾನವನ್ನೂ ಕಳೆದುಕೊಂಡಿದ್ರು. ಈಗ ರಾಜಸ್ಥಾನ ವಿಧಾನಸಭೆ ಚುನಾವಣೆ ಹತ್ತಿರವಾಗುತ್ತಲೇ ಸಚಿನ್ ಪೈಲಟ್ ಮತ್ತೆ ರೊಚ್ಚಿಗೆದ್ದು ಜನರ ಬೆಂಬಲದ ಜೊತೆಗೆ ಭ್ರಷ್ಟಾಚಾರ ವಿರುದ್ಧದ ಹೋರಾಟ ಹೆಸರಿನಲ್ಲಿ ಗೆಹ್ಲೋಟ್ ವಿರುದ್ಧ ಅಖಾಡಕ್ಕಿಳಿದಿದ್ದಾರೆ. ಹೊತ್ತಿಕೊಂಡಿರುವ ಬೆಂಕಿ ಶಮನಗೊಳಿಸಲು ಕಾಂಗ್ರೆಸ್ ಹೈಕಮಾಂಡ್ ಅದ್ಯಾವ ರೀತಿಯ ಕ್ರಮಕೈಗೊಳ್ಳುತ್ತೆ ಅನ್ನೋದೆ ಸದ್ಯದ ಕುತೂಹಲ.

suddiyaana