ವರುಣಾ ರಣರಂಗಕ್ಕೆ ಮರಳಿದ ಸಿದ್ದರಾಮಯ್ಯ – ಕಾಂಗ್ರೆಸ್ ಪಡೆಗೆ ಏನೆಲ್ಲಾ ಪ್ಲಸ್ ಪಾಯಿಂಟ್ ಆಗುತ್ತೆ..?
ರಾಜ್ಯ ವಿಧಾನಸಭಾ ಚುನಾವಣೆಗೆ ಅಳೆದು ತೂಗಿ ಕಾಂಗ್ರೆಸ್ ತನ್ನ ಮೊದಲ ಪಟ್ಟಿ ಬಿಡುಗಡೆ ಮಾಡಿದೆ. ಕಡೆಗೂ ವರುಣಾ ಕ್ಷೇತ್ರದಿಂದಲೇ ಸಿದ್ದರಾಮಯ್ಯ ಸ್ಪರ್ಧೆಗೆ ನಿರ್ಧರಿಸಿದ್ದಾರೆ. ಎರಡು ತಿಂಗಳ ಹಿಂದೆ ಜನವರಿ 9ರಂದು ಕೋಲಾರದಿಂದ ಚುನಾವಣೆಗೆ ಸ್ಪರ್ಧಿಸುವುದಾಗಿ ಸಿದ್ದರಾಮಯ್ಯ ಘೋಷಿಸಿದ್ದರು.
ಅಸಲಿಗೆ ಕೋಲಾರ ಸಿದ್ದರಾಮಯ್ಯ ಅವರಿಗೆ ಸೇಫ್ ಕ್ಷೇತ್ರ ಆಗಿರಲಿಲ್ಲ. ಸಿದ್ದರಾಮಯ್ಯ ಅವರನ್ನು ಸೋಲಿಸಬೇಕು ಎನ್ನುವ ಬಯಕೆಯಿರುವ ಎಲ್ಲ ಶತ್ರುಗಳು ಸುಲಭವಾಗಿ ಒಗ್ಗೂಡಬಹುದಾದ ರಣರಂಗದ ರೀತಿಯಲ್ಲಿ ಕೋಲಾರ ಕ್ಷೇತ್ರವಿತ್ತು. ಸಿದ್ದರಾಮಯ್ಯ ಅಲ್ಲಿ ಒಂಟಿರಾಮಯ್ಯ ಆಗುವ ಎಲ್ಲಾ ಅಪಾಯ ದಟ್ಟವಾಗಿ ಗೋಚರಿಸುತ್ತಿತ್ತು. ಜಾತಿಗಳ ಲೆಕ್ಕಾಚಾರದಲ್ಲಿ ಸಿದ್ದರಾಮಯ್ಯ ಕನಿಷ್ಠ 50 ಸಾವಿರಕ್ಕೂ ಹೆಚ್ಚು ಮತಗಳ ಅಂತರದಿಂದ ಗೆಲ್ಲಬಹುದಾದ ಕ್ಷೇತ್ರವಾಗಿ ಕೋಲಾರ ಕಾಣುತ್ತಿತ್ತು. ಆದರೆ ಕೋಲಾರದಲ್ಲಿ ಸಿದ್ದರಾಮಯ್ಯ ಅವರನ್ನು ಸೋಲಿಸಲು ಒಳಗಿಂದಲೇ ಏಟು ಕೊಡುವ ರಣತಂತ್ರವಾಗಿತ್ತು. ಸಿದ್ದರಾಮಯ್ಯ ಸೋತರೆ, ಸಿಎಂ ರೇಸ್ನಿಂದ ಔಟ್ ಎಂಬ ಸಿದ್ಧ ಸೂತ್ರ ಅಲ್ಲಿ ರೆಡಿಯಾಗಿತ್ತು. ಇಷ್ಟು ದಿನ ಬೆಂಬಲಿಗರ ಮಾತು ಕೇಳುತ್ತಿದ್ದ ಸಿದ್ದರಾಮಯ್ಯ ಕಡೆಗೆ ಮನೆಯವರ ಮಾತು ಕೇಳಿ ವರುಣಾ ಕ್ಷೇತ್ರಕ್ಕೆ ಮರುವಲಸೆ ಬಂದಿದ್ದಾರೆ.
