ಮುಖ್ಯಮಂತ್ರಿ ಪಟ್ಟ ತೊರೆದ ಸಿದ್ದರಾಮಯ್ಯ – ಅಹಿಂದ ನಾಯಕ ನಡೆದು ಬಂದ ಹಾದಿ ಹೇಗಿತ್ತು?
ಅಹಿಂದ ಹುಲಿಯ ಮುಂದಿನ ಹೆಜ್ಜೆ ಏನು?

ಮುಖ್ಯಮಂತ್ರಿ ಪಟ್ಟ ತೊರೆದ ಸಿದ್ದರಾಮಯ್ಯ – ಅಹಿಂದ ನಾಯಕ ನಡೆದು ಬಂದ ಹಾದಿ ಹೇಗಿತ್ತು?ಅಹಿಂದ ಹುಲಿಯ ಮುಂದಿನ ಹೆಜ್ಜೆ ಏನು?

ರಾಜ್ಯ ರಾಜಕಾರಣದ ಕೆಚ್ಚೆದೆಯ ನಾಯಕ ಸಿದ್ದರಾಮಯ್ಯ ಮುಖ್ಯಮಂತ್ರಿ ಪಟ್ಟಕ್ಕೆ ಅಧಿಕೃತವಾಗಿ ರಾಜೀನಾಮೆ ಸಲ್ಲಿಸಿದ್ದಾರೆ. ಸಿದ್ದರಾಮಯ್ಯನವರು ಮುಖ್ಯಮಂತ್ರಿ ಸ್ಥಾನಕ್ಕೆ ಅಧಿಕೃತವಾಗಿ ರಾಜೀನಾಮೆ ಸಲ್ಲಿಸುವ ಮೂಲಕ ರಾಜ್ಯ ರಾಜಕಾರಣದಲ್ಲಿ ಅಹಿಂದ ನಾಯಕನ ನಿರ್ಗಮನವಾಗಿದೆ. ನಾಡಿನ ಚುಕ್ಕಾಣಿ ಹಿಡಿದು ಅಹಿಂದ ನಾಯಕನಾಗಿ ಜನರ ಕಷ್ಟಗಳಿಗೆ ಸ್ಪಂದಿಸಿದ ಸಿದ್ದರಾಮಯ್ಯನವರ ಆಡಳಿತ ರಾಜ್ಯ ರಾಜಕಾರಣದಲ್ಲಿ ಅಚ್ಚಳಿಯದೆ ಉಳಿಯಲಿದೆ.

ಇದನ್ನೂ ಓದಿ:ಗೌರವದಿಂದ ಪಟ್ಟ ಬಿಟ್ಟುಕೊಟ್ಟ ಸಿದ್ದರಾಮಯ್ಯ – ಸಿದ್ದು ರಾಜತಂತ್ರದ ಮುಂದೆ ಎದುರಾಳಿಗಳು ಗಪ್‌ಚುಪ್

ಸಿದ್ದರಾಮಯ್ಯ. ರಾಜ್ಯ ರಾಜಕೀಯದ ಶಕ್ತಿ. ವಿಪಕ್ಷಗಳ ನಾಯಕರಿಗೂ ಗೌರವ ಭಾವ. ಕಾಂಗ್ರೆಸ್ ಪಕ್ಷಕ್ಕೊಂದು ಹೊಸ ಚೈತನ್ಯ ನೀಡಿದವರು. ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿ ನೋಡಿದವರಿದ್ದಾರೆ. ಆದರೆ, ಅಧಿಕಾರದ ಆಚೆಗಿನ ಸಿದ್ದು ಬದುಕು ಕೂಡಾ ರೋಚಕ. ಬೀದರ್‌ನಿಂದ ಚಾಮರಾಜನಗರದವರೆಗೂ ಅಹಿಂದ ನಾಯಕ ಸಿದ್ದರಾಮಯ್ಯ ಅವರಿಗೆ ಅಭಿಮಾನಿಗಳಿದ್ದಾರೆ. ಕರ್ನಾಟಕದ ಮೂಲೆ ಮೂಲೆಯಲ್ಲೂ ಅಭಿಮಾನಿಗಳನ್ನು ಹೊಂದಿದ ಮಾಸ್ ಲೀಡರ್ ಸಿದ್ದರಾಮಯ್ಯ.

