ಆ. 3 ಅಲ್ಲ, ಆ. 12 ಅಲ್ಲ.. ನನ್ನ ಹುಟ್ಟುಹಬ್ಬ ನನಗೇ ಗೊತ್ತಿಲ್ಲ – ಬರ್ತಡೇ ಆಚರಣೆ ಬಗ್ಗೆ ಆಸಕ್ತಿ ಇಲ್ಲ ಎಂದ ಸಿದ್ದರಾಮಯ್ಯ

ಆ. 3 ಅಲ್ಲ, ಆ. 12 ಅಲ್ಲ.. ನನ್ನ ಹುಟ್ಟುಹಬ್ಬ ನನಗೇ ಗೊತ್ತಿಲ್ಲ – ಬರ್ತಡೇ ಆಚರಣೆ ಬಗ್ಗೆ ಆಸಕ್ತಿ ಇಲ್ಲ ಎಂದ ಸಿದ್ದರಾಮಯ್ಯ

ಸಿದ್ದರಾಮಯ್ಯ. ರಾಜ್ಯ ರಾಜಕಾರಣದ ಮಾಸ್ ಲೀಡರ್. ಕರ್ನಾಟಕದಾದ್ಯಂತ ಅಭಿಮಾನಿಗಳನ್ನ ಹೊಂದಿರುವ ರಾಜಕಾರಣಿ. ಇಂತಹ ನಾಯಕನ ಹುಟ್ಟುಹಬ್ಬ ಅಂದ್ರೆ ಕೇಳಬೇಕೇ. ಹೀಗಾಗೇ ಕಳೆದ ವರ್ಷ ದಾವಣಗೆರೆಯಲ್ಲಿ ಸಿದ್ದರಾಮಯ್ಯರ 75ನೇ ಜನ್ಮದಿನವನ್ನ ಹಬ್ಬದಂತೆ ಆಚರಿಸಲಾಗಿತ್ತು. ಸಿದ್ದರಾಮೋತ್ಸವದಲ್ಲಿ 6 ಲಕ್ಷಕ್ಕೂ ಹೆಚ್ಚು ಜನ ಭಾಗಿಯಾಗಿ ಯಾವ ರಾಜಕೀಯ ಸಮಾವೇಶಕ್ಕೂ ಸರಿಸಾಟಿಯಾಗದಂತೆ ನಡೆಸಿದ್ದರು. ಆದರೆ ಈಗ ಸಿದ್ದರಾಮಯ್ಯ ನನ್ನ ಹುಟ್ಟುಹಬ್ಬದ ದಿನವೇ ನನಗೆ ಸರಿಯಾಗಿ ಗೊತ್ತಿಲ್ಲ ಎಂದಿದ್ದಾರೆ.

ಇದನ್ನೂ ಓದಿ : ಲೋಕಸಭಾ ಚುನಾವಣೆಗೆ ಸಚಿವರನ್ನ ಕಣಕ್ಕಿಳಿಸಲು ಕಾಂಗ್ರೆಸ್ ಪ್ಲ್ಯಾನ್ – ಒಪ್ಪಿಗೆ ಜೊತೆ ಮಂತ್ರಿಗಳ ಭರ್ಜರಿ ಡಿಮ್ಯಾಂಡ್

ಹೌದು. ದಾಖಲೆಗಳ ಪ್ರಕಾರ ಆಗಸ್ಟ್ 3, 1947ರಂದು ಸಿದ್ದರಾಮಯ್ಯರ ಜನ್ಮದಿನ. ಆದರೆ ನನ್ನ ಜನ್ಮದಿನ ನನಗೇ ಸರಿಯಾಗಿ ಗೊತ್ತಿಲ್ಲ. ಹೀಗಾಗಿ ಬರ್ತ್‌ ಡೇ ಆಚರಿಸಿಕೊಳ್ಳುವ ಬಗ್ಗೆ ನನಗೆ ಯಾವುದೇ ಆಸಕ್ತಿಯಿಲ್ಲ. ಆಗಸ್ಟ್‌ 3 ಮತ್ತು ಆಗಸ್ಟ್‌ 12 ಎರಡೂ ಕೂಡ ತಪ್ಪು ದಿನಾಂಕಗಳು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ದಾಖಲೆಗಳ ಪ್ರಕಾರ ಆಗಸ್ಟ್‌ 3, 1947 ನನ್ನ ಹುಟ್ಟಿದ ದಿನ. ಆದರೆ, ಎರಡು ಕೂಡ ಸರಿಯಿಲ್ಲ ಎಂದಿದ್ದಾರೆ. ಮೈಸೂರಿನಲ್ಲಿ ತಮ್ಮ ಜನ್ಮದಿನದ ಬಗ್ಗೆ ಮಾತನಾಡಿದ ಅವರು, ಆಗಸ್ಟ್ 3, ಆಗಸ್ಟ್ 12 ಎರಡೂ ಕೂಡ ತಪ್ಪು ದಿನಾಂಕಗಳು. ಒಂದು ನನ್ನ ಮೇಷ್ಟ್ರು ಬರೆಸಿರೋದು. ಇನ್ನೊಂದು ನಮ್ಮ ಅಪ್ಪ ಯಾವುದೋ ಒಂದು ಡೇಟ್ ಬರೆಸಿರೋದು. ಹೀಗಾಗಿ ಎರಡೂ ದಿನಾಂಕಗಳು ತಪ್ಪು. ನನ್ನ ಜನ್ಮ ದಿನಾಂಕ ನನಗೇ ಸರಿಯಾಗಿ ಗೊತ್ತಿಲ್ಲ. ಹೀಗಾಗಿ ನನಗೆ ಯಾವ ಆಸಕ್ತಿಯೂ ಇಲ್ಲ ಎಂದು ಹೇಳಿದ್ದಾರೆ.