2013ರಿಂದ 18ರವರೆಗೆ ಐದು ವರ್ಷಗಳ ಕಾಲ ಕಾಂಗ್ರೆಸ್ ಅಧಿಕಾರ ನಡೆಸಿತ್ತು.. ರಾಜ್ಯದ ಇತಿಹಾಸದಲ್ಲಿ ಪೂರ್ತಿ ಐದು ವರ್ಷಗಳ ಕಾಲ ಮುಖ್ಯಮಂತ್ರಿಯಾಗಿ ಆಡಳಿತ ನಡೆಸಿದ್ದ ದೇವರಾಜು ಅರಸು ನಂತರದ ದಾಖಲೆಯನ್ನು ಸಿದ್ದರಾಮಯ್ಯ ಬರೆದಿದ್ದರು. 2018ರ ಚುನಾವಣೆಯಲ್ಲಿ ಮತ್ತೊಮ್ಮೆ ಕಾಂಗ್ರೆಸ್ ಅಧಿಕಾರಕ್ಕೆ ತಂದೇ ತರುತ್ತೇನೆ ಎಂಬ ಆತ್ಮವಿಶ್ವಾಸ ಸಿದ್ದರಾಮಯ್ಯ ಅವರಲ್ಲಿತ್ತು. ಇದೇ ಕಾರಣಕ್ಕೆ ಅವ್ರಪ್ಪನಾಣೆಗೂ ಯಡಿಯೂರಪ್ಪ ಮತ್ತು ಕುಮಾರಸ್ವಾಮಿ ಮುಖ್ಯಮಂತ್ರಿ ಆಗಲ್ಲ ಎಂದು ಸಿದ್ದರಾಮಯ್ಯ ಹೇಳಿದ್ದರು. ಆದ್ರೆ ಚುನಾವಣೆ ಮುಗಿದ ಮೇಲೆ ಕೈ ಕಟ್ಟಿ ನಿಂತು ಕುಮಾರಸ್ವಾಮಿಗೆ ಸಿದ್ದರಾಮಯ್ಯ ಬೆಂಬಲ ಘೋಷಿಸಿದ್ದರು. ಸಿದ್ದರಾಮಯ್ಯ ಕುಮಾರಸ್ವಾಮಿ ತಾತ್ಕಾಲಿಕ ದೋಸ್ತಿ ಸರ್ಕಾರವನ್ನು ಕೆಡವಿ ಮುಂದೆ ಯಡಿಯೂರಪ್ಪ ಮುಖ್ಯಮಂತ್ರಿಯಾದ್ರು. ಅಲ್ಲಿಗೆ ಸಿದ್ದರಾಮಯ್ಯ ಅವ್ರಪ್ಪನಾಣೆಗೂ ಮುಖ್ಯಮಂತ್ರಿ ಆಗಲ್ಲ ಎಂಬ ಮಾತು ದೊಡ್ಡ ಜೋಕ್ ಆಗಿ ಪರಿವರ್ತನೆ ಆಗಿತ್ತು.
ಇದನ್ನೂ ಓದಿ : ಕಾಂಗ್ರೆಸ್ ಮೊದಲ ಪಟ್ಟಿ ಬಿಡುಗಡೆ – ವರುಣಾದಿಂದ ಸಿದ್ದರಾಮಯ್ಯ.. ಯಾರಿಗೆ ಯಾವ ಕ್ಷೇತ್ರ..?
