ಗೌರವದಿಂದ ಪಟ್ಟ ಬಿಟ್ಟುಕೊಟ್ಟ ಸಿದ್ದರಾಮಯ್ಯ – ಸಿದ್ದು ರಾಜತಂತ್ರದ ಮುಂದೆ ಎದುರಾಳಿಗಳು ಗಪ್‌ಚುಪ್
ಸಿಎಂ ಸ್ಥಾನಕ್ಕೆ ಸಿದ್ದರಾಮಯ್ಯ ರಾಜೀನಾಮೆ

ರಾಜ್ಯದಲ್ಲಿ ರಾಜಕೀಯ ಬದಲಾವಣೆಯ ಪರ್ವ ಆರಂಭವಾಗಿದೆ. ಭಿನ್ನಮತ ಮಾಡಲಿಲ್ಲ.. ಪ್ರತಿಪಕ್ಷಗಳು ರಾತ್ರಿಯಿಡಿ ಕಣ್ಣಿಗೆ ಎಣ್ಣೆಬಿಟ್ಟು ಕಾದು ಕೂತಿದ್ದರೂ ಕೂಡಾ ರೆಸಾರ್ಟ್ ರಾಜಕಾರಣ ಮಾಡಲಿಲ್ಲ. ತನ್ನ ಜೊತೆ ಇಷ್ಟೊಂದು ಸಚಿವರಿದ್ದಾರೆ ಎಂದು ಎಲ್ಲೂ ಬಿಕ್ಕಟ್ಟು ತೋರಲಿಲ್ಲ. ಬಂಡಾಯ ಏಳದೆ, ಎದುರಾಳಿಗಳಿಗೆ ಒಗ್ಗಟ್ಟಿನ ಗುಟ್ಟು ಬಿಡದೆ ನುಡಿದಂತೆ ನಡೆದ ಸಿದ್ದರಾಮಯ್ಯ ಕೊನೆಗೂ ಮುಖ್ಯಮಂತ್ರಿ ಪಟ್ಟವನ್ನು ತ್ಯಾಗ ಮಾಡಿದ್ದಾರೆ. ಜೊತೆಗೆ ತಾನು ಬಿಟ್ಟ ಪಟ್ಟದಲ್ಲಿ ಕುಳಿತುಕೊಳ್ಳುವ ಡಿ.ಕೆ ಶಿವಕುಮಾರ್ ಅವರನ್ನು ಆಲಂಗಿಸಿಕೊಳ್ಳುವ ಮೂಲಕ ರಾಜ್ಯ ಕಾಂಗ್ರೆಸ್ ಶಕ್ತಿಯನ್ನು ಮತ್ತಷ್ಟು ಬಲಪಡಿಸಿದ್ದಾರೆ.
ಇದನ್ನೂ ಓದಿ:ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜೀನಾಮೆ ಘೋಷಣೆ – ಡಿ.ಕೆ ಶಿವಕುಮಾರ್‌ಗೆ ಸಿದ್ದು ಶುಭಾಶಯ
ಕರ್ನಾಟಕದ ಜನರ ಪಾಲಿಗೆ ಸಿದ್ದರಾಮಯ್ಯ ಬರೀ ಮುಖ್ಯಮಂತ್ರಿಯಲ್ಲ. ಕರ್ನಾಟಕದ ಸಾಮಾಜಿಕ ವಾಸ್ತವವನ್ನು ಅರ್ಥಮಾಡಿಕೊಂಡ ಆಡಳಿತಗಾರ. ಜೊತೆಗೆ ಪ್ರಭಾವಿ ರಾಜಕಾರಣಿ. ಈಗಲೂ ಅಷ್ಟೇ ಮೊದಲೂ ಅಷ್ಟೇ ಕಾಂಗ್ರೆಸ್ ಪಕ್ಷದ ಮಾಸ್ ಲೀಡರ್ ಸಿದ್ದರಾಮಯ್ಯ. ಸಿದ್ದುಗೆ ಸಿದ್ದುವೇ ಸಾಟಿ ಅನ್ನೋದನ್ನ ರಾಜ್ಯದ ದೊರೆಪಟ್ಟವನ್ನೇ ಗೌರವದಿಂದ ಬಿಟ್ಟುಕೊಟ್ಟು ಹೊರನಡೆದಿದ್ದಾರೆ ಸಿದ್ದರಾಮಯ್ಯ.
