‘ಸಿದ್ದರಾಮಯ್ಯರೇ 5 ವರ್ಷ ಸಿಎಂ’ –  ಹೆಚ್.ಸಿ ಮಹದೇವಪ್ಪ ಮಾತಿಗೆ ಕಾಂಗ್ರೆಸ್ ನಲ್ಲಿ ಮತ್ತೆ ಕಂಪನ

‘ಸಿದ್ದರಾಮಯ್ಯರೇ 5 ವರ್ಷ ಸಿಎಂ’ –  ಹೆಚ್.ಸಿ ಮಹದೇವಪ್ಪ ಮಾತಿಗೆ ಕಾಂಗ್ರೆಸ್ ನಲ್ಲಿ ಮತ್ತೆ ಕಂಪನ

ಕಾಂಗ್ರೆಸ್ ನಲ್ಲಿ ಬೂದಿ ಮುಚ್ಚಿದ ಕೆಂಡದಂತಿರುವ ಸಿಎಂ ಕುರ್ಚಿ ವಿವಾದದಲ್ಲಿ ಮತ್ತೊಮ್ಮೆ ಕಿಡಿ ಹೊತ್ತಿದೆ. ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ ಶಿವಕುಮಾರ್ ನಡುವೆ ಮೇಲ್ನೋಟಕ್ಕೆ ಎಲ್ಲವೂ ಸರಿ ಇದ್ದಂತೆ ಕಂಡ್ರೂ ಆಪ್ತರು ನೀಡುತ್ತಿರುವ ಹೇಳಿಕೆಗಳು ರಾಜಕೀಯ ಸಂಚಲನ ಮೂಡಿಸುತ್ತಿದೆ. ಇದೀಗ ಸಿದ್ದರಾಮಯ್ಯ 5 ವರ್ಷ ಸಿಎಂ ಆಗಿರುತ್ತಾರೆ ಎಂಬ ಕಾಂಗ್ರೆಸ್ ನಾಯಕರ ಹೇಳಿಕೆ ಮತ್ತೊಮ್ಮೆ ಜಟಾಪಟಿಗೆ ಕಾರಣವಾಗಿದೆ.

ಸಿದ್ದರಾಮಯ್ಯ ಬಣದಲ್ಲಿ ಗುರುತಿಸಿಕೊಂಡಿರುವ ಸಚಿವ ಎಂ.ಬಿ ಪಾಟೀಲ್ ಈ ಹಿಂದೆ ಸಿದ್ದರಾಮಯ್ಯ ಅವರೇ ಪೂರ್ಣಾವಧಿ ಸಿಎಂ ಆಗಲಿದ್ದಾರೆ, ಅಧಿಕಾರ ಹಂಚಿಕೆಯ ಚರ್ಚೆ ನಡೆದಿಲ್ಲ ಎಂಬ ಹೇಳಿಕೆ ನೀಡಿದ್ದರು. ಇದು ಡಿಕೆಶಿ ಹಾಗೂ ಸಿದ್ದರಾಮಯ್ಯ ಬಣ ಜಗಳಕ್ಕೆ ಕಾರಣವಾಗಿತ್ತು. ವಿಪಕ್ಷಗಳ ಟೀಕೆಗೂ ಅಸ್ತ್ರವಾಗಿತ್ತು. ಇದಾದ ಬಳಿಕ ರಾಜ್ಯ ನಾಯಕರಿಗೆ ಸಿಎಂ ಅಧಿಕಾರ ಹಂಚಿಕೆ ಕುರಿತಂತೆ ಮಾತನಾಡಬಾರದೆಂದು ಹೈಕಮಾಂಡ್ ಖಡಕ್ ಸೂಚನೆಯನ್ನು ನೀಡಿತ್ತು. ಅಧಿಕಾರ ಹಂಚಿಕೆಯ ಬಗ್ಗೆ ಯಾರೂ ಏನೂ ಹೇಳಿಕೆಗಳನ್ನು ನೀಡಬಾರದು ಎಂದು ನಿರ್ದೇಶನ ನೀಡಿತ್ತು. ಇನ್ನೇನು ಎಲ್ಲಾ ತಣ್ಣಗಾಯ್ತು ಅನ್ನುವಾಗಲೇ ಸಚಿವ ಡಾ. ಹೆಚ್.ಸಿ ಮಹದೇವಪ್ಪ ನೀಡಿರುವ ಮತ್ತೊಂದು ಹೇಳಿಕೆ ಹೊಸ ಚರ್ಚೆ ಹುಟ್ಟುಹಾಕಿದೆ.