ರಾಜಕೀಯದಲ್ಲಿ ಸಾಮಾನ್ಯವಾಗಿ ಒಂದು ಪದ್ಧತಿ ಜಾರಿಯಲ್ಲಿರುತ್ತದೆ. ಮೂಢನಂಬಿಕೆಯೂ ಅಷ್ಟೇ ದೊಡ್ಡದಾಗಿರುತ್ತದೆ. ಉದಾಹರಣೆಗೆ ಚಾಮರಾಜನಗರಕ್ಕೆ ಭೇಟಿ ನೀಡಿದರೆ ಸಿಎಂ ಸ್ಥಾನ ಕಳೆದುಕೊಳ್ಳುತ್ತಾರೆ ಎನ್ನುವ ಮೂಢನಂಬಿಕೆ. ಇದು ಎಷ್ಟರಮಟ್ಟಿಗೆ ಬೇರೂರಿತ್ತು ಅಂದ್ರೆ, ಬಿ.ಎಸ್.ಯಡಿಯೂರಪ್ಪ, ಎಸ್.ಎಂ.ಕೃಷ್ಣ ಸೇರಿದಂತೆ ಹಲವರು ಹಿಂದೆ ಸಿಎಂ ಆಗಿದ್ದಾಗ, ಚಾಮರಾಜನಗರ ಜಿಲ್ಲೆಯ ಕಾರ್ಯಕ್ರಮಗಳನ್ನು ಕೊಳ್ಳೆಗಾಲದಲ್ಲಿಯೋ, ಮಲೆಮಹದೇಶ್ವರದಲ್ಲೋ ಉದ್ಘಾಟಿಸುತ್ತಿದ್ದರು. ಆದ್ರೆ ಸಿದ್ದರಾಮಯ್ಯ ಸಿಎಂ ಆದ ಮೇಲೆ ಚಾಮರಾಜನಗರಕ್ಕೆ ಹಲವು ಬಾರಿ ಭೇಟಿ ನೀಡಿ ಐದು ವರ್ಷದ ಆಡಳಿತ ಮುಗಿಸಿದ್ದರು. ಮುಂದೆ ಕುಮಾರಸ್ವಾಮಿ ಸರ್ಕಾರ ಉರುಳಿದ ಮೇಲೆ ಮುಖ್ಯಮಂತ್ರಿಯಾದ ಬಿ.ಎಸ್.ಯಡಿಯೂರಪ್ಪ, ಹಿಂದೆ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ ವಾಸವಿದ್ದ ಕಾವೇರಿ ಬಂಗಲೆಯನ್ನೇ ತಮ್ಮ ನಿವಾಸವಾಗಿ ಆಯ್ಕೆ ಮಾಡಿಕೊಂಡರು. ಇದಕ್ಕೆ ಕಾರಣವೇ ಅಚ್ಚರಿ ಮೂಡಿಸುವಂತಿದೆ. ಸಿದ್ದರಾಮಯ್ಯ ಸಿಎಂ ಆಗಿ ಐದು ವರ್ಷ ಕಂಪ್ಲೀಟ್ ಮಾಡಿದ್ದಕ್ಕೆ ಕಾವೇರಿ ಮನೆಯ ವಾಸ್ತುವೇ ಕಾರಣ ಎನ್ನುವುದು. ಆದ್ರೆ ಯಡಿಯೂರಪ್ಪ ಈ ಸಲವೂ ತಮ್ಮ ಅವಧಿಯನ್ನು ಪೂರ್ಣಗೊಳಿಸಲು ಸಾಧ್ಯ ಆಗಿರಲಿಲ್ಲ. ಅಂದರೆ ಇಲ್ಲಿ ಕೇವಲ ನಂಬಿಕೆಗಳಷ್ಟೇ ಕೆಲಸ ಮಾಡೋದಿಲ್ಲ ಅಂತಾಯ್ತು. ಆದರೆ ಸಿದ್ದರಾಮಯ್ಯ ತಾವು