ಸಿದ್ದರಾಮಯ್ಯನವರೇ ಮುಖ್ಯಮಂತ್ರಿಯಾಗಿ 5ವರ್ಷ ಇರ್ತಾರೆ – ಸಚಿವ ಜಮೀರ್ ಅಹಮ್ಮದ್

ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾಗಿ ಪೂರ್ಣಾವಧಿವರೆಗೆ ಮುಂದುವರಿಯಲಿದ್ದಾರೆ. ಒಂದು ವೇಳೆ ಮುಖ್ಯಮಂತ್ರಿ ಬದಲಾವಣೆ ಮಾಡಬೇಕೆಂದರೆ ನಮ್ಮ ಪಕ್ಷದ ಹೈಕಮಾಂಡ್ ಮಾಡಬೇಕು. ಹೈಕಮಾಂಡ್ ನಿರ್ಧಾರಕ್ಕೆ ನಾವು ಬದ್ಧ ಎಂದು ವಕ್ಫ್ ಸಚಿವ ಜಮೀರ್ ಅಹಮ್ಮದ್ ಖಾನ್ ಹೇಳಿದರು. ನಗರದಲ್ಲಿ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಮುಖ್ಯಮಂತ್ರಿ ಬದಲಿಸೋದು ನಮ್ಮ ಪಕ್ಷದ ಆಂತರಿಕ ವಿಚಾರವಾಗಿದೆ. ನಾವೇನಾದರೂ ಮಾಡಿಕೊಳ್ಳುತ್ತೇವೆ. ಮೊದಲು ನಿಮ್ಮ ಪಕ್ಷದಲ್ಲಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರನ್ನು ಸರಿ ಮಾಡಿಕೊಳ್ಳಿ. ಯತ್ನಾಳ್ ಕಾಟವನ್ನೇ ನಿಮ್ಮಿಂದ ಸಹಿಸಿಕೊಳ್ಳಲಾಗುತ್ತಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರಗೆ ತಿರುಗೇಟು ನೀಡಿದರು.
ನಿಮ್ಮ ಪಕ್ಷದ ಬಗ್ಗೆ ನಾವೇನಾದರೂ ಮಾತನಾಡುತ್ತೇವಾ?. ನಿಮ್ಮ ಪಕ್ಷದ ಬಗ್ಗೆ ನಾವು ಚಿಂತನೆ ಮಾಡುತ್ತಿದ್ದೇವಾ?. ನಮ್ಮ ಪಕ್ಷದ ಬಗ್ಗೆ ನೀವು ಯಾಕೆ ಅಷ್ಟೊಂದು ತಲೆ ಕೆಡಿಸಿಕೊಂಡಿದ್ದೀರಿ?. ಸದ್ಯಕ್ಕೆ ಮುಖ್ಯಮಂತ್ರಿ ಬದಲಾವಣೆ ವಿಚಾರವಾಗಲಿ, ಸಂಪುಟ ವಿಸ್ತರಣೆಯಾಗಲಿ ಯಾವುದೂ ಇಲ್ಲ. ಬಿಜೆಪಿಯವರು ಅಂದುಕೊಂಡಂತೆ ಏನೂ ಇಲ್ಲ. ಅದೆಲ್ಲಾ ವಿಪಕ್ಷದವರ ಊಹಾಪೋಹವಷ್ಟೇ ಎಂದು ವಿಜಯೇಂದ್ರ ವಿರುದ್ಧ ಹರಿಹಾಯ್ದರು. ನಮ್ಮ ವರಿಷ್ಠರು ತೀರ್ಮಾನ ಮಾಡಿ ಯಾವಾಗ ಬೇಕಿದ್ದರೂ, ಏನು ನಿರ್ಧಾರ ಬೇಕಾದರೂ ಮಾಡಬಹುದು. ಹೈಕಮಾಂಡ್ ನಿರ್ಧಾರಕ್ಕೆ ನಮ್ಮ ಯಾವುದೇ ವಿರೋಧವಿಲ್ಲ.
ನಾವೆಲ್ಲಾ ಪಕ್ಷದ ಶಿಸ್ತಿನ ಸಿಪಾಯಿಗಳು. ನಮ್ಮ ಹೈಕಮಾಂಡ್ ತೀರ್ಮಾನಕ್ಕೆ ನಾವು ಬದ್ಧ. ನಮ್ಮ ವರಿಷ್ಠರು, ಪಕ್ಷ ಹಾಕಿದ ಗೆರೆಯನ್ನು ನಾವ್ಯಾರೂ ದಾಟುವುದಿಲ್ಲ ಎಂದು ಅವರು ಹೇಳಿದರು. ತಮನ್ನಾ ಬದಲು ರಾಜ್ಯದವರಿಗೇ ಅವಕಾಶ ಕೊಡಬೇಕಿತ್ತು ಮೈಸೂರು ಸ್ಯಾಂಡಲ್ ಸೋಪ್ಸ್ ಜಾಹೀರಾತಿಗೆ ನಮ್ಮ ರಾಜ್ಯದ ನಟಿಯರಿಗೆ ಅವಕಾಶ ನೀಡಬೇಕಿತ್ತು ಅನಿಸುತ್ತಿದೆ ಎಂದು ವಕ್ಫ್ ಖಾತೆ ಸಚಿವ, ಕಾಂಗ್ರೆಸ್ ನಾಯಕ ಜಮೀರ್ ಅಹಮದ್ ಖಾನ್ ಅಭಿಪ್ರಾಯಪಟ್ಟಿದ್ದಾರೆ. ಭಾನುವಾರ ನಗರದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ತಮನ್ನಾ ಬದಲು, ಸ್ಥಳೀಯರಿಗೆ ಅವಕಾಶ ಕೊಡಬೇಕಿತ್ತು ಎಂದು ಹೇಳಿದರು.