ಕೋಲಾರ ರಣಕಣದಿಂದ ಹಿಂದೆ ಸರಿದ ಸಿದ್ದರಾಮಯ್ಯ – ಕಾರಣಗಳೇನು.. ಯಾವ ಕ್ಷೇತ್ರದಿಂದ ಸ್ಪರ್ಧೆ..?
ಕರ್ನಾಟಕ ವಿಧಾನಸಭಾ ಚುನಾವಣೆಗೆ ಕೆಲವೇ ದಿನಗಳು ಬಾಕಿ ಉಳಿದಿದ್ದು, ಅಭ್ಯರ್ಥಿಗಳ ಆಯ್ಕೆಯೇ ಪಕ್ಷಗಳಿಗೆ ಸವಾಲಾಗಿ ಪರಿಣಮಿಸಿದೆ. ಅದ್ರಲ್ಲೂ ಕಾಂಗ್ರೆಸ್ನಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಕ್ಷೇತ್ರದ ಆಯ್ಕೆಯೇ ಕಗ್ಗಂಟಾಗಿದೆ. ಕೆಲ ದಿನಗಳ ಹಿಂದಷ್ಟೇ ಕೋಲಾರ ಕ್ಷೇತ್ರದಿಂದ ಸ್ಪರ್ಧೆ ಮಾಡೋದಾಗಿ ಸಿದ್ದು ಘೋಷಣೆ ಮಾಡಿದ್ದರು. ಆದರೆ ಇದೀಗ ಕೋಲಾರ ಕಣದಿಂದ ಹಿಂದೆ ಸರಿಯಲು ನಿರ್ಧರಿಸಿದ್ದಾರೆ ಎನ್ನಲಾಗ್ತಿದೆ.
ಕಳೆದ ಬಾರಿ ವರುಣಾ ಕ್ಷೇತ್ರವನ್ನ ಪುತ್ರ ಯತೀಂದ್ರನಿಗೆ ಬಿಟ್ಟಕೊಟ್ಟು 2 ಕ್ಷೇತ್ರಗಳಲ್ಲಿ ಸ್ಪರ್ಧಿಸಿದ್ದ ಸಿದ್ದರಾಮಯ್ಯ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸೋಲು ಅನುಭವಿಸಿದ್ದರು. ಬಾದಾಮಿ ಕ್ಷೇತ್ರದಲ್ಲಿ ಶ್ರೀರಾಮುಲು ವಿರುದ್ಧ ಗೆಲುವು ಪಡೆದಿದ್ದರು. ಹೀಗಾಗಿ 2023ರ ವಿಧಾನಸಭಾ ಚುನಾವಣೆಯಲ್ಲಿ ಯಾವ ಕ್ಷೇತ್ರದಿಂದ ಸ್ಪರ್ಧೆ ಮಾಡೋದು ಅಂತಾ ಅಳೆದುತೂಗಿ ಕೊನೆಗೂ ಕೋಲಾರದಿಂದ ಸ್ಪರ್ಧೆ ಮಾಡೋದಾಗಿ ಘೋಷಣೆ ಮಾಡಿದ್ದರು. ಆದರೆ ಈಗ ಹೈಕಮಾಂಡ್ ಸೂಚನೆ ಮೇರೆಗೆ ಮನಸು ಬದಲಾಯಿಸಿದ್ದಾರೆ ಎನ್ನಲಾಗಿದೆ. ಕೋಲಾರ ಬಿಟ್ಟು ಬೇರೆಡೆ ಸ್ಪರ್ಧಿಸುವಂತೆ ಹೈಕಮಾಂಡ್ ಸಲಹೆ ನೀಡಿದ ಬೆನ್ನಲ್ಲೇ ಶನಿವಾರ ಮಧ್ಯಾಹ್ನ ಬೆಂಗಳೂರಿನ ನಿವಾಸದಲ್ಲಿ ಬೆಂಬಲಿಗರು ಹಾಗೂ ಪಕ್ಷದ (Congress) ನಾಯಕರ ಜತೆ ಸಭೆ ನಡೆಸಿದ್ದರು. ಬಳಿಕ ಎಲ್ಲಿಂದ ಸ್ಪರ್ಧೆ ಮಾಡುವುದೆಂದು ಮುಂದಿನ ಎರಡು ದಿನಗಳಲ್ಲಿ ನಿರ್ಧಾರ ಪ್ರಕಟಿಸುವುದಾಗಿ ಹೇಳಿದ್ದಾರೆ. ಕೋಲಾರದಿಂದ ಸ್ಪರ್ಧಿಸುವುದು ಅಸಾಧ್ಯ ಎಂಬ ಸುಳಿವನ್ನೂ ನೀಡಿದ್ದಾರೆ.
