ನಾಳೆ ಸಿದ್ದರಾಮಯ್ಯ, ಡಿಕೆಶಿ ಪ್ರಮಾಣವಚನ – ಅಷ್ಟ ದಿಕ್ಕುಗಳಲ್ಲಿ ಖಾಕಿ ಬಿಗಿಭದ್ರತೆ

ನಾಳೆ ಸಿದ್ದರಾಮಯ್ಯ, ಡಿಕೆಶಿ ಪ್ರಮಾಣವಚನ – ಅಷ್ಟ ದಿಕ್ಕುಗಳಲ್ಲಿ ಖಾಕಿ ಬಿಗಿಭದ್ರತೆ

ಬೆಂಗಳೂರು: ರಾಜ್ಯದ ನೂತನ ಸಿಎಂ ಆಗಿ ಸಿದ್ದರಾಮಯ್ಯ ಅವರು ಶನಿವಾರ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಕಂಠೀರವ ಸ್ಟೇಡಿಯಂನಲ್ಲಿ ಪ್ರಮಾಣವಚನ ಸಮಾರಂಭ ನಡೆಯಲಿದ್ದು,  ಈ ಹಿನ್ನೆಲೆ ನಗರ ಪೊಲೀಸ್‌ ಇಲಾಖೆ ಅಷ್ಟ ದಿಕ್ಕುಗಳಲ್ಲಿ ಖಾಕಿ ಬಿಗಿಭದ್ರತೆಗೆ ಏರ್ಪಡಿಸಲು ಪ್ಲಾನ್ ಹಾಕಿಕೊಂಡಿದೆ. ಎಲ್ಲಿಯೂ ಅಹಿತಕರ ಘಟನೆಗಳಾಗದಂತೆ ಮುಂಜಾಗ್ರತಾ ಕ್ರಮ ಕೈಗೊಂಡಿದೆ.

ಇದನ್ನೂ ಓದಿ: ರಾಜ್ಯದಲ್ಲಿ ಸಚಿವ ಸ್ಥಾನಕ್ಕೆ ಭಾರಿ ಕಸರತ್ತು – ಸಿದ್ದು, ಡಿಕೆಶಿಗೂ ಮೊದಲೇ ದೆಹಲಿಗೆ ತೆರಳಿದ ಶಾಸಕರು!

ಮೇ 20 ರಂದು ನಡೆಯಲಿರುವ ಸಮಾರಂಭಕ್ಕೆ ರಾಮನಗರ, ಮೈಸೂರು, ಉತ್ತರ ಕರ್ನಾಟಕ ಹಾಗೂ ಕೋಲಾರದಿಂದ ಲಕ್ಷಾಂತರ ಮಂದಿ ಆಗಮನ ಬಗ್ಗೆ ಗುಪ್ತಚರ ಇಲಾಖೆಯಿಂದ ಪೊಲೀಸರಿಗೆ ಮಾಹಿತಿ ಬಂದ ಹಿನ್ನೆಲೆ ಅಲರ್ಟ್ ಆಗಿದ್ದಾರೆ. ಪ್ರಮುಖವಾಗಿ ಕಂಠೀರವ ಸ್ಟೇಡಿಯಂನ ಎರಡು ಗೇಟ್‌ಗಳಲ್ಲಿ ವಿವಿಐಪಿಗೆ ಮಾತ್ರ ವಾಹನಗಳ ಎಂಟ್ರಿಗೆ ಅವಕಾಶ ನೀಡಲಾಗಿದೆ. ವಿವಿಐಪಿಗೆ ಪ್ರತ್ಯೇಕವಾಗಿ ಒಳಗೆ ಹೋಗಲು ವ್ಯವಸ್ಥೆ ಮಾಡಲಿರುವ ಪೊಲೀಸರು. ಪೊಲೀಸ್ ಕಮಿಷನರ್, ಟ್ರಾಫಿಕ್ ಸ್ಪೆಷಲ್ ಕಮಿಷನರ್, ಜಂಟಿ ಇಬ್ಬರು ಪೊಲೀಸ್ ಆಯುಕ್ತರು ಸೇರಿ ಇಬ್ಬರು ಹೆಚ್ಚುವರಿ ಪೊಲೀಸ್ ಆಯುಕ್ತರ ನೇತೃತ್ವದಲ್ಲಿ ಎಂಟು ಮಂದಿ ಡಿಸಿಪಿ ಭದ್ರತೆಗೆ ನಿಯೋಜನೆಗೊಳ್ಳಲಿದ್ದಾರೆ.

ಶನಿವಾರ ನಡೆಯಲಿರುವ ಮುಖ್ಯಮಂತ್ರಿಗಳ ಪ್ರಮಾಣವಚನ ಕಾರ್ಯಕ್ರಮಕ್ಕೆ ಹಲವು ರಾಜ್ಯಗಳ ಮುಖ್ಯಮಂತ್ರಿಗಳಿಗೆ ಗಣ್ಯರಿಗೆ ಆಹ್ವಾನ ನೀಡಿದ್ದು, ಐತಿಹಾಸಿಕ ಕಾರ್ಯಕ್ರಮವನ್ನಾಗಿಸಲು ಸಿದ್ಧತೆ ನಡೆಸಿದೆ. ಇನ್ನೂ ಈ ಕಾರ್ಯಕ್ರಮ ಯಶಸ್ವಿಗೆ ಸರ್ವಸನ್ನದ್ಧವಾಗಿರುವ ಪೊಲೀಸ್ ಇಲಾಖೆ ಸುಮಾರು 1500ಮಂದಿ ಪೊಲೀಸರನ್ನು ಭದ್ರತೆಗೆ ನಿಯೋಜನೆ ಮಾಡಲಿದೆ. 8 ಗೇಟ್‌ಗಳಲ್ಲಿ ಓರ್ವ ಎಸಿಪಿ ಮಟ್ಟದ ಅಧಿಕಾರಿಗಳಿಂದ ಭದ್ರತಾ ವ್ಯವಸ್ಥೆ ಜೊತೆಗೆ  ಹತ್ತು ಮಂದಿ ಎಸಿಪಿ, 28 ಮಂದಿ ಇನ್ಸ್ ಪೆಕ್ಟರ್  ಗಳ ನೇತೃತ್ವದಲ್ಲಿ ಭದ್ರತಾ ವ್ಯವಸ್ಥೆ ಮಾಡಲಾಗುತ್ತದೆ.

