ಹಿಜಾಬ್ ಬ್ಯಾನ್ ಆದೇಶ ವಾಪಸ್ ಪಡೆಯುತ್ತೇವೆಂದ ಸಿದ್ದರಾಮಯ್ಯ – ಸರ್ಕಾರದ ಮುಂದಿರುವ ಸವಾಲುಗಳೆಷ್ಟು..? ಪರಿಹಾರ ಹೇಗೆ..?

ಹಿಜಾಬ್ ಬ್ಯಾನ್ ಆದೇಶ ವಾಪಸ್ ಪಡೆಯುತ್ತೇವೆಂದ ಸಿದ್ದರಾಮಯ್ಯ – ಸರ್ಕಾರದ ಮುಂದಿರುವ ಸವಾಲುಗಳೆಷ್ಟು..? ಪರಿಹಾರ ಹೇಗೆ..?

ಕಳೆದ ವರ್ಷ ಕರ್ನಾಟಕದಲ್ಲಿ ಹೊತ್ತಿದ್ದ ಹಿಜಾಬ್ ಕಿಡಿ ದೇಶಾದ್ಯಂತ ಕಿಚ್ಚು ಹಚ್ಚಿತ್ತು. ಆಗ ಪ್ರತಿಪಕ್ಷ ನಾಯಕರಾಗಿದ್ದ ಸಿದ್ದರಾಮಯ್ಯ ಹಿಜಾಬ್ ಧರಿಸೋದು ಅವರ ಹಕ್ಕು ಅಂತಾ ಮಾತನಾಡಿದ್ರೆ, ಇತ್ತ ಕೇಸರಿ ಕಲಿಗಳು ಹಿಜಾಬ್ ವಿರುದ್ಧ ಹೋರಾಟಕ್ಕಿಳಿದಿದ್ರು. ಈ ಹಿಜಾಬ್ ಜಟಾಪಟಿ ಹೈಕೋರ್ಟ್​ ಮತ್ತು ಸುಪ್ರೀಂಕೋರ್ಟ್​ಗೆ ತಲುಪಿತ್ತು. ಎಲೆಕ್ಷನ್ ಮುಗೀತು, ಕಾಂಗ್ರೆಸ್ ಅಧಿಕಾರಕ್ಕೆ ಬಂತು..ಈಗ ಲೋಕಸಭೆ ಚುನಾವಣೆಯತ್ತ ಫೋಕಸ್ ಶಿಫ್ಟ್ ಆಗ್ತಾ ಇದ್ದಂತೆ, ಮತ್ತೊಮ್ಮೆ ಹಿಜಾಬ್ ಭೂತ ಭುಗಿಲೆದ್ದಿದೆ. ಬಿಜೆಪಿ ಸರ್ಕಾರದ ಅವಧಿಯಲ್ಲಾದ ಹಿಜಾಬ್ ಬ್ಯಾನ್​ ರೂಲ್ಸ್​ನ್ನ ಲಿಫ್ಟ್ ಮಾಡೋಕೆ ಸಿದ್ದರಾಮಯ್ಯ ನಿರ್ಧರಿಸಿದ್ದಾರೆ. ಹಿಜಾಬ್ ನಿಷೇಧ ನಿಯಮವನ್ನ ವಾಪಸ್ ತೆಗೆದುಕೊಳ್ತಿದ್ದಾರೆ. ಸಿದ್ದರಾಮಯ್ಯರ ಈ ನಿರ್ಧಾರದಿಂದ ಧಾರ್ಮಿಕವಾಗಿ ಮತ್ತು ರಾಜಕೀಯವಾಗಿ ರಾಜ್ಯದಲ್ಲಿ ಮತ್ತೊಮ್ಮೆ ಬೆಂಕಿ ಹೊತ್ತಿಕೊಳ್ಳೋದಂತೂ ಗ್ಯಾರಂಟಿ. ಸಿದ್ದರಾಮಯ್ಯರ ಈ ನಿರ್ಧಾರದ ಹಿಂದೆ ಹಲವು ಪ್ರಶ್ನೆಗಳು ಹುಟ್ಟಿಕೊಳ್ಳುತ್ತೆ.

