40 ವರ್ಷದಲ್ಲೇ ಮೊದಲ ವಿಚಾರಣೆ – ಸಿದ್ದು ಪರ ‘ಕೈ’ಕಮಾಂಡ್‌ ನಿಂತಿದ್ದೇಕೆ?
ತನಿಖೆ ನಂತ್ರ ಸಿಎಂ ಕುರ್ಚಿ ಸೇಫಾ?

40 ವರ್ಷದಲ್ಲೇ ಮೊದಲ ವಿಚಾರಣೆ – ಸಿದ್ದು ಪರ ‘ಕೈ’ಕಮಾಂಡ್‌ ನಿಂತಿದ್ದೇಕೆ?ತನಿಖೆ ನಂತ್ರ ಸಿಎಂ ಕುರ್ಚಿ ಸೇಫಾ?

ತಮ್ಮ 40 ವರ್ಷದ ರಾಜಕೀಯ ಜೀವನದಲ್ಲಿ ಒಂದೇ ಒಂದು ಕಪ್ಪು ಚುಕ್ಕೆ ಇಲ್ಲ ಅಂತಿದ್ದ ಸಿದ್ದರಾಮಯ್ಯಗೆ ಮುಡಾ ಉರುಳು ಸುತ್ತಿಕೊಂಡಿದೆ. ಈಗಾಗೇ ಸಿಎಂ ಪತ್ನಿ ಪಾರ್ವತಿಯವರನ್ನ ಲೋಕಾಯುಕ್ತ ನೋಟಿಸ್ ನೀಡಿ ವಿಚಾರಣೆ ನಡೆಸಿದ್ದು, ಈಗ ಸಿಎಂಗೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಲಾಗಿದೆ. ಹಾಗಿದ್ರೆ ಈ ವಿಚಾರಣೆಗೆ ಸಿಎಂ ಹಾಜರಾಗ್ತಾರಾ..?, ಸಿಎಂ ಮೇಲೆ ಲೋಕಾಯ್ತು, ಇಡಿ ತನಿಖೆಯಾದ್ರೂ ಕಾಂಗ್ರೆಸ್ ಹೈಕಮಾಂಡ್‌ ಯಾಕೆ ಸಿಎಂ ಪರವಾಗಿದೆ ಅನ್ನೋ ಮಾಹಿತಿ ಇಲ್ಲಿದೆ.

ಇದನ್ನೂ ಓದಿ: ಮತಕ್ಕಾಗಿ ಟ್ರಂಪ್‌ ಹಿಂದೂ ಅಸ್ತ್ರ – ಅಮೆರಿಕದಲ್ಲಿ ಅರುಳುತ್ತಾ ಭಾರತದ ಕಮಲ 

ಸಿದ್ದರಾಮಯ್ಯ ಶಾಸಕರಾಗಿ, ಸಚಿವರಾಗಿ, ಡಿಸಿಎಂ ಆಗಿ, ಎರಡು ಬಾರಿ ಮುಖ್ಯಮಂತ್ರಿ ಆದವರು. ಸುದೀರ್ಘ 40 ವರ್ಷದ ರಾಜಕೀಯ ಜೀವನದಲ್ಲಿ ಒಂದೇ ಒಂದು ಕಳಂಕ ಅಂಟಿಸಿಕೊಂಡಿರಲಿಲ್ಲ. ಯಾವುದೇ ವಿಚಾರಣೆಯನ್ನೂ ಎದುರಿಸಿರಲಿಲ್ಲ. ಇದೀಗ ಮುಡಾ ಸೈಟ್ ವಿಚಾರದಲ್ಲಿ ವಿಚಾರಣೆ ಎದುರಿಸಲಿದ್ದಾರೆ. ಮೊದಲ ಬಾರಿ ತನಿಖಾ ಸಂಸ್ಥೆ ಮುಂದೆ ವಿಚಾರಣೆಗೆ ಹಾಜರಾಗಬೇಕಿದೆ. ಇದು ಒಂದ್ಕಡೆಯದ್ರೆ ಮತ್ತೊಂದ್ಕಡೆ ಮುಡಾ ಹಗರಣದಲ್ಲಿ ಸಿಎಂ ಸಿದ್ದರಾಮಯ್ಯ ವಿರುದ್ಧ  ಇ.ಡಿ ಹಾಗೂ ಲೋಕಾಯುಕ್ತ ತನಿಖೆಯಾದರೂ ಕಾಂಗ್ರೆಸ್ ಹೈಕಮಾಂಡ್‌ ಮಾತ್ರ ಸಿಎಂ ಪರವಾಗಿ ಗಟ್ಟಿಯಾಗಿ ನಿಂತಿದೆ. ಬಿಜೆಪಿ, ಜೆಡಿಎಸ್ ಹೋರಾಟ ಹಾಗೂ ಸ್ವಪಕ್ಷೀಯ ಕೆಲವರ ತಂತ್ರಗಾರಿಕೆಯೂ ಸಿದ್ದುವನ್ನು ಕುರ್ಚಿಯಿಂದ ಇಳಿಸಲು ಆಗಿಲ್ಲ. ಈ ಮೂಲಕ ಸಿಎಂ ವಿಚಾರಣೆ ಎದುರಿಸದ ಮೇಲೂ ಸಿಎಂ ಕುರ್ಚಿಗೆ ಸೇಫ್ ಎಂಬ ವಾತಾವರಣ ಸೃಷ್ಟಿಯಾಗಿದೆ. ಮುಡಾ ಹಗರಣದಲ್ಲಿ ಸಿಎಂ ಸಿದ್ದರಾಮಯ್ಯ ವಿರುದ್ಧ ಲೋಕಾಯುಕ್ತದಲ್ಲಿ ಎಫ್‌ಐಆರ್ ದಾಖಲಾಗಿದೆ. ಸಿದ್ದರಾಮಯ್ಯ ಈ ಪ್ರಕರಣದಲ್ಲಿ ಎ 1 ಆರೋಪಿಯಾಗಿದ್ದಾರೆ. ಇದೀಗ ಲೋಕಾಯುಕ್ಚ ಸಿದ್ದರಾಮಯ್ಯ ಅವರಿಗೂ ನೋಟಿಸ್ ಕೊಡಲಾಗಿದೆ. ಆದರೂ ಸಿದ್ದರಾಮಯ್ಯ ರಾಜೀನಾಮೆ ಕೊಡಬೇಕು ಎಂಬ ಬೇಡಿಕೆಯ ಅಬ್ಬರ ಮಾತ್ರ ದೊಡ್ಡ ಮಟ್ಟದಲ್ಲಿ ಕಾಣಿಸಿಕೊಳ್ಳುತ್ತಿಲ್ಲ.