ಇದನ್ನೂ ಓದಿ : ಗೃಹಜ್ಯೋತಿ ಯೋಜನೆಗೆ ಮೊದಲ ದಿನ 55,000ಕ್ಕೂ ಹೆಚ್ಚು ಗ್ರಾಹಕರಿಂದ ಅರ್ಜಿ – ಆರಂಭದಲ್ಲೇ ಕಾಣಿಸಿಕೊಂಡ ಸರ್ವರ್ ಬಿಜಿ ಸಮಸ್ಯೆ

ಐದು ವರ್ಷಗಳ ಕಾಲ ಸಿದ್ದರಾಮಯ್ಯ ಅವರೇ ಸಿಎಂ ಆಗಿ ಮುಂದುವರಿಯಲಿದ್ದಾರೆ ಎಂದು ಡಾ. ಹೆಚ್.ಸಿ ಮಹದೇವಪ್ಪ ಹೇಳಿದ್ದಾರೆ. ಸಿದ್ದರಾಮಯ್ಯ ಆಪ್ತ ವಲಯದಲ್ಲಿ ಗುರುತಿಸಿಕೊಂಡಿರುವ ಡಾ. ಹೆಚ್.ಸಿ ಮಹದೇವಪ್ಪ ಹೇಳಿಕೆ ಸಾಕಷ್ಟು ಚರ್ಚೆಯನ್ನು ಹುಟ್ಟುಹಾಕಿದೆ. ಇದಕ್ಕೆ ಪೂರಕ ಎಂಬಂತೆ ಸಚಿವ ಸತೀಶ್‌ ಜಾರಕಿಹೊಳಿ ಕೂಡ ಸಿದ್ದರಾಮಯ್ಯ ಅವರು 5 ವರ್ಷ ಅಧಿಕಾರದಲ್ಲಿರುತ್ತಾರೆ ಎಂಬ ಇಂಗಿತವನ್ನು ವ್ಯಕ್ತಪಡಿಸಿದ್ದಾರೆ.

ಅಧಿಕಾರ ಹಂಚಿಕೆ ಸೂತ್ರ ಏನು ಎಂಬುವುದು ಯಾವುದೂ ಈವರೆಗೆ ಬಹಿರಂಗಗೊಂಡಿಲ್ಲ. ಆದರೆ, ಸಿದ್ದರಾಮಯ್ಯ ಪರವಾಗಿ ಅವರ ಆಪ್ತರು ನೀಡುತ್ತಿರುವ ಹೇಳಿಕೆಗಳು ಮಾತ್ರ ಡಿ.ಕೆ ಶಿವಕುಮಾರ್ ಬಣದ ಆಕ್ರೋಶಕ್ಕೆ ಕಾರಣವಾಗಿದೆ. ಸದ್ಯ ಯಾರೂ ಬಹಿರಂಗವಾಗಿ ಹೇಳಿಕೆ ನೀಡದೆ ಇದ್ದರೂ ಆಂತರಿಕವಾಗಿ ಇದು ದೊಡ್ಡ ಮಟ್ಟದಲ್ಲಿ ಸಂಚಲನ ಮೂಡಿಸುತ್ತಿದೆ. ಇಂತಹ ಹೇಳಿಕೆಗಳನ್ನು ಬಹಿರಂಗವಾಗಿ ನೀಡಬಾರದು ಎಂದು ಹೈಕಮಾಂಡ್ ಸೂಚನೆ ನೀಡಿದ್ದರೂ ಒಂದಲ್ಲಾ ಒಂದು ರೀತಿಯಲ್ಲಿ ಚರ್ಚೆಯಂತೂ ಮುನ್ನಲೆಗೆ ಬರುತ್ತಿದೆ. ಎಂಬಿ ಪಾಟೀಲ್, ಎಚ್‌ ಸಿ ಮಹದೇವಪ್ಪ, ಸತೀಶ್ ಜಾರಕಿಹೊಳಿಯಂತಹ ಘಟಾನುಘಟಿಗಳೇ ಸಿದ್ದರಾಮಯ್ಯ ಪರವಾಗಿ ನೀಡುತ್ತಿರುವ ಹೇಳಿಕೆಗಳು ರಾಜಕೀಯ ಮೇಲಾಟಕ್ಕೆ ಸಾಕ್ಷಿಯಾಗುತ್ತಿವೆ.

 

suddiyaana