ʼದ್ವೇಷವೇ ನಮ್ಮ ತಂದೆ-ತಾಯಿ, ದ್ವೇಷವೇ ನಮ್ಮ ಬಂಧು-ಬಳಗʼ ಎಂಬಂತಿದೆ ಕಾಂಗ್ರೆಸ್ ಸರ್ಕಾರದ ಆಡಳಿತ – ಬಿಜೆಪಿ ಕಿಡಿ
ಬೆಂಗಳೂರು: ರಾಜ್ಯದಲ್ಲಿ ಕಾಂಗ್ರೆಸ್, ಬಿಜೆಪಿ ನಡುವಿನ ಟ್ವಿಟರ್ ವಾರ್ ಮುಂದುವರಿದಿದೆ. ಆರೋಪ, ಪ್ರತ್ಯಾರೋಪ, ಕೆಸರೆರಚಾಟ ನಡೆಯುತ್ತಲೇ ಇದೆ. ಇದೀಗ ರಾಜ್ಯ ಬಿಜೆಪಿ ಬೆಲೆ ಏರಿಕೆ, ಅಧಿಕಾರಿಗಳ ವರ್ಗಾವಣೆ ವಿರುದ್ದ ಕಿಡಿಕಾರಿದೆ. ದ್ವೇಷದ ಬಜಾರಿನಲ್ಲಿ ಪ್ರೀತಿಯ ಅಂಗಡಿ ತೆರೆಯುತ್ತೆವೆಂದು ಸುಳ್ಳಿನಿಂದ ಶುರುವಾದ ಎಟಿಎಂ ಸರ್ಕಾರ ಅಧಿಕಾರಕ್ಕೆ ಬಂದ ನಂತರದ ಪ್ರತಿ ಕ್ಷಣದಿಂದಲೂ ದ್ವೇಷವೇ ನಮ್ಮ ತಂದೆ-ತಾಯಿ, ದ್ವೇಷವೇ ನಮ್ಮ ಬಂಧು-ಬಳಗ ಎಂದು ಕಾರ್ಯ ನಿರ್ವಹಿಸುತ್ತಿದೆ ಎಂದು ಕಿಡಿಕಾರಿದೆ.
ಈ ಬಗ್ಗೆ ಸರಣಿ ಟ್ವೀಟ್ ಮಾಡಿರುವ ಬಿಜೆಪಿ, ದ್ವೇಷದ ಬಜಾರಿನಲ್ಲಿ ಪ್ರೀತಿಯ ಅಂಗಡಿ ತೆರೆಯುತ್ತೆವೆಂದು ಸುಳ್ಳಿನಿಂದ ಶುರುವಾದ ಎಟಿಎಂ ಸರ್ಕಾರ ಅಧಿಕಾರಕ್ಕೆ ಬಂದ ನಂತರದ ಪ್ರತಿ ಕ್ಷಣದಿಂದಲೂ ದ್ವೇಷವೇ ನಮ್ಮ ತಂದೆ-ತಾಯಿ, ದ್ವೇಷವೇ ನಮ್ಮ ಬಂಧು-ಬಳಗ ಎನ್ನುವ ರೀತಿಯಲ್ಲಿ ಕಾರ್ಯ ನಿರ್ವಹಿಸುತ್ತಾ ಒಂದು ತಿಂಗಳು ಪೂರೈಸಿದೆ. ರಾಜ್ಯದ ಇತಿಹಾಸದಲ್ಲಿಯೇ ಕೇವಲ ಒಂದು ತಿಂಗಳಲ್ಲಿಯೇ ಆಡಳಿತ ವಿರೋಧಿ ಅಲೆಯನ್ನು ಎದುರಿಸುತ್ತಿರುವುದು ಸಿದ್ದರಾಮಯ್ಯನವರ ಸರ್ಕಾರದ ಏಕೈಕ ಸಾಧನೆ ಎಂದು ಆಕ್ರೋಶ ಹೊರಹಾಕಿದೆ.
ಇದನ್ನೂ ಓದಿ: ಬಿಜೆಪಿಗೆ ವಿರೋಧ ಪಕ್ಷದ ನಾಯಕನ ‘ಗ್ಯಾರಂಟಿ‘ಯೂ ಇಲ್ಲ! ಈ ಹುದ್ದೆ ಎಷ್ಟಕ್ಕೆ ಮಾರಾಟವಾಗುತ್ತಿದೆ? – ಕಾಂಗ್ರೆಸ್ ಟ್ವೀಟಾಸ್ತ್ರ
ಬರದಿಂದ ಬಸವಳಿಯುತ್ತಿರುವ ರಾಜ್ಯದ ಜನತೆಗೆ, ಬೆಲೆಯೇರಿಕೆ ಬರೆಯನ್ನು ಎಳೆದಿರುವ ಈ ಸರ್ಕಾರ ತಾನು ಚುನಾವಣಾ ಪೂರ್ವ ನೀಡಿದ್ದ ಗ್ಯಾರಂಟಿಗಳನ್ನು ಈಡೇರಿಸಿಲ್ಲ. ಅಧಿಕಾರ ಹಿಡಿದ ಮೇಲೆ ಎಲ್ಲದಕ್ಕೂ ಕಂಡಿಷನ್ ಅಪ್ಲೈ ಎಂದು ಹೇಳುತ್ತಾ, ವರ್ಗಾವಣೆ ದಂಧೆಯಲ್ಲಿ ನಿರಂತರವಾಗಿ ಸಿದ್ದರಾಮಯ್ಯರವರ ಸರ್ಕಾರ ತೊಡಗಿದೆ ಎಂದು ಟೀಕಿಸಿದೆ.
