‘ನ್ಯಾಯ ಬೇಕು ಮೋದಿ’ – ‘ನಮೋ’ ಕಹಳೆ ಬೆನ್ನಲ್ಲೇ ಸಿದ್ದರಾಮಯ್ಯ ಪೋಸ್ಟರ್ ಪಂಚ್..!
ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡುತ್ತಲೇ ಕಾಂಗ್ರೆಸ್ ಮೇಲೆ ಮುಗಿಬಿದ್ದಿದ್ದ ಪ್ರಧಾನಿ ನರೇಂದ್ರ ಮೋದಿಗೆ ಸಿದ್ದರಾಮಯ್ಯ ಪಂಚ್ ಕೊಟ್ಟಿದ್ದಾರೆ. ‘ನ್ಯಾಯ ಬೇಕು ಮೋದಿ’ ಎನ್ನುತ್ತಲೇ ಬಿಜೆಪಿ ವಿರುದ್ಧ ಹೊಸ ವಾರ್ ಶುರು ಮಾಡಿದ್ದಾರೆ.
ಕಲಬುರಗಿ ಹಾಗೂ ಯಾದಗಿರಿಯಲ್ಲಿ ಇವತ್ತು ನರೇಂದ್ರ ಮೋದಿ ಅಲೆ ಎದ್ದಿತ್ತು. ವಿವಿಧ ಯೋಜನೆಗಳಿಗೆ ಚಾಲನೆ ಹಾಗೂ ಶಂಕುಸ್ಥಾಪನೆ ನೆರವೇರಿಸಿ ಪ್ರಧಾನಿ ಕೇಸರಿ ಕೋಟೆಯನ್ನ ಹುರಿದುಂಬಿಸಿದ್ರು. ಆದ್ರೆ ವಿಪಕ್ಷನಾಯಕ ಸಿದ್ದರಾಮಯ್ಯ ‘ನ್ಯಾಯಬೇಕು ಮೋದಿ’ ಎಂಬ ಪೋಸ್ಟರ್ ರಿಲೀಸ್ ಮಾಡಿ ಪ್ರಧಾನಿಗೆ ಸಾಲು ಸಾಲು ಪ್ರಶ್ನೆಗಳನ್ನ ಮುಂದಿಟ್ಟಿದ್ದಾರೆ. #ನ್ಯಾಯಬೇಕು_ಮೋದಿ ಎಂಬ ಹ್ಯಾಶ್ ಟ್ಯಾಗ್ನಡಿ ಅಭಿಯಾನ ಶುರುಮಾಡಿದ್ದಾರೆ.
ಇದನ್ನೂ ಓದಿ: ಯೋಜನೆಗಳಿಗೆ ಚಾಲನೆ ನೀಡಿ ಗುಡುಗಿದ ಮೋದಿ – ಕಲ್ಯಾಣ ಕರ್ನಾಟಕದಲ್ಲಿ ‘ನಮೋ’ ಹವಾ!
40 ಪರ್ಸೆಂಟ್ ಸರ್ಕಾರ ಅನ್ನೋ ಟೀಕೆಗೆ ಗುರಿಯಾಗಿರೋ ರಾಜ್ಯ ಸರ್ಕಾರವನ್ನೇ ಸಿದ್ದರಾಮಯ್ಯ ಟಾರ್ಗೆಟ್ ಮಾಡಿದ್ದಾರೆ. ‘ಗುತ್ತಿಗೆದಾರ ಸಂತೋಷ್ ಪಾಟೀಲ್ ಬದುಕಿದ್ದಾಗಲಂತೂ ನ್ಯಾಯ ಸಿಗ್ಲಿಲ್ಲ. ಸತ್ತ ಮೇಲಾದರೂ ನ್ಯಾಯ ಸಿಗುವುದು ಬೇಡವೇ ಮೋದಿಯವರೇ? ಮೆಟ್ರೋ ಪಿಲ್ಲರ್ನ ಚೌಕಟ್ಟು ಬಿದ್ದು ತಾಯಿ, ಮಗು ಮೃತಪಟ್ಟಿದ್ದಾರೆ. ಚೀಫ್ ಇಂಜಿನಿಯರ್ ಮೇಲೆ ಕ್ರಮ ಯಾವಾಗ ಮೋದಿಯವರೇ? ಕಮಿಷನ್ ನೀಡಿಲ್ಲ ಎಂಬ ಕಾರಣಕ್ಕೆ ಗುತ್ತಿಗೆದಾರ ಪ್ರಸಾದ್ ಮೃತಪಟ್ಟ. ಈ ಸಾವಿನ ಸರಣಿ ಕೊನೆಗಾಣಿಸುವವರು ಯಾರು ಮೋದಿಯವರೇ? ನಮ್ಮ ನಂದಿನಿ ಸಂಸ್ಥೆ ಮೇಲೆ ಗುಜರಾತ್ನ ಅಮುಲ್ ಕಣ್ಣು ಬಿದ್ದಿದೆ. ರೈತರ ಅನ್ನದ ತಟ್ಟೆಗೆ ಮಣ್ಣು ಹಾಕುವ ಬುದ್ಧಿ ಬಿಡುವುದು ಯಾವಾಗ? ಶರಾವತಿ ಸಂತ್ರಸ್ತ ಕುಟುಂಬಗಳ ಸಮಸ್ಯೆಗೆ ಸ್ಪಂದಿಸಿ ಪ್ರಧಾನಿಗಳೇ? ಎಂದು ಟ್ವೀಟ್ ಮೂಲಕ ಮೋದಿಗೆ ಹಲವು ಪ್ರಶ್ನೆಗಳನ್ನು ಸಿದ್ದರಾಮಯ್ಯ ಕೇಳಿದ್ದಾರೆ. ಹಾಗೇ ಕೊರೊನಾ, ಪಿಎಸ್ಐ ಹಗರಣ, ಸಹಾಯಕ ಪ್ರಾಧ್ಯಾಪಕರ ನೇಮಕಾತಿ, ಕೆ.ಆರ್ ಪುರಂ ಇನ್ಸ್ಪೆಕ್ಟರ್ ನಂದೀಶ್ ಸೂಸೈಡ್ ಪ್ರಕರಣ, ಪರೇಶ್ ಮೇಸ್ತಾ ಸಾವಿನ ಕೇಸ್ ಸೇರಿದಂತೆ ಹಲವು ವಿಚಾರಗಳನ್ನ ಪ್ರಸ್ತಾಪಿಸಿದ್ದಾರೆ.
ಈಗಾಗಲೇ ಗುತ್ತಿಗೆದಾರರ ವಿಚಾರದಲ್ಲಿ ರಾಜ್ಯ ಸರ್ಕಾರ 40 ಪರ್ಸೆಂಟ್ ಸರ್ಕಾರ ಅಂತಾ ವಿಪಕ್ಷಗಳ ಟೀಕೆಗೆ ಗುರಿಯಾಗಿದೆ. ಅಲ್ಲದೆ ಬೆಳಗಾವಿಯ ಸಂತೋಷ್ ಪಾಟೀಲ್ ಸಚಿವ ಕೆ.ಎಸ್ ಈಶ್ವರಪ್ಪ ವಿರುದ್ಧ ಡೆತ್ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ರು. ಇತ್ತೀಚೆಗೆ ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ನೇತೃತ್ವದಲ್ಲಿ ಸುದ್ದಿಗೋಷ್ಠಿ ನಡೆಸಿ ರಾಜ್ಯ ಸರ್ಕಾರದ ವಿರುದ್ಧ ಬಾಂಬ್ ಸಿಡಿಸಿದ್ದರು. ಚಿತ್ರದುರ್ಗ ಬಿಜೆಪಿ ಶಾಸಕ ಜಿ.ಹೆಚ್ ತಿಪ್ಪಾರೆಡ್ಡಿ ಕಾಮಗಾರಿಗಳ ಬಾಕಿ ಬಿಲ್ ಬಿಡುಗಡೆ ಮಾಡಲು 25 ಪರ್ಸೆಂಟ್ ಕಮಿಷನ್ ಕೇಳುತ್ತಿದ್ದಾರೆಂದು ಆರೋಪ ಮಾಡಿದ್ದರು. ಅಲ್ಲದೆ ಕಳೆದ ವಾರವಷ್ಟೇ ಬೆಂಗಳೂರಿನಲ್ಲಿ ಮೆಟ್ರೋ ಪಿಲ್ಲರ್ ಕುಸಿದು ಸಾಫ್ಟ್ ವೇರ್ ಇಂಜಿನಿಯರ್ ತೇಜಸ್ವಿನಿ ಹಾಗೂ ಅವರ ಎರಡೂವರೆ ವರ್ಷದ ಮಗ ವಿಹಾನ್ ಮೃತಪಟ್ಟಿದ್ದನು.