ಬಿಜೆಪಿ ಶಾಸಕರ ಅನುದಾನ ಕಿತ್ತು ಕಾಂಗ್ರೆಸ್ ಶಾಸಕರಿಗೆ ಕೊಟ್ಟ ಸರ್ಕಾರ – ‘ಗ್ಯಾರಂಟಿ’ಗಾಗಿ ಪೇಚಿಗೆ ಸಿಲುಕಿತಾ ಸರ್ಕಾರ?
ಗ್ಯಾರಂಟಿ ಘೋಷಣೆ, ಅನುದಾನದ ಸವಾಲು ಎದುರಿಸುತ್ತಿದ್ದ ಸರ್ಕಾರ ಇದೀಗ ಬಿಜೆಪಿ ಶಾಸಕರ ಹಣದ ಮೇಲೆ ಕಣ್ಣಾಕಿದೆ. ಅದರಲ್ಲೂ ಬೆಂಗಳೂರಿನ ಬಿಜೆಪಿ ಶಾಸಕರಿಗೆ ನೀಡಿದ್ದ ಅನುದಾನಕ್ಕೆ ಕತ್ತರಿ ಹಾಕಿ ಅದನ್ನ ತನ್ನ ಶಾಸಕರಿಗೆ ನೀಡಲು ಮುಂದಾಗಿದೆ. ಬಿಜೆಪಿ ಸರ್ಕಾರದ ಅವಧಿಯಲ್ಲಿ ಮುಖ್ಯಮಂತ್ರಿಗಳ ಅಮೃತ ನಗರೋತ್ಥಾನ ಯೋಜನೆಯಡಿ ಬಿಡುಗಡೆ ಮಾಡಿದ್ದ 485 ಕೋಟಿ ರೂಪಾಯಿ ಅನುದಾನವನ್ನು ವಾಪಸ್ ಪಡೆದಿದೆ. ಕಾಂಗ್ರೆಸ್‌ನ 11 ಶಾಸಕರ ಕ್ಷೇತ್ರಗಳಿಗೆ ತಲಾ 40 ಕೋಟಿ ರೂ. ಅನುದಾನ ಮಂಜೂರು ಮಾಡಿದೆ. ಅದರಲ್ಲೂ ಆರ್.ಆರ್ ನಗರ ಕ್ಷೇತ್ರದ ಎಲ್ಲಾ ಕಾಮಗಾರಿಗಳಿಗೆ ನೀಡಿದ್ದ ಅನುದಾನವನ್ನ ತಡೆ ಹಿಡಿದಿದೆ. ಅನುದಾನ ನೀಡುವಂತೆ ಶಾಸಕ ಮುನಿರತ್ನ ಪ್ರತಿಭಟನೆ ನಡೆಸಿದ್ದು ಡಿಸಿಎಂ ಕಾಲಿಗೂ ಬಿದ್ದಿದ್ದಾರೆ. ಸರ್ಕಾರದ ಧೋರಣೆಗೆ ಬಿಜೆಪಿ ನಾಯಕರು ತಿರುಗಿ ಬಿದ್ದಿದ್ದಾರೆ.
ಇದನ್ನೂ ಓದಿ : ಕರ್ನಾಟಕದಲ್ಲಿ ಉಷ್ಣಾಂಶ ವಾಡಿಕೆಗಿಂತ 3 ರಿಂದ 4 ಡಿಗ್ರಿ ಹೆಚ್ಚಳ.. – ಮಳೆ ನಡುವೆಯೂ ಈಗ ಸೆಕೆಗಾಲ..!
ಬೆಂಗಳೂರಿನ ಬಿಜೆಪಿ ಶಾಸಕರಿಗೆ ನೀಡಿದ್ದ ಅನುದಾನಕ್ಕೆ ಕಾಂಗ್ರೆಸ್ ಸರ್ಕಾರ ಕತ್ತರಿ ಹಾಕಿದೆ. ಮುಖ್ಯಮಂತ್ರಿಗಳ ಅಮೃತ ನಗರೋತ್ಥಾನ ಯೋಜನೆಯಡಿ ಬಿಡುಗಡೆ ಮಾಡಿದ್ದ ಹಣ ಇದಾಗಿತ್ತು. ಬಿಜೆಪಿ ಸರ್ಕಾರದ ಅವಧಿಯಲ್ಲಿ ನೀಡಿದ್ದ 485 ಕೋಟಿ ರೂಪಾಯಿ ಅನುದಾನವನ್ನ ಸಿದ್ದರಾಮಯ್ಯ ಸರ್ಕಾರ ವಾಪಸ್ ಪಡೆದಿದೆ. ಇದೇ ಹಣವನ್ನ ಬೆಂಗಳೂರಿನ ಕಾಂಗ್ರೆಸ್ ಶಾಸಕರಿಗೆ ಮರು ಹಂಚಿಕೆ ಮಾಡಿದ್ದಾರೆ. ಕಾಂಗ್ರೆಸ್‌ನ 11 ಶಾಸಕರ ಕ್ಷೇತ್ರಗಳಿಗೆ ತಲಾ 40 ಕೋಟಿ ರೂ. ಅನುದಾನ ಮಂಜೂರು ಮಾಡಿದ್ದಾರೆ. ಆರ್‌ಆರ್ ನಗರ ಬಿಲ್‌ಗೆ ಇತ್ತೀಚೆಗಷ್ಟೇ ಡಿಸಿಎಂ ಡಿ.ಕೆ ಶಿವಕುಮಾರ್ ಬ್ರೇಕ್ ಹಾಕಿದ್ರು. ಈಗ ವಿವಿಧ ಕಾಮಗಾರಿಗೆ ಬಿಡುಗಡೆ ಆಗಿದ್ದ ಅನುದಾನಕ್ಕೂ ಕಾಂಗ್ರೆಸ್ ಸರ್ಕಾರ ಕತ್ತರಿ ಹಾಕಿದೆ. ಬೊಮ್ಮಾಯಿ ಸರ್ಕಾರ ಆರ್‌ಆರ್ ನಗರಕ್ಕೆ ನೀಡಿದ್ದ 126 ಕೋಟಿ ರೂಪಾಯಿಯನ್ನ ಕೂಡ ವಾಪಸ್ ಪಡೆದಿದೆ.
ಹೀಗೆ ಬಿಜೆಪಿ ಶಾಸಕರ ಕ್ಷೇತ್ರಗಳಿಂದ ಅನುದಾನವನ್ನ ವಾಪಸ್ ಪಡೆದು ಅದನ್ನ ಕಾಂಗ್ರೆಸ್ ಶಾಸಕರಿರುವ ಕ್ಷೇತ್ರಗಳಿಗೆ ಮರು ಹಂಚಿಕೆ ಮಾಡಿದೆ.. ಹೆಬ್ಬಾಳ, ಪುಲಕೇಶಿನಗರ, ಸರ್ವಜ್ಞ ನಗರ, ಶಿವಾಜಿನಗರ, ಚಾಮರಾಜಪೇಟೆ, ಗಾಂಧಿ ನಗರ, ಗೋವಿಂದರಾಜ ನಗರ, ಬಿಟಿಎಮ್ ಲೇಔಟ್, ವಿಜಯನಗರ, ಬ್ಯಾಟರಾಯನಪುರ ಕ್ಷೇತ್ರಗಳಿಗೆ ತಲಾ 40 ಕೋಟಿ ರೂಪಾಯಿ ಹಣ ಮಂಜೂರು ಮಾಡಿದೆ.. ಇನ್ನೊಂದು ಅಚ್ಚರಿ ವಿಷ್ಯ ಅಂದ್ರೆ ಬಿಜೆಪಿ ಶಾಸಕ ಎಸ್.