ಕೆ.ಎನ್ ರಾಜಣ್ಣಗೆ ಮತ್ತೆ ಮಂತ್ರಿಗಿರಿ ಕೊಡಿಸೋಕೆ ಸಿಎಂ ಕಸರತ್ತು – ಹೈಕಮಾಂಡ್ ಜೊತೆ ಮಾತುಕತೆಗೆ ಮುಂದಾದ್ರಾ ಸಿದ್ದರಾಮಯ್ಯ?

ಸಿಎಂ ಕುರ್ಚಿ ವಿಚಾರವಾಗಿ ರಾಜ್ಯ ಕಾಂಗ್ರೆಸ್ ನಲ್ಲಿ ಎರಡು ಬಣಗಳು ಇರೋದು ಗೊತ್ತಿರೋ ವಿಚಾರವೇ. ಒಂದು ಬಣ ಸಿದ್ದರಾಮಯ್ಯರೇ ಐದು ವರ್ಷ ಸಿಎಂ ಅಂದ್ರೆ ಇನ್ನೊಂದು ಬಣ ಡಿ.ಕೆ ಶಿವಕುಮಾರ್ ಗೆ ಕುರ್ಚಿ ಬಿಟ್ಟುಕೊಡ್ಬೇಕು ಅವರೇ ಮುಂದಿನ ಸಿಎಂ ಎಂದು ಹೇಳಿಕೆಗಳನ್ನ ಕೊಡ್ತಾರೆ. ಆದರೆ ಸಿದ್ದರಾಮಯ್ಯ ಬೆನ್ನಿಗೆ ನಿಂತಿದ್ದ ಕೆಎನ್ ರಾಜಣ್ಣರ ಮಂತ್ರಿಗಿರಿಯೇ ಹೋಗಿತ್ತು. ಇದೀಗ ರಾಜಣ್ಣಗೆ ಮತ್ತೆ ಸಚಿವ ಸ್ಥಾನ ಕೊಡಿಸೋಕೆ ಸಿದ್ದರಾಮಯ್ಯ ತೆರೆ ಮರೆಯ ಕಸರತ್ತು ಆರಂಭಿಸಿದ್ದಾರೆ.
ಇದನ್ನೂ ಓದಿ : ಜೈಲಿನಲ್ಲಿ ನಟ ದರ್ಶನ್ಗೆ ನರಕ ದರ್ಶನ – ಕೋರ್ಟ್ ಆದೇಶಿಸಿದ್ರೂ ದಾಸನಿಗೆ ಸಿಗ್ತಿಲ್ಲ ಮೂಲ ಸೌರ್ಕಯ!
ಮತಗಳ್ಳತನದ ಮೂಲಕ ಕೇಂದ್ರ ಸರ್ಕಾರ ಅಸ್ತಿತ್ವಕ್ಕೆ ಬಂದಿದೆ ಎಂದು ರಾಹುಲ್ ಗಾಂಧಿ ನಾಯಕತ್ವದಲ್ಲಿ ಕಾಂಗ್ರೆಸ್ ನಾಯಕರು ದೊಡ್ಡ ಮಟ್ಟದಲ್ಲಿ ಪ್ರತಿಭಟನೆ ಮಾಡಿದ್ರು. ಆದ್ರೆ ಈ ವಿಚಾರವಾಗಿ ಪಕ್ಷದ ನಿಲುವಿಗೆ ಭಿನ್ನವಾದ ಹೇಳಿಕೆಯನ್ನು ನೀಡುವ ಮೂಲಕ ಕೆಎನ್ ರಾಜಣ್ಣ ಹೈಕಮಾಂಡ್ ಕೆಂಗಣ್ಣಿಗೆ ಗುರಿಯಾಗಿದ್ರು. ಸಂಪುಟದಿಂದ ವಜಾಗೊಂಡಿದ್ರು. ಇದೀಗ ರಾಜಣ್ಣ ಪರವಾಗಿ ಸಿದ್ದರಾಮಯ್ಯ ತೆರೆಮರೆಯಲ್ಲಿ ಬೆಂಬಲವಾಗಿ ನಿಂತಿದ್ದಾರೆ. ಆಪ್ತ ಬಳಗದ ರಾಜಣ್ಣ ಅವರನ್ನು ಸಂಪುಟದಿಂದ ವಜಾ ಮಾಡಿದಾಗಲೂ ಸಿದ್ದರಾಮಯ್ಯ ಯಾವುದೇ ಹೇಳಿಕೆಗಳನ್ನು ನೀಡದೆ ಇರುವುದು ಸಾಕಷ್ಟು ಚರ್ಚೆಗೆ ಗ್ರಾಸವಾಗಿತ್ತು. ಇದೀಗ ಆಂತರಿಕವಾಗಿ ವರಿಷ್ಠರ ಮನವೋಲಿಕೆಗೆ ಪ್ಲ್ಯಾನ್ ಮಾಡಲಾಗುತ್ತಿದೆ. ರಾಜಣ್ಣ ಪರ ಹೈಕಮಾಂಡ್ ಬಳಿ ಮಾತನಾಡಲು ಸಿಎಂ ಸಿದ್ದರಾಮಯ್ಯ ಅವರು ಮುಂದಾಗಿರುವ ಕುರಿತಾಗಿ ಕಾಂಗ್ರೆಸ್ ಪಾಳಯದಲ್ಲಿ ಚರ್ಚೆಯಾಗುತ್ತಿದೆ. ಸಂಪುಟಕ್ಕೆ ತೆಗೆದುಕೊಳ್ಳುವಂತೆ ಹೈಕಮಾಂಡ್ ನಾಯಕರ ಮನವೊಲಿಕೆಗೆ ಸಿಎಂ ತಯಾರಿ ನಡೆಸುತ್ತಿದ್ದಾರೆ. ಶೀಘ್ರದಲ್ಲೇ ದೆಹಲಿಗೆ ತೆರಳುವ ಸಿಎಂ ಸಿದ್ದರಾಮಯ್ಯ ಅವರು, ವರಿಷ್ಠರನ್ನು ಭೇಟಿ ಮಾಡಿ ವಾಸ್ತವವನ್ನು ವಿವರಿಸುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ.
ಮತಗಳ್ಳತನದ ವಿರುದ್ಧ ರಾಹುಲ್ ಹೋರಾಟ ನಡೆಸುತ್ತಿದ್ದ ವೇಳೆ ಗೊಂದಲ ಹೇಳಿಕೆ ನೀಡಿದ ಕಾರಣಕ್ಕೆ ಸಂಪುಟದಿಂದ ರಾಜಣ್ಣ ಅವರನ್ನು ವಜಾ ಮಾಡಲಾಗಿತ್ತು. ಕ್ಷಮೆಯಾಚನೆಗೂ ಅವಕಾಶ ನೀಡದೆ ಸಂಪುಟದಿಂದ ಏಕಾಏಕಿ ವಜಾಗೊಳಿಸುವಂತೆ ಸಿಎಂ ಸಿದ್ದರಾಮಯ್ಯ ಅವರಿಗೆ ಹೈಕಮಾಂಡ್ ಸೂಚಿಸಿತ್ತು. ಪರಿಣಾಮ ಅಧಿವೇಶನ ನಡೆಯುತ್ತಿದ್ದ ಸಂದರ್ಭದಲ್ಲಿ ಸಂಪುಟದಿಂದ ರಾಜಣ್ಣ ಅವರನ್ನು ವಜಾ ಮಾಡಲಾಗಿತ್ತು. ರಾಜಣ್ಣ ಅವರನ್ನು ಸಂಪುಟದಿಂದ ವಜಾ ಮಾಡಿದ್ದು ಸಿದ್ದರಾಮಯ್ಯ ಅವರಿಗೆ ಆಗಿರುವ ಹಿನ್ನಡೆ ಎಂದೇ ವಿಶ್ಲೇಷಣೆ ಮಾಡಲಾಗಿತ್ತು. ಸಿದ್ದರಾಮಯ್ಯ ಪರವಾಗಿ ಗಟ್ಟಿ ಧ್ವನಿಯಲ್ಲಿ ರಾಜಣ್ಣ ಸದಾ ಬ್ಯಾಟಿಂಗ್ ಮಾಡುತ್ತಿದ್ದರು. ಹೀಗಿರುವಾಗ ಏಕಾಏಕಿ ಸಂಪುಟದಿಂದ ಅವರನ್ನು ವಜಾ ಮಾಡಿದಾಗಲೂ ಸಿದ್ದರಾಮಯ್ಯ ಅನಿವಾರ್ಯ ಮೌನಕ್ಕೆ ಶರಣಾಗಬೇಕಾಗಿ ಬಂದಿತ್ತು. ಆಪ್ತ ಸಚಿವರನ್ನು ಉಳಿಸಿಕೊಳ್ಳಲು ಸಾಧ್ಯವಾಗಿಲ್ಲ ಎಂಬ ಮಾತುಗಳು ಕೇಳಿಬರುತ್ತಿದ್ದವು.
ಸಚಿವ ಸ್ಥಾನದಿಂದ ವಜಾಗೊಂಡ ನಂತರ ರಾಹುಲ್ ಗಾಂಧಿ, ವೇಣುಗೋಪಾಲ್ ಭೇಟಿಗೆ ಸಿದ್ಧತೆ ರಾಜಣ್ಣ ನಡೆಸಿದ್ದರು. ದೆಹಲಿ ಯಾತ್ರೆ ಸಜ್ಜಾಗುತ್ತಿದ್ದಂತೆ ರಾಜಣ್ಣಗೆ ಕಿವಿಮಾತು ಹೇಳಿರುವ ಸಿಎಂ, ಸದ್ಯ ದೆಹಲಿಗೆ ತೆರಳುವುದು ಬೇಡ, ನಾನು ಹೈಕಮಾಂಡ್ ಜೊತೆ ಚರ್ಚಿಸುತ್ತೇನೆಂಬ ಭರವಸೆಯನ್ನು ನೀಡಿದ್ದಾರೆ ಎನ್ನಲಾಗಿದೆ. ಪರಿಶಿಷ್ಟ ಸಮುದಾಯವನ್ನ ಗಮನದಲ್ಲಿಟ್ಟುಕೊಂಡು ಮತ್ತೆ ಅವಕಾಶ ನೀಡುವಂತೆ ಮನವಿ ಮಾಡುವುದಾಗಿ ಹೇಳಿರುವ ಸಿಎಂ, ಮುಂದಿನ ದಿನಗಳಲ್ಲಿ ದೆಹಲಿ ಭೇಟಿ ವೇಳೆ ರಾಜಣ್ಣ ಪರ ವಕಾಲತು ವಹಿಸುವ ಸಾಧ್ಯತೆ ಇದೆ. ಈಗಾಗಲೇ ಹಿಂದುಳಿದ ಹಾಗೂ ದಲಿತ ಸಮುದಾಯದ ಸ್ವಾಮೀಜಿಗಳಿಂದ ರಾಜಣ್ಣ ಪರ ಬ್ಯಾಟಿಂಗ್ ಶುರುವಾಗಿದೆ. ಎಐಸಿಸಿ ನಾಯಕರನ್ನ ಭೇಟಿ ಮಾಡಿ ಸಂಪುಟಕ್ಕೆ ತೆಗೆದುಕೊಳ್ಳುವಂತೆ ಒತ್ತಾಯಿಸಲು ಅಹಿಂದ ಸ್ವಾಮೀಜಿಗಳು ತೀರ್ಮಾನಿಸಿದ್ದಾರೆ.

ನೋಡಿರಿ