ಪ್ರಶ್ನೆ ನಂ.1: ಸಂಘರ್ಷ ತಡೆಯೋಕೆ ಸಿದ್ದರಾಮಯ್ಯ ಏನ್ಮಾಡ್ತಾರೆ?

ರಾಜ್ಯದಲ್ಲಿ ಹಿಜಾಬ್ ಸಂಘರ್ಷ ನಡೆಯೋದಂತೂ ಗ್ಯಾರಂಟಿ. ಯಾವಾಗ ಶುರುವಾಗುತ್ತೆ ಅನ್ನೋದಷ್ಟೇ ಈಗಿರುವ ಪ್ರಶ್ನೆ. ಸಿದ್ದರಾಮಯ್ಯರೇನೋ ಬಿಜೆಪಿ ಸರ್ಕಾರದ ಹಿಜಾಬ್ ನಿಷೇಧ ನಿಯಮವನ್ನ ವಾಪಸ್ ಪಡೀತಿದ್ದಾರೆ. ಮುಸ್ಲಿಂ ವಿದ್ಯಾರ್ಥಿನಿಯರು ಶಾಲೆ, ಕಾಲೇಜಿಗೆ ಹಿಜಾಬ್ ಧರಿಸಿಕೊಂಡೇ ತೆರಳಲು ಅವಕಾಶ ನೀಡ್ತಾ ಇದ್ದಾರೆ. ಹಿಜಾಬ್ ಹಾಕ್ಕೊಂಡು ಎಲ್ಲಿಗೆ ಬೇಕಾದ್ರೂ ಹೋಗಬಹುದು ಎಂದಿದ್ದಾರೆ. ಸರಿ ಬಿಡಿ.. ಆದ್ರೆ ಮುಂದಿನ ದಿನಗಳಲ್ಲಿ ಅದೇ ಶಾಲಾ-ಕಾಲೇಜುಗಳಲ್ಲಿ ಶುರುವಾಗುವ ಹಿಜಾಬ್ ಗಲಾಟೆಯನ್ನ ತಡೆಯೋಕೆ ಸಿದ್ದರಾಮಯ್ಯ ಸಿದ್ಧರಿದ್ದಾರಾ? ಮುಸ್ಲಿಂ ವಿದ್ಯಾರ್ಥಿನಿಯರು ಹಿಜಾಬ್ ಧರಿಸಿಕೊಂಡು ಕ್ಲಾಸ್​​ನಲ್ಲಿ ಹೋಗಿ ಕುಳಿತ್ರೆ ಹಿಂದೂ ವಿದ್ಯಾರ್ಥಿಗಳೇನು ಸುಮ್ಮನಿರಬಹುದಾ? ಅವರು ಕೂಡ ಅಂದು ಮಾಡಿದಂತೆ ಕೇಸರಿ ಶಾಲನ್ನ ಹಾಕ್ಕೊಂಡೇ ಕ್ಲಾಸ್​ಗೆ ಹೋಗಬಹುದು. ಹೇಳಿಕೇಳಿ ಹಿಜಾಬ್ ವಿವಾದ ಅನ್ನೋದು ಕೇವಲ ಧಾರ್ಮಿಕ ವಿಚಾರವಾಗಿಯಷ್ಟೇ ಉಳಿದಿಲ್ಲ. ಇದ್ರ ಹಿಂದೆ ದೊಡ್ಡ ಮಟ್ಟದ ರಾಜಕೀಯ ಕೂಡ ಇದೆ. ಹೀಗಾಗಿ ಸಿದ್ದರಾಮಯ್ಯರ ನಿರ್ಧಾರದಿಂದಾಗಿ ಈಗಾಗ್ಲೇ ಬಿಜೆಪಿ ನಾಯಕರು ಕೌಂಟರ್​ ಸ್ಟ್ರ್ಯಾಟಜಿಗೆ ಪ್ಲ್ಯಾನ್ ಮಾಡೋದಂತೂ ನಿಶ್ಚಿತ. ಮುಸ್ಲಿಂ ವಿದ್ಯಾರ್ಥಿನಿಯರು ಹಿಜಾಬ್ ಹಾಕ್ಕೊಂಡು ಶಾಲೆ, ಕಾಲೇಜಿಗೆ ಬರೋವಾಗ, ಹಿಂದೂ ವಿದ್ಯಾರ್ಥಿಗಳು ಕೇಸರಿ ಶಾಲು ಧರಿಸಿ ತರಗತಿಗೆ ಬರಬಹುದು. ಆಗ ನಡೆಯೋ ಸಂಘರ್ಷವನ್ನ ಸಿದ್ದರಾಮಯ್ಯ ಸರ್ಕಾರ ಯಾವ ರೀತಿ ಹತ್ತಿಕ್ಕುತ್ತೆ. ಶಾಲಾ, ಕಾಲೇಜುಗಳಲ್ಲೂ ಧರ್ಮಯುದ್ಧ ಜೋರಾದ್ರೆ ಏನ್ಮಾಡ್ತಾರೆ? ಯಾರ ವಿರುದ್ಧ ಅಂತಾ ಕ್ರಮಕೈಗೊಳ್ತಾರೆ. ಹಿಜಾಬ್ ಹಾಕ್ಕೊಂಡು ಯಾರು ಎಲ್ಲಿಗೆ ಬೇಕಾದ್ರೂ ಹೋಗಬಹುದು ಅಂದಿರೋ ಸಿದ್ದರಾಮಯ್ಯ ನಾಳೆ ಕೇಸರಿ ಶಾಲು ಹಾಕ್ಕೊಂಡು ಯಾರು ಎಲ್ಲಿಗೆ ಬೇಕಾದ್ರೂ ಹೋಗಬಹುದು ಅಂತಾರಾ? ಹೀಗಾಗಿ ಸಂಘರ್ಷವನ್ನ ತಡೆಯೋಕೆ ಸಿದ್ದರಾಮಯ್ಯಗೆ ಎದುರಾಗಲಿರುವ ಮೊದಲ ಸವಾಲಾಗಲಿದೆ.

