ಹಳೇ ದ್ವೇಷದಿಂದ ಮೌಲ್ವಿಗೆ ಐಸಿಸ್ ನಂಟು ಕಟ್ಟಿದ್ರಾ ಯತ್ನಾಳ್? – ಪಾಕಿಸ್ತಾನಕ್ಕೆ ಹೋಗ್ತಾರಾ ಹಿಂದೂ ಹುಲಿ?

ಹಳೇ ದ್ವೇಷದಿಂದ ಮೌಲ್ವಿಗೆ ಐಸಿಸ್ ನಂಟು ಕಟ್ಟಿದ್ರಾ ಯತ್ನಾಳ್? – ಪಾಕಿಸ್ತಾನಕ್ಕೆ ಹೋಗ್ತಾರಾ ಹಿಂದೂ ಹುಲಿ?

ಯತ್ನಾಳರ ಆರೋಪವನ್ನು ಖಡಾಖಂಡಿತವಾಗಿ ಅಲ್ಲಗಳೆದಿರುವ ತನ್ವೀರ್ ಪೀರ್, 12 ವರ್ಷಗಳ ಹಿಂದಿನ ಫೋಟೋಗಳಿವು. ನನ್ನದೇ ಆದಂತಹ ಆಫಿಶಿಯಲ್ ಫೇಸ್ಬುಕ್ ಅಕೌಂಟಿನಲ್ಲಿ ಈ ಫೋಟೋಗಳಿವೆ. ಇರಾಕ್ ದೇಶದ ಅಂತಾರಾಷ್ಟ್ರೀಯ ಪ್ರಸಿದ್ದ ಮಹಾನ್ ಸೂಫಿ ಮಹೆಬೂಬ ಎ ಸುಭಾನಿ ಗೌಸ ಎ ಆಜಮ ಅವರ ದರ್ಶನಕ್ಕೆ ಹೋದಾಗಿನ ಪೋಟೋಗಳು. ಅಲ್ಲಿನ ದರ್ಗಾದ ಪೀಠಾಧಿಪತಿ ಖಾಲೀದ ಜಿಲಾನಿ ಅವರ ಆರ್ಶೀವಚನ ಪಡೆಯುವ ಸಂದರ್ಭದಲ್ಲಿ ತೆಗೆದಂಥ ಫೋಟೋಗಳು. ಮತ್ತೊಂದು ಫೋಟೋದಲ್ಲಿ ಖಾಲೀದ ಜಿಲಾನಿಯವರ ಅಂಗರಕ್ಷಕ ನನ್ನನ್ನು ಅವರ ಪೀಟಕ್ಕೆ ಕರೆದುಕೊಂಡು ಹೋಗುವ ಸಮಯದಲ್ಲಿ ತೆಗೆದ ಫೋಟೋ ಅದಾಗಿದೆ ಎಂದು ಮುಸ್ಲಿಂ ಧರ್ಮಗುರು ಸಯ್ಯದ್ ಮೊಹಮ್ಮದ್ ತನ್ವೀರ್ ಪೀರಾ ಹಾಸ್ಮಿ ಸ್ಪಷ್ಟನೆ ನೀಡಿದ್ದಾರೆ. ಹಾಗಂತ ತನ್ವೀರ್ ಪೀರ್ ಹಾಗೂ ಯತ್ನಾಳ್ ನಡುವಿನ ವೈಮನಸ್ಸು ಇದೇ ಮೊದಲೇನಲ್ಲ. ವರ್ಷಗಳ ಹಿಂದೆಯೇ ಈ ಇಬ್ಬರ ನಡುವೆ ಹಲವು ವಿಚಾರಗಳಿಗೆ ಭಿನ್ನಾಭಿಪ್ರಾಯಗಳು ಉಂಟಾಗಿದ್ದವು.