ಯಾರಿಗೆ ಆಗಲಿ ಅಧಿಕಾರ ಶಾಶ್ವತ ಅಲ್ಲ. ಅವರವರ ಸಮಯ ಬಂದಾಗ ನಿರ್ಗಮಿಸಲೇಬೇಕು. ಬೇರೆ ರಾಜಕಾರಣಿಗಳಿಗೆ ಹೋಲಿಸಿ ನೋಡಿದರೆ ಉತ್ತಮ ರಾಜಕಾರಣಿಯಾಗಿ ಸಿದ್ದರಾಮಯ್ಯನವರು ನಡೆದು ಬಂದ ರಾಜಕೀಯ ಹಾದಿ ನಿಜಕ್ಕೂ ಪ್ರಾಮಾಣಿಕ. ಸಿದ್ದರಾಮಯ್ಯನವರ ಜನಪ್ರಿಯತೆ, ಸೈದ್ದಾಂತಿಕ ಬದ್ಧತೆ ಹಾಗೂ ಆಡಳಿತದಲ್ಲಿರುವ ಸ್ಪಷ್ಟತೆಯೇ ರಾಜ್ಯದಲ್ಲಿ ಇಷ್ಟು ದಿನ ಅಧಿಕಾರದಲ್ಲಿ ಉಳಿಯುವಂತೆ ಮಾಡಿದೆ. ಇದೀಗ ಸಿದ್ದರಾಮಯ್ಯ ಮುಖ್ಯಮಂತ್ರಿ ಹುದ್ದೆಯಿಂದ ಕೆಳಗಿಳಿಯುತ್ತಿದ್ದಾರೆ. ಈಗಲೂ ಅಷ್ಟೇ.. ಅಧಿಕಾರ ಹಸ್ತಾಂತರದ ಬಗ್ಗೆ ಕೊಂಕು ಮಾತಾಡಲಿಲ್ಲ. ಸರ್ಕಾರದಲ್ಲಿ ಭಿನ್ನಾಭಿಪ್ರಾಯ ತಂದು ಸರ್ಕಾರವನ್ನೇ ಉರುಳಿಸಬಹುದು, ರಾಜೀನಾಮೆ ಕೊಡಲ್ಲ ಎಂದು ತನ್ನ ಬೆಂಬಲಿಗರ ಜೊತೆ ರೆಸಾರ್ಟ್ ರಾಜಕಾರಣ ಮಾಡಬಹುದು ಎಂದೆಲ್ಲಾ ಪ್ರತಿಪಕ್ಷಗಳು ಕಾದಿದ್ದೇ ಬಂತು. ಟಗರು ಶಕ್ತಿಕಳೆದುಕೊಂಡಿದ್ದರು ತನ್ನ ಪಕ್ಷದ ಹೈಕಮಾಂಡ್‌ಗೆ ಗೌರವ ಕೊಡುವುದನ್ನ ಮರೆಯಲಿಲ್ಲ. ಹಿಂದೆ ಆಗಿದ್ದ ಒಪ್ಪಂದಕ್ಕೆ ಒಪ್ಪಿ, ಗೌರವಯುತವಾಗಿ ರಾಜೀನಾಮೆ ನೀಡಲು ಒಪ್ಪಿದ್ದಾರೆ ಸಿದ್ದರಾಮಯ್ಯ. ಜೊತೆಗೆ ಗೌರವದಿಂದಲೇ ಡಿಕೆ ಶಿವಕುಮಾರ್ ಅವರಿಗೆ ಶುಭಾಶಯ ಹೇಳಿದ್ದಾರೆ.

ನೋಡಿರಿ