ಏಪ್ರಿಲ್ 12, 1948 ರಂದು ಮೈಸೂರಿನ ಸಮೀಪದ ಸಿದ್ದರಾಮನಹುಂಡಿ ಎಂಬ ಹಳ್ಳಿಯಲ್ಲಿ ಕುರುಬ ಸಮುದಾಯಕ್ಕೆ ಸೇರಿದ ಕುಟುಂಬವೊಂದರಲ್ಲಿ ಜನಿಸಿದರು. ಕುಟುಂಬ ಮುಖ್ಯವಾಗಿ ಕೃಷಿಯನ್ನೇ ನಂಬಿಕೊಂಡಿತ್ತು. ಮನೆಯಲ್ಲಿದ್ದ ಕಷ್ಟದ ಪರಿಸ್ಥಿತಿಯಿಂದಾಗಿ ಸಿದ್ದರಾಮಯ್ಯ ದನಕಾಯುವ ಕೆಲಸ ಮಾಡಿದ್ದರು. ಬಾಲ್ಯದಲ್ಲಿ ವೀರ ಕುಣಿತ ತಂಡಕ್ಕೆ ಸೇರಿದ ಮೇಲೆಯೇ ಅವರಿಗೆ ಶಿಕ್ಷಣದ ಬಗ್ಗೆ ಆಸಕ್ತಿ ಮೂಡಿತು. ನಾನು ಪ್ರಾಥಮಿಕ ಶಾಲೆಗೆ ಸೇರಿರಲಿಲ್ಲ. ನಮ್ಮ ವೀರಕುಣಿತ ನೃತ್ಯ ತಂಡದ ಶಿಕ್ಷಕರು ನಮ್ಮನ್ನೆಲ್ಲ ನೆಲದ ಮೇಲೆ ಕುಳ್ಳಿರಿಸಿ ಕನ್ನಡದ ಅಕ್ಷರಮಾಲೆಯನ್ನು ಕಲಿಸುತ್ತಿದ್ದರು. ಇದರಿಂದಾಗಿಯೇ ನನಗೆ ಓದಿನ ಬಗ್ಗೆ ಆಸಕ್ತಿ ಬೆಳೆಯಿತು. ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣವನ್ನು ಮುಗಿಸಿದ ನಂತರ ಮೈಸೂರಿಗೆ ತೆರಳಿದರು. ಅಲ್ಲಿ ಬಿ.ಎಸ್ಸಿ ಪದವಿ ಪಡೆಯುವ ಮೂಲಕ ಕುಟುಂಬದ ಮೊದಲ ಪದವೀಧರ ಎನಿಸಿಕೊಂಡರು. ಕಾನೂನು ಅಧ್ಯಯನ ಮಾಡಲು ನಿರ್ಧರಿಸಿ ಶಾರದಾ ವಿಲಾಸ್ ಕಾಲೇಜಿನಿಂದ ಪದವಿ ಪಡೆದರು. ಆದರೆ, ಇದು ಕೇವಲ ಒಂದು ವೃತ್ತಿಯಾಗುಳಿಯದೆ, ಸಾರ್ವಜನಿಕ ಜೀವನದ ವೃತ್ತಿಬದುಕಿಗೆ ಒಂದು ಮೆಟ್ಟಿಲಾಯಿತು.