ಇದನ್ನೂ ಓದಿ : ಅಜ್ಜಿಯ ಮೃತದೇಹದ ಮುಂದೆ ಮೌನಕ್ಕೆ ಶರಣಾದ ಮೊಮ್ಮಗ – ಪಕ್ಕದಲ್ಲೇ ಕುಳಿತು ಅಪ್ಪನಿಗೆ ಧೈರ್ಯ ತುಂಬಿದ ಯುವರಾಜ್

ಹೌದು 2018ರಲ್ಲಿ ಶಾಸಕ ಬಸನಗೌಡ ಪಾಟೀಲ್ ವಿಜಯಪುರದಲ್ಲಿ ವಿವಾದಾತ್ಮಕ ಹೇಳಿಕೆ ನೀಡಿದ್ದರು. ಬುರ್ಖಾಧಾರಿಗಳು, ಟೋಪಿ ಹಾಕಿದವರು‌ ಮತ್ತು ಗಡ್ಡದವರು ನನ್ನ ಹಿಂದೆ ಮುಂದೆ ಬರಬೇಡಿ ಎಂದು ಹೇಳಿದ್ದರು. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್​ ಆಗಿತ್ತು. ಈ ಹೇಳಿಕೆ ಬಳಿಕ ನಡೆದ ಬಕ್ರೀದ್ ಹಬ್ಬದ ವೇಳೆ ಸಾರ್ವಜನಿಕ ಕಾರ್ಯಕ್ರಮದಲ್ಲಿ ತನ್ವೀರ್ ಪೀರ್ ಯತ್ನಾಳ್​ಗೆ ತಿರುಗೇಟು ನೀಡಿದ್ದರು. ಮುಂದೆ ಬಕ್ರೀದ್ ಬರಲಿದೆ. ಆಗ ಕುರುಬಾನಿ ಕೊಡುತ್ತೇವೆ. ಆಗ ಸೈತಾನ್ ವಿರೋಧಿಸಿದರೆ ನಾವು ಸುಮ್ಮನಿರಲ್ಲ. ಒಂದು ಕುರುಬಾನಿ ಜೊತೆಗೆ ಇನ್ನೊಂದು ಕುರುಬಾನಿ ಆಗಬಾರದು. ಈಗಲೇ ಎಚ್ಚರಿಸುತ್ತಿದ್ದೇನೆ ಎಂದಿದ್ದರು. ಈ ಸಂಬಂಧ ಪ್ರಚೋದನಾಕಾರಿ ಭಾಷಣ ಮಾಡಿದ ಆರೋಪದ ಮೇಲೆ ತನ್ವೀರ್ ವಿರುದ್ಧ ಕೇಸ್ ದಾಖಲಾಗಿತ್ತು. ಈ ಹಿಂದಿನ ವೈಯಕ್ತಿಕ ದ್ವೇಷದಿಂದ ಧರ್ಮಗುರು ಪೀರಾಗೆ ಐಸಿಸ್ ನಂಟಿದೆ ಎಂದು ಆರೋಪ ಮಾಡಿದ್ದಾರೆ ಎಂಬ ಚರ್ಚೆಯೇ ಶುರುವಾಗಿದೆ.

