ಕಾಂಗ್ರೆಸ್ ಪ್ರಶ್ನಾತೀತ ನಾಯಕ ಸಿದ್ದರಾಮಯ್ಯರ ರಾಜಕೀಯ ಯುಗಾಂತ್ಯ?

ಕಾಂಗ್ರೆಸ್ ಪ್ರಶ್ನಾತೀತ ನಾಯಕ ಸಿದ್ದರಾಮಯ್ಯರ ರಾಜಕೀಯ ಯುಗಾಂತ್ಯ?

ರಾಜ್ಯ ರಾಜಕಾರಣದ ಮಾಸ್ ಲೀಡರ್.. ಕಾಂಗ್ರೆಸ್​ನ ಪ್ರಶ್ನಾತೀತ ನಾಯಕ ಅಂತಾನೇ ಕರೆಸಿಕೊಳ್ಳುವ ಸಿದ್ದರಾಮಯ್ಯರ ಚುನಾವಣಾ ರಾಜಕೀಯ ಯುಗಾಂತ್ಯವಾಯ್ತಾ..? ಇಂಥಾದ್ದೊಂದು ಪ್ರಶ್ನೆ ಹುಟ್ಟೋಕೆ ಕಾರಣವೇ ಸಿದ್ದರಾಮಯ್ಯನವರೇ ನೀಡಿರುವ ಘೋಷಣೆ. ನಾನು ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧೆ ಮಾಡಲ್ಲ ಎನ್ನುವ ಮೂಲಕ ಚುನಾವಣಾ ರಾಜಕೀಯಕ್ಕೆ ನಿವೃತ್ತಿ ಘೋಷಣೆ ಮಾಡಿದ್ದಾರೆ. ತವರು ಕ್ಷೇತ್ರದಲ್ಲೇ ಘೋಷಣೆ ಮಾಡಿರೋದು ಭಾರೀ ಕುತೂಹಲಕ್ಕೆ ಕಾರಣವಾಗಿದೆ. ಆದ್ರೆ ಸಿದ್ದರಾಮಯ್ಯರ ಈ ನಿರ್ಧಾರದ ಹಿಂದೆ ಬೇರೆಯದ್ದೇ ಲೆಕ್ಕಾಚಾರ ಓಡಾಡ್ತಿದೆ.

ಇದನ್ನೂ ಓದಿ: ರಾಜೀನಾಮೆ ಕೊಡಿ.. ಚುನಾವಣೆಗೆ ಸ್ಪರ್ಧಿಸೋಣ! – ಸಿಎಂ ಸಿದ್ಧರಾಮಯ್ಯಗೆ ಜಿ.ಟಿ ದೇವೇಗೌಡ ಸವಾಲು

ಸಿದ್ದು ಯುಗಾಂತ್ಯ?