ಪ್ರಶ್ನೆ ನಂ.2: ಸಮವಸ್ತ್ರ ನೀತಿ ಬದಲಿಸಿದ್ರೆ ಕೋರ್ಟ್ ಕೇಸ್ ಮುಗಿಯುತ್ತಾ?

ಸದ್ಯ ಕರ್ನಾಟಕ ಸರ್ಕಾರದ ಶಾಲಾ ಸಮವಸ್ತ್ರ ನೀತಿ ಪ್ರಕಾರ ಹಿಜಾಬ್ ಧರಿಸಿ ಕ್ಲಾಸ್​ನಲ್ಲಿ ಕುಳಿತುಕೊಳ್ಳುವಂತಿಲ್ಲ. ಇದು ಈಗಿರುವ ರೂಲ್ಸ್. ಬಿಜೆಪಿ ಸರ್ಕಾರ ಮಾಡಿದ್ದ ಈ ನೀತಿ ವಿರುದ್ಧ ಕೋರ್ಟ್​ನಲ್ಲೂ ಹೋರಾಟ ನಡೆದಿತ್ತು. ಕರ್ನಾಟಕ ಹೈಕೋರ್ಟ್​ ಸರ್ಕಾರದ ಆದೇಶವನ್ನೇ ಎತ್ತಿ ಹಿಡಿದಿತ್ತು. ರಾಜ್ಯ ಸರ್ಕಾರದ ಸಮವಸ್ತ್ರ ನೀತಿ ಸರಿ ಇದೆ. ಸಮವಸ್ತ್ರ ನೀತಿ ರೂಪಿಸುವ ಅಧಿಕಾರ ಸರ್ಕಾರಕ್ಕಿದೆ. ಅದರ ಪ್ರಕಾರವೇ ನಡೀಬೇಕು ಅಂತಾ ಹೈಕೋರ್ಟ್ ಆದೇಶ ನೀಡಿತ್ತು. ಹಿಜಾಬ್ ನಿಷೇಧಕ್ಕೆ ಅವಕಾಶ ಸಿಕ್ಕಿತ್ತು. ಆದ್ರೆ ಹೈಕೋರ್ಟ್ ತೀರ್ಪಿನ ವಿರುದ್ಧ ಸುಪ್ರೀಂಕೋರ್ಟ್​ ಮೇಲ್ಮನವಿ ಸಲ್ಲಿಸಲಾಗಿದೆ. ಕೇಸ್​ ಇನ್ನೂ ಕೋರ್ಟ್ ಕಟಕಟೆಯಲ್ಲೇ ಇದೆ. ಆದ್ರೆ ಹೈಕೋರ್ಟ್ ಕೊಟ್ಟ ತೀರ್ಪು ರಾಜ್ಯದಲ್ಲಿ ಚಾಲ್ತಿಯಲ್ಲಿದೆ. ಹೀಗಾಗಿ ಈಗ ಸಿದ್ದರಾಮಯ್ಯ ಸರ್ಕಾರ ಹಿಜಾಬ್​​ ನಿಷೇಧ ವಾಪಸ್ ಪಡೆದು ಸಮವಸ್ತ್ರ ನೀತಿಯಲ್ಲಿ ತಿದ್ದುಪಡಿ ತಂದ್ರೆ ಬಿಜೆಪಿಯ ಮಂದಿ ಕೋರ್ಟ್ ಮೆಟ್ಟಿಲೇರಿದ್ರೂ ಏರಬಹುದು. ಆದ್ರೆ ಹೈಕೋರ್ಟ್ ಮಾತ್ರ ಸರ್ಕಾರದ ತೀರ್ಮಾನವನ್ನೇ ಮಾನ್ಯ ಮಾಡಬಹುದು. ಯಾಕಂದ್ರೆ ಸಮವಸ್ತ್ರ ನೀತಿ ರೂಪಿಸೋ ಹಕ್ಕು ಸರ್ಕಾರಕ್ಕೆ ಇದೆ ಅಂತಾ ಈ ಹಿಂದೆ ಆದೇಶ ನೀಡಿದ ಮೇಲೆ ಈಗ ಹಜಾಬ್​ಗೆ ಅವಕಾಶ ಕೊಟ್ಟು ತಿದ್ದುಪಡಿ ತಂದಾಗಲೂ ಸರ್ಕಾರದ ನಿರ್ಧಾರವನ್ನ ಹೈಕೋರ್ಟ್ ಒಪ್ಪಲೇಬೇಕಾಗುತ್ತೆ. ಹೀಗಾಗಿ ಕೋರ್ಟ್​ ಕೇಸ್​ ಇಲ್ಲಿಗೇ ಮುಗಿಯುತ್ತಾ ಅನ್ನೋದು ಈಗಿರುವ ಮತ್ತೊಂದು ಪ್ರಶ್ನೆ.

ಪ್ರಶ್ನೆ ನಂ.3: ಪದೇ ಪದೆ ನೀತಿ ಬದಲಾವಣೆ ವಿರುದ್ಧ ಹೋರಾಟವಾಗುತ್ತಾ?