ಇದಿಷ್ಟೇ ಅಲ್ಲದೆ ಕಳೆದ ಮೇ 6 ರಂದು ವಿಜಯಪುರದಲ್ಲಿ ರೌಡಿ ಶೀಟರ್ ಹೈದರಾಲಿ ನದಾಫ್ ಎಂಬುವನ ಹತ್ಯೆ ನಡೆದಿತ್ತು. ಆ ಹತ್ಯೆಯನ್ನು ತನ್ವೀರ್‌ ಪೀರಾ ಹಾಸ್ಮಿ ಮಾಡಿಸಿದ್ದಾರೆಂಬ ಆರೋಪ ಕೇಳಿ ಬಂದಿತ್ತು. ಹತ್ಯೆಯಾದ ಹೈದರಾಲಿ ಪತ್ನಿ ನಿಶಾತ್ ದೂರು ದಾಖಲಿಸಿದ್ದರು. 3ನೇ ಆರೋಪಿಯಾಗಿ ಎಫ್​ಐಆರ್ ನಲ್ಲಿ ತನ್ವೀರ್ ಪೀರಾ ಹೆಸರನ್ನು ಕೂಡ ಹಾಕಲಾಗಿತ್ತು. ಆದ್ರೆ ಕೊಲೆ ಹಿಂದೆ ನನ್ನ ಕೈವಾಡ ಇಲ್ಲ. ಎಲೆಕ್ಷನ್ ವಿಚಾರವಾಗಿ ಸ್ವಲ್ಪ ಮಾತುಕತೆ ನಡೆದಿತ್ತು. ಹೀಗಾಗಿ ನನ್ನ ಹೆಸರನ್ನ ಕೊಲೆ ಕೇಸ್ ನಲ್ಲಿ ಸೇರಿಸಿದ್ದಾರೆ ಎಂದು ತನ್ವೀರ್ ಪೀರ್ ಸ್ಪಷ್ಟನೆ ನೀಡಿದ್ದರು. ಇಲ್ಲಿ ಇನ್ನೊಂದು ಅಚ್ಚರಿಯ ವಿಷ್ಯ ಅಂದ್ರೆ ಧರ್ಮಗುರು ತನ್ವೀರ್ ಪೀರ್ ಕೇವಲ ಕಾಂಗ್ರೆಸ್ ನಾಯಕರ ಜೊತೆಗಷ್ಟೇ ವೇದಿಕೆ ಹಂಚಿಕೊಂಡಿಲ್ಲ. ಈ ಹಿಂದೆ ನಡೆದ ಸಮಾವೇಶವೊಂದರಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಭಾಗಿಯಾಗಿದ್ದ ಕಾರ್ಯಕ್ರಮದಲ್ಲಿ ತನ್ವೀರ್ ಪೀರ್ ಕೂಡ ಭಾಗಿಯಾಗಿದ್ದರು. ಬಿಜೆಪಿ ನಾಯಕ ನಿತಿನ್ ಗಡ್ಕರಿ ಜೊತೆಯೂ ತನ್ವೀರ್ ಪೀರ್ ಇರುವ ಫೋಟೋವನ್ನ ಕಾಂಗ್ರೆಸ್ ನಾಯಕರು ರಿಲೀಸ್ ಮಾಡಿದ್ದಾರೆ. ಇರಾಕ್‌ನಲ್ಲಿನ ಪ್ರಸಿದ್ಧ ದರ್ಗಾದ ಮುಖ್ಯಸ್ಥರ ಜೊತೆ ಮೌಲ್ವಿ ತನ್ವೀರ್ ಪೀರಾ ಇರುವ ಪೋಟೋ ಅದು. ಅದೇ ಮುಖ್ಯಸ್ಥರನ್ನು ಗಡ್ಕರಿಯವರು ಈ ಹಿಂದೆ ಭೇಟಿಯಾಗಿದ್ದಾರೆ. ಅಲ್ಲದೆ ಪೀರಾ ಅವರು ಹಿಂದೂ ಧರ್ಮದ ಪ್ರಮುಖ ಸ್ವಾಮೀಜಿಗಳ ಜೊತೆಯೂ ವೇದಿಕೆ ಹಂಚಿಕೊಂಡಿದ್ದಾರೆ. ಸ್ವಾಮೀಜಿಗಳ ಕೈಯಲ್ಲೇ ಸನ್ಮಾನ ಕೂಡ ಮಾಡಿಸಿಕೊಂಡಿದ್ದಾರೆ. ಕಾಂಗ್ರೆಸ್ ನಾಯಕರು ಇದನ್ನೇ ಮುಂದಿಟ್ಟುಕೊಂಡು ಯತ್ನಾಳ್​ಗೆ ತಿರುಗೇಟು ಕೊಡ್ತಿದ್ದಾರೆ. ಹೀಗಾಗಿ ಈ ವಿವಾದ ಮುಂದೆ ಯಾವ ತಿರುವು ಪಡೆಯುತ್ತೋ ಕಾದು ನೋಡ್ಬೇಕು.

 

Shantha Kumari