2024ರ ಲೋಕಸಭಾ ಚುನಾವಣೆಯಲ್ಲಿ ಕರ್ನಾಟಕದ 28 ಕ್ಷೇತ್ರಗಳ ಪೈಕಿ 20ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಗೆಲ್ಲಲೇಬೇಕು ಎಂದು ಪಣ ತೊಟ್ಟಿರುವ ಸಿದ್ದರಾಮಯ್ಯ ಪ್ರಚಾರದಲ್ಲಿ ಬ್ಯುಸಿಯಾಗಿದ್ದಾರೆ. ಅದ್ರಲ್ಲೂ ತಮ್ಮ ತವರು ಜಿಲ್ಲೆ ಮೈಸೂರು ಕ್ಷೇತ್ರವನ್ನ ಪ್ರತಿಷ್ಠೆಯಾಗಿ ಸ್ವೀಕರಿಸಿದ್ದಾರೆ. ಆದರೆ ಮಂಗಳವಾರ ಮೈಸೂರಿನಲ್ಲಿ ಚುನಾವಣಾ ರಾಜಕೀಯ ನಿವೃತ್ತಿ ಕುರಿತು ತಮ್ಮ ತವರು ಕ್ಷೇತ್ರದಲ್ಲಿಯೇ ಘೋಷಣೆ ಮಾಡಿದ್ದಾರೆ.  ನನಗೆ ವಯಸ್ಸಾಗುತ್ತಿದೆ. ಮುಂದಿನ ನಾಲ್ಕು ವರ್ಷದ ಬಳಿಕ ವಿಧಾನಸಭಾ ಚುನಾವಣೆ ಎದುರಾಗುತ್ತದೆ. ನಾನು ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ. ಚುನಾವಣಾ ರಾಜಕೀಯದಿಂದ ಹಿಂದೆ ಸರಿಯಲಿದ್ದೇನೆ ಎಂದಿದ್ದಾರೆ. ಅಲ್ದೇ ತಮ್ಮ ನಿರ್ಧಾರಕ್ಕೆ ಕಾರಣಗಳೇನು ಎಂಬುದನ್ನು ಸ್ವತಃ ಸಿದ್ದರಾಮಯ್ಯ ಅವರೇ ವಿವರಿಸಿದ್ದಾರೆ. ಅವರವರ ದೇಹಸ್ಥಿತಿ, ಆರೋಗ್ಯದ ಬಗ್ಗೆ ಅವರಿಗೇ ಗೊತ್ತಿರುತ್ತದೆ. ನನಗೆ ಮೊದಲಿನಂತೆ ಉತ್ಸಾಹ ಭರಿತವಾಗಿ ಕೆಲಸ ಮಾಡಲು ಆಗುತ್ತಿಲ್ಲ. ನನಗೆ ಯಾವ ಆತಂಕ ಇಲ್ಲ. ಆತಂಕ ಇದ್ದರೆ ಮಾತ್ರ ಟೆನ್ಷನ್ ಇರುತ್ತದೆ. ನನಗೆ ಆ ರೀತಿ ಏನು ಇಲ್ಲ. ಹೀಗಾಗಿ ನಾನು ಚುನಾವಣಾ ರಾಜಕಾರಣದಿಂದ ಹಿಂದೆ ಸರಿಯುವ ನಿರ್ಧಾರ ಮಾಡಿದ್ದೇನೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಸಿದ್ದರಾಮಯ್ಯ ಈ ಹಿಂದೆಯು ರಾಜಕೀಯ ನಿವೃತ್ತಿ ಘೋಷಣೆ ಕುರಿತು ಮಾತನಾಡಿದ್ದರು. 2023ರಲ್ಲಿ ಏಪ್ರಿಲ್ ನಲ್ಲಿ ಮುಂಬರಲಿರುವ ವಿಧಾನಸಭಾ ಚುನಾವಣಾ ರಾಜಕಾರಣದಿಂದ ಹಿಂದೆ ಸರಿಯುತ್ತೇನೆ ಎಂದು ಹೇಳಿದ್ದರು. ಆಗ ಅವರು ವಿಪಕ್ಷ ನಾಯಕರಾಗಿದ್ದರು. ಅದಕ್ಕೂ ಮೊದಲು ಬಾದಾಮಿ ವಿಧಾನಸಭಾ ಕ್ಷೇತ್ರದಲ್ಲಿ ಬಿ.ಶ್ರೀರಾಮುಲು ವಿರುದ್ಧ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ವೇಳೆ ಸಿಎಂ ಸಿದ್ದರಾಮಯ್ಯ ಅವರು ಇದೇ ನನ್ನ ಕೊನೆಯ ಚುನಾವಣೆ ಆಗಲಿದೆ. ಮುಂದೆ ಮತ್ತೆ ನಾನು ಚುನಾವಣೆ ನಿಲ್ಲುವುದಿಲ್ಲ. ಚುನಾವಣಾ ರಾಜಕೀಯದಿಂದ ನಿವೃತ್ತಿ ಪಡೆಯುತ್ತೇನೆ ಎಂದಿದ್ದರು. ಆದರೆ ಆ ಮಾತಿನಂತೆ ನಡೆದುಕೊಂಡಿರಲಿಲ್ಲ. ಈ ಬಾರಿ ಮತ್ತದನ್ನೇ ಹೇಳಿದ್ದಾರೆ. ಆದ್ರೆ ಮುಂದಿನ ಸಲ ಸಿದ್ದರಾಮಯ್ಯ ಚುನಾವಣೆಗೆ ಸ್ಪರ್ಧಿಸದೇ ಇದ್ದರೂ ಅಲ್ಲಿ ಮಗನ ರಾಜಕೀಯ ಭವಿಷ್ಯ ಸುಗಮಗೊಳ್ಳಲಿದೆ.

ಮಗನ ಭವಿಷ್ಯ ಭದ್ರ! 