ಇದು ನಿಜಕ್ಕೂ ಅತ್ಯಂತ ಸೂಕ್ಷ್ಮ ಸಂಗತಿ.  ಸಿದ್ದರಾಮಯ್ಯ ಸರ್ಕಾರ ಈಗ ಸಮವಸ್ತ್ರ ನೀತಿ ಬದಲಾಯಿಸಿದ್ರೂ ಕೂಡ ಕೋರ್ಟ್​​ನಲ್ಲಿ ಅದನ್ನ ಚಾಲೆಂಜ್ ಮಾಡಬಹುದು. ಆಗಲೇ ಹೇಳಿದ ಹಾಗೆ ಕಾಂಗ್ರೆಸ್ ಸರ್ಕಾರದ ಆದೇಶವನ್ನ ಕೂಡ ಕೋರ್ಟ್ ಎತ್ತಿ ಹಿಡಿಯಬಹುದು. ಆದ್ರೆ ಈ ರೀತಿ ಪದೇ ಪದೆ ನೀತಿ ಬದಲಾವಣೆ ಮಾಡಿ ಗೊಂದಲ ಸೃಷ್ಟಿಸೋದು ಎಷ್ಟು ಸರಿ? ಬಿಜೆಪಿ ಸರ್ಕಾರವಿದ್ದಾಗ ಹಿಜಾಬ್ ಬ್ಯಾನ್.. ಕಾಂಗ್ರೆಸ್​ ಸರ್ಕಾರದಿಂದ ಹಿಜಾಬ್​ಗೆ ಪರ್ಮಿಷನ್..ನೆಕ್ಟ್ಸ್ ಮತ್ತೆ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ್ರೆ ಮತ್ತೆ ಪುನ: ಹಿಜಾಬ್ ಬ್ಯಾನ್ ಮಾಡಿದ್ರೆ ಏನು ಕಥೆ? ಒಂದೊಂದು ಸರ್ಕಾರ ಬಂದಾಗ ಒಂದೊಂದು ಸಮವಸ್ತ್ರ ನೀತಿ ಮಾಡಿ, ಪದೇ ಪದೆ ಬದಲಾಯಿಸ್ತಾ ಇರೋದು ಎಷ್ಟು ಸರಿ ಅಂತಾ ಕೋರ್ಟ್​​ ಮೆಟ್ಟಿಲೇರುವ ಸಾಧ್ಯತೆ ಕೂಡ ಇದೆ. ಈ ವಿಚಾರವನ್ನ ಕೂಡ ಗಂಭೀರವಾಗಿ ಪರಿಗಣಿಸಿ ಆಗ ಕೋರ್ಟ್ ಕೂಡ ಹೊಸ ಆದೇಶ ನೀಡಬಹುದು. ಆಗ ಏನ್ಮಾಡ್ತಾರೆ ಅನ್ನೋದು ಇಲ್ಲಿರೋ ಇನ್ನೊಂದು ಪ್ರಶ್ನೆ.

ಪ್ರಶ್ನೆ ನಂ.4: ಮುಸ್ಲಿಮರ ಓಲೈಕೆಗೆ ಹಿಜಾಬ್ ಅಸ್ತ್ರ?