ಕೇವಲ ಬಾಯಿಮಾತಿಗೆ ಸರ್ವಜನಾಂಗದ ಶಾಂತಿಯ ತೋಟ ಎಂದು ಬೊಗಳೆ ಬಿಡುವ ಸಿದ್ದರಾಮಯ್ಯರವರ ಆಡಳಿತದಲ್ಲಿ ಟಿಪ್ಪು ಛಾಯೆ ಎದ್ದು ಕಾಣುತ್ತದೆ. ಗೋ ಹತ್ಯೆ ನಿಷೇಧ, ಮತಾಂತರ ನಿಷೇಧ ಕಾಯ್ದೆಯನ್ನು ಹಿಂಪಡೆಯುವ ಮೂಲಕ ತಾವು ಹಿಂದೂ ವಿರೋಧಿ ಸರ್ಕಾರ ಎಂಬುದನ್ನು ಸಿದ್ದರಾಮಯ್ಯರ ಈ ತುಘಲಕ್ ಸರ್ಕಾರ ಸಾಬೀತುಪಡಿಸುತ್ತಿದೆ ಎಂದು ಕಿಡಿಕಾರಿದೆ.
ಎಲ್ಲಾ ದಿನನಿತ್ಯ ವಸ್ತುಗಳ ಬೆಲೆಯೇರಿಕೆ, ವಿದ್ಯುತ್ ದರ ಏರಿಕೆಯಿಂದ ಜನಜೀವನ ದುರ್ಬರವಾಗಿದೆ. ಆದರೆ, ಇವುಗಳ ಬಗ್ಗೆ ಕಿಂಚಿತ್ತೂ ಗಮನಹರಿಸದೇ ಸರ್ಕಾರದ ನಿರ್ಧಾರವನ್ನು ಪ್ರಶ್ನಿಸುವವರ ವಾಕ್ ಸ್ವಾತಂತ್ರ್ಯವನ್ನು ಕಿತ್ತುಕೊಳ್ಳುವ ಮೂಲಕ ಸಂವಿಧಾನ ವಿರೋಧಿಯಾಗಿದೆ. ಆಡಳಿತವನ್ನು ದುರುಪಯೋಗಪಡಿಸಿಕೊಂಡು ದಬ್ಬಾಳಿಕೆಯ ಕ್ರೌರ್ಯವನ್ನು ಮೆರೆಯುತ್ತಿದೆ ಎಂದು ಆಕ್ರೋಶ ಹೊರಹಾಕಿದೆ.
ಭಾರತದ ಭವಿಷ್ಯದ ಪ್ರಜೆಗಳಿಗೆ ರಾಷ್ಟ್ರೀಯತೆಯ ಚಿಂತನೆಗಳನ್ನು ಪರಿಚಯಿಸುವ ನಿಟ್ಟಿನಲ್ಲಿ, ಬಿಜೆಪಿ ಸರ್ಕಾರ ತಂದ ಶ್ರೇಷ್ಠ ಸ್ವಾತಂತ್ರ್ಯ ಹೋರಾಟಗಾರರ ಪಠ್ಯವನ್ನು ಪರಿಷ್ಕರಿಸಿದೆ. ತಮ್ಮ ಬಾಲಬಡುಕತಿಗಳ ಪಠ್ಯವನ್ನು ತುರುಕಿ, ಮಕ್ಕಳ ವಿಚಾರದಲ್ಲಿಯೂ ಸಹ ತನ್ನ ದ್ವೇಷದ ಅಂಗಡಿಯನ್ನು ಈ ನಾಚಿಕೆಗೇಡು ಸರ್ಕಾರ ಮುಂದುವರೆಸಿದೆ ಎಂದು ಕಿಡಿಕಾರಿದೆ.
ಈ ಮೊದಲು ಸಿದ್ದರಾಮಯ್ಯ ಮತ್ತು ಡಿ.ಕೆ ಶಿವಕುಮಾರ್ ಅವರ ಜಗಳದಲ್ಲಿ ಡಾ. ಜಿ ಪರಮೇಶ್ವರ್ ಮತ್ತು ಮಲ್ಲಿಕಾರ್ಜುನ ಖರ್ಗೆ ಅವರ ಬಣಗಳು ಲಾಭ ಪಡೆಯಲು ಹವಣಿಸಿದ್ದವು. ಆದರೆ ಇವರಿಬ್ಬರ ಕುರ್ಚಿ ಕಾಳಗದಲ್ಲಿ ಕಾಂಗ್ರೆಸ್‌ನ ಬಣಗಳು ಸೇರಿ ಸರ್ಕಾರ ಸಹ ಬಡವಾಗಿದ್ದು, ಇದರ ನೇರ ಪರಿಣಾಮ ರಾಜ್ಯದ ಜನತೆಯ ಮೇಲೆ ಬೀರುತ್ತಿದೆ. ಕಾಂಗ್ರೆಸ್‌ನ ಈ ಎಲ್ಲಾ ಜನವಿರೋಧಿ ನೀತಿಗಳ ಹಾಗೂ ಭ್ರಷ್ಟ ಸರ್ಕಾರದ ವಿರುದ್ಧ ಬಿಜೆಪಿ ಸದನದ ಹೊರಗೆ ಹಾಗೂ ಒಳಗೆ ರಾಜ್ಯದ ಜನತೆಯ ಪರ ಹೋರಾಟ ನಡೆಸಲಿದೆ ಎಂದು ಬಿಜೆಪಿ ಟ್ವೀಟ್ ನಲ್ಲಿ ಎಚ್ಚರಿಕೆ ನೀಡಿದೆ.