ಇನ್ನು, ಗೃಹಲಕ್ಷ್ಮೀ ಯೋಜನೆ ಜಾರಿ ವಿಳಂಬ ವಿಚಾರಕ್ಕೆ ಪ್ರತಿಕ್ರಿಯಿಸಿ, ನೋಂದಣಿ ಮುಗಿದ ಮೇಲೆ ಗೃಹಲಕ್ಷ್ಮೀ ಯೋಜನೆಗೆ ಚಾಲನೆ ನೀಡಲಾಗುವುದು. ಗೃಹಲಕ್ಷ್ಮೀ ಯೋಜನೆಗೆ 1.33 ಕೋಟಿ ಜನರ ನೋಂದಣಿ ಆಗಬೇಕು. ಇದುವರೆಗೆ 1.6 ಕೋಟಿ ಮಹಿಳೆಯರು ನೋಂದಣಿ ಮಾಡಿಸಿದ್ದಾರೆ. ಇನ್ನೂ ನೋಂದಣಿ ಬಾಕಿ ಇದೆ. ನೋಂದಣಿ ಪ್ರಕ್ರಿಯೆ ಮುಗಿಯಬೇಕು. ಆಗಸ್ಟ್ ಅಂತ್ಯದಲ್ಲೇ ಗೃಹಲಕ್ಷ್ಮೀ ಯೋಜನೆಗೆ ಚಾಲನೆ ನೀಡುತ್ತೇವೆ. ದಿನಾಂಕ ಮುಂದೂಡಿಕೆ ಆಗಿಲ್ಲ. ರಾಹುಲ್ ಗಾಂಧಿ ಅವರ ಸಮಯ ಕೇಳಿದ್ದೇವೆ. ಇನ್ನೂ ಟೈಮ್ ಕೊಟ್ಟಿಲ್ಲ ಎಂದಿದ್ದಾರೆ. ಇದೇ ಗುತ್ತಿಗೆದಾರರ ಬಿಲ್ ಬಾಕಿ ವಿಚಾರಕ್ಕೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ಶೇ.40ರಷ್ಟು ಕಮಿಷನ್ ಬಗ್ಗೆ ತನಿಖೆಯಾಗದೇ ಬಿಲ್ ಬಿಡುಗಡೆ ಮಾಡಲು ಹೇಗೆ ಸಾಧ್ಯ? ಇದೀಗ ತನಿಖೆ ಪ್ರಗತಿಯಲ್ಲಿದೆ. ತಪ್ಪು ಮಾಡದೇ ಇರುವವರಿಗೆ ಬಿಲ್ ನಲ್ಲಿ ಯಾವುದೇ ಸಮಸ್ಯೆಯಾಗುವುದಿಲ್ಲ. ತಪ್ಪು ಮಾಡಿರುವವರಿಗೆ ಆ ಬಗ್ಗೆ ಭಯ ಇರುತ್ತದೆ. ಬಿಜೆಪಿಗೆ ನಮ್ಮ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ. ಬಿಜೆಪಿಯವರಿಗೆ ಏನು ವಿಚಾರ ಇಲ್ಲದೇ ಇರುವುದರಿಂದ ಈ ಬಗ್ಗೆ ಹೋರಾಟ ಮಾಡುತ್ತೇವೆ ಎಂದು ಹೇಳುತ್ತಿದ್ದಾರೆ. 40% ಕಮಿಷನ್ ಗಾಗಿಯೇ ಜನರು ಅವರನ್ನು ತಿರಸ್ಕರಿಸಿದ್ದಾರೆ. ಅಂದು ನಾವು ಮಾಡಿರುವ ಆರೋಪವನ್ನು ಈಗ ಸಾಬೀತು ಮಾಡಬೇಕಿದೆ. ಇದೇ ಕಾರಣದಿಂದ ನಾಲ್ಕು ಟೀಂ ತನಿಖೆ ಮಾಡುತ್ತಿವೆ. ನಡೆದಿರುವ ಕಾಮಗಾರಿಗಳೆಲ್ಲಾ ಮೂರು ವರ್ಷದ ಹಿಂದೆ ಮುಕ್ತಾಯವಾಗಿವೆ. ಈಗ ಬಿಲ್‌ಗಾಗಿ ಆತುರ ಪಟ್ಟರೆ ಹೇಗೆ ಎಂದು ಪ್ರಶ್ನಿಸಿದ್ದಾರೆ.

suddiyaana