ಕಳೆದ ವಿಧಾನಸಭೆ ಚುನಾವಣೆಯಲ್ಲಿ ಶೇಕಡಾ 90ರಷ್ಟು ಮುಸ್ಲಿಮರ ಮತ ಕಾಂಗ್ರೆಸ್​ಗೆ ಬಂದಿತ್ತು. ಮುಸ್ಲಿಂ ವೋಟ್ ಧ್ರುವೀಕರಣದಿಂದಾಗಿ ಕಾಂಗ್ರೆಸ್​​ಗೆ ದೊಡ್ಡ ಮಟ್ಟದಲ್ಲಿ ಗೆಲುವು ಸಿಕ್ಕಿತ್ತು ಅನ್ನೋದ್ರಲ್ಲಿ ಎರಡು ಮಾತಿಲ್ಲ. ಇದೀಗ ಲೋಕಸಭೆ ಚುನಾವಣೆ ಹತ್ತಿರವಾಗಿದೆ. ಹೀಗಾಗಿ ಲೋಕಸಭೆಯಲ್ಲೂ ರಾಜ್ಯದ ಮುಸ್ಲಿಮರ ಮತವನ್ನ ಮತ್ತೆ ಬುಟ್ಟಿಗೆ ಹಾಕಿಕೊಳ್ಳೋಕೆ ಸಿದ್ದರಾಮಯ್ಯ ಹಿಜಾಬ್ ಅಸ್ತ್ರ ಪ್ರಯೋಗಿಸಿದ್ರಾ ಅನ್ನೋ ಪ್ರಶ್ನೆ ಸಹಜವಾಗಿಯೇ ಕಾಡುತ್ತೆ. ಹಿಜಾಬ್ ಬ್ಯಾನ್ ವಾಪಸ್ ಪಡೆಯೋ ಮೂಲಕ ಮತ್ತೊಮ್ಮೆ ಮುಸ್ಲಿಮರ ಮತ ನೇರವಾಗಿ ಕಾಂಗ್ರೆಸ್​ಗೆ ಬರುವಂತೆ ಮಾಡೋ ಲೆಕ್ಕಾಚಾರ ಇದ್ರೂ ಇರಬಹುದು. ಇನ್ನು ಹೈಕೋರ್ಟ್ ತನ್ನ ಆದೇಶದಲ್ಲಿ ಇನ್ನೊಂದು ಪ್ರಮುಖ ಅಂಶವನ್ನ ಕೂಡ ಉಲ್ಲೇಖಿಸಿತ್ತು. ಹಿಜಾಬ್ ಮುಸ್ಲಿಮರ ಅವಿಭಾಜ್ಯ ಅಂಗ ಅಲ್ಲ. ಹೀಜಾಬ್ ಧರಿಸಲೇಬೇಕು ಅನ್ನೋ ನಿಯಮ ಇಲ್ಲ ಅನ್ನೋದಾಗಿ. ಆದ್ರೂ ಸಿದ್ದರಾಮಯ್ಯ ಈಗ ಹಿಜಾಬ್ ನಿಷೇಧ ವಾಪಸ್ ಮಾಡಿ ಮುಸ್ಲಿಮರ ಕಣ್ಣೊರೆಸುವ ತಂತ್ರ ಮಾಡ್ತಿದ್ದಾರಾ ಅನ್ನೋ ಪ್ರಶ್ನೆಯನ್ನ ಕೇಳಲೇಬೇಕಾಗುತ್ತೆ.

ಪ್ರಶ್ನೆ ನಂ.5: ಸಿದ್ದರಾಮಯ್ಯ ಅಸ್ತ್ರ ಬಿಜೆಪಿಗೆ ಬ್ರಹ್ಮಾಸ್ತ್ರವಾಗುತ್ತಾ?