ಸಿಎಂ ಆಗಲು ಕಾರಣವಾಗಿದ್ದ ವರುಣಾ ಕ್ಷೇತ್ರವನ್ನೇ ಮಗನಿಗೆ ಬಿಟ್ಟುಕೊಟ್ಟು ಚಾಮುಂಡೇಶ್ವರಿಯಿಂದ ಕೊನೆಯದಾಗಿ ಸ್ಪರ್ಧೆ ಮಾಡುತ್ತಿದ್ದೇನೆ ಎಂದು ಘೋಷಿಸಿ ಎಡವಟ್ಟು ಮಾಡಿಕೊಂಡಿದ್ದರು. ಮಗನ ರಾಜಕೀಯ ಭವಿಷ್ಯ ರೂಪಿಸಬೇಕು ಎನ್ನುವ ಏಕೈಕ ಉದ್ದೇಶದಿಂದಲೇ ಪಿತ್ರಾರ್ಜಿತ ಆಸ್ತಿಯ ರೀತಿಯಲ್ಲಿ ವರುಣಾ ಕ್ಷೇತ್ರವನ್ನು ಡಾ.ಯತೀಂದ್ರ ಸಿದ್ದರಾಮಯ್ಯಗೆ ಬಿಟ್ಟುಕೊಟ್ಟು, ತಾವು ಚಾಮುಂಡೇಶ್ವರಿಯಲ್ಲಿ ಸ್ಪರ್ಧಿಸಿದ್ದರು. ಕಡೆಗೆ ಬಾದಾಮಿಯಲ್ಲೂ ಸ್ಪರ್ಧಿಸುವ ತೀರ್ಮಾನಕ್ಕೆ ಬಂದಿದ್ದರಿಂದ ರಾಜ್ಯ ರಾಜಕೀಯದಲ್ಲಿ ತೀವ್ರ ಮುಖಭಂಗದಿಂದ ತಪ್ಪಿಸಿಕೊಂಡ್ರು.
2018ರ ಚುನಾವಣೆಯಲ್ಲಿ ಸಿದ್ದರಾಮಯ್ಯ ಅವರೇ ಕಾಂಗ್ರೆಸ್ನ ಸೇನಾಪತಿಯಾಗಿದ್ದರು. ಆದ್ರೆ ಚುನಾವಣೆ ಘೋಷಣೆಯಾದ್ರೂ ಚಾಮುಂಡೇಶ್ವರಿ ಮತ್ತು ಬಾದಾಮಿ ಸ್ಪರ್ಧೆಯ ಗೊಂದಲದಿಂದಾಗಿ ಸರಿಸುಮಾರು 18-20 ದಿನ ಸಿದ್ದರಾಮಯ್ಯ ಲಾಕ್ ಆಗಿದ್ದರು. ತಮ್ಮೆರಡು ಕ್ಷೇತ್ರ ಬಿಟ್ಟು ಹೊರಬಂದಿರಲಿಲ್ಲ. ಅಷ್ಟು ದಿನಗಳವರೆಗೆ ಉಳಿದ ಕ್ಷೇತ್ರಗಳಲ್ಲಿ ಪ್ರಚಾರ ಸಾಧ್ಯ ಆಗಿರಲಿಲ್ಲ. ಕನಿಷ್ಠ 50-60 ಕ್ಷೇತ್ರಗಳಲ್ಲಿ ಪ್ರಚಾರದಿಂದ ದೂರ ಉಳಿಯಬೇಕಾದ ಸ್ಥಿತಿ ನಿರ್ಮಾಣವಾಗಿತ್ತು. ಮಳವಳ್ಳಿ, ನಾಗಮಂಗಲ, ಹುಣಸೂರು, ಅರಕಲಗೂಡು ಹೀಗೆ ಹಲವು ಕಡೆಗಳಲ್ಲಿ ಸಿದ್ದರಾಮಯ್ಯ ಒಂದೆರಡು ರೌಂಡ್ ಹೋಗಿದ್ದರೆ ಕಾಂಗ್ರೆಸ್ಗೆ ಗೆಲ್ಲುವ ಅವಕಾಶವಿತ್ತು.