ಸಿದ್ದರಾಮಯ್ಯ ಮೊದಲು ಕೋರ್ಟ್‌ನಲ್ಲಿ ವಾದ ಮಂಡಿಸುವ ಅಡ್ವೋಕೇಟ್ ಆದರು. ನಂತರ ಹಕ್ಕಿಗಾಗಿ ಹೋರಾಡುವ ರೈತ ನಾಯಕನಾದರು. ಬಹುಶಃ ಸಿದ್ದರಾಮಯ್ಯ ರಾಜ್ಯದ ಆಡಳಿತದ ಚುಕ್ಕಾಣಿ ಹಿಡಿಯಲು ಪರೋಕ್ಷವಾಗಿ ಕಾರಣರಾದವರು ಹೆಚ್. ಡಿ ದೇವೇಗೌಡರು ಎಂದು ಹೇಳಿದರೆ ತಪ್ಪಾಗಲ್ಲ. ಜೆಡಿಎಸ್‌ನಿಂದ ಹೊರಬಂದಾಗ, ಅವರಿಗೆ ಭದ್ರ ಭವಿಷ್ಯ ನೀಡಿದ್ದೇ  ಅಹಿಂದ ಚಳುವಳಿ. ದಲಿತ ಸಂಘರ್ಷ ಸಮಿತಿಯ ವಿವಿಧ ಬಣಗಳು ಹಾಗೂ ಪ್ರಗತಿಪರ ಬರಹಗಾರರು ಈ ಹೋರಾಟಕ್ಕೆ ಹೆಗಲು ಕೊಟ್ಟರು. ಈ ನಾಯಕರ ಸಾಥ್ ಶ್ರಮದಿಂದಾಗಿ 2005ರಲ್ಲಿ ಹುಬ್ಬಳ್ಳಿಯಲ್ಲಿ ನಡೆದ ಬೃಹತ್ ಅಹಿಂದ ಸಮಾವೇಶವು ಸಿದ್ದರಾಮಯ್ಯ ಅವರನ್ನು ರಾಜ್ಯದ ಅತ್ಯಂತ ಪ್ರಬಲ ಮಾಸ್ ಲೀಡರ್ ಆಗಿ ರೂಪಿಸಿತು. ಮುಖ್ಯಮಂತ್ರಿ ಸಿದ್ದರಾಮಯ್ಯನವರು ತಾವು ನಂಬಿದ ಸಮಾಜವಾದಿ ಸಿದ್ಧಾಂತಕ್ಕೆ ಅಂಟಿಕೊಂಡಿದ್ದವರು. ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಸಮಾನತೆ ಮತ್ತು ಸಾಮಾಜಿಕ ನ್ಯಾಯ ಸಿಗಬೇಕು ಎಂಬುದು ಅವರ ಆಶಯವಾಗಿತ್ತು. ಇದೇ ಚಿಂತನೆಯಿಂದಾಗಿ ಅವರು ಹಸಿವು ಮುಕ್ತ ಕರ್ನಾಟಕದ ಕನಸು ಕಂಡು, ಬಡ ಕುಟುಂಬಗಳಿಗೆ ಉಚಿತ ಅಕ್ಕಿ ನೀಡುವ ಪ್ರಮುಖ ಅನ್ನಭಾಗ್ಯ ಯೋಜನೆಯನ್ನು ಜಾರಿಗೆ ತಂದರು. ನಗರ ಪ್ರದೇಶದ ಕಾರ್ಮಿಕರು ಮತ್ತು ಬಡವರಿಗಾಗಿ ಅತ್ಯಂತ ಕಡಿಮೆ ದರದಲ್ಲಿ ಊಟ ಕೊಡುವ ಇಂದಿರಾ ಕ್ಯಾಂಟೀನ್ ಆರಂಭಿಸಿದರು. ಮಕ್ಕಳ ಅಪೌಷ್ಟಿಕತೆ ನೀಗಿಸಲು ಶಾಲೆಗಳಲ್ಲಿ ಉಚಿತ ಹಾಲು ನೀಡುವ ಕ್ಷೀರಭಾಗ್ಯ  ತಂದರು. ಗ್ರಾಮೀಣ ಭಾಗದ ಹಿಂದುಳಿದ ವರ್ಗದ ವಿದ್ಯಾರ್ಥಿಗಳ ಉನ್ನತ ಶಿಕ್ಷಣಕ್ಕೆ ನೆರವಾಗಲು ವಿದ್ಯಾಸಿರಿ ಯೋಜನೆ ರೂಪಿಸಿದರು. ಗೃಹಲಕ್ಷ್ಮಿ, ಶಕ್ತಿಯೋಜನೆ, ಗೃಹಜ್ಯೋತಿಯಂತಹ ಐದು ಗ್ಯಾರಂಟಿ ಯೋಜನೆಗಳ ಮೂಲಕ ಸಮಾಜವಾದಿ ತತ್ವವನ್ನು ಎತ್ತಿ ಹಿಡಿದರು. ಈ ಎಲ್ಲ ಜನಪ್ರಿಯ ಯೋಜನೆಗಳು ಅವರ ಮೇಲಿದ್ದ ಪ್ರೊ. ನಂಜುಂಡಸ್ವಾಮಿ ಅವರ ಸಮಾಜವಾದಿ ಸಿದ್ಧಾಂತಗಳ ಪ್ರಭಾವಕ್ಕೆ ಸಾಕ್ಷಿಯಾಗಿವೆ. ಕೊನೆಗೂ ಗ್ಯಾರಂಟಿಗಳ ಸರದಾರ ತಮ್ಮ ದೊರೆ ಪಟ್ಟವನ್ನು ತ್ಯಜಿಸಿದ್ದಾರೆ. ಮುಖ್ಯಮಂತ್ರಿ ಕುರ್ಚಿ ತೊರೆದ ಅಹಿಂದ ಹುಲಿಯ ಮುಂದಿನ ಹೆಜ್ಜೆ ಏನು ಅನ್ನೋ ಕುತೂಹಲ ಇಡೀ ರಾಜ್ಯದ ಜನರದ್ದು.

Sulekha

Leave a Reply

Your email address will not be published. Required fields are marked *