ರಾಜ್ಯದ ಮೂಲೆ ಮೂಲೆಗಳಿಂದ ಲಕ್ಷಾಂತರ ಜನರು ಪ್ರಮಾಣವಚನ ಕಾರ್ಯಕ್ರಮ ವೀಕ್ಷಿಸಲು ಆಗಮಿಸುವ ಸಾಧ್ಯತೆ ಇದೆ. ಈ ಹಿನ್ನೆಲೆ ಸುಮಾರು 500 ಸಂಚಾರಿ ಪೊಲೀಸರು ಸಂಚಾರ ದಟ್ಟಣೆಯಾಗದಂತೆ ರೋಡ್ ಡೈವರ್ಷನ್ ಮಾಡಲಿದ್ದಾರೆ. ಹಲಸೂರು, ಎಂಜಿ ರೋಡ್, ರಿಚ್ ಮಂಡ್ ನಿಂದ ಕಾರ್ಪೊರೇಷನ್ ಮೂಲಕ  ಬರುವ ವಾಹನಗಳನ್ನ ಹಲಸೂರು ಕೆರೆ ಮೂಲಕ ಶಿವಾಜಿನಗರ, ವಿಧಾನಸೌಧ ಮೆಜೆಸ್ಟಿಕ್, ಮಾರ್ಕೆಟ್ ಮೂಲಕ ಬರುವ ವಾಹನಗಳನ್ನ ರಿಚ್ಮಂಡ್  ರೋಡ್ ನಿಂದ ಲಾಲ್ ಬಾಗ್ ರೋಡ್ ಮೂಲಕ ಸಂಪರ್ಕ ಕಲ್ಪಿಸಲಾಗುತ್ತದೆ. ಮೆಜೆಸ್ಟಿಕ್ ಮಾರ್ಗದಿಂದ ಕಾರ್ಪೊರೇಷನ್ ಗೆ ಬರುವ ವಾಹನಗಳು ವಿಧಾನಸೌಧ ಮೂಲಕ ತಿಮ್ಮಯ್ಯ ರೋಡ್, ಇನ್ ಪೆಂಟ್ರಿ ರೋಡ್ ಮೂಲಕ ಸಂಪರ್ಕ ಕಲ್ಪಿಸಲಾಗಿದೆ. ಕೇಂದ್ರ ಭಾಗದಲ್ಲಿ ಹೆಚ್ಚು ಸಂಚಾರ ದಟ್ಟಣೆಯಾಗುವ ಹಿನ್ನಲೆ ಮೈಸೂರ್ ಬ್ಯಾಂಕ್ ಸರ್ಕಲ್ ,ರಿಚ್ಮಂಡ್ ರೋಡ್, ಟೌನ್ ಹಾಲ್ ರಸ್ತೆಗಳಲ್ಲಿ ಪೊಲೀಸರು ಕಟ್ಟೆಚ್ಚರ ವಹಿಸಿದ್ದಾರೆ.

ಶನಿವಾರ ನಡೆಯಲಿರುವ ಪ್ರಮಾಣವಚನ ಕಾರ್ಯಕ್ರಮಕ್ಕೆ ಹಲವು ರಾಜ್ಯಗಳ ಮುಖ್ಯಮಂತ್ರಿ, ಗಣ್ಯರು ಆಗಮಿಸುತ್ತಿದ್ದಾರೆ. ಆದರೆ ಈಗ ಕಾರ್ಯಕ್ರಮಕ್ಕೆ ಆಗಮನಿಸುವ ಗಣ್ಯರಿಗೆ ಭದ್ರತೆ ವಹಿಸುವ ವಿವಿಐಪಿ ಸೆಕ್ಯುರಿಟಿ ಸಿಬ್ಬಂದಿ ಕೊರತೆ ಎದುರಾಗಿದೆ. ಸಿಬ್ಬಂದಿ ಕೊರತೆ ನಿವಾರಿಸಲು ಸಿಎಆರ್ ಘಟಕಗಳಿಂದ ಸಿಬ್ಬಂದಿ ನಿಯೋಜನೆ ಮಾಡಲಾಗುತ್ತಿದೆ. ಕಾರ್ಯಕ್ರಮಕ್ಕೆ ಬರುವ 11 ಮಂದಿ Z+ ಶ್ರೇಣಿಯ ಭದ್ರತೆ ಹೊಂದಿದ್ದಾರೆ. ಹೀಗಾಗಿ ಶ್ರೇಣಿಗೆ ತಕ್ಕಂತೆ ಭದ್ರತೆ ನೀಡಲು ಮುಂದಾಗಿರುವ ನಗರ ಪೊಲಿಸರು. ಇದಕ್ಕಾಗಿ ನಗರದ ಸಿಎಆರ್ ಘಟಕದಿಂದ ಸಿಬ್ಬಂದಿ ನಿಯೋಜನೆ ಮಾಡಲು ನಿರ್ಧರಿಸಲಾಗಿದೆ.

suddiyaana