ಹಿಜಾಬ್ ವಿಚಾರದಲ್ಲಿ ರಾಜ್ಯ ರಾಜಕೀಯದಲ್ಲಿ ಅಸಲಿ ಆಟ ಶುರುವಾಗೋದೆ ಈಗ. ಈ ಹಿಜಾಬ್ ಅನ್ನೋ ಚೆಸ್​ ಗೇಮ್​​ನಲ್ಲಿ, ಬ್ಯಾನ್ ವಾಪಸ್ ಪಡೆಯೋ ಮೂಲಕ ಮತ್ತೊಮ್ಮೆ ಮುಸ್ಲಿಮರ ಮತವನ್ನ ಸೆಳೆಯೋ ಲೆಕ್ಕಾಚಾರ ಸಿದ್ದರಾಮಯ್ಯಗೆ ಇದ್ರೂ ಕೂಡ, ಇತ್ತ ಬಿಜೆಪಿಗೂ ತನ್ನ ಕಾಲಾಳನ್ನ ಮೂವ್ ಮಾಡೋಕೆ ಸಿದ್ದರಾಮಯ್ಯ ಅವಕಾಶ ಮಾಡಿಕೊಟ್ಟಂತಾಗಿದೆ. ಬಿಜೆಪಿಯದ್ದಂತೂ ಹಿಂದುತ್ವ ಸೆಂಟ್ರಿಕ್ ಪಾಲಿಟಿಕ್ಸ್. ಹಿಂದುತ್ವವೇ ಬಿಜೆಪಿಯ ಪ್ರಮುಖ ಬಂಡವಾಳ. ಈಗ ರಾಜ್ಯದಲ್ಲಿರೋ ಕೇಸರಿ ಕಲಿಗಳಿಗಳಿಗೂ ಒಂಥರಾ ಲಡ್ಡು ಬಂದು ಬಾಯಿಗೆ ಬಿದ್ದಂತೆ ಆಗಿರಬಹುದು. ಹೊರಗಡೆ ಬಿಜೆಪಿ ನಾಯಕರು ಹಿಜಾಬ್ ಬ್ಯಾನ್ ವಾಪಸ್ ನಿರ್ಧಾರವನ್ನ ಖಂಡಿಸ್ತಿದ್ರೂ ಕೂಡ ಲೋಕಸಭೆ ಚುನಾವಣೆಯಲ್ಲಿ ಇದನ್ನೇ ದೊಡ್ಡ ಮ್ಯಾಟರ್ ಮಾಡೋಕೆ ಬಿಜೆಪಿಗೆ ಅಸ್ತ್ರ ಸಿಕ್ಕಂತಾಗಿರೋದು ಕೂಡ ಸುಳ್ಳಲ್ಲ. ಮೊದಲೇ ಬಿಜೆಪಿ ನಾಯಕರು ಸಿದ್ದರಾಮಯ್ಯರನ್ನ ಹಿಂದೂ ವಿರೋಧಿ ಅಂತಾ ಬಿಂಬಿಸ್ತಾನೆ ಇದ್ದಾರೆ. ಈಗ ಹಿಜಾಬ್ ವಿಚಾರದಲ್ಲಿ ಸಿದ್ದರಾಮಯ್ಯ ಕೈಗೊಂಡ ನಿರ್ಧಾರದಿಂದಾಗಿ ಹಿಂದೂ ವಿರೋಧಿ ಅನ್ನೋ ನೇಮ್​​ಪ್ಲೇಟ್​ನ್ನ ಇನ್ನಷ್ಟು ಬಲಗೊಳಿಸೋಕೆ ಬಿಜೆಪಿಗರು ಯತ್ನಿಸಬಹುದು. ಮೌಲ್ವಿಗಳಿಗೆ 10 ಸಾವಿರ ರೂಪಾಯಿ ಘೋಷಣೆ ಮಾಡಿರೋದು, ಈಗ ಹಿಜಾಬ್ ಬ್ಯಾನ್ ನಿಷೇಧ ಮಾಡಿರೋದು ಇವೆಲ್ಲವನ್ನೂ ಮುಂದಿಟ್ಟುಕೊಂಡು ಸಿದ್ದರಾಮಯ್ಯ ಮುಸ್ಲಿಂ ಓಲೈಕೆ ರಾಜಕಾರಣ ಮಾಡ್ತಿದ್ದಾರೆ. ಹಿಂದೂಗಳಿಗಿಂತ ಹೆಚ್ಚಾಗಿ ಮುಸ್ಲಿಮರಿಗೆ ಅನುಕೂಲವಾಗುವಂಥಾ ನಿರ್ಧಾರಗಳನ್ನೇ ಕೈಗೊಳ್ತಾ ಇದ್ದಾರೆ ಅಂತಾ ಪ್ರಚಾರ ಮಾಡಬಹುದು. ಈ ಮೂಲಕ ಹಿಂದೂಗಳ ವೋಟ್​​ಬ್ಯಾಂಕ್​​ ಗಟ್ಟಿಗೊಳಿಸೋಕೆ ಬಿಜೆಪಿ ಪ್ರಯತ್ನಿಸಬಹುದು.

Shantha Kumari