ಸಿದ್ದು ವಿಚಾರದಲ್ಲಿಕೈಕಮಾಂಡ್ ಸೈಲೆಂಟ್

ರಾಜ್ಯದ ಸಿಎಂ ವಿರುದ್ಧ ಗಂಭೀರ ಸ್ವರೂಪದ ಆರೋಪಗಳು ಕೇಳಿ ಬಂದ ಸಂದರ್ಭದಲ್ಲಿ ರಾಷ್ಟ್ರೀಯ ಮಟ್ಟದ ನಾಯಕರು ಗಂಭೀರವಾಗಿ ತೆಗೆದುಕೊಳ್ತಾರೆ. ಆದರೆ ಇತ್ತೀಚೆಗೆ ದೇಶದಲ್ಲಿ ನಡೆಯುತ್ತಿರುವ ಬೆಳವಣಿಗೆಗಳ ಹಿನ್ನೆಲೆಯಲ್ಲಿ ‘ತನಿಖಾ ಸಂಸ್ಥೆಗಳ ದುರ್ಬಳಕೆ’ ಆರೋಪ ರಾಜಕೀಯ ಸ್ವರೂಪವನ್ನು ಪಡೆದುಕೊಂಡಿದೆ. ಕಾಂಗ್ರೆಸ್ ಆಡಳಿತದಲ್ಲಿರುವ ಹಾಗೂ ಇತರ ವಿರೋಧ ಪಕ್ಷಗಳ ಸರ್ಕಾರಗಳು ಆಡಳಿತ ನಡೆಸುತ್ತಿರುವ ರಾಜ್ಯಗಳನ್ನು ಬಿಜೆಪಿ ಟಾರ್ಗೆಟ್ ಮಾಡುತ್ತಿದೆ ಎಂಬ ಆರೋಪ ಪದೇ ಪದೇ ಕೇಳಿ ಬರುತ್ತಿದೆ. ದೆಹಲಿಯಲ್ಲಿ ಅರವಿಂದ ಕೇಜ್ರಿವಾಲ್, ಪಶ್ಚಿಮ ಬಂಗಾಳದಲ್ಲಿ ಮಮತಾ ಬ್ಯಾನರ್ಜಿ, ಜಾರ್ಖಂಡ್‌ನಲ್ಲಿ ಹೇಮಂತ್ ಸುರೇನ್ ವಿಚಾರದಲ್ಲೂ ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್ ಈ ಆರೋಪವನ್ನು ಮಾಡಿದೆ. ಇದೀಗ ಕರ್ನಾಟಕದಲ್ಲೂ ಕೇಂದ್ರ  ಸಿಎಂ ಸಿದ್ದರಾಮಯ್ಯ ಅವರನ್ನು ಟಾರ್ಗೆಟ್ ಮಾಡುತ್ತಿದೆ ಎಂಬ ಆರೋಪ ಕೇಳಿಬಂದಿದೆ. ಸಿದ್ದರಾಮಯ್ಯ ರಾಜ್ಯ ಕಾಂಗ್ರೆಸ್ ಪ್ರಭಾವಿ ನಾಯಕ. ಅವರನ್ನು ಟಾರ್ಗೆಟ್ ಮಾಡಿದರೆ ರಾಜ್ಯದಲ್ಲಿ ಕಾಂಗ್ರೆಸ್‌ಗೆ ದೊಡ್ಡ ಮಟ್ಟದಲ್ಲಿ ಹಿನ್ನಡೆ ಆಗಲಿದೆ ಎಂಬ ಉದ್ದೇಶದಿಂದ ಮುಡಾ ಪ್ರಕರಣದಲ್ಲಿ ಅವರನ್ನು ಉದ್ದೇಶಪೂರ್ವಕವಾಗಿ ಸಿಲುಕಿಸುವ ಪ್ರಯತ್ನ ನಡೆಸಲಾಗ್ತಿದೆ ಎಂಬುವುದು ಕೈ ಆರೋಪವಾಗಿದೆ. ಈ ಹಿನ್ನೆಲೆಯಲ್ಲಿ ಹೈಕಮಾಂಡ್ ಕೂಡಾ ಸಿದ್ದರಾಮಯ್ಯ ಬೆನ್ನಿಗೆ ನಿಂತಿದೆ.