ಇದನ್ನೂ ಓದಿ : ಕಾಂಗ್ರೆಸ್ ನ 135 ಅಭ್ಯರ್ಥಿಗಳ ಫಸ್ಟ್ ಲಿಸ್ಟ್ ಲೀಕ್ – ಯಾರಿಗೆಲ್ಲಾ ಅವಕಾಶ ಸಿಕ್ಕಿದೆ ಗೊತ್ತಾ..?
ಸಭೆಯಲ್ಲಿ ಸಿದ್ದರಾಮಯ್ಯ ಕೋಲಾರದ ಕೆಲವು ನಾಯಕರು ಜೊತೆ ವಾಗ್ವಾದಕ್ಕಿಳಿದರು. ನೀವು ಕೋಲಾರಕ್ಕೆ ಬರಲೇಬೇಕು. ನಿಮ್ಮ ನಿರ್ಧಾರ ಒಪ್ಪಲು ಸಾಧ್ಯವಿಲ್ಲ. ನೀವು ಕೋಲಾರಕ್ಕೆ ಬಾರದೇ ಇದ್ದರೆ ನಾವು ಪಕ್ಷದಿಂದ ಅಂತರ ಕಾಯ್ದು ಕೊಳ್ಳಬೇಕಾಗುತ್ತದೆ ಎಂದು ಕೆಲವು ನಾಯಕರು ಹೇಳಿದ್ದಾರೆ. ಕೋಲಾರ ಭಾಗದಲ್ಲಿ ಆರಕ್ಕೆ ಆರು ಕ್ಷೇತ್ರಗಳನ್ನೂ ಸೋಲಿಸುತ್ತೇವೆ ಎಚ್ಚರವಿರಲಿ ಎಂದೂ ಕೆಲವರು ಹೇಳಿದ್ದಾರೆ ಎನ್ನಲಾಗಿದೆ. ಆದರೆ ನಾಯಕರ ಮಾತಿಗೆ ಗರಂ ಆದ ಸಿದ್ದರಾಮಯ್ಯ, ಸುಮ್ನಿರಿ, ನೀವೆಲ್ಲ ಏನ್ ಪಕ್ಷ ಬಿಡೋದು. ಎಲ್ಲಾ ನಮ್ಮವರೇ ಆಗಿ ಏನೇನೋ ಮಾತಾಡ್ತಿರಲ್ಲ ಎಂದಿದ್ದಾರೆ. ನಂತರ, ನಾನೇನು ಮಾಡಲಿ, ರಾಹುಲ್ ಗಾಂಧಿ ಅವರೇ ಹೇಳಿದ್ದಾರೆ. ಹೈಕಮಾಂಡ್ ಮಾತನ್ನ ಮೀರಲು ಸಾಧ್ಯವಿಲ್ಲ ಎಂದು ಸಿದ್ದರಾಮಯ್ಯ ಇತರ ನಾಯಕರನ್ನು ಸಮಾಧಾನಪಡಿಸಿದ್ದಾರೆ.
ಈ ಮೂಲಕ ಸಿದ್ದರಾಮಯ್ಯ ಅವರು ವಿಧಾನಸಭೆ ಚುನಾವಣೆಯಲ್ಲಿ ಕೋಲಾರದಿಂದ ಕಣಕ್ಕಿಳಿಯುವುದಿಲ್ಲ, ಕೊನೇ ಕ್ಷಣದಲ್ಲಿ ಅವರು ವರುಣಾದಿಂದ ಕಣಕ್ಕಿಳಿಯಬಹುದು ಎಂಬ ಬಿಜೆಪಿ ನಾಯಕರ ಹೇಳಿಕೆಗಳು ಕೊನೆಗೂ ನಿಜವಾಗುವ ಲಕ್ಷಣ ಗೋಚರಿಸಿದೆ. ಶುಕ್ರವಾರ ದೆಹಲಿಯ ಕಾಂಗ್ರೆಸ್ ಪ್ರಧಾನ ಕಚೇರಿಯಲ್ಲಿ ನಡೆದಿದ್ದ ಪಕ್ಷದ ಕೇಂದ್ರ ಚುನಾವಣಾ ಸಮಿತಿ ಸಭೆಯಲ್ಲಿ ಸಿದ್ದರಾಮಯ್ಯ ಭಾಗವಹಿಸಿದ್ದರು. ಈ ವೇಳೆ, ವರುಣಾ ಕ್ಷೇತ್ರದಿಂದಲೇ ಸ್ಪರ್ಧಿಸುವಂತೆ ಹಾಗೂ ಕೋಲಾರದಿಂದ ಹಿಂದೆ ಸರಿಯುವಂತೆ ಸಿದ್ದರಾಮಯ್ಯಗೆ ರಾಹುಲ್ ಗಾಂಧಿ ಸಲಹೆ ನೀಡಿದ್ದಾರೆ ಎನ್ನಲಾಗಿತ್ತು.