ವರುಣಾದಿಂದ ಹೊರಬಿದ್ದಿದ್ದ ಸಿದ್ದರಾಮಯ್ಯ ನೀರಿನಿಂದ ಹೊರಬಿದ್ದ ಮೀನಿನಂತಾಗಿದ್ರು. ರಾಜಕೀಯವಾಗಿ ವಿಲವಿಲ ಒದ್ದಾಡುವಂತಾಗಿತ್ತು. ಸಿಕ್ಕ ಸಿಕ್ಕವರು ಹೊಸ ಹೊಸ ಸಲಹೆ ಕೊಡುತ್ತಾ, ಕಳೆದ ಐದು ವರ್ಷಗಳಿಂದಲೂ ಒಂದಿಲ್ಲೊಂದು ಕ್ಷೇತ್ರಗಳಿಂದ ಆಹ್ವಾನ ಕೊಡುತ್ತಾ ಸಾಗಿದ್ದರು. ಈಗ ವರುಣಾದಿಂದಲೇ ಸಿದ್ದರಾಮಯ್ಯ ಸ್ಪರ್ಧೆಗೆ ನಿರ್ಧರಿಸಿರುವುದು ಮೀನು ಮರಳಿ ನೀರಿಗೆ ಸೇರಿದಂತಾಗಿದೆ. ಈಗ ವರುಣಾದಲ್ಲಿ ಸಲೀಸಾಗಿ ಈಜುವುದು ಸಿದ್ದರಾಮಯ್ಯಗೆ ಸಾಧ್ಯವಿದೆ. ಅಷ್ಟೇ ಅಲ್ಲದೆ ಮೈಸೂರು ಭಾಗದಲ್ಲೂ ಕಾಂಗ್ರೆಸ್ಗೆ ಹೊಸ ಶಕ್ತಿ ಇದ್ರಿಂದ ಸಿಗಲಿದೆ. ಸಿದ್ದರಾಮಯ್ಯ ಹೆಚ್ಚು ಉತ್ಸಾಹದಿಂದ ರಾಜ್ಯದೆಲ್ಲೆಡೆ ಸುತ್ತಾಡಿ ಪ್ರಚಾರ ಮಾಡೋದಿಕ್ಕೂ ಅವಕಾಶವಿದೆ.
ಸಿದ್ದರಾಮಯ್ಯಗೆ ವರುಣಾದಿಂದ ಟಿಕೆಟ್ ಸಿಕ್ಕರೂ ಕೋಲಾರಕ್ಕೆ ಇನ್ನೂ ಟಿಕೆಟ್ ಘೋಷಿಸಿಲ್ಲ. ಒಂದೆಡೆ ಸಿದ್ದರಾಮಯ್ಯ ಎರಡು ಕ್ಷೇತ್ರಗಳ ಸ್ಪರ್ಧೆಯ ಇಂಗಿತ ಮುಂದುವರೆಸಿದ್ದಾರೆ. ಆದ್ರೆ ಕೋಲಾರದಿಂದ ಟಿಕೆಟ್ ಸಿದ್ದರಾಮಯ್ಯಗೆ ಸಿಗುವ ಸಾಧ್ಯತೆ ಕಡಿಮೆ. ಒಬ್ಬರಿಗೆ ಒಂದು ಕ್ಷೇತ್ರ ಎನ್ನುವ ನಿಲುವನ್ನು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಬಲವಾಗಿ ಪ್ರತಿಪಾದಿಸುತ್ತಿದ್ದಾರೆ. ಸಿದ್ದರಾಮಯ್ಯ ಎರಡು ಕಡೆಯಿಂದ ಸ್ಪರ್ಧಿಸಿದ್ದೂ ಕೂಡ ಕಳೆದ ಬಾರಿ ಕಾಂಗ್ರೆಸ್ನ ಸೋಲಿಗೆ ಕಾರಣವಾಗಿತ್ತು ಎನ್ನುವ ಚರ್ಚೆಯ ಹಿನ್ನೆಲೆಯಲ್ಲಿಯೇ ಡಿಕೆಶಿ ಕೂಡ ಇಂತದ್ದೊಂದು ಕಠಿಣ ನಿಲುವಿಗೆ ಬಂದಿದ್ದಾರೆ. ಇದರಿಂದಾಗಿಯೇ ಸಿದ್ದರಾಮಯ್ಯ ಕೋಲಾರ ಬಿಟ್ಟು ವರುಣಾಗೆ ಬಂದಿದ್ದು, ಸಿದ್ದರಾಮಯ್ಯ ಕ್ಷೇತ್ರ ಯಾವುದಯ್ಯಾ ಅನ್ನೋ ಗೊಂದಲಗಳಿಗೆ ತೆರೆ ಬಿದ್ದಿದೆ.