ಸಿದ್ದರಾಮಯ್ಯ ಅವರ ಚುನಾವಣಾ ರಾಜಕಾರಣ ನಿವೃತ್ತಿ ಬಳಿಕ ಶಾಸಕ ಯತೀಂದ್ರ ಸಿದ್ದರಾಮಯ್ಯ ಅವರ ರಾಜಕೀಯ ಹಾದಿ ಮತ್ತಷ್ಟು ಸುಗಮಗೊಳ್ಳುವ ನಿರೀಕ್ಷೆ ಇದೆ. ತಂದೆ ಸ್ಪರ್ಧಿಸಿದ ಕ್ಷೇತ್ರದಿಂದ ಸಿದ್ದರಾಮಯ್ಯ ಪುತ್ರ ಕಣಕ್ಕಿಳಿದು ಗೆದ್ದವರು. ಇಲ್ಲಿ ಕುರುಬ ಸಮುದಾಯ ಮತದಾರರು ಹೆಚ್ಚಿದ್ದು, ಇದು ಯತೀಂದ್ರ ಅವರಿಗೆ ವರದಾನವಾಗಲಿದೆ. 2018ರ ವಿಧಾನಸಭಾ ಚುನಾವಣೆಯಲ್ಲಿ ಸಿದ್ದರಾಮಯ್ಯ ಅವರು ಬಾದಾಮಿ ಮತ್ತು ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಕಣಕ್ಕಿಳಿದರು. ಆಗ ಬಾದಾಮಿಯಲ್ಲಿ ಮಾತ್ರ ಗೆಲುವು ಸಾಧಿಸಿದ್ದರು. ಹಲವು ಏರಿಳಿತಗಳ ನಡುವೆ ಗೆಲುವಿನ ಕ್ಷೇತ್ರವನ್ನು ಸಿಎಂ ತಮ್ಮ ಪುತ್ರನಿಗೆ ಬಿಟ್ಟುಕೊಟ್ಟಿದ್ದರು. ಬಳಿಕ 2023ರದಲ್ಲಿ ತಾವೇ ವರುಣಾ ಕ್ಷೇತ್ರದಿಂದ ಸ್ಪರ್ಧಿಸಿ ಗೆಲುವು ಸಾಧಿಸಿದ್ದರು. ಹಾಗೇನಾದ್ರೂ ಮುಂದಿನ ಚುನಾವಣೆಗೆ ಸಿದ್ದರಾಮಯ್ಯ ಕಣಕ್ಕಿಳಿಯದೇ ಇದ್ರೂ ಯತೀಂದ್ರಗೆ ಟಿಕೆಟ್ ಸಿಗೋದು ಪಕ್ಕಾ ಆಗಲಿದೆ.

ಕಳೆದ ಬಾರಿ ನಡೆದ ಚುನಾವಣೆಯಲ್ಲಿ ಯತೀಂದ್ರ ಅವರು ವರುಣಾದಿಂದ ಗೆಲುವು ಸಾಧಿಸಿದ್ದಾರೆ. ಇದೀಗ ಸಿಎಂ ಸಿದ್ದರಾಮಯ್ಯ ನುಡಿದಂತೆ ನಡೆದುಕೊಂಡರೆ ಪುತ್ರನ ರಾಜಕೀಯ ಭವಿಷ್ಯ ಮತ್ತಷ್ಟು ಸರಳವಾಗಲಿದೆ ಎಂದು ವಿಶ್ಲೇಷಿಸಲಾಗುತ್ತಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸದ್ಯ ಮೈಸೂರು ಲೋಕಸಭಾ ಕ್ಷೇತ್ರದಲ್ಲಿ ತಮ್ಮ ಪಕ್ಷದ ಅಭ್ಯರ್ಥಿ ಪರ ಭರ್ಜರಿ ಪ್ರಚಾರ ಕಾರ್ಯದಲ್ಲಿ ತೊಡಗಿದ್ದಾರೆ. ಅವರು ಒಂದೆರಡು ದಿನ ಮೈಸೂರಲ್ಲಿ ವಾಸ್ತವ್ಯ ಹೂಡಿದ್ದಾರೆ. ಈ ಕ್ಷೇತ್ರದ ಗೆಲುವು ಕಾಂಗ್ರೆಸ್‌ಗೆ ಮತ್ತು ವೈಯಕ್ತಿಕವಾಗಿ ಸಿದ್ದರಾಮಯ್ಯ ಅವರಿಗೆ ಪ್ರತಿಷ್ಠೆಯಾಗಿದೆ. ಈ ಹಿನ್ನೆಲೆಯಲ್ಲಿ ಭರ್ಜರಿ ಪ್ರಚಾರ ಕಾರ್ಯಕ್ರಮದಲ್ಲಿ ಅವರು ಪಾಲ್ಗೊಂಡಿದ್ದಾರೆ. ಇದೇ ವೇಳೆ ಅವರು ಚುನಾವಣಾ ರಾಜಕಾರಣದಿಂದ ದೂರ ಉಳಿಯುವ ಹೇಳಿಕೆ ಮತ್ತೊಮ್ಮೆ ಚರ್ಚೆ ಹುಟ್ಟು ಹಾಕುವಂತೆ ಮಾಡಿದೆ.

Shwetha M