ಅಷ್ಟಕ್ಕೂ ಸಿದ್ದರಾಮಯ್ಯ ಕೋಲಾರದಿಂದ ಹಿಂದೆ ಸರಿಯಲು ಕಾರಣಗಳು ಇವೆ. ಒಂದು ವೇಳೆ ಕೋಲಾರದಿಂದಲೇ ಸಿದ್ದರಾಮಯ್ಯ ಕಣಕ್ಕಿಳಿದರೆ ಅವರಿಗೆ ನಿರೀಕ್ಷಿತ ಬೆಂಬಲ ಸಿಗಲಾರದು ಎಂಬುದು ಕಾಂಗ್ರೆಸ್ ಪಕ್ಷದ ಆಂತರಿಕ ಸಮೀಕ್ಷೆಯಿಂದ ತಿಳಿದುಬಂದಿದೆ. ಜತೆಗೆ, ಕೋಲಾರದಲ್ಲಿ ಸಿದ್ದರಾಮಯ್ಯ ವಿರುದ್ಧ ದಲಿತರೂ ಇತ್ತೀಚೆಗೆ ಭಾರೀ ಅಸಮಾಧಾನ ವ್ಯಕ್ತಪಡಿಸಿದ್ದರು. ಸಿದ್ದರಾಮಯ್ಯ ದಲಿತ ವಿರೋಧಿ ಎಂಬ ಪಾಂಪ್ಲೆಟ್ಗಳನ್ನೂ ಹಂಚಿದ್ದರು. ದಲಿತ ಮುಖಂಡ ನಾರಾಯಣ ಸ್ವಾಮಿ ನೇತೃತ್ವದಲ್ಲಿ ಸಿದ್ದರಾಮಯ್ಯ ವಿರುದ್ಧ ಸಮಾವೇಶವನ್ನೇ ಇತ್ತೀಚೆಗೆ ಹಮ್ಮಿಕೊಳ್ಳಲಾಗಿತ್ತು. ಸಿದ್ದರಾಮಯ್ಯ ದಲಿತರಿಗಾಗಿ ಏನೂ ಕೆಲಸ ಮಾಡಿಲ್ಲ, ಚುನಾವಣೆಗಾಗಿ 6 ಕೋಟಿ ರೂ. ಹಣಕ್ಕೆ ಬೇಡಿಕೆ ಇಟ್ಟಿದ್ದರು ಎಂದೆಲ್ಲ ನಾರಾಯಣ ಸ್ವಾಮಿ ಆರೋಪಿಸಿದ್ದರು. ಚುನಾವಣೆ ಸಮೀಪಿಸುತ್ತಿರುವ ಹೊತ್ತಲ್ಲೇ ಇಂಥ ಬೆಳವಣಿಗೆಗಳು ಕ್ಷೇತ್ರದಲ್ಲಿ ಹೆಚ್ಚಾಗುತ್ತಿರುವುದು ಕಾಂಗ್ರೆಸ್ಗೆ ತಲೆನೋವು ಉಂಟು ಮಾಡಿತ್ತು. ಜತೆಗೆ, ಒಕ್ಕಲಿಗರ ಬೆಂಬಲವೂ ಕೋಲಾರದಲ್ಲಿ ಸಿದ್ದರಾಮಯ್ಯಗೆ ಹೆಚ್ಚಿನ ಪ್ರಮಾಣದಲ್ಲಿ ಸಿಗಲಾರದು ಎಂಬುದು ಕಾಂಗ್ರೆಸ್ ಆಂತರಿಕ ಸಮೀಕ್ಷೆಯಿಂದ ತಿಳಿದುಬಂದಿತ್ತು.