ಟಿ ಸೋಮಶೇಖರ್ ಪ್ರತಿನಿಧಿಸುವ ಯಶವಂತಪುರ ಕ್ಷೇತ್ರಕ್ಕೂ ಅನುದಾನ ಹಂಚಿಕೆ ಮಾಡಿರೋದು ಭಾರೀ ಕುತೂಹಲಕ್ಕೆ ಕಾರಣವಾಗಿದೆ.. ಸೋಮಶೇಖರ್ ಕಾಂಗ್ರೆಸ್ ಸೇರ್ಪಡೆ ಸುದ್ದಿ ಹಿನ್ನೆಲೆ ಅನುದಾನ ಬಿಡುಗಡೆ ಮಾಡಿರುವ ಸಾಧ್ಯತೆ ಎನ್ನಲಾಗುತ್ತಿದೆ.. ಇನ್ನು ಈ ಅನುದಾನ ವಿಚಾರವಾಗಿ ಕೇವಲ ಬಿಜೆಪಿ ಶಾಸಕರು ಮಾತ್ರವಲ್ಲ. ಕಾಂಗ್ರೆಸ್ ಶಾಸಕರೂ ಅಸಮಾಧಾನ ಹೊರ ಹಾಕಿದ್ದರು. ಸಿಎಂ ಸಿದ್ದರಾಮಯ್ಯ ಬಳಿ ನಮ್ಮ ಕ್ಷೇತ್ರಕ್ಕೆ ಅನುದಾನ ಕೇಳುವುದಿಲ್ಲ. ಬದಲಾಗಿ ನಮ್ಮ ಕ್ಷೇತ್ರದ ಕೆಲಸಗಳನ್ನು ನಾವೇ ಮಾಡಿಸಿಕೊಳ್ಳುತ್ತೇನೆ ಎನ್ನುವ ಮೂಲಕ ಶಾಸಕ ಬಸವರಾಜ ರಾಯರೆಡ್ಡಿ ಅಸಮಾಧಾನ ಹೊರ ಹಾಕಿದ್ದರು. ಕೆಲ ಸಚಿವರು ಅನುದಾನ ಬಿಡುಗಡೆಗೂ ಹಣಕ್ಕೆ ಬೇಡಿಕೆ ಇಡುತ್ತಿದ್ದಾರೆ ಎಂದು ಪತ್ರ ಬರೆದು ರಾಷ್ಟ್ರ ಮಟ್ಟದಲ್ಲಿ ಸದ್ದು ಮಾಡಿದ್ದರು. ಶಾಸಕ ಜೆ.ಟಿ ಪಾಟೀಲ್ ಅನುದಾನ ನೀಡುವಂತೆ ಬಹಿರಂಗ ಪತ್ರ ಬರೆದಿದ್ದರು. ಬಿಜೆಪಿ ನಾಯಕರು ಕೂಡ ಸರ್ಕಾರ ಹಣವನ್ನೆಲ್ಲಾ ಗ್ಯಾರಂಟಿ ಯೋಜನೆಗಳಿಗೆ ಮೀಸಲಿಟ್ಟಿದೆ. ಶಾಸಕರಿಗೆ ಅನುದಾನ ಕೊಡೋಕೂ ಹಣವಿಲ್ಲ. ಅಭಿವೃದ್ಧಿಯೇ ಆಗ್ತಿಲ್ಲ ಎಂದು ಪದೇಪದೆ ಟೀಕಿಸುತ್ತಲೇ ಇದ್ದಾರೆ. ಇದೆಲ್ಲದರ ನಡುವೆ ಕಾಂಗ್ರೆಸ್ ಸರ್ಕಾರ ಬಿಜೆಪಿ ಶಾಸಕರ ಅನುದಾನಕ್ಕೆ ಕೈ ಹಾಕಿರೋದು ಭಾರೀ ಚರ್ಚೆಗೆ ಗ್ರಾಸವಾಗಿದೆ. ಇದೆಲ್ಲಾ ಏನೇ ಇದ್ರೂ ಹೊಸ ಸರ್ಕಾರ ರಚನೆಯಾದಾಗ ಹಿಂದಿನ ಸರ್ಕಾರ ತನ್ನ ಶಾಸಕರಿಗೆ ನೀಡಿದ್ದ ಹಣಕ್ಕೆ ಕತ್ತರಿ ಹಾಕೋದು ಸಾಮಾನ್ಯ ಆಗಿ ಬಿಟ್ಟಿದೆ. ಕಳೆದ ಬಾರಿ ಬಿಜೆಪಿ ಸರ್ಕಾರ ಕಾಂಗ್ರೆಸ್ ಶಾಸಕರ ಕ್ಷೇತ್ರಗಳ ಅನುದಾನಕ್ಕೆ ತಡೆ ನೀಡಿತ್ತು. ಇದೀಗ ಕಾಂಗ್ರೆಸ್ ಅದೇ ಕೆಲಸವನ್ನ ಮಾಡ್ತಿದೆ. ಸರ್ಕಾರ ಯಾವುದೇ ಆದ್ರೂ ಅಭಿವೃದ್ಧಿ ವಿಚಾರ ಬಂದಾಗ ಎಲ್ಲಾ ಕ್ಷೇತ್ರಗಳನ್ನೂ ಸಮಾನವಾಗಿ ನೋಡಬೇಕು. ಇಲ್ಲದಿದ್ರೆ ಅದು ದ್ವೇಷ ರಾಜಕಾರಣ ಅನ್ನೋದ್ರಲ್ಲಿ ಎರಡು ಮಾತಿಲ್ಲ.