ಇನ್ನು ಹೈಕಮಾಂಡ್‌ ನಾಯಕರು ಸೈಲೆಂಟ್ ಆಗಿರುವುದಕ್ಕೆ ಮತ್ತೊಂದು ರಾಜಕೀಯ ಕಾರಣವೂ ಇದೆ. ಸಿದ್ದರಾಮಯ್ಯ ಅವರನ್ನು ಬದಲಾವಣೆ ಮಾಡಲು ಹೈ ಕಮಾಂಡ್ ಮುಂದಾದ್ರೆ ರಾಜ್ಯದಲ್ಲಿ ಅದು ರಾಜಕೀಯ  ಎಫೆಕ್ಟ್ ಆಗುತ್ತೆ ಎಂಬ  ಆತಂಕ ಹೈಕಮಾಂಡ್ ನಾಯಕರಲ್ಲಿ ಇದೆ.

ಸಿದ್ದರಾಮಯ್ಯ ಬದಲಾದ್ರೆ ಮತ್ತಷ್ಟು ಸಮಸ್ಯೆ

ರಾಜ್ಯದಲ್ಲಿ ಬಿಜೆಪಿ ಹೋರಾಟದ ಹಿನ್ನೆಲೆಯಲ್ಲಿ ಸಿಎಂ ಬದಲಾವಣೆಯ ಚರ್ಚೆ ದೊಡ್ಡ ಮಟ್ಟದಲ್ಲಿ ಸದ್ದು ಮಾಡತೊಡಗಿತ್ತು. ಸಿದ್ದರಾಮಯ್ಯಗೆ ರಾಜೀನಾಮೆ ಕೊಡುವಂತಹ ಸ್ಥಿತಿ ನಿರ್ಮಾಣ ಆಗೇ ಬಿಡುತ್ತದೆ ಎಂದೇ ನಂಬಲಾಗಿತ್ತು. ಆದರೆ, ಇದೇ ಸಂದರ್ಭದಲ್ಲಿ ಸಿದ್ದರಾಮಯ್ಯ ಆಪ್ತರು ಉರುಳಿಸಿದ ದಾಳ ವಾತಾವರಣವನ್ನೇ ಬದಲಾಯಿಸಿತು. ಸತೀಶ್ ಜಾರಕಿಹೊಳಿ, ಡಾ. ಎಚ್‌ಸಿ ಮಹದೇವಪ್ಪ ಹಾಗೂ ಸಿದ್ದರಾಮಯ್ಯ ಆಪ್ತರು ನಾನೇ ಸಿಎಂ ಆಕಾಂಕ್ಷಿ ಎಂದು ಹೇಳಿಕೆ ಕೊಡತೊಡಗಿದರು. ಅಷ್ಟೇ ಅಲ್ಲದೆ, ಗೌಪ್ಯ ಸಭೆಗಳನ್ನು ನಡೆಸಲು ಆರಂಭಿಸಿದ್ದರು. ಸಿದ್ದರಾಮಯ್ಯ ಬಣ ನೀಡುತ್ತಿದ್ದ ಬಹಿರಂಗ ಹೇಳಿಕೆಗಳು ಹಾಗೂ ಸಭೆಗಳು ಡಿಕೆಶಿ ಬಣವನ್ನೂ ತಲೆಕೆಡಿಸಿತ್ತು. ಬಳಿಕ ಎಚ್ಚೆತ್ತುಕೊಂಡ ಹೈಕಮಾಂಡ್‌ ಯಾವುದೇ ಬಹಿರಂಗ ಹೇಳಿಕೆಗಳನ್ನು ಹಾಗೂ ಸಭೆಗಳನ್ನು ನಡೆಸದಂತೆ ಎಚ್ಚರಿಕೆ ನೀಡಿತ್ತು. ಹೀಗಾಗಿ ಅಸಮಾಧಾನ ಭುಗಿಲೇಳುವ ಆರಂಭಿಕ ಪ್ರಯತ್ನಗಳು ತಣ್ಣಗಾಗಿದ್ದವು. ಈ ಎಲ್ಲಾ ಹಿನ್ನೆಲೆಯಲ್ಲಿ ಸದ್ಯ ಹೈಕಮಾಂಡ್ ಯಾವುದೇ ಹೆಜ್ಜೆಯನ್ನು ಇಡದೆ ಸುಮ್ಮನಾಗಿದೆ. ಹೀಗಾಗಿ ಸಿದ್ದರಾಮಯ್ಯ ಕುರ್ಚಿಗೆ ಸದ್ಯಕ್ಕೇನು ಅಪಾಯ ಇಲ್ಲ ಎಂಬುವುದು ಸ್ಪಷ್ಟ.

ವಿಚಾರಣೆಗೆ ಹಾಜರಾಗಲ್ವಾ ಸಿಎಂ ಸಿದ್ದರಾಮಯ್ಯ?

ಈಗಾಗಲೇ ನಾನು ವಿಚಾರಣೆಗೆ ಹಾಜರಾಗುವುದಾಗಿ ಸಿದ್ದರಾಮಯ್ಯ ಹೇಳಿಕೊಂಡಿದ್ದಾರೆ. ಆದರೆ ಉಪಚುನಾವಣೆಗೆ ದಿನಾಂಕ ಹತ್ತಿರವಾಗುತ್ತಿದ್ದು ಸಿದ್ದರಾಮಯ್ಯ ಪ್ರಚಾರದಲ್ಲಿ ಭಾಗಿಯಾಗಲಿದ್ದಾರೆ ಎನ್ನುವ ಮಾತುಗಳು ಕೇಳಿ ಬಂದಿವೆ. ಹೀಗಾಗಿ ಮುಡಾ ಹಗರಣ ತನಿಖೆಗೆ ಸಿದ್ದರಾಮಯ್ಯ ಹಾಜರಾಗುವ ಸಾಧ್ಯತೆಗಳು ಕಡಿಮೆ ಇದೆ ಎನ್ನಲಾಗುತ್ತಿದೆ. ವೇಳಾಪಟ್ಟಿ ಪ್ರಕಾರ ನವೆಂಬರ್ 6 ರ ಬೆಳಗ್ಗೆ ಸಿದ್ದರಾಮಯ್ಯ ಚನ್ನಪಟ್ಟಣದಲ್ಲಿ ಪ್ರಚಾರ ನಡೆಸಲಿದ್ದಾರೆ. ಜೊತೆಗೆ ವಿವಿಧ ಗ್ರಾಮಗಳಲ್ಲಿ ನಡೆಯುವ ಕಾರ್ಯಕ್ರಮಗಳಲ್ಲೂ ಅವರು ಭಾಗಿಯಾಗಲಿದ್ದಾರೆ.  ಪ್ರಚಾರಕ್ಕೆ ಬೇಕಾದ ಸಿದ್ದತೆಗಳು ಈಗಾಗಲೇ ನಡೆದಿವೆ. ಹೀಗಾಗಿ ಮುಡಾ ತನಿಖೆಗೆ ಸಿಎಂ ಹಾಜರಾಗುತ್ತಾರಾ ಅಥವಾ ಚನ್ನಪಟ್ಟಣ ಉಪಚುನಾವಣಾ ಪ್ರಚಾರದಲ್ಲಿ ಭಾಗಿಯಾಗುತ್ತಾರಾ ಎನ್ನುವ ಅನುಮಾನ ಮೂಡಿದೆ.

Shwetha M